
ಬೆಂಗಳೂರು, ಜನವರಿ 24: ಬೆಂಗಳೂರು ಸೇರಿದಂತೆ ಕರ್ನಾಟಕದ (Karnataka) ಹಲವು ನಗರಗಳಲ್ಲಿ ನಾನ್‌ವೆಜ್ ಪ್ರಿಯರಿಗೆ ದೊಡ್ಡ ಶಾಕ್ ಎದುರಾಗಿದೆ. ದಿನನಿತ್ಯದ ಆಹಾರ ಪಟ್ಟಿಯಲ್ಲಿರುವ ಕೋಳಿ ಮಾಂಸದ ಬೆಲೆ (Chicken Price) ಏಕಾಏಕಿ ಗಗನಕ್ಕೇರಿದ್ದು, ವಿಶೇಷವಾಗಿ ವಿದೌಟ್ ಸ್ಕಿನ್ ಚಿಕನ್ ತಿನ್ನುವವರಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ ಕೆಜಿ ಕೋಳಿ ಮಾಂಸ 260 ರಿಂದ 280 ರೂಗಳ ನಡುವೆ ಲಭ್ಯವಿದ್ದರೆ, ಇದೀಗ ಅದೇ ಚಿಕನ್ ಬೆಲೆ 340 ರಿಂದ 350 ರೂ ಗಡಿ ದಾಟಿದೆ. ಕೆಲ ಪ್ರದೇಶಗಳಲ್ಲಿ ಈಗಾಗಲೇ ಕೆಜಿಗೆ 350 ರೂ ದರ ತಲುಪಿದ್ದು, ಮುಂದಿನ ದಿನಗಳಲ್ಲಿ 370–380 ರೂ ಆಗುವ ಸಾಧ್ಯತೆಯೂ ಇದೆ ಎಂದು ವ್ಯಾಪಾರಿಗಳು ಅಂದಾಜಿಸಿದ್ದಾರೆ.
ಕೋಳಿ ಮಾಂಸದ ದಿಢೀರ್ ಬೆಲೆ ಏರಿಕೆಗೆ ಹಲವು ಕಾರಣಗಳಿವೆ. ಪ್ರಮುಖವಾಗಿ ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲಿ ಕೋಳಿ ಸಾಕಾಣೆದಾರರು ನಡೆಸುತ್ತಿರುವ ಪ್ರತಿಭಟನೆ ಇದಕ್ಕೆ ಕಾರಣ ಎನ್ನಲಾಗಿದೆ. ನಿರ್ವಹಣಾ ವೆಚ್ಚ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂಪನಿಗಳು ಹೆಚ್ಚು ಹಣ ನೀಡಬೇಕು ಎಂದು ಕೋಳಿ ಸಾಕಾಣೆದಾರರು ಒತ್ತಾಯಿಸುತ್ತಿದ್ದಾರೆ.
ಇದೇ ಸಮಯದಲ್ಲಿ ಕೋಳಿ ಉತ್ಪಾದನೆಯಲ್ಲೂ ಕುಸಿತ ಕಂಡುಬಂದಿದ್ದು, ಬೇಡಿಕೆಗೆ ತಕ್ಕಂತೆ ಪೂರೈಕೆ ಸಾಧ್ಯವಾಗುತ್ತಿಲ್ಲ. ಇದರಿಂದ ಮಾರುಕಟ್ಟೆಯಲ್ಲಿ ಚಿಕನ್ ಕೊರತೆ ಉಂಟಾಗಿ, ದರ ಏರಿಕೆಗೆ ಕಾರಣವಾಗಿದೆ.
ಚಿಕನ್ ಬೆಲೆ ಏರಿಕೆಯಿಂದ ನಾನ್‌ವೆಜ್ ರೆಸ್ಟೋರೆಂಟ್‌ಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಚಿಕನ್ ಬಿರಿಯಾನಿ, ಚಿಕನ್ ಕಬಾಬ್ ಸೇರಿದಂತೆ ಹಲವು ನಾನ್‌ವೆಜ್ ಖಾದ್ಯಗಳ ದರ ಹೆಚ್ಚಾಗುವ ಸೂಚನೆಗಳು ಕಂಡುಬಂದಿವೆ.
ಬೆಂಗಳೂರು ಸೇರಿದಂತೆ ಕರ್ನಾಟಕದ ಹಲವು ಭಾಗಗಳಿಗೆ ತಮಿಳುನಾಡಿನಿಂದ ಕೋಳಿ ಮತ್ತು ಕೋಳಿ ಮಾಂಸ ಪೂರೈಕೆ ಆಗುತ್ತಿರುವ ಹಿನ್ನೆಲೆಯಲ್ಲಿ, ಹೊರರಾಜ್ಯದ ಬೆಳವಣಿಗೆಗಳು ರಾಜ್ಯದ ಮಾರುಕಟ್ಟೆಯ ಮೇಲೂ ನೇರ ಪರಿಣಾಮ ಬೀರುತ್ತಿವೆ.
ಇದನ್ನೂ ಓದಿ: ರಾಜ್ಯ ಕಡಲೆ ಬೆಳೆಗಾರರ ಬೆನ್ನಿಗೆ ನಿಂತ ಕೇಂದ್ರ ಸರ್ಕಾರ, ಬೆಂಬಲ ಬೆಲೆ ಎಷ್ಟು?
ಒಟ್ಟಿನಲ್ಲಿ, ಚಿಕನ್ ಪ್ರಿಯರಿಗೆ ಇದು ಖಂಡಿತವಾಗಿಯೂ ಶಾಕಿಂಗ್ ಸುದ್ದಿ. ಮುಂದಿನ ದಿನಗಳಲ್ಲಿ ಚಿಕನ್ ದರ ಯಾವ ಮಟ್ಟಿಗೆ ಏರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.
ವರದಿ: ನಟರಾಜ್, ಟಿವಿ9 ಬೆಂಗಳೂರು
Published On - 1:14 pm, Sat, 24 January 26