ಬೆಂಗಳೂರು: ಗೂಗಲ್ನಲ್ಲಿ ಡ್ರಗ್ ಪೆಡ್ಲಿಂಗ್ ಕಲಿತು ಫೀಲ್ಡಿಗೆ ಎಂಟ್ರಿ ಕೊಟ್ಟ ಸೆಕ್ಯೂರಿಟಿಗಾರ್ಡ್ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನೇಪಾಳ ಮೂಲದ ಡ್ರಗ್ ಪೆಡ್ಲರ್ನನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಬಂಧಿತ ಆರೋಪಿ ಗೂಗಲ್ನಲ್ಲಿ ಡ್ರಗ್ಸ್ ಕುರಿತು ಮಾಹಿತಿ ಪಡೆದು ದಂಧೆ ಆರಂಭ ಮಾಡಿದ್ದ. ಬಂಧಿತನಿಂದ 3 ಲಕ್ಷ ಮೌಲ್ಯದ ಡ್ರಗ್ಸ್ ಜಪ್ತಿ ಮಾಡಲಾಗಿದೆ. 10 ಗ್ರಾಂ ಎಂಡಿಎಂಎ ಕ್ರಿಸ್ಟಲ್, 80 ಗ್ರಾಂ ಚರಸ್ ವಶಕ್ಕೆ ಪಡೆಯಲಾಗಿದ್ದು ಬಾಗಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚೇತನ್ ಜುವೆಲರ್ಸ್ನಲ್ಲಿ ಮಹಿಳೆಯರ ಕೈಚಳಕ ಸೆರೆ
ಚಿಕ್ಕಬಳ್ಳಾಪುರ: ಜಿಲ್ಲೆಯ ಚೇತನ್ ಜುವೆಲರ್ಸ್ನಲ್ಲಿ ಕಳ್ಳಿಯರು ಚಿನ್ನಾಭರಣ ಕದ್ದಿದ್ದು ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಜುವೆಲರ್ ಶಾಪ್ನಲ್ಲಿ ಮಹಿಳೆಯರು ಎರಡುವರೆ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಎಗರಿಸಿ ಎಸ್ಕೇಪ್ ಆಗಿದ್ದಾರೆ. ಬೆಂಚ್ ಮೇಲೆ ಚಿನ್ನಾಭರಣದ ಕವರ್ ಇಟ್ಟು ಬೇರೆ ಆಭರಣ ಖರೀದಿ ಮಾಡ್ತಿದ್ದ ರೂಪಾ ಎನ್ನುವ ಮಹಿಳೆಯ ಚಿನ್ನಾಭರಣ ಕಳ್ಳತನ ಮಾಡಲಾಗಿದೆ.
ಇಬ್ಬರು ಮಹಿಳೆಯರು ಹಾಗೂ ಹೆಣ್ಣು ಮಗು ಅಂಗಡಿಗೆ ಆಗಮಿಸಿ ಕೃತ್ಯ ಎಸಗಿದ್ದಾರೆ. ಅಪರಿಚಿತ ಮಹಿಳೆ ಚಿನ್ನಾಭರಣದ ಕವರ್ ಕದ್ದು ಮಗುವಿಗೆ ನೀಡಿದ್ದಳು. ಚಿನ್ನಾಭರಣದ ಕವರ್ ಪಡೆದು ಮಗು ಎಸ್ಕೇಪ್ ಆಗಿದೆ. ನಂತರ ಇಬ್ಬರು ಮಹಿಳೆಯರು ಎಸ್ಕೇಪ್ ಆಗಿದ್ದಾರೆ. ಚಿಕ್ಕಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಲಾರಿ ಆಟೋ ಡಿಕ್ಕಿ; ಓರ್ವ ಸಾವು
ಯಾದಗಿರಿ: ತಾಲೂಕಿನ ಯರಗೋಳ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಡಿಕ್ಕಿಯಾಗಿ ಆಟೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಓರ್ವ ಪ್ರಯಾಣಿಕನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪಘಾತದ ಬಳಿಕ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದು ಸ್ಥಳಕ್ಕೆ ಯಾದಗಿರಿ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಲಾಗುತ್ತಿದೆ.
