ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ಹಿಂದೇಟು: ಸಿಎಂ ಸೂಚನೆಗೆ ಸಿಕ್ಕಿಲ್ಲ ಕಿಮ್ಮತ್ತು
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ ಬಳಿಕ ಒಂದೂ ಒತ್ತುವರಿ ಪ್ರಕರಣವನ್ನು ಅಧಿಕಾರಿಗಳು ತೆರವು ಮಾಡಿಲ್ಲ. ತಾಂತ್ರಿಕ ನೆಪವೊಡ್ಡಿ ಬಿಬಿಎಂಪಿ ದಿನದೂಡುತ್ತಿದೆ.
ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವುಗೊಳಿಸುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿ 6 ದಿನ ಕಳೆದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿವೆ. ರಾಜಕಾಲುವೆ ಒತ್ತುವರಿ ಮಾಡಿರುವ 2,626 ಒತ್ತುವರಿ ಜಾಗಗಳನ್ನು ಬಿಬಿಎಂಪಿ ಈಗಾಗಲೇ ಗುರುತಿಸಿದ್ದು, ಈ ಪೈಕಿ 1,480 ಒತ್ತುವರಿ ಜಾಗವನ್ನು ತೆರವು ಮಾಡಿದೆ. ಬಾಕಿ ಉಳಿದ 714 ಒತ್ತುವರಿ ಪ್ರಕರಣಗಳ ತೆರವು ಕೆಲಸ ಬಾಕಿ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ ಬಳಿಕ ಒಂದೂ ಒತ್ತುವರಿ ಪ್ರಕರಣವನ್ನು ಅಧಿಕಾರಿಗಳು ತೆರವು ಮಾಡಿಲ್ಲ. ತಾಂತ್ರಿಕ ನೆಪವೊಡ್ಡಿ ಬಿಬಿಎಂಪಿ ದಿನದೂಡುತ್ತಿದೆ. ಜೆ.ಸಿ.ರಸ್ತೆಯಲ್ಲಿಯೇ ರಾಜಕಾಲುವೆ ಒತ್ತುವರಿಯಾಗಿದೆ. ಆದರೂ ಅಧಿಕಾರಿಗಳು ಒತ್ತುವರಿ ತೆರವುಗೊಳಿಸಲು ಮುಂದಾಗಿಲ್ಲ. ನೊಟೀಸ್ ಸಹ ನೀಡಿಲ್ಲ ಎಂದು ಹೇಳಲಾಗಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 842 ಕಿಮೀ ಉದ್ದದಷ್ಟು ರಾಜಗಾಲುವೆ ಇದೆ. ರಾಜಕಾಲುವೆಗಳಲ್ಲಿ 714 ಒತ್ತುವರಿ ಪ್ರಕರಣಗನ್ನು ಇನ್ನೂ ವಿಲೇವಾರಿ ಮಾಡಿಲ್ಲ. ಈ ಸಂಖ್ಯೆಯಲ್ಲಿ ಕಳೆದ 6 ದಿನಗಳಿಂದ ಇಳಿಕೆ ಆಗಿಲ್ಲ. ಹಲವು ದಿನಗಳಿಂದ ಒತ್ತುವರಿ ಪ್ರಕರಣಗಳ ಸಂಖ್ಯೆ ಮೂರಂಕಿಗಿಂತಲೂ ಕಡಿಮೆಯಾಗುತ್ತಿಲ್ಲ. ನಗರದ ಬಹುತೇಕ ಆಸ್ಪತ್ರೆಗಳು, ಕಮರ್ಶಿಯಲ್ ಬಿಲ್ಡಿಂಗ್, ಉದ್ಯಮಿಗಳು, ರಾಜಕಾರಿಣಿಗಳು ಸೇರಿದಂತೆ ಹಲವು ಪ್ರಭಾವಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ. ಕಳೆದ 5 ವರ್ಷಗಳಿಂದ ತೆರವು ಕಾರ್ಯ ನಡೆದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗೆ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಮಾಹಿತಿ ನೀಡಿದ್ದಾರೆ.
ರಾಜಾಜಿನಗರದ, ಕೆ.ಆರ್.ಪುರ, ಕೆಂಗೇರಿ, ಆರ್.ಆರ್.ನಗರ, ಹೆಬ್ಬಾಳ, ಯಲಹಂಕ, ಲಗ್ಗೆರೆ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಜಕಾಲುವೆಗಳ ಒತ್ತುವರಿ ಆಗಿದೆ. ಪಾಲಿಕೆ ಅಧಿಕಾರಿಗಳು ಸಮೀಕ್ಷೆ ಮಾಡುತ್ತಿದ್ದೇವೆ. ಆದಷ್ಟು ಬೇಗ ವರದಿ ಸಿದ್ದವಾಗುತ್ತದೆ ಎನ್ನುತ್ತಾರೆ. ಆದರೆ ಬಿಬಿಎಂಪಿ ಮುಖ್ಯ ಕಚೇರಿಯಿಂದ ಕೂಗಳತೆ ದೂರದಲ್ಲಿರುವ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳು ಮುಂದಾಗುತ್ತಿಲ್ಲ. ಇಲ್ಲಿ ಎರಡು ಕಾಂಪ್ಲೆಕ್ಸ್ ಕಟ್ಟಿರುವ ಮಾಲೀಕರಿಗೆ ನೊಟೀಸ್ ನೀಡುವ ಕೆಲಸವೂ ಆಗಿಲ್ಲ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬೆಂಗಳೂರು: ರಾಜಕಾಲುವೆ ಒತ್ತುವರಿಯ ಕಾರಣ 23 ವರ್ಷಗಳಿಂದ ತುಂಬದ ದೊಡ್ಡಕೆರೆ; ಒತ್ತುವರಿ ತೆರವಿಗೆ ಮುಂದಾದ ಡಿಸಿ ಇದನ್ನೂ ಓದಿ: ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ತೀರ್ಮಾನ; 714 ಕಟ್ಟಡಗಳ ಪಟ್ಟಿ ಸಿದ್ಧ
Published On - 5:41 pm, Sun, 28 November 21