ಬೆಂಗಳೂರಿಗರೇ ಎಚ್ಚರ ಎಚ್ಚರ: ನಿದ್ದೆ, ಬೆಳಿಗ್ಗೆ ತಿಂಡಿ ಬಿಟ್ರೆ ಅಪಾಯ ಫಿಕ್ಸ್!; ಬೆಚ್ಚಿ ಬೀಳಿಸುತ್ತೆ ಇತ್ತೀಚಿನ ಮಾಹಿತಿ
ಉದ್ಯೋಗಸ್ಥರು ಸಮಯದ ಕೊರತೆಯಿಂದ ನಿದ್ದೆ ಮತ್ತು ಬೆಳಗ್ಗಿನ ಉಪಹಾರವನ್ನು ತ್ಯಜಿಸುತ್ತಿದ್ದಾರೆ. ಇದು ಯುವಜನರಲ್ಲಿ ಹೆಚ್ಚುತ್ತಿರುವ ಆರೋಗ್ಯ ಸಮಸ್ಯೆಗಳಿಗೆ, ಆಸ್ಪತ್ರೆ ದಾಖಲಾತಿಗಳಿಗೆ ಕಾರಣವಾಗುತ್ತಿದೆ. ಖಾಲಿ ಹೊಟ್ಟೆಯಲ್ಲಿ ಪ್ರಯಾಣಿಸುವುದರಿಂದ ಅಸ್ವಸ್ಥರಾಗುವ ಪ್ರಕರಣಗಳು ಹೆಚ್ಚಾಗಿವೆ. ಅಷ್ಟಕ್ಕೂ ಈ ರೀತಿ ಆಗಲು ಕಾರಣ ಏನು? ಈ ಸಮಸ್ಯೆ ಆಗದಂತೆ ಯಾವ ರೀತಿಯ ಮುಂಜಾಗೃತೆ ವಹಿಸಬೇಕು ಎಂಬ ಮಾಹಿತಿ ಇಲ್ಲಿದೆ.

ಬೆಂಗಳೂರು, ಡಿಸೆಂಬರ್ 03: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ನೆಲೆಸಿರುವ ಬಹುತೇಕರು ಉದ್ಯೋಗಸ್ಥರು. ಹೀಗಾಗಿ ಇಲ್ಲಿರುವ ಅನೇಕರಿಗೆ ಕೆಲಸ ಹೊರತುಪಡಿಸಿ ಯಾವುದಕ್ಕೂ ಟೈಮ್ ಸಿಗಲ್ಲ. ಆಫೀಸ್ ಟೈಂ ಹೊರತಾಗಿ ಟ್ರಾಫಿಕ್ ಸಮಸ್ಯೆಯ ಕಾರಣಕ್ಕೆ ಅಧಿಕ ಸಮಯವನ್ನು ಮಾರ್ಗದಲ್ಲೇ ಕಳೆಯಬೇಕಾದ ಸ್ಥಿತಿ ಹಲವರದ್ದು. ಹೀಗಾಗಿಯೇ ಕಡಿಮೆ ನಿದ್ದೆ, ಬೆಳಗ್ಗಿನ ಉಪಹಾರವನ್ನು ಸೇವಿಸದೇ ಇರೋದು ಅನೇಕರ ಜೀವನಶೈಲಿಯಾಗಿ ಹೋಗಿದೆ. ಆದರೆ ಇತ್ತೀಚಿನ ಅಂಕಿ ಅಂಶವೊಂದು ಇಂಥವರಿಗೆ ಎಚ್ಚರಿಕೆಯ ಗಂಟೆ ಎಂಬಂತಿದೆ.
