Karnataka Legislature Session: ಇಂದಿನಿಂದ ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು(Legislature Session) ಮೊದಲ ದಿನ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ. ಜುಲೈ 7ಕ್ಕೆ 14ನೇ ಬಾರಿ ಸಿಎಂ ಸಿದ್ದರಾಮಯ್ಯ(Siddaramaiah) ಬಜೆಟ್ ಮಂಡಿಸಲಿದ್ದಾರೆ. 16ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಹಲವು ವಿಷಯ ಪ್ರಸ್ತಾಪವಾಗಲಿದ್ದು ಸರ್ಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳ(Congress Guarantees) ಅನುಷ್ಠಾನ ವಿಚಾರ, ಬಿಜೆಪಿ ಅವಧಿಯ ವಿವಾದಿತ ತಿದ್ದುಪಡಿ ಕಾಯ್ದೆಗಳನ್ನು ಕೈಬಿಡುವುದು ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆ ಇದೆ. ಸದನದಲ್ಲಿ ಆಡಳಿತ ಪಕ್ಷಕ್ಕೆ ಬಿಸಿ ಮುಟ್ಟಿಸಲು ಪ್ರತಿಪಕ್ಷಗಳು ಸಿದ್ಧತೆ ಮಾಡಿಕೊಂಡಿದ್ದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಲು ಆಡಳಿತ ಪಕ್ಷ ಕಾಂಗ್ರೆಸ್ ಸಜ್ಜಾಗಿದೆ. ಇನ್ನು ಮುಂದಿನ 24 ಗಂಟೆಗಳಲ್ಲಿ ರಾಜ್ಯದಲ್ಲಿ ಮುಂಗಾರು ಚುರುಕುಗೊಳ್ಳಲಿದೆ. ಕರಾವಳಿಯ ಬಹುತೇಕ ಜಿಲ್ಲೆಗಳಲ್ಲಿ ಹಾಗೂ ದಕ್ಷಿಣ ಒಳನಾಡಿನ ಕೆಲವೆಡೆ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಅಧಿವೇಶನ, ಮಳೆ ಸೇರಿದಂತೆ ರಾಜ್ಯದ ಪ್ರಮುಖ ಸುದ್ದಿಗಳ ಕ್ಷಣ ಕ್ಷಣದ ಮಾಹಿತಿಗಾಗಿ ಟಿವಿ9 ಡಿಜಿಟಲ್ ಲೈವ್ ಫಾಲೋ ಮಾಡಿ.
ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವ ಶಕ್ತಿ ಯೋಜನೆ ಜಾರಿ ನಂತರ ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸುತ್ತಿದ್ದಾರೆ. ಯೋಜನೆ ಜಾರಿ ನಂತರ ಈವರೆಗೆ ಪ್ರಯಾಣಿಸಿದ ಮಹಿಳೆಯ ಸಂಖ್ಯೆ 10 ಕೋಟಿಗೆ ಸಮೀಪವಾಗಿದೆ. ಅಲ್ಲದೆ, ಸರ್ಕಾರಿ ಸಾರಿಗೆ ನಿಗಮಗಳಲ್ಲಿ ಮಹಿಳಾ ಪ್ರಯಾಣಿಕರ ಟಿಕೆಟ್ ಮೌಲ್ಯ 222 ಕೋಟಿ ರೂಪಾಯಿ ದಾಟಿದೆ. ಜೂನ್ 28ರವರೆಗೆ 9.46 ಕೋಟಿ ಮಹಿಳಾ ಪ್ರಯಾಣಿಕರ ಪ್ರಯಾಣ ಮಾಡಿದ್ದು, ನಿನ್ನೆ 60.78 ಲಕ್ಷ ಮಹಿಳಾ ಪ್ರಯಾಣಿಕರ ಸಂಚಾರ ಮಾಡಿದ್ದಾರೆ. 13.64 ಕೋಟಿ ರೂ. ಮೌಲ್ಯ ಟಿಕೆಟ್ ವಿತರಣೆ ಮಾಡಲಾಗಿದೆ.
ಸ್ವಾರ್ಥಕ್ಕಾಗಿ ಜಾತಿ ವ್ಯವಸ್ಥೆ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ ವಿರುದ್ಧ ಬುದ್ಧ, ಬಸವಣ್ಣ ಹೋರಾಟ ಮಾಡಿದ್ದರು. ನಾವು ಮನುಷ್ಯರಾಗಿ ಬದುಕಿ ಸಮಾಜದಲ್ಲಿ ಪರಿವರ್ತನೆ ತರಬೇಕು. ಬಸವಣ್ಣನವರು ಕೆಳವರ್ಗದ ಜನರ ಪರವಾಗಿ ಕೆಲಸ ಮಾಡಿದ್ದರು. ಅಸಮಾನತೆ ಇದ್ದರೆ ಸಮಾಜದಲ್ಲಿ ಸಾಮರಸ್ಯ ಇರುವುದಿಲ್ಲ. ಹೀಗಾಗಿ ಬಸವಣ್ಣ ಅನುಭವ ಮಂಟಪ ನಿರ್ಮಾಣ ಮಾಡಿದರು. ಅಂಬೇಡ್ಕರ್ ಸಂವಿಧಾನ ಬರೆಯದಿದರೆ ನಾನು ಸಿಎಂ ಆಗುತ್ತಿರಲಿಲ್ಲ. ನಾನು ಎಮ್ಮೆ ಕಾಯುತ್ತಾ ಇರುತ್ತಿದ್ದೆ. ತಂಗಡಗಿ ಕಲ್ಲು ಒಡೆಯುತ್ತಿದ್ದ ಎಂದರು.
ಮಂಗಳೂರಿನಲ್ಲಿ ಸತತ 2 ಗಂಟೆಯಿಂದ ಧಾರಾಕಾರವಾಗಿ ಮಳೆ ಸುರಿದಿದ್ದು, ಪರಿಣಾಮ ಮಂಗಳೂರಿನ ಪಂಪ್ವೆಲ್ ವೃತ್ತ ಜಲಾವೃತಗೊಂಡಿದೆ. ಮಳೆಗೆ ಪಂಪ್ವೆಲ್ ಫ್ಲೈಓವರ್ ಕೆಳಭಾಗ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಟ ನಡೆಸಿದ್ದು, ಟ್ರಾಫಿಕ್ ಜಾಮ್ ಕೂಡ ಉಂಟಾಯಿತು.
ಆನೇಕಲ್: ಬಿರುಗಾಳಿ ಸಹಿತಿ ಧಾರಾಕಾರವಾಗಿ ಮಳೆ ಸುರಿದ ಪರಿಣಾಮ ಬನ್ನೇರುಘಟ್ಟ ಪಾರ್ಕ್ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆಯಲ್ಲಿ ಮಳೆ ನೀರು ತುಂಬಿ ಹರಿಯುತ್ತಿರುವ ಪರಿಣಾಮ ಪಾರ್ಕ್ ನೋಡಲು ಬಂದಿದ್ದ ಪ್ರವಾಸಿಗರು ಪರದಾಟ ನಡೆಸುವಂತಾಯಿತು. ಆನೇಕಲ್ ತಾಲ್ಲೂಕಿನ ಬನ್ನೇರುಘಟ್ಟ, ಜಿಗಣಿ, ಚಂದಾಪುರ, ಅತ್ತಿಬೆಲೆ ಸೇರಿದಂತೆ ಹಲವೆಡೆ ಮಳೆಯಾಗಿದೆ.
