ಬೆಂಗಳೂರು: ಮಹಾಮಾರಿ ಕೊರೊನಾ ತನ್ನ ಮೊದಲನೆ ಅಲೆ ಹಾಗೂ ಎರಡನೇ ಅಲೆಯ ವೇಳೆ ಜನರಿಗೆ ನರಕ ದರ್ಶನ ಮಾಡಿಸಿದೆ. ಈ ನಡುವೆ ಸಂಬಂಧಿಕರೇ ತಮ್ಮವರ ಮೃತ ಶವಗಳನ್ನು ಪಡೆಯಲು ಹಿಂದೇಟು ಹಾಕುತ್ತಿದ್ದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ತಮ್ಮವರು ಸೋಂಕಿತ ಮೃತ ಶವದಿಂದ ತಮಗೆ ಕೊರೊನಾ ತಗುಲಬಹುದೆಂಬ ಭಯ ಹೆಚ್ಚಾಗಿತ್ತು. ಹೀಗಾಗಿ ಸರ್ಕಾರದಿಂದಲೇ ಕಟ್ಟು ನಿಟ್ಟಿನ ಕ್ರಮಗಳ ಜೊತೆಗೆ ಶವವನ್ನು ಮಣ್ಣಲ್ಲಿ ಮಣ್ಣಾಗಿಸಲಾಗುತ್ತಿತ್ತು. ಆದರೆ ಕೋವಿಡ್ ನಿಂದ ಮೃತರಾದ ಶವ 15 ತಿಂಗಳ ಬಳಿಕ ಹೊರಕ್ಕೆ ತಂದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕೊರೊನಾದಂತಹ ಸಮಯದಲ್ಲೂ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ. ರಾಜಾಜಿನಗರ ಇಎಸ್‌ಐ ಆಸ್ಪತ್ರೆ ಶವಾಗಾರದಲ್ಲಿ ಕೊರೊನಾ ಸೋಂಕಿತರಿಬ್ಬರ ಶವಗಳನ್ನಿಟ್ಟು ಸಿಬ್ಬಂದಿ ಮರೆತಿದ್ದು 15 ತಿಂಗಳ ಬಳಿಕ ಎರಡು ಶವಗಳನ್ನು ಹೊರಕ್ಕೆ ತರಲಾಗಿದೆ. 2020ರ ಜುಲೈನಲ್ಲಿ ಕೊರೊನಾ ಸೋಂಕಿನಿಂದ ಬಳಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದವರನ್ನು ಶವಗಾರದಲ್ಲಿ ಇಡಲಾಗಿತ್ತು. ಆದರೆ ಆ ಶವಗಳಿಗೆ ಅಂದೇ ಮುಕ್ತಿ ಕೊಡದೆ ಮರೆತಿದ್ದಾರೆ. ಸದ್ಯ 15 ತಿಂಗಳ ಬಳಿಕ ಶವಗಳನ್ನು ಎರಡು ದಿನಗಳ ಹಿಂದೆ ಹೊರಕ್ಕೆ ತೆಗೆಯಲಾಗಿದೆ. ಚಾಮರಾಜಪೇಟೆಯ ದುರ್ಗಾ(40) ಮತ್ತು ಕೆ.ಪಿ. ಅಗ್ರಹಾರದ ಮುನಿರಾಜು (35) ಮೃತರು. ಮರಣೋತ್ತರ ಪರೀಕ್ಷೆಗೆ ಎರಡು ಮೃತದೇಹಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಹಿಂದೆ ಬಿಬಿಎಂಪಿಯೇ ಕೋವಿಡ್ ಶವಗಳನ್ನ ಅಂತ್ಯಸಂಸ್ಕಾರ ಮಾಡುತ್ತಿದ್ದ ಕಾರಣ ಮೃತ ದೇಹಗಳ ಬಗ್ಗೆ ಕುಟುಂಬಸ್ಥರು ಕೂಡ ತಲೆಕೆಡಿಸಿಕೊಂಡಿಲ್ಲ. ಆದರೆ ಹೊಸ ಶವಾಗಾರ ನಿರ್ಮಾಣದ ಬಳಿಕ ಹಳೆ ಶವಾಗಾರದ ಬಳಕೆ ನಿಲ್ಲಿಸಿದ್ದ ಸಿಬ್ಬಂದಿ ಹಳೆ ಕಟ್ಟಡದಲ್ಲಿ ಎರಡು ಶವಗಳನ್ನ ಇಟ್ಟಿರುವುದನ್ನೇ ಮರೆತಿದ್ದರು. ನಿನ್ನೆ ಹಳೆ ಶವಾಗಾರ ಸ್ವಚ್ಛತೆಗೆ ಹೋದಾಗ ದುರ್ನಾತ ಬಂದಿದ್ದರಿಂದ ಪ್ರಕರಣ ಬೆಳಕಿಗೆ ಬಂದಿದೆ.
