Bangaluru Karaga 2026: ಬೆಂಗಳೂರು ಐತಿಹಾಸಿಕ ಕರಗ ಮಹೋತ್ಸವಕ್ಕೆ ಮುಹೂರ್ತ ಫಿಕ್ಸ್
ಬೆಂಗಳೂರಿನ ಪರಂಪರೆಯ ಪ್ರತೀಕವಾಗಿ ಆಚರಿಸುವ ವಿಶ್ವವಿಖ್ಯಾತ ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿ ಆಗಿದೆ. ಆ ಮೂಲಕ ಬೆಂಗಳೂರು ಕರಗ ಕಣ್ತುಂಬಿಕೊಳ್ಳಲು ಸಿಲಿಕಾನ್ ಸಿಟಿ ಜನರು ಕಾತರರಾಗಿದ್ದಾರೆ. ಒಟ್ಟು 11 ದಿನಗಳ ಕಾಲ ಬೆಂಗಳೂರು ಕರಗ ಶಕ್ತ್ಯೋತ್ಸವ ನಡೆಯಲಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಫೆಬ್ರವರಿ 27: ವಿಶ್ವವಿಖ್ಯಾತ ಬೆಂಗಳೂರು ಕರಗ (Bangaluru Karaga) ಶಕ್ತ್ಯೋತ್ಸವ ನಗರದ ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಯ ಹೆಗ್ಗುರುತು. ಹೂವಿನ ದಂಡನ್ನ ಹೊತ್ತು ಸಾಗುವ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ಇದೀಗ ದಿನಾಂಕ ಫಿಕ್ಸ್ ಆಗಿದೆ. ಏಪ್ರಿಲ್ 1ರ ಮಧ್ಯರಾತ್ರಿಯಂದು ಕರಗ ಶಕ್ತ್ಯೋತ್ಸವ ನಡೆಯಲಿದೆ. ಆ ಮೂಲಕ ದಿನಗಣನೆ ಆರಂಭವಾಗಿದೆ. ಇನ್ನು 16ನೇ ಬಾರಿಗೆ ಅರ್ಚಕರು ಎ.ಜ್ಞಾನೇಂದ್ರಸ್ವಾಮಿ ಬೆಂಗಳೂರು ಕರಗ ಹೊರಲಿದ್ದಾರೆ.
ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿ
ಧರ್ಮರಾಯ ಸ್ವಾಮಿ ದೇವಾಲಯದ ನೂತನ ವ್ಯವಸ್ಥಾಪನಾ ಸಮಿತಿಯಿಂದ ವಿಶ್ವವಿಖ್ಯಾತ ಬೆಂಗಳೂರು ಕರಗ ಶಕ್ತ್ಯೋತ್ಸವಕ್ಕೆ ದಿನಾಂಕ ನಿಗದಿಪಡಿಸಲಾಗಿದೆ. ಮಾರ್ಚ್ 24ರಂದು ಧ್ವಜಾರೋಹಣದ ಮೂಲಕ ಉತ್ಸವಕ್ಕೆ ಚಾಲನೆ ಸಿಗಲಿದೆ. ಮಾರ್ಚ್ 30ರಂದು ಹಸಿಕರಗ ನಡೆಯಲಿದೆ. ಬಳಿಕ ಏಪ್ರಿಲ್ 1ರ ಮಧ್ಯರಾತ್ರಿ ಬೆಂಗಳೂರು ಕರಗ ಶಕ್ತ್ಯೋತ್ಸವ ನಡೆಯಲಿದೆ. ಇನ್ನು ಒಟ್ಟು 11 ದಿನಗಳ ಕಾಲ ಬೆಂಗಳೂರು ಕರಗ ಶಕ್ತ್ಯೋತ್ಸವ ನಡೆಯಲಿದೆ. ಕಳೆದ ವರ್ಷ ಬೆಂಗಳೂರು ಕರಗ ಹೊತ್ತಿದ್ದ ಅರ್ಚಕರು ಎ.ಜ್ಞಾನೇಂದ್ರ ಸ್ವಾಮಿ ಅವರು 16ನೇ ಬಾರಿಗೆ ಕರಗ ಹೊರಲಿದ್ದಾರೆ.