ಬೆಂಗಳೂರು: ಚಾಕುವಿನಿಂದ ಚುಚ್ಚಿ ವಿದ್ಯಾರ್ಥಿಯನ್ನು ಹತ್ಯೆ ಮಾಡಿದ ಘಟನೆ ಮಂಜುನಾಥ್ ನಗರದ ಗೌತಮ್ ಕಾಲೇಜು ಬಳಿ ನಡೆದಿದೆ. ಸುಹೇಲ್ (18) ಕೊಲೆಯಾದ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿ. ಸ್ಥಳಕ್ಕೆ ಬಸವೇಶ್ವರ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಬಿಜೆಪಿ ಬಳ್ಳಾರಿ ವಿಭಾಗ ಉಸ್ತುವಾರಿ ಸಿದ್ಧೇಶ್ ಯಾದವ್ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಇಂದು ಬೆಳಗ್ಗೆ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದಿದ್ದ ರಾಜ್ಯ ವಿಶೇಷ ಸಭೆಯಲ್ಲಿ ಪಾಲ್ಗೊಂಡಿದ್ದ ಯಾದವ್ ಅವರಿಗೆ ಎದೆನೋವು ಕಾಣಿಸಿಕೊಂಡಿದೆ. ಅದರಂತೆ ಕೆ.ಸಿ. ಜನರಲ್ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಸಂದರ್ಭದಲ್ಲಿ ಮಾರ್ಗ ಮಧ್ಯೆ ನಿಧನ ಹೊಂದಿದ್ದಾರೆ. ಆಸ್ಪತ್ರೆಗೆ ಭೇಟಿ ನೀಡಿದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.
ವಿಜಯನಗರ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಹೊಸಪೇಟೆ, ಹಂಪಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಳೆಯಾಗಿದ್ದು, ಜನರ ಮೊಗದಲ್ಲಿ ಮಂದಹಾಸ ಮೂಡಿದೆ.
ಹಾಸನ: ಸಕಲೇಶಪುರ ಠಾಣೆ ಪೊಲೀಸರಿಂದ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಪಟ್ಟಣದಲ್ಲಿ ಬಿಜೆಪಿ, ಬಜರಂಗದಳ ಪ್ರತಿಭಟನೆ ನಡೆಸಿತು. ಅವಿನಾಶ್ ಎಂಬಾತನನ್ನು ಮನೆಯಿಂದ ಠಾಣೆಗೆ ಕರೆದೊಯ್ದು ಚಿತ್ರಹಿಂಸೆ ನೀಡಿದ ಆರೋಪ ಕೇಳಿಬಂದಿದೆ.
ವಿಧಾನಸಭೆ, ವಿಧಾನ ಪರಿಷತ್ ವಿಪಕ್ಷ ನಾಯಕರ ಆಯ್ಕೆ ವಿಚಾರವಾಗಿ ಮಾತನಾಡಿದ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ, ಇಂದು ಅಥವಾ ನಾಳೆ ವಿಪಕ್ಷ ನಾಯಕರ ಆಯ್ಕೆ ಆಗಲಿದೆ. ನನ್ನ ಪ್ರಕಾರ ವೀಕ್ಷಕರು ಈಗಾಗಲೇ ಬಂದಿದ್ದಾರೆ. ನಾಳೆಗೆ ಎಲ್ಲಾವೂ ಸರಿಯಾಗುತ್ತೆ, ಯಾವುದೇ ಗೊಂದಲ ಇಲ್ಲ. ರಾಜ್ಯಪಾಲರ ಭಾಷಣ ನೋಡಿಲ್ಲ, ನೋಡಿದ ಬಳಿಕ ಮಾತಾಡುತ್ತೇನೆ ಎಂದರು.
ಸಿಎಂ ಕಚೇರಿಯಲ್ಲಿ ಭ್ರಷ್ಟಾಚಾರ ಎಂಬ ಹೆಚ್ ಡಿ ಕುಮಾರಸ್ವಾಮಿ ಆರೋಪಕ್ಕೆ ಧ್ವನಿಗೂಡಿಸಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಅದು ಯಾವುದೋ ಸಣ್ಣ ಹುದ್ದೆ ಇರಬೇಕು ಅದಕ್ಕೆ 30 ಲಕ್ಷ ಕೇಳಿದ್ದಾರೆ,ಅಲ್ಲಿ ಕೋಟ್ಯಾಂತರ ರೂಪಾಯಿ ಕೇಳುತ್ತಿದ್ದಾರೆ ಎಂದರು.
ವಿಧಾನಸೌಧ ಕೆಂಗಲ್ ಗೇಟ್ ಬಳಿ ಮಾತನಾಡಿದ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ರಾಜ್ಯಪಾಲರ ಭಾಷಣ ನಾನು ಕಂಡಂತೆ ಸಪ್ಪೆ ಭಾಷಣ. ಯಾವುದೇ ಜೀವಾಳ ಇಲ್ಲ. ಹೊಸ ಸರ್ಕಾರ ಬಂದಾಗ, ಹೊಸ ಚೈತನ್ಯ, ಹೊಸ ದಿಕ್ಸೂಚಿ ಇಲ್ಲದೆ ಕವಲು ದಾರಿಯಲ್ಲಿರುವ ಸರ್ಕಾರ. ಭರವಸೆ ಮೂಡುವಂತಹ ಯಾವುದೇ ಭಾಷಣ ಇಲ್ಲ. ಸುಳ್ಳಿನ ಕಂತೆ ಅಂತ ಸಾಭಿತಾಗಿದೆ ಎಂದರು.
ವಿಧಾನಸಭೆ: ಹೆಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಸಾಥ್ ನೀಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಪೇಸಿಎಂ, ಪೇ ಸೋನಿಯಾ, ಪೇ ವೇಣುಗೋಪಾಲ್ ಎಲ್ಲಾ ಇದೆ. ಹತ್ತು ಜನ ಯಾರ್ಯಾರು ಸಿಎಂ ಎಂದು ನಂಗೆ ಗೊತ್ತಿಲ್ಲ. ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಅವರದ್ದೇ ಆದ ಮಾಹಿತಿ ಮೂಲಗಳಿವೆ. ಕ್ಯಾಬಿನೆಟ್ ಅಜೆಂಡಾ ಮೊದಲು ಅವರಿಗೇ ಹೋಗುತ್ತೆ ಎಂದರು.
ಬಿಜೆಪಿಯವರು ರಾಜ್ಯದಲ್ಲಿರುವುದು ಸಮ್ಮಿಶ್ರ ಸರ್ಕಾರ ಅಂತಾರೆ. ಮಹಾರಾಷ್ಟ್ರದಲ್ಲಿ ದಿಢೀರ್ ರಾಜಕೀಯ ಬದಲಾವಣೆಯಾಗಿದೆ. ನಿನ್ನೆ ಅಜಿತ್ ಪವಾರ್ ಮಹಾರಾಷ್ಟ್ರ ಸರ್ಕಾರ ಬೆಂಬಲಿಸಿದ್ದಾರೆ ಎಂದ ಹೆಚ್ಡಿ ಕುಮಾರಸ್ವಾಮಿ, ಕರ್ನಾಟಕದಲ್ಲಿ ಯಾವ ಅಜಿತ್ ಪವಾರ್ ಹುಟ್ಟು ಹಾಕುತ್ತಾರೋ ಗೊತ್ತಿಲ್ಲ. ಕರ್ನಾಟಕದ ಬಗ್ಗೆಯೂ ನನಗೆ ಆತಂಕ ಶುರುವಾಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಲೇವಡಿ ಮಾಡಿದರು.
ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ವಜಾಗೊಳಿಸಿದ್ದು ಸರಿಯಲ್ಲ. ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದು ಚಿಕ್ಕಬಳ್ಳಾಪುರದಲ್ಲಿ ಮಾಜಿ ಸಚಿವ ಡಾ.ಕೆ ಸುಧಾಕರ್ ಆರೋಪಿಸಿದ್ದಾರೆ. ಚಿಮುಲ್ ಮರು ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ. ಸಿದ್ದರಾಮಯ್ಯ ಸರ್ಕಾರ ಚಿಕ್ಕಬಳ್ಳಾಪುರ ರೈತರಿಗೆ ಪೆಟ್ಟು ನೀಡಿದೆ ಎಂದರು. ಚುನಾವಣೆಯಲ್ಲಿ ಸೋತಿದ್ದೇನೆ ಆದರೆ ಸತ್ತಿಲ್ಲ. ಟಾರ್ಗೆಟ್ ಮಾಡಿಕೊಂಡು ಏನು ತನಿಖೆ ಮಾಡಿಸುತ್ತಾರೋ ಮಾಡಿಸಲಿ. ಆಕ್ಸಿಜನ್ ದುರಂತ ತನಿಖೆಯಲ್ಲಿ ಯಾರು ಟಾರ್ಗೆಟ್ ಎಂಬುದು ಗೊತ್ತು. ಮುಂದಿನ 6 ತಿಂಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಲ್ಲ ಎಂದರು.
512 ಎಕರೆ ವಸತಿ ಯೋಜನೆಗಾಗಿ ಹಣ ಮಂಜೂರು ಮಾಡಿಸಿದ್ದೇನೆ. ನಾನು ಮಂಜೂರು ಮಾಡಿಸಿಲ್ಲ ಅಂತಾ ಶಾಸಕ ಪ್ರದೀಪ್ ಈಶ್ವರ್ ಭೋಂಗನಂದೀಶ್ವರ ಮೇಲೆ ಪ್ರಮಾಣ ಮಾಡಲಿ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಸವಾಲು ಹಾಕಿದ್ದಾರೆ. ಭೋಂಗನಂದೀಶ್ವರ ದೇವರ ಮುಂದೆ ನಾನು ದೀಪ ಹಚ್ಚುತ್ತೇನೆ. ಮಂಜೂರು ಮಾಡಿಸಿದ್ದು ಸುಳ್ಳು ಎಂದಾದರೆ ನೀವು ದೀಪ ಹಚ್ಚಿ. ನೀನು ಸುಳ್ಳು ದೀಪ ಹಚ್ಚುವ ಗಿರಾಕಿಯೇ ಎಂದರು.
ಬೆಂಗಳೂರು: ಗ್ಯಾರಂಟಿಗಳ ಅನುಷ್ಠಾನ ಬಗೆಗಿನ ಬದ್ಧತೆ ರಾಜ್ಯಪಾಲರು ತಿಳಿಸಿದ್ದಾರೆ ಎಂದು ವಿಧಾನಸೌಧದಲ್ಲಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಾವ ದಿಸೆಯಲ್ಲಿ ಹೋಗುತ್ತದೆ ಎಂಬುದನ್ನು ರಾಜ್ಯಪಾಲ ಗೆಹ್ಲೋಟ್ ಅವರು ಭಾಷಣದ ಮೂಲಕ ತಿಳಿಸಿದ್ದಾರೆ. ಸರ್ಕಾರದ ಜನಪರವಾದ ಕಾಳಜಿ ಬಗ್ಗೆ ರಾಜ್ಯಪಾಲರು ಹೇಳಿದ್ದಾರೆ. ದಲಿತರು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಸಂದೇಶ ನೀಡಿದ್ದೇವೆ. ಮನಸ್ಸನ್ನು ಕೂಡಿಸುವ ಎಲ್ಲ ವರ್ಗಗಳಿಗೂ ಗೌರವಿಸುವಂಥ ಸಂದೇಶ ಎಂದರು.
ಚಿಕ್ಕಬಳ್ಳಾಪುರ ಹಾಲು ಒಕ್ಕೂಟವನ್ನು ವಜಾಗೊಳಿಸಿದ್ದು ಸರಿಯಲ್ಲ. ಸಿದ್ದರಾಮಯ್ಯ ದ್ವೇಷದ ರಾಜಕಾರಣ ಮಾಡುವುದಿಲ್ಲ ಎಂದಿದ್ದಾರೆ. ಚಿಮುಲ್ ಮರು ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಚಿಕ್ಕಬಳ್ಳಾಪುರದಲ್ಲಿ ಸರ್ಕಾರದ ವಿರುದ್ಧ ಡಾ.ಸುಧಾಕರ್ ಆಕ್ರೋಶ ಹೊರ ಹಾಕಿದ್ದಾರೆ. ಸಿದ್ದರಾಮಯ್ಯ ಸರ್ಕಾರ ಚಿಕ್ಕಬಳ್ಳಾಪುರ ರೈತರಿಗೆ ಪೆಟ್ಟು ನೀಡಿದೆ. ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಚುನಾವಣೆಯಲ್ಲಿ ಸೋತಿದ್ದೇನೆ ಆದ್ರೆ ಸತ್ತಿಲ್ಲ. ಟಾರ್ಗೆಟ್ ಮಾಡಿಕೊಂಡು ಏನು ತನಿಖೆ ಮಾಡಿಸ್ತಾರೋ ಮಾಡಿಸಲಿ. ಆಕ್ಸಿಜನ್ ದುರಂತ ತನಿಖೆಯಲ್ಲಿ ಯಾರು ಟಾರ್ಗೆಟ್ ಎಂಬುದು ಗೊತ್ತು. ಮುಂದಿನ 6 ತಿಂಗಳು ರಾಜ್ಯ ಕಾಂಗ್ರೆಸ್ ಸರ್ಕಾರದ ಬಗ್ಗೆ ಮಾತನಾಡಲ್ಲ ಎಂದರು.
ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಕಾಂಗ್ರೆಸ್ ನಾಯಕರು ವರ್ಗಾವಣೆ ದಂಧೆ ಶುರು ಮಾಡಿದ್ದಾರೆ. ನಾಯಕರ ಆಧಾರಿತ ಸರ್ಕಾರವಿದು ಎಂದು ಬೆಂಗಳೂರಿನಲ್ಲಿ ಮಾಜಿ ಸಚಿವ ಡಾ.ಅಶ್ವತ್ಥ್ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.
ರಾಜ್ಯಪಾಲರ ಭಾಷಣದ ಬಳಿಕ ವಿಧಾನಸಭೆ ಕಲಾಪ ಆರಂಭವಾಗಿದ್ದು ವಿಧಾನ ಪರಿಷತ್ತ್ ಕಲಾಪದಲ್ಲಿ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಗಿದೆ.
