
ಬೆಂಗಳೂರು, ಡಿಸೆಂಬರ್ 03: ಸಾಮಾನ್ಯವಾಗಿ ರೆಸಾರ್ಟ್, ಹೋಂಸ್ಟೇಗಳೆಂದರೆ ಪ್ರವಾಸಿಗರ ಮೋಜು ಮಸ್ತಿಯ ತಾಣ. ಸುತ್ತಲೂ ಹಚ್ಚ ಹಸಿರಿನ ಪರಿಸರ, ಶಾಂತ ವಾತಾವಣರವನ್ನು ಹುಡುಕಿ ಹೋಗುವರ ಪ್ರಥಮ ಆಯ್ಕೆ ಇವುಗಳೇ. ಹೀಗಾಗಿ ಅರಣ್ಯ, ನದಿ ಮತ್ತು ಸಮುದ್ರ ತೀರಗಳನ್ನ ಅತಿಕ್ರಮಿಸಿಕೊಂಡು ನಿರ್ಮಾಣವಾಗಿರುವ ಅದೆಷ್ಟೋ ರೆಸಾರ್ಟ್, ಹೋಂಸ್ಟೇಗಳಿವೆ. ಈ ನಡುವೆ ಕಾವೇರಿ ನದಿ ತೀರದಲ್ಲಿ ಅಕ್ರಮ ರೆಸಾರ್ಟ್, ಹೋಂಸ್ಟೇ ನಿರ್ಮಾಣ ಸಂಬಂಧ ಉಪಲೋಕಾಯುಕ್ತ ನ್ಯಾ.ಬಿ. ವೀರಪ್ಪ ಮಹತ್ವದ ಆದೇಶ ಮಾಡಿದ್ದಾರೆ.
ಕಾವೇರಿ ನದಿ ತೀರದಲ್ಲಿರುವ ಅಕ್ರಮ ಕಟ್ಟಡಗಳ ತೆರವಿಗೆ ಉಪಲೋಕಾಯುಕ್ತರು ಸೂಚಿಸಿದ್ದು, ನದಿ ಪಾತ್ರವನ್ನೇ ಬದಲಿಸುವಂತೆ ಕಟ್ಟಡಗಳನ್ನು ನಿರ್ಮಿಸಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಂದ್ರವನ ಆಶ್ರಮದ ಕಟ್ಟಡವನ್ನೂ ನದಿ ತೀರದಲ್ಲೇ ನಿರ್ಮಿಸಲಾಗಿದೆ. ಆಶ್ರಮದ ಕಟ್ಟಡಗಳಿಗೆ ಸರ್ಕಾರ 4.07 ಕೋಟಿ ವೆಚ್ಚ ಮಾಡಿದೆ. ಕೋಟ್ಯಾಂತರ ಬೆಲೆಯ ಜಾಗವನ್ನು ಕಡಿಮೆ ಬೆಲೆಗೆ ಶಾಶ್ವತ ಗುತ್ತಿಗೆ ನೀಡಲಾಗುತ್ತಿದೆ. ಕಂದಾಯ ಅಧಿಕಾರಿಗಳ ಕ್ರಮ ಆಘಾತಕಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಕಾವೇರಿ ನದಿ ಬಫರ್ ವಲಯದಲ್ಲಿ ಹಲವು ಹೋಂಸ್ಟೇ, ರೆಸಾರ್ಟ್ಗಳು ನಿರ್ಮಾಣವಾಗಿವೆ. ಅವುಗಳ ತೆರವಿಗೆ ಈ ಹಿಂದೆಯೇ ಸೂಚನೆಗಳನ್ನು ನೀಡಿದ್ದರೂ ಅವನ್ನು ಪಾಲಿಸಿಲ್ಲ ಎಂದು ಮಂಡ್ಯ ಜಿಲ್ಲಾಡಳಿತದ ನಡೆ ಬಗ್ಗೆ ಉಪಲೋಕಾಯುಕ್ತ ನ್ಯಾ.ಬಿ. ವೀರಪ್ಪ ಅಸಮಾಧಾನವನ್ನೂ ವ್ಯಕ್ತಪಡಿಸಿದ್ದಾರೆ. ನಿರ್ದೇಶನ ಪಾಲನೆಗೆ ತಹಶೀಲ್ದಾರ್ ಮಟ್ಟದ ಅಧಿಕಾರಿ ನೇಮಿಸಲು ಸೂಚನೆ ನೀಡಿರುವ ಅವರು, ಆದೇಶದ ಪ್ರತಿಯನ್ನು ಕಂದಾಯ ಸಚಿವರಿಗೂ ಕಳುಹಿಸಲು ನಿರ್ದೇಶನ ನೀಡಿದ್ದಾರೆ.
ಕಾವೇರಿ ನದಿ ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ರೆಸಾರ್ಟ್, ಕಟ್ಟಡಗಳನ್ನು ನಿರ್ಮಿಸಿದ್ದವರಿಗೆ ಈ ಹಿಂದೆಯೂ ಅಧಿಕಾರಿಗಳು ಶಾಕ್ ನೀಡಿದ್ದರು. ಮಂಡ್ಯದ ಶ್ರೀರಂಗಪಟ್ಟಣ ಸಮೀಪ ನದಿ ತೀರದಲ್ಲಿ ನಿರ್ಮಿಸಲಾಗಿದ್ದ ಅಕ್ರಮ ಕಟ್ಟಡಗಳನ್ನು ತೆರವುಗೊಳಿಸಲಾಗಿತ್ತು. ನದಿ ತೀರದ ಒತ್ತುವರಿ ಬಗ್ಗೆ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರಿಗೆ ಸ್ಥಳೀಯರು ದೂರು ನೀಡಿದ್ದ ಹಿನ್ನಲೆ ಉಪಲೋಕಾಯುಕ್ತರಿಂದ ತಾಲೂಕು ಆಡಳಿತಕ್ಕೆ ನಿರ್ದೇಶನ ಬಂದ ಕಾರಣ ಕ್ರಮ ಕೈಗೊಳ್ಳಲಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:53 pm, Wed, 3 December 25