ಬೆಂಗಳೂರು: ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಲಸಿಕೆ ಅಭಿಯಾನದ ವೇಗ ಕುಂಠಿತವಾಗಿರುವ ಹಿನ್ನೆಲೆಯಲ್ಲಿ ಲಸಿಕಾಕರಣಕ್ಕೆ ಹೊಸ ವೇಗ ನೀಡುವ ಉದ್ದೇಶದಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು (ಜ.18) ಸಂಜೆ 4 ಗಂಟೆಗೆ 18 ಜಿಲ್ಲೆಗಳ ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಶೇಷ ಸಭೆ ನಡೆಸಲಿದ್ದಾರೆ. ವಿಡಿಯೋ ಕಾನ್ಫರೆನ್ಸ್ನಲ್ಲಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಜಿಲ್ಲಾ ವೈದ್ಯಾಧಿಕಾರಿ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸರು ಹಾಜರಿರಬೇಕು ಎಂದು ಸರ್ಕಾರ ಸೂಚನೆ ನೀಡಿದೆ.
ಸಭೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ), ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕಲಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ತುಮಕೂರು, ಬೀದರ್, ಚಿತ್ರದುರ್ಗ, ಕೋಲಾರ, ವಿಜಯಪುರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಧಾರವಾಡ, ಹಾವೇರಿ ಸೇರಿದಂತೆ ಒಟ್ಟು 18 ಜಿಲ್ಲಾಡಳಿತಗಳ ಜೊತೆ ಮುಖ್ಯಮಂತ್ರಿ ವಿಡಿಯೋ ಕಾನ್ಫರೆನ್ಸ್ ನಡೆಸಲಿದ್ದಾರೆ.
ರಾಜ್ಯದಲ್ಲಿ ಕೊರೊನಾ 3ನೇ ಅಲೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಂಜೆ ನಾಲ್ಕು ಗಂಟೆಗೆ 18 ಜಿಲ್ಲೆಗಳ ಜಿಲ್ಲಾಡಳಿತಗಳ ಜೊತೆ ಮುಖ್ಯಮಂತ್ರಿ ವಿಡಿಯೊ ಕಾನ್ಫರೆನ್ಸ್ ನಡೆಸಿ, ಕೋವಿಡ್ ಲಸಿಕಾಕರಣದ ಪ್ರಗತಿ ಮತ್ತು ಕೋವಿಡ್ ಸ್ಥಿತಿಗತಿ ಕುರಿತು ಸಭೆ ನಡೆಸಲಿದ್ದಾರೆ. ಎರಡನೇ ಡೋಸ್ ಪ್ರಗತಿ ಕಡಿಮೆ ಇರುವ ಜಿಲ್ಲಾಡಳಿತಗಳ ಪ್ರತಿಕ್ರಿಯೆ ತಿಳಿದು, ಅಗತ್ಯ ಸೂಚನೆ ನೀಡಲಿದ್ದಾರೆ.
ಮಡಿಕೇರಿ: ಕಟ್ಟಡ ಕಾರ್ಮಿಕರಿಗೆ ಕೊರೊನಾ ಸೋಂಕು
ಮಡಿಕೇರಿಯಲ್ಲಿ 29 ಕಟ್ಟಡ ಕಾರ್ಮಿಕರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಗಾಂಧಿ ಮೈದಾನ ಒಂದೇ ಕಟ್ಟಡದಲ್ಲಿ ಕೆಲಸ ಮಾಡುತ್ತಿರುವ ಈ ಕಾರ್ಮಿಕರು, ಉತ್ತರ ಭಾರತದಿಂದ 10 ದಿನಗಳ ಹಿಂದೆ ಆಗಮಿಸಿದ್ದರು. ನಿನ್ನೆ 60 ಮಂದಿಯನ್ನು ತಪಾಸಣೆಗೆ ಒಳಪಡಿಸಲಾಗಿತ್ತು. ಈ ವೇಳೆ 29 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಸ್ಥಳಕ್ಕೆ ಜಿಲ್ಲಾ ವೈದ್ಯಾಧಿಕಾರಿ ಡಾ ವೆಂಕಟೇಶ್ ಭೇಟಿ ನೀಡಿ ಪರಿಶೀಲಿಸಿದರು.
53 ಮಂದಿಗೆ ಕೊರೊನಾ ದೃಢ
ವಿಜಯಪುರ ಜಿಲ್ಲೆಯ 53 ಜನರಲ್ಲಿ ಮಂಗಳವಾರ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಪ್ರಸ್ತುತ 565 ಸಕ್ರಿಯ ಪ್ರಕರಣಗಳಿದ್ದು, 25 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೋಂ ಐಸೋಲೇಷನ್ನಲ್ಲಿ 540 ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ 26 ರೋಗಿಗಳು ಬಿಡುಗಡೆಯಾಗಿದ್ದಾರೆ. 2,555 ಜನರ ಟೆಸ್ಟಿಂಗ್ ವರದಿಗಳು ಇನ್ನೂ ಬಂದಿಲ್ಲ.
ಇದನ್ನೂ ಓದಿ: ಆಂಧ್ರಪ್ರದೇಶ ವಿರೋಧ ಪಕ್ಷದ ನಾಯಕ, ಟಿಡಿಪಿ ಮುಖ್ಯಸ್ಥ ಎನ್.ಚಂದ್ರಬಾಬು ನಾಯ್ಡುರಿಗೆ ಕೊರೊನಾ ಸೋಂಕು