ಗ್ಯಾರಂಟಿಗಳ ಅನುಷ್ಠಾನ ಬಗೆಗಿನ ಬದ್ಧತೆ ರಾಜ್ಯಪಾಲರು ತಿಳಿಸಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಯಾವ ದಿಸೆಯಲ್ಲಿ ಹೋಗುತ್ತೆ. ಇದನ್ನು ರಾಜ್ಯಪಾಲ ಗೆಹ್ಲೋಟ್ ಭಾಷಣದ ಮೂಲಕ ತಿಳಿಸಿದ್ದಾರೆ. ಸರ್ಕಾರದ ಜನಪರವಾದ ಕಾಳಜಿ ಬಗ್ಗೆ ರಾಜ್ಯಪಾಲರು ಹೇಳಿದ್ದಾರೆ. ದಲಿತರು, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುವ ಸಂದೇಶ ನೀಡಿದ್ದೇವೆ. ಮನಸ್ಸನ್ನು ಕೂಡಿಸುವ ಎಲ್ಲ ವರ್ಗಗಳಿಗೂ ಗೌರವಿಸುವಂಥ ಸಂದೇಶ ನೀಡಿದ್ದೇವೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮಾಡಬೇಕಾದ ಕರ್ತವ್ಯ, ಆ ಹೆಜ್ಜೆಗಳ ಸೂಕ್ಷ್ಮ ಪರಿಚಯವನ್ನು ರಾಜ್ಯಪಾಲರು ಮಾಡಿದ್ದಾರೆ. ಪ್ರವಾಸೋದ್ಯಮ, ಶಿಕ್ಷಣ ಸೇರಿ ಎಲ್ಲ ಕ್ಷೇತ್ರಕ್ಕೂ ಮಹತ್ವ ಕೊಟ್ಟಿದ್ದಾರೆ. ಪ್ರೀತಿಯನ್ನು ಬೆಳೆಸಿ ದ್ವೇಷವನ್ನು ಅಳಿಸುವಂತಹ ಕಾರ್ಯಕ್ರಮ ಕೊಡುವ ಭರವಸೆಯನ್ನು ನಾವು ನೀಡಿದ್ದೇವೆ ಎಂದು ವಿಧಾನಸೌಧದಲ್ಲಿ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಹೇಳಿದ್ರು.
ರಾಜ್ಯ ಬಿಜೆಪಿಯಲ್ಲಿ ವಿಪಕ್ಷ ನಾಯಕನ ಆಯ್ಕೆ ಮಾಡದ ವಿಚಾರಕ್ಕೆ ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಲೇವಡಿ ಮಾಡಿದೆ. ಬಿಜೆಪಿಯ 66 ಶಾಸಕರಲ್ಲಿ ವಿಪಕ್ಷ ನಾಯಕನಾಗುವ ಅರ್ಹತೆ ಇರುವ ಒಬ್ಬೇ ಒಬ್ಬ ಶಾಸಕನಿಲ್ಲದಿರುವುದು ನಾಚಿಕೆಗೇಡು. ವಿಪಕ್ಷ ನಾಯಕನಿಲ್ಲದೆ ನಡೆಯುತ್ತಿರುವ ಮೊದಲ ಅಧಿವೇಶನವಿದು, ರಾಜ್ಯದ ಇತಿಹಾಸದಲ್ಲಿ ವಿಪಕ್ಷ ನಾಯಕನಿಲ್ಲದೆ ನಡೆಯುತ್ತಿರುವ ಮೊದಲ ಅಧಿವೇಶನವಿದು. ಬಿಜೆಪಿ ಅಧಿಕಾರದಲ್ಲಿದ್ದಾಗಲೂ ಪ್ರಜಾಪ್ರಭುತ್ವವನ್ನು ಗೌರವಿಸಲಿಲ್ಲ. ಈಗ ವಿಪಕ್ಷದಲ್ಲಿದ್ದಾಗಲೂ ಬಿಜೆಪಿ ಪ್ರಜಾಪ್ರಭುತ್ವವನ್ನು ಗೌರವಿಸುತ್ತಿಲ್ಲ ಎಂದು ಟ್ವೀಟ್ ಮೂಲಕ ಬಿಜೆಪಿ ವಿರುದ್ಧ ರಾಜ್ಯ ಕಾಂಗ್ರೆಸ್ ಲೇವಡಿ ಮಾಡಿದೆ.
ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲೇ ಭ್ರಷ್ಟಾಚಾರ ನಡೆಯುತ್ತಿದೆ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ಮುಖ್ಯಮಂತ್ರಿಗಳ ಕಚೇರಿಯಲ್ಲಿ ಹಣಕ್ಕೆ ಬೇಡಿಕೆ ಇಡುತ್ತಾರೆ. ಮುಖ್ಯಮಂತ್ರಿ ಕಚೇರಿಯಲ್ಲಿ ಹಣ ತರುವಂತೆ ಬೇಡಿಕೆ ಇಡುತ್ತಾರೆ. ಶಾಸಕರ ಶಿಫಾರಸು ತಂದ್ರೆ ಸಾಲದು 30 ಲಕ್ಷ ದುಡ್ಡು ತನ್ನಿ ಅಂತಾರೆ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.
ಒಬ್ಬ ಶಾಸಕನಾಗಿ ಸರ್ಕಾರದ ಲೋಪದೋಷ ಬಗ್ಗೆ ಚರ್ಚಿಸ್ತೇನೆ. ವಿಪಕ್ಷ ನಾಯಕನಾಗಿ ಈ ಸರ್ಕಾರವನ್ನು ಟೀಕಿಸುತ್ತಿಲ್ಲ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಚುನಾವಣೆ ಸಂದರ್ಭದಲ್ಲಿ ರಾಜ್ಯದ ಜನರಿಗೆ ಏನು ಭರವಸೆ ಕೊಟ್ರಿ. ಆ ಭರವಸೆಗಳನ್ನು ಯಾವ ರೀತಿ ಈಡೇರಿಸಲು ಹೊರಟ್ಟಿದ್ದೀರಿ. ಈ ಸರ್ಕಾರ ICUಗೆ ಹೋಗುವ ಕಾಲ ಬರುತ್ತೆ ಎಂದು ಅನಿಸುತ್ತೆ. ಐಸಿಯು, ವೆಂಟಿಲೇಟರ್ ಮೇಲೆ ಈ ಸರ್ಕಾರ ನಡೆಯಬಹುದು. ಆರ್ಥಿಕ ಪರಿಸ್ಥಿತಿ ಆ ಮಟ್ಟಕ್ಕೆ ಹೋಗಲಿದೆ. ಮುಂದಿನ 5 ವರ್ಷಕ್ಕೆ ಏನು ಕೊಡಬೇಕೆಂಬ ಆತ್ಮವಿಶ್ವಾಸವೇ ಇಲ್ಲ. ರಾಜ್ಯಪಾಲರ ಭಾಷಣ ವೇಳೆ ಶಾಸಕರು ಮೇಜು ಕುಟ್ಟಿದ್ದು ನೋಡಿಲ್ಲ ಎಂದು ವಿಧಾನಸೌಧದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ವಿಧಾನಸೌಧದಲ್ಲಿ ರಾಜ್ಯಪಾಲರ ಭಾಷಣದ ನಡುವೆ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಇಂದು ಕಾಂಗ್ರೆಸ್ ಸರ್ಕಾರ ಮೊದಲು ರಾಜ್ಯಪಾಲರ ಭಾಷಣ ಮಾಡಿಸಿದೆ. ಮುಂದಿನ ಆರ್ಥಿಕ ವರ್ಷದಲ್ಲಿ ರಾಜ್ಯದ ಹಲವಾರು ಸಮಸ್ಯೆಗಳ ಬಗ್ಗೆ ರಾಜ್ಯಪಾಲರ ಮೂಲಕ ಸದನಕ್ಕೆ, ರಾಜ್ಯದ ಜನೆತೆಗೆ ಸಂದೇಶ ಕೊಟ್ಟಿದ್ದಾರೆ. ರಾಜ್ಯದ ಸಾಧಕರ ಹೆಸರುಗಳನ್ನು ನೆನಪಿಸಿ,ಅವರ ಮಾತನ್ನು ಸ್ಮರಿಸಿದ್ದಾರೆ. ಐದು ಗ್ಯಾರೆಂಟಿಗಳನ್ನು ಜಾರಿಗೆ ತಂದ ಪಕ್ಷ ಎಂದು ಹೇಳಿಕೊಂಡಿದ್ದಾರೆ. ನಾಡಿನ ಸಾಮಾಜಿಕ ಸಮಸ್ಯೆಗಳು, ವಿವಿಧ ಸಮಸ್ಯೆಗಳು ಬಗಹರಿಸುವ ಸಂದೇಶ ನೀಡಿದ್ದಾರೆ. ವಸತಿರಹಿತರಿಗೆ ಮನೆ ಕಟ್ಟಿಕೊಡುವುದಾಗಿ ಹೇಳಿದ್ದಾರೆ. ರಾಜ್ಯಪಾಲರ ಸಹಭಾಗಿತ್ವದಲ್ಲಿ ಗ್ರಾಮೀಣ ಮತ್ತು ನಗರಪ್ರದೇಶದ ಅಭಿವೃದ್ಧಿ ಮಾಡೋದಾಗಿ ಹೇಳಿಕೊಂಡಿದ್ದಾರೆ. ಪಶುಸಂಗೋಪನೆಯಿಂದ ಗ್ರಾಮೀಣ ಬದುಕು ಅನೂಕೂಲ ಆಗುತ್ತೆ ಎಂದು ಹೇಳಿದ್ದಾರೆ. ಆದ್ರೆ ಸರ್ಕಾರ ಹಾಲು ಉತ್ಪಾದಕರಿಗೆ ಹಣ ಕಡಿತ ಮಾಡಿದ್ದಾರೆ. ಸಿಎಂ ಹೇಳಿದ್ರು ಸಹ ಪ್ರೋತ್ಸಾಹ ಧನ ಕಡಿತಗೊಳಿಸಿಲಾಗಿದೆ ಎಂದರು.