ಅರಬ್ಬಿ ಸಮುದ್ರದಲ್ಲಿ ಮುಳುಗಿ ಇಬ್ಬರು ಸಾವು
ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಮುಳುಗಿ ಇಬ್ಬರು ಯುವತಿಯರು ಮೃತಪಟ್ಟ ಘಟನೆ ಮಂಗಳೂರಿನ ಸುರತ್ಕಲ್ನ ಎನ್ಐಟಿಕೆ ಬೀಚ್ನಲ್ಲಿ ನಡೆದಿದೆ. ಮಂಗಳೂರು ಮೂಲದ ತೃಷಾ(17), ವೈಷ್ಣವಿ(18) ಮೃತರು. ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬಾವಿಯಲ್ಲಿ ಕುರಿಗಾಹಿ ಶವಪತ್ತೆ
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಹೊರವಲಯದಲ್ಲಿನ ಬಾವಿಯಲ್ಲಿ ಕುರಿಗಾಹಿ ಶವ ಪತ್ತೆಯಾಗಿದ್ದು ಕೊಲೆ ಶಂಕೆ ವ್ಯಕ್ತವಾಗಿದೆ. ದೊಡ್ಡೇರಿ ಉಪ್ಪಾರಹಟ್ಟಿಯ ವಿರೇಶ್(30) ಮೃತ ಕುರುಗಾಹಿ. ಮೃತ ವಿರೇಶ್, ಅಭಿ ಎಂಬುವವರ ಜಮೀನಿನಲ್ಲಿ ಕುರಿ ಮೇಯಿಸಿದ್ದ ಹೀಗಾಗಿ ಟೊಮ್ಯಾಟೊ ಬೆಳೆ ನಾಶವಾದ ಹಿನ್ನೆಲೆ ಅಭಿ, ವಿರೇಶ್ನಿಗೆ ಬೆದರಿಕೆ ಹಾಕಿದ್ದ. ಕುರಿ ಮೇಕೆಗಳನ್ನು ಕೂಡಿಹಾಕಿ ವಿರೇಶ್ಗೆ ಬೆದರಿಕೆ ಹಾಕಿದ್ದ. ಭಯದಿಂದ ಬಾವಿಗೆ ಹಾರಿ ವಿರೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು ಮತ್ತೊಂದು ಕಡೆ ಮೃತ ವಿರೇಶ್ ಸಂಬಂಧಿಕರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಚಳ್ಳಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿಂತಿದ್ದ ಲಾರಿಗೆ ಕಾರು ಡಿಕ್ಕಿ, ಕಾರಿನಲ್ಲಿದ್ದ ಮೂವರು ಸಾವು
ತುಮಕೂರು ತಾಲೂಕಿನ ಕಟ್ಟಿಗೇನಗಹಳ್ಳಿ ಗೇಟ್ನಲ್ಲಿ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಕಾರಿನಲ್ಲಿದ್ದ ಮೂವರು ಮೃತಪಟ್ಟ ಘಟನೆ ನಡೆದಿದೆ. ಕಾರಿನಲ್ಲಿದ್ದ ಮಗು ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದೆ. ಕಾರಿನಲ್ಲಿದ್ದ ಮೂವರು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಕೋರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ಆನ್ಲೈನ್ ಟಿಕೆಟ್ ಬುಕಿಂಗ್ನಲ್ಲಿ ಧೂಳೆಬ್ಬಿಸಿದ ‘ಕೆಜಿಎಫ್: ಚಾಪ್ಟರ್ 2’; ಹಲವು ಶೋಗಳು ಸೋಲ್ಡ್ಔಟ್
Published On - 2:22 pm, Sun, 10 April 22