ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ: ಇಬ್ಬರು ಪೊಲೀಸ್ ವಶಕ್ಕೆ, ರಹಸ್ಯ ಸ್ಥಳದಲ್ಲಿ ವಿಚಾರಣೆ

| Updated By: ರಮೇಶ್ ಬಿ. ಜವಳಗೇರಾ

Updated on: Feb 15, 2023 | 6:28 PM

ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಬೆಂಗಳೂರು: ಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು, ಈ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಶಾಸಕ ಸತೀಶ್ ರೆಡ್ಡಿ ಆಪ್ತಸಹಾಯಕ (ಪಿಎ) ಬೊಮ್ಮನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಶಾಸಕರ ಆಪ್ತರು ನೀಡಿದ ಮಾಹಿತಿ ಮೇರೆಗೆ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ವಿಲ್ಸನ್ ಗಾರ್ಡನ್ ನಾಗನಿಂದ ಎರಡು ಕೋಟಿಗೆ ಸುಪಾರಿ ಪಡೆದು, ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಸಂಚು ರೂಪಿಸಿದ್ದಾರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಮೊದಲು ಎನ್ ಸಿ ಆರ್ ದಾಖಲಿಸಿದ್ದ ಬೊಮ್ಮನಹಳ್ಳಿ ಪೊಲೀಸರು, ಕೋರ್ಟ್ ನಿಂದ ಅನುಮತಿ ಪಡೆದು ವಿಲ್ಸನ್ ಗಾರ್ಡನ್ ನಾಗಾ, ಆಕಾಶ್ ಹಾಗೂ ಇತರರ ವಿರುದ್ಧ ಎಫ್​ಐಆರ್ ದಾಖಲಿಸಿಕೊಂಡಿದ್ದಾರೆ. ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದು, ರಹಸ್ಯ ಸ್ಥಳದಲ್ಲಿ ತೀವ್ರ ವಿಚಾರಣೆಗೊಳಪಡಿಸಿದ್ದಾರೆ.

ಶಾಸಕ ಸತೀಶ್ ರೆಡ್ಡಿ ಬಿಜೆಪಿಯ ಪ್ರಭಾವಿ ಶಾಸಕರಾಗಿದ್ದು, ಕಳೆದ ಹದಿನೈದು ದಿ‌ನದಿಂದ ಅಪರಿಚಿತ ಹುಡುಗರು ಅನುಮಾನಸ್ಪದವಾಗಿ ಓಡಾಡುತ್ತಿದ್ದರು. ಸತೀಶ್ ರೆಡ್ಡಿ ಮನೆ ಹಾಗೂ ಕಛೇರಿ ಬಳಿ ಅಪರಿಚಿತರಿಂದ ಓಡಾಟ ನಡೆಯುತ್ತಿದ್ದು, ಶಾಸಕ ಸತೀಶ್ ರೆಡ್ಡಿ ಆಪ್ತರು ಈ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ.

ಶಾಸಕರಿಗೆ ಕೊಲೆ ಮಾಡಲು 2 ಕೋಟಿ ಸುಪಾರಿ ನೀಡಿರುವ ಬಗ್ಗೆ ಚಂದ್ರು ಎನ್ನುವವರು ಶಾಸಕ ಸತೀಶ್ ರೆಡ್ಡಿ ಅವರ ಆಪ್ತ ಕಾರ್ಯದರ್ಶಿ(ಪಿಎ) ಹರೀಶ್​ಗೆ ಮಾಹಿತಿ ನೀಡಿದ್ದಾರೆ. ಬಳಿಕ ಹರೀಶ್ ಅವರು ಇಬ್ಬರು ಮಾತನಾಡಿರುವ ಆಡಿಯೋ ಸಮೇತ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಮೂಲದ ಆಕಾಶ್‌ಗೆ ಸುಪಾರಿ ನೀಡಲಾಗಿದೆ ಎಂದು ತಿಳಿದುಬಂದಿದ್ದು, ಸದ್ಯ ಆಕಾಶ್‌ನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಸತೀಶ್ ರೆಡ್ಡಿ ಹೇಳಿದ್ದೇನು?

