
ನವದೆಹಲಿ, ನವೆಂಬರ್ 20: ಕರ್ನಾಟಕದಿಂದ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ ವಜಾಗೊಳಿಸಿರುವ ನಡುವೆಯೇ ತಮಿಳುನಾಡಿಗೆ ಮತ್ತೆ ಕಾವೇರಿ ನೀರು ಹರಿಸುವಂತೆ CWRC ಶಿಫಾರಸು ಮಾಡಿದೆ. ಮುಂದಿನ 15 ದಿನ ನಿತ್ಯ 2000 ಕ್ಯೂಸೆಕ್ ನೀರು ಹರಿಸಲು ಕರ್ನಾಟಕ ಸರ್ಕಾರಕ್ಕೆ ಶಿಫಾರಸು ಮಾಡಲಾಗಿದ್ದು, CWRC 147ನೇ ಸಭೆಯಲ್ಲಿ ಈ ಬಗ್ಗೆ ತೀರ್ಮಾನಿಸಲಾಗಿದೆ.
ಕರ್ನಾಟಕದಿಂದ ಕಾವೇರಿ ನದಿಯ ಹೆಚ್ಚುವರಿ ನೀರನ್ನು ಬಿಡುಗಡೆ ಮಾಡುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಎರಡು ಅರ್ಜಿಗಳನ್ನು ಬೆಳಿಗ್ಗೆಯಷ್ಟೇ ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಅಪರೇಶ್ ಕುಮಾರ್ ಸಿಂಗ್ ಅವರನ್ನೊಳಗೊಂಡ ಪೀಠ ಈ ಬಗ್ಗೆ ಮಹತ್ವದ ಆದೇಶ ನೀಡಿತ್ತು. 3ನೇ ಅರ್ಜಿಯನ್ನೂ ವಜಾಗೊಳಿಸುವುದಾಗಿ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದ್ದು, ತಮಿಳುನಾಡು ಪರ ವಕೀಲರ ಮನವಿ ಮೇರೆಗೆ ವಿಚಾರಣೆಯನ್ನು ಒಂದು ವಾರಕ್ಕೆ ಮುಂದೂಡಿತ್ತು. ಈ ನಡುವೆಯೇ ಸಿಡಬ್ಲ್ಯೂಆರ್ಸಿ ಮಾಡಿರುವ ಶಿಫಾರಸು ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಕಾವೇರಿ ಜಲವಿವಾದ: ತಮಿಳುನಾಡಿಗೆ ಶಾಕ್ ಕೊಟ್ಟ ಸುಪ್ರೀಂಕೋರ್ಟ್, ಅರ್ಜಿಗಳು ವಜಾ
ನವದೆಹಲಿಯಲ್ಲಿ ವಿನೀತ್ ಗುಪ್ತ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳ ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು. ಪ್ರಸ್ತುತ ಜಲಾಶಯಗಳ ಒಳಹರಿವು ಮತ್ತು ನೀರಿನ ಸಂಗ್ರಹವನ್ನು ಪರಿಶೀಲಿಸಿ ಸಮಿತಿಯು ಈ ಶಿಫಾರಸು ಮಾಡಿರುವ ಮಾಹಿತಿ ಇದೆ. ಇನ್ನು ಕೇವಲ ತಾಂತ್ರಿಕ ಶಿಫಾರಸು ಸಮಿತಿಯಾಗಿರುವ CWRC ನಿರ್ಣಯಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಅಂತಿಮ ಅನುಮೋದನೆ ನೀಡಬೇಕಿದೆ. ನವೆಂಬರ್ 25 CWMA ಸಭೆ ನಿಗದಿಯಾಗಿದ್ದು, ಅದರ ತೀರ್ಮಾನದತ್ತ ಉಭಯ ರಾಜ್ಯಗಳ ಚಿತ್ತ ನೆಟ್ಟಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:21 pm, Fri, 20 November 26