ನನ್ನ ಸರ್ಕಾರ ಆಡಳಿತವನ್ನು ಪವಿತ್ರ ಕರ್ತವ್ಯ ಎಂದು ಪರಿಗಣಿಸುತ್ತೆ. ಸರ್ಕಾರ ಬಡವರು, ಆರ್ಥಿಕ ಹಿಂದುಳಿದವರ ಪರವಾಗಿ ನಿಲ್ಲುತ್ತದೆ. ಸರ್ಕಾರ ಆಧುನಿಕ ಕರ್ನಾಟಕ ನಿರ್ಮಾಣ ಮಾಡಲು ಉದ್ದೇಶಿಸಿದೆ. ಶಾಲಾ ಶಿಕ್ಷಣವು ಸಮಾಜದ ಅಡಿಪಾಯವೆಂದು ಗುರುತಿಸಲ್ಪಟ್ಟಿದೆ. ಪ್ರತಿ ಮಗುವಿನ ಮೂಲಭೂತ ಹಕ್ಕನ್ನು ಸಂರಕ್ಷಿಸಲು ಸರ್ಕಾರ ಬದ್ಧ. ಶಿಕ್ಷಣ ಜತೆಗೆ ಮಕ್ಕಳ ಆರೋಗ್ಯ ರಕ್ಷಣೆಯೂ ಸರ್ಕಾರದ ಜವಾಬ್ದಾರಿ. ಉನ್ನತ ಶಿಕ್ಷಣ ವ್ಯವಸ್ಥೆಯನ್ನು ರೂಪಿಸಲು ನಾವು ಸಿದ್ಧರಾಗಿದ್ದೇವೆ. ಬಡತನ ರೇಖೆಗಿಂತ ಕೆಳಗಿರುವ ಎಲ್ಲರಿಗೂ ವಸತಿ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತೆ. ಕಲ್ಯಾಣ ಕರ್ನಾಟಕದಲ್ಲಿ ಆರೋಗ್ಯ, ಶಿಕ್ಷಣ ಸೇವೆ ಒದಗಿಸಲು ನೆರವು ಎಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಗೆಹ್ಲೋಟ್ ಭಾಷಣದಲ್ಲಿ ತಿಳಿಸಿದರು.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಗೆಹ್ಲೋಟ್ ಭಾಷಣ ಮಾಡುತ್ತಿದ್ದಾರೆ. ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 3 ಸಾವಿರ ರೂ. ಹಣ ನೀಡಲಾಗುತ್ತೆ. ನಿರುದ್ಯೋಗಿ ಡಿಪ್ಲೋಮಾದಾರರ ಖಾತೆಗೆ ತಿಂಗಳಿಗೆ 1,500 ರೂ. ಹಾಕಲಾಗುತ್ತೆ. ಗೃಹಜ್ಯೋತಿ ಯೋಜನೆಯಡಿ 200 ಯೂನಿಟ್ವರೆಗೆ ಉಚಿತ ವಿದ್ಯುತ್ ಕೊಡಲಾಗುತ್ತೆ. ಈ ಯೋಜನೆಯಿಂದ ಸುಮಾರು 2.14 ಕೋಟಿ ಕುಟುಂಬಕ್ಕೆ ಅನುಕೂಲ ಆಗಲಿದೆ. ಮಹಿಳಾ ಸಬಲೀಕರಣಕ್ಕಾಗಿ ಗೃಹಲಕ್ಷ್ಮೀ ಯೋಜನೆ ಜಾರಿ ಮಾಡಲಾಗಿದೆ. ಗೃಹಲಕ್ಷ್ಮೀ ಯೋಜನೆಯಡಿ ಮನೆ ಯಜಮಾನಿ ಖಾತೆಗೆ 2 ಸಾವಿರ ರೂ. ಹಾಕಲಾಗುತ್ತೆ ಎಂದು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳ ಬಗ್ಗೆ ವಿವರಿಸಿದರು. ಹಾಗೂ ನನ್ನ ಸರ್ಕಾರ ಆಡಳಿತವನ್ನು ಪವಿತ್ರ ಕರ್ತವ್ಯ ಎಂದು ಪರಿಗಣಿಸುತ್ತೆ. ಸರ್ಕಾರ ಬಡವರು, ಆರ್ಥಿಕ ಹಿಂದುಳಿದವರ ಪರವಾಗಿ ನಿಲ್ಲುತ್ತದೆ ಎಂದರು.
ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಗೆಹ್ಲೋಟ್ ಭಾಷಣ ಶುರು ಮಾಡಿದ್ದಾರೆ. ಬಸವಣ್ಣನ ತತ್ವದಡಿ ರಾಜ್ಯ ಸರ್ಕಾರ ನಡೆಯುತ್ತಿದೆ. ಸರ್ಕಾರ ಎಲ್ಲಾ ಸಮುದಾಯಗಳ ಪರವಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ. ಕುವೆಂಪು ಅವರ ಸರ್ವಜನಾಂಗದ ಶಾಂತಿ ತೋಟ ತತ್ವದಡಿ ಕೆಲಸ ಮಾಡುತ್ತಿದ್ದೇವೆ. ಬಸವಣ್ಣ, ಸರ್ವಜ್ಞ ಸೇರಿ ಅನೇಕ ಸಂತರು ಶಾಂತಿ ತತ್ವ ಪಾಲನೆ ಮಾಡಲಾಗುತ್ತಿದೆ. ಇಂದಿರಾ ಕ್ಯಾಂಟೀನ್ ಮೂಲಕ ಸರ್ಕಾರ ಹಸಿವು ಮುಕ್ತ ಮಾಡಲಿದೆ. ಬಡವರು, ದುಡಿಯುವ ವರ್ಗದ ಜನರು, ವಲಸೆ ಕಾರ್ಮಿಕರು ಮುಂತಾದವರ ಹಸಿವು ತಣಿಸಲು ಇಂದಿರಾ ಕ್ಯಾಂಟೀನ್ ಸ್ಥಾಪನೆ ಮಾಡಲಾಗಿದೆ. ಯುವನಿಧಿ ಯೋಜನೆಯಡಿ ನಿರುದ್ಯೋಗಿ ಯುವಕರಿಗೆ ಹಣ ನೀಡಲಾಗುತ್ತೆ ಎಂದರು.