ಇನ್ನು ಈ ಬಗ್ಗೆ ಸ್ವತಃ ಸತೀಶ್ ರೆಡ್ಡಿ ಅವರು ಪ್ರತಿಕ್ರಿಯಿಸಿದ್ದು, ನಾನು ಭಯ ಪಡುವುದಿಲ್ಲ, ಪೊಲೀಸರು ಕ್ರಮ ಕೈಗೊಳ್ಳುತ್ತಾರೆ. ಆರೋಪಿಗಳು ಎಲ್ಲೆಲ್ಲಿ ಓಡಾಡಿದ್ದಾರೆ ಎನ್ನುವ ಬಗ್ಗೆ ಪೊಲೀಸರ ಮಾಹಿತಿ ಪಡೆದುಕೊಂಡಿದ್ದಾರೆ. ಯಾವುದೇ ರಾಜಕೀಯ ಪಕ್ಷದ ಮೇಲೂ ಆರೋಪ ಮಾಡಲ್ಲ. ನನಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ. ಆದರೆ ಸುಪಾರಿ ನೀಡಿದ ಬಗ್ಗೆ ಮಾತಾಡಿರುವ ಆಡಿಯೋ ಸಿಕ್ಕಿದೆ. ಆರೋಪಿಗಳು ನನ್ನ ಚಲನವಲನದ ಮೇಲೆ ಗಮನ ಇಟ್ಟಿದ್ದರಂತೆ ಎಂದು ಸ್ಪಷ್ಟಡಿಸಿದರು.

ಸುಪಾರಿ ಕುರಿತ ಮಾತಾಡಿರುವ ಆಡಿಯೋ ಪೊಲೀಸರಿಗೆ ಸಿಕ್ಕಿವೆ. ಉದ್ಯಮದ ಕಾರಣಕ್ಕೆ ನನ್ನ ಕೊಲೆಗೆ ಸುಪಾರಿ ನೀಡಿಲ್ಲ.ಯಾಕಂದ್ರೆ ರಾಜಕಾರಣದಲ್ಲೇ ಇದ್ದೇನೆ. ಈಗ ಯಾವುದೇ ಉದ್ಯಮದಲ್ಲಿ ಇಲ್ಲ. ರಾಜಕೀಯ ಕಾರಣದಿಂದಲೇ ನನ್ನ ಹತ್ಯೆಗೆ ಸುಪಾರಿ ನೀಡಿದ್ದಾರೆ. ಪೊಲೀಸರು ಪಾರದರ್ಶಕ ತನಿಖೆ ನಡೆಸಿ ಆರೋಪಿಗಳನ್ನು ಜೈಲಿಗಟ್ಟಲಿ ಎಂದು ಹೇಳಿದರು.

ಆರಗ ಜ್ಞಾನೇಂದ್ರ ಪ್ರತಿಕ್ರಿಯೆ

ಇನ್ನು ಸತೀಶ್ ರೆಡ್ಡಿ ಹತ್ಯೆಗೆ ಸುಪಾರಿ ಕೇಸ್​ಗೆ ಸಂಬಂಧಿಸಿದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿದ್ದು, ಸುಪಾರಿ ನೀಡಿದವರು ಯಾವುದೇ ಪಕ್ಷದವರ ಆಗಲಿ ಕ್ರಮ ಕೈಗೊಳ್ಳುತ್ತೇವೆ. ಆರೋಪಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳು ನಡೆಯಲು ರಾಜ್ಯದಲ್ಲಿ ಅವಕಾಶ ನೀಡುವುದಿಲ್ಲ. ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. FIRನಲ್ಲಿ ಕೆಲವರ ಹೆಸರಿದೆ, ವಶಕ್ಕೆ ಪಡೆದು ವಿಚಾರಣೆ ಸಹ ನಡೆದಿದೆ. ಶಾಸಕರಿಗೆ ಯಾವುದೇ ಬೆದರಿಕೆಯಿದ್ರೂ ಪೊಲೀಸರು ರಕ್ಷಣೆ ನೀಡುತ್ತಾರೆ. ನಾನು ಈಗಾಗಲೇ ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಚರ್ಚಿಸಿರುವೆ ಎಂದು ತಿಳಿಸಿದರು.

 

Published On - 5:07 pm, Wed, 15 February 23