ಬೆಂಗಳೂರು: ರಾಜ್ಯದಲ್ಲಿ ನೈತಿಕ ಪೊಲೀಸ್ ಗಿರಿ ಪ್ರದರ್ಶನ ಹೆಚ್ಚಾಗುತ್ತಿದೆ. ಸದ್ಯ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರ ಬಗ್ಗೆ ಅವಾಚ್ಯವಾಗಿ ಮಾತನಾಡಿದ ಎಂಬ ಕಾರಣಕ್ಕೆ ವ್ಯಕ್ತಿಯೋರ್ವನನ್ನು ಕೆಲ ಯುವಕರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಬೆಂಗಳೂರಿನ ಕೆ.ಪಿ.ಅಗ್ರಹಾರದಲ್ಲಿ ಈ ಘಟನೆ ನಡೆದಿದೆ. ವ್ಯಕ್ತಿಯೋರ್ವ ಮುಖ್ಯಮಂತ್ರಿ ಸಿದ್ದರಾಮಯ್ಯ ಪೋಸ್ಟರ್ ನೋಡಿ ಬೈಯ್ದಿದ್ದಾನೆ. ಇದನ್ನು ಕಂಡ ಸಿದ್ದರಾಮಯ್ಯ ಅಭಿಮಾನಿಗಳು(Siddaramaiah Fans) ವ್ಯಕ್ತಿಗೆ ಕಪಾಳಮೋಕ್ಷ(Slap) ಮಾಡಿ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ವ್ಯಕ್ತಿಯನ್ನು ಸಿದ್ದರಾಮಯ್ಯ ಪೋಸ್ಟರ್ ಬಳಿ ಎಳೆ ತಂದು ಕ್ಷಮೆ ಕೇಳುವಂತೆ ಕೆನ್ನೆಗೆ ಬಾರಿಸಿದ್ದಾರೆ. ಸಿದ್ದರಾಮಯ್ಯ ಅಲ್ಲದೇ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಅವರ ಬಗ್ಗೆಯೂ ಈ ವ್ಯಕ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಎಂದು ತಿಳಿದು ಬಂದಿದೆ. ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಳೆದ ಮಾರ್ಚ್ ತಿಂಗಳಲ್ಲಿ ಸಿದ್ದರಾಮಯ್ಯ ಅವರು ಕಾಂಗ್ರೆಸ್ ಕಾರ್ಯಕರ್ತನಿಗೆ ಕಪಾಳಮೋಕ್ಷ ಮಾಡಿದ್ದರು. ಅದು ದೊಡ್ಡ ಮಟ್ಟಿಗೆ ಸುದ್ದಿಯಾಗಿತ್ತು. ಮಹಿಳಾ ಕಾರ್ಯಕರ್ತೆಯನ್ನು ತಳ್ಳಿದ್ದಕ್ಕೆ ಕೋಪಗೊಂಡ ಸಿದ್ದರಾಮಯ್ಯ, ದಾವಣಗೆರೆ ಜಿಲ್ಲೆ ಹರಿಹರ ಮೂಲದ ಕಾರ್ಯಕರ್ತನಿಗೆ ಕಪಾಳಕ್ಕೆ ಹೊಡೆದಿದ್ದರು. ಶಾಸಕ ರಾಮಪ್ಪ ಅವರಿಗೆ ಟಿಕೆಟ್ ನೀಡಬೇಕೆಂದು ದಾವಣಗೆರೆ ಜಿಲ್ಲೆ ಹರಿಹರ ಮೂಲದ ಕಾರ್ಯಕರ್ತರು ಮಾರ್ಚ್ 24ರಂದು ಬೆಂಗಳೂರಿನ ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿ ಆಗ್ರಹಿಸಿದರು. ಆ ವೇಳೆ ತಳ್ಳಾಟ ನೂಕಾಟದಿಂದ ಸಿಟ್ಟಿಗೆದ್ದ ಸಿದ್ದರಾಮಯ್ಯ, ಕಾರ್ಯಕರ್ತನ ಕೆನ್ನೆಗೆ ಬಾರಿಸಿದ್ದರು. ವಿಡಿಯೋ ಫುಲ್ ವೈರಲ್ ಆಗಿತ್ತು.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