ವಿಧಾನಸೌಧದಲ್ಲಿ ಗೃಹ ಸಚಿವ ಪರಮೇಶ್ವರ್ ಮಾತನಾಡಿದ್ದು ಬಿಟ್ ಕಾಯಿನ್ ಪ್ರಕರಣದ ಮರು ತನಿಖೆಗೆ ಆದೇಶಿಸಿದ್ದೇವೆ. ಸಿಐಡಿ ಅಡಿಯಲ್ಲಿ ಎಸ್ಐಟಿ ರಚನೆ ಮಾಡಿದ್ದೇನೆ. ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಆದೇಶಗಳನ್ನು ಮಾಡುತ್ತೇವೆ. ಟೆಕ್ನಿಕಲ್, ಅಂತಾರಾಜ್ಯ ಹಾಗೂ ಅಂತಾರಾಷ್ಟ್ರೀಯ ಇರೋದರಿಂದ ನಿಗದಿತ ಸಮಯದಲ್ಲಿ ಮುಗಿಯಲಿದೆ ಎಂದು ಹೇಳಲು ಬರಲ್ಲ ಎಂದರು.
ವಿಧಾನಸೌಧಕ್ಕೆ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಆಗಮಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯಪಾಲ ಗೆಹ್ಲೋಟ್ ಅವರನ್ನು ಸ್ವಾಗತಿಸಿದರು.
ಬಿಜೆಪಿಯಲ್ಲಿ ವಿಪಕ್ಷ ನಾಯಕ ಆಯ್ಕೆ ವಿಳಂಬ ವಿಚಾರಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಬಿಜೆಪಿಯಲ್ಲಿ ಗುಂಪುಗಾರಿಕೆ ಇದೆ ಅನ್ನೋದು ಸ್ಪಷ್ಟವಾಗಿ ಗೊತ್ತಾಗುತ್ತೆ. ಬಿಜೆಪಿಯವರು ತಮ್ಮ ಪಕ್ಷ ಶಿಸ್ತಿನ ಪಕ್ಷ ಅಂತ ಹೇಳಿಕೊಳ್ಳುತ್ತಾರೆ. ಆದರೆ ಅತಿ ಹೆಚ್ಚು ಅಶಿಸ್ತು ಇರುವ ಪಕ್ಷ ಬಿಜೆಪಿ. ವಿಪಕ್ಷ ನಾಯಕನ ಆಯ್ಕೆ ಮಾಡುವ ವಿಚಾರ ಅವರ ಪಕ್ಷಕ್ಕೆ ಬಿಟ್ಟಿದ್ದು ಎಂದು ಸಿದ್ದರಾಮಯ್ಯ ತಿಳಿಸಿದರು.
ವಿಧಾನಮಂಡಲ ಅಧಿವೇಶನಕ್ಕೆ ಕ್ಷಣಗಣನೆ ಶುರುವಾಗಿದೆ. ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು ಜುಲೈ 7ಕ್ಕೆ 14ನೇ ಬಾರಿ ಸಿಎಂ ಸಿದ್ದರಾಮಯ್ಯ ಬಜೆಟ್ ಮಂಡಿಸಲಿದ್ದಾರೆ. ಒಟ್ಟು 10 ದಿನಗಳ ಕಾಲ ವಿಧಾನಮಂಡಲ ಅಧಿವೇಶನ ನಡೆಯಲಿದೆ. 16ನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಹಲವು ವಿಷಯ ಪ್ರಸ್ತಾಪವಾಗಲಿದೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ನೂತನವಾಗಿ ಆಯ್ಕೆಯಾದ ವಿಧಾನ ಪರಿಷತ್ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸಭಾಪತಿ ಬಸವರಾಜ್ ಹೊರಟ್ಟಿ, ಸಿಎಂ ಸಿದ್ದರಾಮಯ್ಯ ಸಮ್ಮುಖದಲ್ಲಿ ಜಗದೀಶ್ ಶೆಟ್ಟರ್, ತಿಪ್ಪಣ್ಣಪ್ಪ ಕಮಕನೂರು, ಬೋಸರಾಜು ರಿಂದ ಪ್ರಮಾಣ ವಚನ ಸ್ವೀಕಾರ. ಸಚಿವ ಶರಣಪ್ರಕಾಶ್ ಪಾಟೀಲ್, ಸಚಿವ ಪ್ರಿಯಾಂಕ್ ಖರ್ಗೆ, ಸಚಿವ ಎಚ್.ಕೆ ಪಾಟೀಲ್, ಶಾಸಕರಾದ ಕೋನರೆಡ್ಡಿ, ಅಲ್ಲಮಪ್ರಭು ಪಾಟೀಲ್, ಹಂಪಯ್ಯ ನಾಯ್ಕ್, ಅಲ್ಲಮಪ್ರಭು ಪಾಟೀಲ್ ಭಾಗಿಯಾಗಿದ್ದಾರೆ.
ಮತದಾರರ ಭರವಸೆ ಉಳಿಸಿಕೊಳ್ಳಲು ಶಾಸಕರ ವಿಭಿನ್ನ ಪ್ರಯತ್ನ. ಶಾಸಕರ ನಡೆ, ಹಳ್ಳಿ ಕಡೆ ಕಾರ್ಯಕ್ರಮಕ್ಕೆ ಮುಂದಾದ ಡಾ.ರಂಗನಾಥ್. ಕುಣಿಗಲ್ ಕ್ಷೇತ್ರದ ಶಾಸಕ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಸಂಬಂಧಿ ರಂಗನಾಥ್ ಯಡಿಯೂರು ಹೋಬಳಿಯ ನಾಗಸಂದ್ರ ಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಹೂಡಿ ಜನರ ಸಮಸ್ಯೆಗಳನ್ನ ಆಲಿಸಿದ್ದಾರೆ.
ಅಭಿವೃದ್ಧಿ ಕಾರ್ಯ ಮಾಡಿದಕ್ಕೆ ಪ್ರತಿಫಲ ಕೊಡ್ತಾರೆ ಅಂದುಕೊಂಡಿದ್ದೆ. ಉಚಿತ ಭಾಗ್ಯದ ಮುಂದೆ ನಮ್ಮ ಕೆಲಸ ಕೊಚ್ಚಿಕೊಂಡು ಹೋಯಿತು ಎಂದು ಚುನಾವಣೆ ಬಳಿಕ ಮೊದಲ ಬಾರಿ ಜೆ.ಸಿ.ಮಾಧುಸ್ವಾಮಿ ಮೌನ ಮುರಿದಿದ್ದಾರೆ. ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯಲ್ಲಿ ಕಾರ್ಯಕರ್ತರ ಸಭೆಯಲ್ಲಿ ಜೆ.ಸಿ.ಮಾಧುಸ್ವಾಮಿ ಬೇಸರ ವ್ಯಕ್ತಪಡಿಸಿದ್ದಾರೆ. ಇಡೀ ರಾಜ್ಯದಲ್ಲಿ ನನ್ನಂತೆ ಕೆಲಸ ಮಾಡಿದ ಹಲವು ಶಾಸಕರಿದ್ದಾರೆ. ಪ್ರತಿಫಲ ಸಿಗದಿರುವುದು ಕೇವಲ ಚಿಕ್ಕನಾಯಕನಹಳ್ಳಿಗೆ ಮಾತ್ರವಲ್ಲ. ಜನರಿಗೆ ಊರಿನ ಕೆಲಸ, ಕ್ಷೇತ್ರದ ತಮ್ಮ ಕೆಲಸವೆಂದು ಅನಿಸಲೇ ಇಲ್ಲ. ಕಾಂಗ್ರೆಸ್ ಕೊಡುವ ಅಕ್ಕಿ, ದುಡ್ಡೇ ಶ್ರೇಷ್ಠ ಅನಿಸಿತು. ಹೀಗಾಗಿ ಉಚಿತ ಭಾಗ್ಯದ ಮುಂದೆ ಕೆಲಸ ಕೊಚ್ಚಿಕೊಂಡು ಹೋಯಿತು ಎಂದು ಬೇಸರ ಹೊರ ಹಾಕಿದ್ದಾರೆ.