ಕಡಿಮೆ ನಿದ್ದೆಯ ಜೊತೆಗೆ ಖಾಲಿ ಹೊಟ್ಟೆಯಲ್ಲಿ ಆಫೀಸ್ಗಳತ್ತ ಮುಖಮಾಡುವವರ ಪೈಕಿ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗ್ತಿದೆ. ಅದರಲ್ಲೂ ಯುವ ಜನತೆಯೇ ಇವರಲ್ಲಿ ಹೆಚ್ಚು ಎನ್ನುವುದು ಆಘಾತಕಾರಿ ವಿಷಯ. ಖಾಲಿ ಹೊಟ್ಟೆಯಲ್ಲಿ ಪ್ರಯಾಣಿಸಿ ತಲೆ ತಿರುಗಿ ಬೀಳುವವರ ಸಂಖ್ಯೆ ನಮ್ಮ ಮೆಟ್ರೋದಲ್ಲೇ 300ರ ಗಡಿ ದಾಟಿದೆ. ಇದು ಕಳೆದ ಮೂರು ತಿಂಗಳ ಅವಧಿಯ ಅಂಕಿ-ಅಂಶವಾಗಿದ್ದು, ಬಸ್ ಸೇರಿ ಇತರ ವಾಹನಗಳಲ್ಲಿ ಸಂಚರಿಸು ವೇಳೆ ನಡೆದ ಈ ರೀತಿಯ ಘಟನೆಗಳು ಅದೆಷ್ಟೋ.
ಇದನ್ನೂ ಓದಿ: ಈ ಪಾನೀಯವನ್ನು ಕುಡಿಯುವುದರಿಂದ ಹೊಟ್ಟೆ ಉಬ್ಬರ ಸಮಸ್ಯೆ 5 ನಿಮಿಷಗಳಲ್ಲಿ ಕಡಿಮೆ
ತಲೆಸುತ್ತು ಸಮಸ್ಯೆ ತಡೆಯುವುದು ಹೇಗೆ?
- ಕಡಿಮೆ ನಿದ್ರೆ ಮಾಡೋದು, ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಪ್ರಯಾಣ ಬೇಡ
- ಪ್ರಯಾಣಕ್ಕೂ ಮುನ್ನ ಕಡ್ಡಾಯವಾಗಿ ಬ್ರೇಕ್ಫಾಸ್ಟ್ ಸೇವಿಸಿ
- ಮನೆಯಿಂದ ಹೊರಡುವ ವೇಳೆಗ ಕನಿಷ್ಠ ಬಾಳೆಹಣ್ಣು, ಡ್ರೈಫೂಟ್ಸ್, ಕಾಳುಗಳನ್ನು ಸೇವಿಸಿ
- ಉಸಿರುಗಟ್ಟಿಸುವಂತಹ ಉಡುಪಗಳನ್ನ ಸಾಧ್ಯವಾದಷ್ಟು ಧರಿಸಬೇಡಿ
ಇನ್ನು ನಿದ್ದೆಗೆಟ್ಟು ಖಾಲಿ ಹೊಟ್ಟೆಯಲ್ಲಿ ಆಫೀಸ್ಗಳಿಗೆ ತೆರಳುವ ಮಂದಿಗೆ ವೈದ್ಯರೂ ಎಚ್ಚರಿಕೆ ನೀಡಿದ್ದಾರೆ. ಅಗತ್ಯವಿರುವ ನಿದ್ದೆ ಮತ್ತು ಬ್ರೇಕ್ಫಾಸ್ಟ್ ಸ್ಕಿಪ್ ಮಾಡುವುದರಿಂದ ದೇಹದಲ್ಲಿ ಸಕ್ಕರೆ ಅಂಶ ಕಡಿಮೆಯಾಗುತ್ತದೆ. ಇದರ ಜೊತೆಗೆ ನಿಂತುಕೊಂಡು ಪ್ರಯಾಣ ಮಾಡಿದರೆ ಆಯಾಸಗೊಂಡು, ಅಸ್ವಸ್ಥರಾಗುವ ಸಾಧ್ಯತೆ ಹೆಚ್ಚಿರುತ್ತೆ. ಹೀಗಾಗಿ ಕನಿಷ್ಠ 6 ಗಂಟೆಯಾದರೂ ನಿದ್ದೆಯ ಜೊತೆಗೆ ಸರಿಯಾದ ಸಮಯಕ್ಕೆ ಬೆಳಗ್ಗಿನ ಉಪಹಾರ ಸೇವಿಸುವಂತೆ ಡಾ. ದೇವಿಂದ್ರಪ್ಪ ಸಲಹೆ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:19 pm, Wed, 3 December 25



