
ಬೆಂಗಳೂರು, ನವೆಂಬರ್ 4: ಬೆಂಗಳೂರಿನ ರಸ್ತೆ ಬದಿಯಲ್ಲಿ ಕಸ ಎಸೆಯುವವರ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಕಠಿಣ ಕ್ರಮ ಕೈಗೊಂಡಿತ್ತು. ಅಷ್ಟೇ ಅಲ್ಲದೆ ಕಸ ಎಸೆಯುವವರ ವೀಡಿಯೋ ಮಾಡಿ ಕಳುಹಿಸಿದರೆ ಬಹುಮಾನ ನೀಡುವುದಾಗಿ BSWML ಹೇಳಿಕೊಂಡಿತ್ತು. ಇದೀಗ ಮತ್ತೊಮ್ಮೆ ಬೆಂಗಳೂರು ಉತ್ತರ ನಗರ ಪಾಲಿಕೆಯು ತನ್ನ ವ್ಯಾಪ್ತಿಯಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸಲಿದೆ.
ನವೆಂಬರ್ 8 ರ ಇಡೀ ದಿನದಂದು ಹೆಬ್ಬಾಳ, ಪುಲಕೇಶಿನಗರ, ಸರ್ವಜ್ಞನಗರ, ಯಲಹಂಕ, ಬ್ಯಾಟರಾಯನಪುರ, ದಾಸರಹಳ್ಳಿ, ರಾಜರಾಜೇಶ್ವರಿನಗರದ ಕೆಲವು ಭಾಗಗಳ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಅಭಿಯಾನ ನಡೆಯಲಿದೆ. ಘನತ್ಯಾಜ್ಯ ನಿರ್ವಹಣೆ, ಎಂಜಿನಿಯರಿಂಗ್ ಮತ್ತು ಆರೋಗ್ಯ ಸೇರಿದಂತೆ ಹಲವು ಇಲಾಖೆಯ ಸಿಬ್ಬಂದಿ ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆಂದು ನಿಗಮವು ತಿಳಿಸಿದೆ. ಈ ಅಭಿಯಾನದಲ್ಲಿ ಭಾಗಿಯಾಗಲು ನಾಗರಿಕ ಗುಂಪುಗಳು ಮತ್ತು ಸರ್ಕಾರೇತರ ಸಂಸ್ಥೆಗಳನ್ನು ಸಹ ಆಹ್ವಾನಿಸಲಾಗಿದೆ.
ನಿಗಮವು ಈ ಕಾರ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಸಂಸ್ಥೆಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದ್ದು, ಮೊದಲನೇ ಬಹುಮಾನವಾಗಿ 1,00,000 ರೂ., ಎರಡನೇ ಬಹುಮಾನವಾಗಿ 50,000 ರೂ. ಮತ್ತು ಮೂರನೇ ಬಹುಮಾನವಾಗಿ ರೂ. 25,000 ನೀಡಲು ಮುಂದಾಗಿದೆ. ಇದರೊಂದಿಗೆ ಕ್ಷೇತ್ರ ಮಟ್ಟದಲ್ಲಿಯೂ ಸಮಾಧಾನಕರ ಬಹುಮಾನಗಳನ್ನು ನೀಡಲಾಗುತ್ತದೆ ಎಂದೂ ತಿಳಿಸಿದೆ.
GBA ನಡೆಸಿದ್ದ ಕಾರ್ಯಾಚರಣೆಯಲ್ಲಿ ಒಂದೇ ದಿನ 218 ಮನೆಗಳ ಮುಂದೆ ಕಸ ಸುರಿದು 2.80 ಲಕ್ಷ ರೂ. ದಂಡ ವಸೂಲಿ ಮಾಡಲಾಗಿತ್ತು. ಇದುವರೆಗೆ 30 ಲಕ್ಷ ರೂ ಅಧಿಕ ದಂಡ ವಸೂಲಿ ಆಗಿದ್ದರೂ ಜನರು ಇನ್ನೂ ಎಚ್ಚೆತ್ತುಕೊಳ್ಳುತ್ತಿಲ್ಲ. ಈ ಹಿನ್ನೆಲೆ ಜನರು ಬೇಜವಾಬ್ದಾರಿಯಿಂದ ಕಸ ಎಸೆಯುವ ವೀಡಿಯೊವನ್ನು ಮಾಡಿ BSWML ಜೊತೆ ಹಂಚಿಕೊಂಡರೆ ಅವರಿಗೆ 250 ರೂ. ಬಹುಮಾನವನ್ನು ನೀಡುವುದಾಗಿ ಸಹ ಹೇಳಿದೆ. ಇದರೊಂದಿಗೆ ಹೊಸದಾಗಿ ಬೆಂಗಳೂರು ಉತ್ತರ ಪಾಳಿಕೆಯು 1 ಲಕ್ಷ ರೂ.ಗಳ ವರೆಗೆ ಬಹುಮಾನ ನೀಡುವ ಮೂಲಕ ನಗರದ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಜನರಿಗೆ ಉತ್ತೇಜನ ನೀಡುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.