ಪರಿಷತ್ ಸದಸ್ಯರ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಭಾಗಿಯಾಗಲಿರುವ ಸಿಎಂ ಸಿದ್ದರಾಮಯ್ಯ ತಮ್ಮ ನಿವಾಸದಿಂದ ವಿಧಾನಸೌಧಕ್ಕೆ ತೆರಳಿದ್ದಾರೆ.
ಇಂದು ಮುದ್ದೇನಹಳ್ಳಿಗೆ ರಾಷ್ಟ್ರಪತಿ ದ್ರೌಪದಿ ಭೇಟಿ ಹಿನ್ನೆಲೆ ಮುದ್ದೇನಹಳ್ಳಿ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಚಿಕ್ಕಬಳ್ಳಾಪುರ ಎಸ್ಪಿ ಡಿ.ಎಲ್.ನಾಗೇಶ ನೇತೃತ್ವದಲ್ಲಿ ಮೂವರು ಎಸ್ಪಿ, 10 ಡಿವೈಎಸ್ಪಿ, 28 ಇನ್ಸ್ಪೆಕ್ಟರ್ಗಳು, 60 ಸಬ್ ಇನ್ಸ್ಪೆಕ್ಟರ್, 7 ಡಿಎಆರ್ ತುಕಡಿ, 3 KSRP ತುಕಡಿ ಸೇರಿ ಭದ್ರತೆಗೆ ಒಟ್ಟು 700 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಇಂದಿನಿಂದ 10 ದಿನ ವಿಧಾನಮಂಡಲ ಅಧಿವೇಶನ ಹಿನ್ನೆಲೆ ವಿಧಾನಸೌಧ ಸುತ್ತ 2 ಕಿ.ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಆದೇಶ ಹೊರಡಿಸಿದ್ದಾರೆ. 2 ಕಿ.ಮೀ. ವ್ಯಾಪ್ತಿಯಲ್ಲಿ ಪ್ರತಿಭಟನೆ, ಱಲಿ, ಧರಣಿ ನಡೆಸುವಂತಿಲ್ಲ. ವಿಧಾನಸೌಧದ ಸುತ್ತಮುತ್ತ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ನೇತೃತ್ವದಲ್ಲಿ ಮೂವರು ಡಿಸಿಪಿ, 15 ಎಸಿಪಿ, 80 ಇನ್ಸ್ಪೆಕ್ಟರ್ಗಳು ಸೇರಿದಂತೆ ವಿಧಾನಸೌಧ ಸುತ್ತಮುತ್ತ 1500 ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಕೇರಳದ ವಯನಾಡು ಭಾಗದಲ್ಲಿ ಕೊಂಚ ಮಳೆ ಪ್ರಮಾಣ ಹೆಚ್ಚಾಗಿದ್ದು ಮೈಸೂರು ಜಿಲ್ಲೆ ಹೆಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿ ಬಳಿಯ ಕಬಿನಿ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆ ಕಂಡು ಬಂದಿದೆ. 84 ಅಡಿ ಗರಿಷ್ಠ ಸಾಮರ್ಥ್ಯದ ಕಬಿನಿ ಜಲಾಶಯದ ಇಂದಿನ ನೀರಿನ ಮಟ್ಟ 52.26 ಅಡಿ ಇದೆ.
ಇಂದು ಆಷಾಢ ಮಾಸದ ಗುರುಪೂರ್ಣಿಮಾ ಹಿನ್ನೆಲೆ ಮಂತ್ರಾಲಯದ ರಾಯರ ಮಠದಲ್ಲಿ ಗುರು ಪೂರ್ಣಿಮಾ ಸಂಭ್ರಮ ಜೋರಾಗಿದೆ. ಇಂದು ರಾಯರ ಮೂಲ ಬೃಂದಾವನಕ್ಕೆ ತಿರುಪತಿ ತಿರುಮಲ ದೇವಸ್ಥಾನದ ಶ್ರೀವಾರಿ ವಸ್ತ್ರ ಸಮರ್ಪಿಸಲಾಗಿದೆ. ಬಳಿಕ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಜ್ಯ & ಹೊರರಾಜ್ಯಗಳಿಂದ ಸಹಸ್ರಾರು ಭಕ್ತರು ರಾಯರ ದರ್ಶನಕ್ಕೆ ಆಗಮನಿಸುತ್ತಿದ್ದಾರೆ.
ವಿಜಯಪುರದ ಜ್ಞಾನಯೋಗಾಶ್ರಮದಲ್ಲಿ ಸಿದ್ದೇಶ್ವರ ಸ್ವಾಮೀಜಿ ಲಿಂಗೈಕ್ಯರಾದ ಬಳಿಕ ಮೊದಲ ಗುರು ಪೂರ್ಣಿಮೆ ಆಚರಿಸಲಾಗಿದೆ. ವಿಜಯಪುರ ನಗರದ ಆಶ್ರಮದಲ್ಲಿ ಇಂದು ಬೆಳಗ್ಗೆ 4:30ರಿಂದ 6:30ರವರೆಗೆ ಮಹಾಜಪಯೋಗ ಕಾರ್ಯಕ್ರಮ ನಡೆಯಿತು. ಬೆಳಗ್ಗೆ 7:30ರಿಂದ ಲಿಂಗೈಕ್ಯ ಮಲ್ಲಿಕಾರ್ಜುನ ಶ್ರೀಗಳ ಧ್ವನಿಮುದ್ರಿತ ಪ್ರವಚನ ಪ್ರಸಾರ ಮಾಡಲಾಯಿತು. ಬಳಿಕ ಮಲ್ಲಿಕಾರ್ಜುನ ಮಹಾಸ್ವಾಮೀಜಿ ಕರ್ತೃ ಗದ್ದುಗೆಗೆ ಮಹಾಪೂಜೆ ಸಲ್ಲಿಸಿ ಆಶ್ರಮ ಆವರಣದಲ್ಲಿ ಸಾವಿರಾರು ಭಕ್ತರಿಗೆ ಪ್ರಸಾದ ನೀಡಲಾಯಿತು.
ರಾಜ್ಯದಲ್ಲಿ ಮುಂದಿನ 5 ದಿನಗಳ ಕಾಲ ಭಾರಿ ಮಳೆ ಸಾಧ್ಯತೆ ಇದೆ. ಜು.5ರಂದು ಉಡುಪಿ, ದ.ಕನ್ನಡ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು ಜುಲೈ 4,5,6ರಂದು ಉತ್ತರ ಒಳನಾಡಿನಲ್ಲಿ ಯಲ್ಲೊ ಅಲರ್ಟ್ ಘೋಷಿಸಲಾಗಿದೆ. ಉತ್ತರ ಒಳನಾಡು ಪ್ರದೇಶಗಳಾದ ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಯಲ್ಲಿ ಯಲ್ಲೊ ಅಲರ್ಟ್ ಹಾಕಲಾಗಿದೆ. ದಕ್ಷಿಣ ಒಳನಾಡು ಭಾಗಗಳಿಗೆ ಜು.4,5,6ರಂದು ಆರೆಂಜ್ ಅಲರ್ಟ್ ಇದ್ದು ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾಗಿದೆ.
ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆ, ಪರಿಷತ್ ಮುಖ್ಯ ಸಚೇತಕರ ಆಯ್ಕೆ ಮಾಡಲಾಗಿದೆ. ವಿಧಾನಸಭೆ ಮುಖ್ಯ ಸಚೇತಕರಾಗಿ ಅಶೋಕ್ ಪಟ್ಟಣ್ ಹಾಗೂ ವಿಧಾನಪರಿಷತ್ ಸಚೇತಕರಾಗಿ ಸಲೀಂ ಅಹಮದ್ ನೇಮಕಗೊಂಡಿದ್ದಾರೆ.
ರಾಜ್ಯದಲ್ಲಿ ಮುಂಗಾರು ಹೊಡೆತದಿಂದ ತರಕಾರಿ ಬೆಲೆ ದಿಢೀರನೆ ಗಗನಕ್ಕೇರಿದ್ದು ವಾರ ಕಳೆದರೂ ಬೆಲೆ ಕಡಿಮೆ ಆಗಿಲ್ಲ. ಕೊಂಚ ಮಾತ್ರ ಏರುಪೇರು ಕಂಡುಬಂದಿದೆ. ಆದ್ರೆ ಟೊಮ್ಯಾಟೋ ಬೆಲೆ ಮಾತ್ರ ಹೆಚ್ಚುತ್ತಲೇ ಇದೆ. ಬೆಂಗಳೂರಿನಲ್ಲಿ ಈರುಳ್ಳಿ- 30 ರೂ. ಟೊಮೆಟೊ – 102ರೂ. ಹಸಿರು ಮೆಣಸಿನಕಾಯಿ 64 ರೂ ಇದೆ.
ಇಂದು ಮಧ್ಯಾಹ್ನ ಚಿಕ್ಕಬಳ್ಳಾಪುರ ತಾಲೂಕಿನ ಮುದ್ದೇನಹಳ್ಳಿ ಬಳಿಯ ಸತ್ಯಸಾಯಿ ಗ್ರಾಮಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭೇಟಿ ನೀಡಲಿದ್ದಾರೆ. ಖಾಸಗಿ ವಿವಿ ಘಟಿಕೋತ್ಸದಲ್ಲಿ ಭಾಗಿಯಾಗಲಿದ್ದಾರೆ. ವಿಜ್ಞಾನ & ತಂತ್ರಜ್ಞಾನ ವಿಭಾಗದಲ್ಲಿ ಪ್ರೊ.ಅಜಯ್ ಕೆ.ಸೂದ್, ಸಂಗೀತ & ಕಲೆ ವಿಭಾಗದಲ್ಲಿ ಡಾ.ಆರ್.ಕೆ.ಪದ್ಮನಾಭ, ಕ್ರೀಡೆ & ದಾರ್ಢ್ಯತೆ ವಿಭಾಗದಲ್ಲಿ ಪುಲ್ಲೇಲ ಗೋಪಿಚಂದ್, ಆರೋಗ್ಯ ವಿಭಾಗದಲ್ಲಿ ಡಾ.ಪ್ರತಿಮಾ ಮೂರ್ತಿ, ಶಿಕ್ಷಣ ವಿಭಾಗದಲ್ಲಿ ಪ್ರೊ.ವಿಜಯ್ ಶಂಕರ್ ಶುಕ್ಲಾ, ಸಮಾಜಸೇವೆ ವಿಭಾಗದಲ್ಲಿ ತುಳಸಿಗೌಡಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.
ಇಂದಿನಿಂದ ಜುಲೈ 14ರವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದ್ದು 5 ಗ್ಯಾರಂಟಿ ಜಾರಿಗೆ ಒತ್ತಾಯಿಸಿ ಬಿಜೆಪಿಯಿಂದ ಪ್ರತಿಭಟನೆ ನಡೆಯಲಿದೆ. ‘ಮೋಸ ನಿಲ್ಲಿಸಿ-ಗ್ಯಾರಂಟಿ ಜಾರಿಗೊಳಿಸಿ’ ಶೀರ್ಷಿಕೆ ಅಡಿ ಸದನದ ಒಳಗೆ, ಹೊರಗೆ ಹೋರಾಟ ನಡೆಸಲು ಬಿಜೆಪಿ ತೀರ್ಮಾನ ಮಾಡಿದೆ. ಗಾಂಧಿ ಪ್ರತಿಮೆ ಬಳಿ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಧರಣಿ ಮಾಡಿದ್ರೆ, ಸದನದ ಒಳಗೆ ಹೋರಾಟ ನಡೆಸಲು ಬಿಜೆಪಿ ಶಾಸಕರು ಮುಂದಾಗಿದ್ದಾರೆ. ಹಾಗೂ ನಾಳೆ ಫ್ರೀಡಂಪಾರ್ಕ್ನಲ್ಲಿ ಬಿಎಸ್ವೈ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ.
ಇಂದಿನಿಂದ ಜುಲೈ 14ರವರೆಗೆ ವಿಧಾನಮಂಡಲ ಅಧಿವೇಶನ ನಡೆಯಲಿದ್ದು ಇಂದು ಮಧ್ಯಾಹ್ನ 12ಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ. ಅಧಿವೇಶನದಲ್ಲಿ ಎಷ್ಟು ವಿಧೇಯಕ ಮಂಡನೆ ಆಗಲಿದೆ ಎಂದು ಗೊತ್ತಾಗಲಿದೆ. ಸೌಹಾರ್ದಯುತವಾಗಿ ಅಧಿವೇಶನ ನಡೆಸಬೇಕೆಂದು ಸ್ಪೀಕರ್ ಮನವಿ ಮಾಡಿದ್ದಾರೆ.
ಬೆಂಗಳೂರಿನ ಮಲ್ಲೇಶ್ವರಂನ ರಾಜ್ಯ ಬಿಜೆಪಿ ಕಚೇರಿಯಲ್ಲಿ ಇಂದು ಸಂಜೆ 6 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಹೈಕಮಾಂಡ್ ವೀಕ್ಷಕರಾದ ವಿನೋದ್ ತಾವಡೆ, ಮನ್ಸುಖ್ ಮಾಂಡವೀಯ ಉಪಸ್ಥಿತಿಯಲ್ಲಿ ಸಭೆ ನಡೆಯಲಿದೆ. ಬಿಎಲ್ಪಿ ಸಭೆಯಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸಲಾಗುತ್ತೆ. ಶಾಸಕರ ಅಭಿಪ್ರಾಯ ಸಂಗ್ರಹಿಸಿ ಹೈಕಮಾಂಡ್ಗೆ ಮಾಹಿತಿ ನೀಡಲಾಗುತ್ತೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿಗೆ ವಿಪಕ್ಷ ನಾಯಕ ಸ್ಥಾನ ಸಾಧ್ಯತೆ. ನಾನ್ ಲಿಂಗಾಯತ ನಿರ್ಧಾರಕ್ಕೆ ಬಂದರೆ ವಿ.ಸುನೀಲ್ ಕುಮಾರ್ಗೆ ಸ್ಥಾನ.
Published On - 7:14 am, Mon, 3 July 23