ಇದನ್ನೂ ಓದಿ: Bangalore Karaga: ಬೆಂಗಳೂರು ಕರಗ ಮಹೋತ್ಸವ ಇಂದಿನಿಂದ ಶುರು, ಯಾವಾಗ ಏನೇನು ಕಾರ್ಯಕ್ರಮ? ಇಲ್ಲಿದೆ ವಿವರ
ಸಿಲಿಕಾನ್ ಸಿಟಿಯ ವಿಶ್ವವಿಖ್ಯಾತ ಕರಗ ಮಹೋತ್ಸವಕ್ಕೆ ಸದ್ಯ ದಿನಾಂಕ ನಿಗದಿಯಾಗಿದೆ. ಆ ಮೂಲಕ ಸಿಟಿ ಮದಿ ಕರಗ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ಬೆಂಗಳೂರು ಕರಗ ದಕ್ಷಿಣ ಭಾರತದ ಅತ್ಯಂತ ಪುರಾತನ ಮತ್ತು ವೈಶಿಷ್ಟ್ಯಪೂರ್ಣ ಹಬ್ಬಗಳಲ್ಲಿ ಒಂದಾಗಿದೆ. ಸುಮಾರು ಶತಮಾನಗಳ ಪರಂಪರೆಯನ್ನು ಹೊಂದಿರುವ ಈ ಆಚರಣೆ, ದ್ರೌಪದಿ ದೇವಿಯ ಭಕ್ತಿಭಾವದೊಂದಿಗೆ ಆಳವಾದ ಸಂಪರ್ಕ ಹೊಂದಿದೆ. ಪ್ರತೀ ವರ್ಷ ಚೈತ್ರ ಮಾಸದ ಪೌರ್ಣಮಿಯ ಸಂದರ್ಭದಲ್ಲಿ ನಡೆಯುವ ಈ ಉತ್ಸವವು ಸಾಮಾನ್ಯವಾಗಿ 9 ರಿಂದ 11 ದಿನಗಳವರೆಗೆ ನಡೆಯುತ್ತದೆ.
ಮಹೋತ್ಸವದ ಕೇಂದ್ರಬಿಂದು ಆಗಿರುವ ಧರ್ಮರಾಯಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ಮತ್ತು ವಿಧಿವಿಧಾನಗಳು ನೆರವೇರುತ್ತವೆ. ತಿಗಳ ಸಮುದಾಯದವರು ಈ ಹಬ್ಬದ ಮುಖ್ಯ ಆಯೋಜಕರಾಗಿದ್ದು, ಶತಮಾನಗಳಿಂದ ಬಂದಿರುವ ಆಚರಣೆಗಳನ್ನು ಶ್ರದ್ಧೆಯಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಇದು ಸಮುದಾಯಗಳ ಏಕತೆ, ಶಕ್ತಿಯ ಆರಾಧನೆ ಮತ್ತು ನಗರ ಸಾಂಸ್ಕೃತಿಕ ಗುರುತಿನ ಪ್ರತೀಕವಾಗಿದೆ. ವಿವಿಧ ಧರ್ಮಗಳ ಜನರು ಭಾಗವಹಿಸುವ ಈ ಉತ್ಸವವು ಸಹಭಾವ ಮತ್ತು ಸೌಹಾರ್ದತೆಯ ಸಂದೇಶವನ್ನು ಸಾರುತ್ತದೆ.
ಇದನ್ನೂ ಓದಿ: ಬೆಂಗಳೂರು ಕರಗ: ಸರ್ಕಾರದಿಂದ ಹಣ ಬಿಡುಗಡೆ ವಿಚಾರದಲ್ಲಿ ಗೊಂದಲ, ಯಾರು ಏನಂದರು ನೋಡಿ
ಚೈತ್ರ ಪೌರ್ಣಮಿಯ ಮಧ್ಯರಾತ್ರಿ ಆದಿಶಕ್ತಿ ದ್ರೌಪದಿದೇವಿಯ ಕರಗ ಶಕ್ತ್ಯೋತ್ಸವ ನಡೆಯಲಿದ್ದು, ಇದರ ಪ್ರಥಮ ಭಾಗವಾಗಿ ಮಾರ್ಚ್ 30ರಂದು ಹಸಿಕರಗ ನಡೆಯಲಿದೆ. ಬೆಳಿಗ್ಗೆ ನಾಲ್ಕು ಗಂಟೆ ಸುಮಾರಿಗೆ ಹಸಿಕರಗಕ್ಕೆ ಚಾಲನೆ ದೊರೆಯಲಿದೆ. ತಿಗಳರ ಸಮಾಜದ ನಂಬಿಕೆಯಂತೆ ದ್ರೌಪದಿದೇವಿಯೂ ಹಸಿಕರಗದ ರೂಪದಲ್ಲಿ ಬೆಳಿಗ್ಗೆ ಭೂಮಿಗೆ ಬಂದು ಮೂರು ದಿನಗಳ ಕಾಲ ಭಕ್ತರಿಗೆ ದರ್ಶನ ಮತ್ತು ಬೇಡಿದ ವರಗಳನ್ನು ಕರುಣಿಸುತ್ತಾಳೆ ಎಂಬ ನಂಬಿಕೆ ಇದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:07 pm, Fri, 27 February 26