ಒಂದು ವರ್ಷದ ಹಿಂದೆ ಶವಗಳನ್ನು ಶವಾಗಾರದ ಕೋಲ್ಡ್ ಸ್ಟೋರೇಜ್‌ನಲ್ಲಿ ಇರಿಸಲಾಗಿತ್ತು ಮತ್ತು ಈ ಮಧ್ಯೆ ಹೊಸ ಶವಾಗಾರದ ಕಟ್ಟಡವನ್ನು ಬಳಸಲು ಪ್ರಾರಂಭಿಸಲಾಗಿತ್ತು. ಹೀಗಾಗಿ ಮರೆತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಶನಿವಾರ ಸಿಬ್ಬಂದಿ ಹಳೆಯ ಶವಾಗಾರವನ್ನು ಸ್ವಚ್ಛಗೊಳಿಸಲು ಹೋದಾಗ, ಇಲ್ಲಿ ಕೆಟ್ಟ ಕೊಳೆತ ದುರ್ವಾಸನೆ ಬಂದ ಅನುಭವವಾಗಿದೆ ನಂತರ ಈ ಎರಡು ದೇಹಗಳನ್ನು ಪತ್ತೆಹಚ್ಚಿದರು ಎಂದು ಹೇಳಿದರು.
ಆಸ್ಪತ್ರೆ ಹಾಗೂ ಬಿಬಿಎಂಪಿ ನಿರ್ಲಕ್ಷ್ಯಕ್ಕೆ ಕುಟುಂಬಸ್ಥರ ಕಣ್ಣೀರು
ಇಎಸ್‌ಐ ಆಸ್ಪತ್ರೆಯಲ್ಲಿ 15 ತಿಂಗಳ ನಂತರ ಮೃತದೇಹ ಪತ್ತೆಯಾಗಿದೆ. ಮೃತರ ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ. ಕೋವಿಡ್ ನಿಂದ ಮೃತಪಟ್ಟಿದ್ದಾರೆ ಎಂದು ನಮ್ಮಗೆ ಆಗಲೇ ಕರೆ ಬಂದಿತ್ತು. ಆದ್ರೆ ಮುಖ ನೋಡಲು ಅವಕಾಶವಿಲ್ಲ ಎಂದಿದ್ದರು. ಹೀಗಾಗಿ ನೀವೆ ಅಂತ್ಯಸಂಸ್ಕಾರ ಮಾಡುವಂತೆ ನಾವು ಮನವಿ ಮಾಡಿದ್ದೆವು. ಬಳಿಕ ಅಂತ್ಯಸಂಸ್ಕಾರ ಮಾಡಿದ್ದೇವೆ ಎಂದು ಡೆಟ್ ಸರ್ಟಿಫಿಕೇಟ್ ಕೂಡಾ ಕೊಟ್ಟಿದ್ದರು. ಆದ್ರೆ ಈಗ ಪೊಲೀಸರು ಬಾಡಿ ನೋಡಿ ಎಂದು ಕರೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಕಣ್ಣೀರು ಹಾಕಿದ್ದಾರೆ.
ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ಗೆ ಸುರೇಶ್ ಕುಮಾರ್ ಪತ್ರ
ಇನ್ನು ಈ ಘಟನೆ ಸಂಬಂಧ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ಗೆ ರಾಜಾಜಿನಗರ ಶಾಸಕ ಸುರೇಶ್ ಕುಮಾರ್ ಪತ್ರ ಬರೆದಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 315 ಜನರಿಗೆ ಕೊರೊನಾ ದೃಢ; 2 ಮಂದಿ ಸಾವು
Published On - 7:29 am, Mon, 29 November 21