ಬೆಂಗಳೂರು, ಡಿ.17: ಲೋಕಸಭೆ ಚುನಾವಣೆ (Lok Sabha Election) ಸಮೀಪಿಸುತ್ತಿದ್ದಂತೆ ಕಾಂಗ್ರೆಸ್‌ನಲ್ಲಿ (Congress) ಹಿಂದುಳಿದ ವರ್ಗಗಳ ನಾಯಕನ ಸ್ಥಾನಕ್ಕೆ ಪೈಪೋಟಿ ಜೋರಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಬೆಂಬಲಿಗರು ಡಿಸೆಂಬರ್ 30ರಂದು ಚಿತ್ರದುರ್ಗದಲ್ಲಿ ಮತ್ತೊಮ್ಮೆ ಅಹಿಂದ ಸಮಾವೇಶ ನಡೆಸಿ ಸುಮಾರು ಹತ್ತು ಲಕ್ಷ ಜನರನ್ನು ಸೇರಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರೆ, ಇನ್ನು ಮತ್ತೊಂದೆಡೆ ಕಾಂಗ್ರೆಸ್ ಎಂಎಲ್ಸಿ ಬಿ.ಕೆ.ಹರಿಪ್ರಸಾದ್ (BH Hariprasad) ಅವರು ಕೂಡ ಜನವರಿ ತಿಂಗಳಿನಲ್ಲೇ ಸಮಾವೇಶ ನಡೆಸಲು ತಯಾರಿ ನಡೆಸಿದ್ದಾರೆ.
ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಮತ್ತೆ ನಾಯಕರ ಶಕ್ತಿ ಪ್ರದರ್ಶನ ಜೋರಾಗಿದೆ. ಸಿದ್ದರಾಮೋತ್ಸವ ಮಾದರಿಯಲ್ಲೇ ಮತ್ತೊಂದು ಬೃಹತ್ ಸಮಾವೇಶ ನಡೆಸಲು ಸಿದ್ದರಾಮಯ್ಯ ಬಣ ಸಿದ್ಧತೆ ಮಾಡಿಕೊಳ್ಳುತ್ತಿದೆ. ಕಾಂಗ್ರೆಸ್‍ನಲ್ಲಿ ಹಿಂದುಳಿದ ವರ್ಗಗಳ ನಾಯಕನ ಸ್ಥಾನಕ್ಕೆ ತೀವ್ರ ಪೈಪೋಟಿ ನಡೆಯುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆನ್ನೆಲುಬಾಗಿ ಚಿತ್ರದುರ್ಗದಲ್ಲಿ ಮತ್ತೊಮ್ಮೆ ಅಹಿಂದ ಸಮಾವೇಶ ನಡೆಸಲು ಸಿದ್ದತೆಗಳು ನಡೆಯುತ್ತಿವೆ.
ಸುಮಾರು ಹತ್ತು ಲಕ್ಷ ಜನರನ್ನು ಸೇರಿಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಅಹಿಂದ ನಾಯಕರು ಮುಂದಾಗಿದ್ದಾರೆ. ಜಾತಿ ಜನಗಣತಿ ಜಾರಿಗೆ ಒತ್ತಾಯಿಸಿ ಚಿತ್ರದುರ್ಗದಲ್ಲಿ ಡಿಸೆಂಬರ್ 30 ರಂದು ಸಿದ್ದರಾಮಯ್ಯ ಅವರ ಆಪ್ತರು ಬೃಹತ್ ಸಮಾವೇಶಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ರಾಜಕೀಯದಲ್ಲಿ ಕಾಲಕಾಲಕ್ಕೆ ಬೃಹತ್ ಸಮಾವೇಶಗಳ ಮೂಲಕ ತಮ್ಮ ಶಕ್ತಿ ಪ್ರದರ್ಶನ ಮಾಡಿ ರಾಜಕೀಯ ಎದುರಾಳಿಗಳನ್ನು ಸಿದ್ದರಾಮಯ್ಯ ಬಗ್ಗುಬಡಿದಿದ್ದಾರೆ. ಅದೇ ರೀತಿ ಅಹಿಂದ ಸಮಾವೇಶ, ಸಿದ್ದರಾಮೋತ್ಸವ ಸೇರಿದಂತೆ ಹಲವಾರು ಕಾರ್ಯಕ್ರಮಗಳ ಮೂಲಕ ಸಿದ್ದರಾಮಯ್ಯ ಬಲವರ್ಧನೆಗೆ ಸಿದ್ದರಾಮಯ್ಯ ಆಪ್ತರು ವೇದಿಕೆ ಸಿದ್ಧಪಡಿಸುತ್ತಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ತಂತ್ರಕ್ಕೆ ಬಿಕೆ ಹರಿಪ್ರಸಾದ್ ಪ್ರತಿತಂತ್ರ, ಬೃಹತ್ ಹಿಂದುಳಿದ ಸಮಾವೇಶಕ್ಕೆ ಸಜ್ಜು
ಲೋಕಸಭೆ ಚುನಾವಣೆಯ ನಂತರ ರಾಜಕೀಯ ಬದಲಾವಣೆಗಳ ಮುನ್ಸೂಚನೆಯಿದೆ. ಕೇಂದ್ರದಲ್ಲಿ ಬಿಜೆಪಿ ಆಡಳಿತವೇ ಮರುಕಳಿಸಿದರೆ ಒಂದಷ್ಟು ಸ್ಥಿತ್ಯಂತರಗಳ ಸಾಧ್ಯತೆ ಇದೆ. ಕಾಂಗ್ರೆಸ್‍ನ ಆಂತರಿಕ ಒಳ ಒಪ್ಪಂದದ ಪ್ರಕಾರ ಅಧಿಕಾರ ಹಂಚಿಕೆ ಸೂತ್ರಕ್ಕೂ ಲೋಕಸಭೆ ಬಳಿಕ ಜೀವ ಬರುವ ಸಾಧ್ಯತೆ ಇದೆ. ಇದನ್ನು ಸಿದ್ದರಾಮಯ್ಯ ಅವರ ತಂಡ ಮೊಳಕೆ ಹಂತದಲ್ಲೇ ಚಿವುಟಿ ಅಲ್ಲಗಳೆಯುತ್ತಿದೆ. ಸಿದ್ದರಾಮಯ್ಯ ಈಗಲೂ ಪ್ರಶ್ನಾತೀತ ನಾಯಕ ಎಂಬುದನ್ನೇ ಮತ್ತೆ ಸಾಬೀತು ಪಡಿಸಲು ವೇದಿಕೆ ಸಿದ್ದಪಡಿಸಲಾಗುತ್ತಿದೆ. ಸಿದ್ದರಾಮಯ್ಯ ಶಕ್ತಿ ಹಾಗೇ ಇದೆ ಎಂಬುದನ್ನು ಸಾಬೀತುಪಡಿಸಲು ಹಿಂದುಳಿದ ಜಾತಿಗಳ ಒಕ್ಕೂಟ ಸಮಾವೇಶಕ್ಕೆ ಸಿದ್ದತೆ ನಡೆಯುತ್ತಿದೆ. ಈಗಾಗಲೇ ಪೂರ್ವ ಸಿದ್ಧತೆಗಳು ಆರಂಭಗೊಂಡಿದ್ದು, ಹಲವಾರು ಉಪಸಮಿತಿಗಳ ರಚನೆ ಮಾಡಲಾಗಿದೆ. ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ನಡೆಸಲಾದ ಸಾಮಾಜಿಕ, ಆರ್ಥಿಕ ಸಮೀಕ್ಷೆ ವರದಿಯ ಜಾರಿಗೂ ಸಮಾವೇಶದಲ್ಲಿ ಒತ್ತಡ ಹೇರಲಾಗುತ್ತೆ.
ಜನವರಿಯಲ್ಲಿ ಮತ್ತೊಂದು ಸುತ್ತಿನ ಬೃಹತ್ ಹಿಂದುಳಿದ ಸಮಾವೇಶ ನಡೆಸಲು ಹರಿಪ್ರಸಾದ್ ಸಿದ್ಧತೆ ನಡೆಸುತ್ತಿದ್ದಾರೆ. ಆ ಮೂಲಕ ತಮ್ಮ ವಿರೋಧಿಗಳಿಗೆ ಸ್ಪಷ್ಟ ಸಂದೇಶ ರವಾನಿಸಲು ಸಜ್ಜಾಗುತ್ತಿದ್ದಾರೆ.
ಹರಿಪ್ರಸಾದ್ ಅವರು ಹಿಂದುಳಿದ ವರ್ಗ ತಮ್ಮ ಬೆನ್ನಿಗೆ ನಿಂತಿದೆ ಎಂದು ಮತ್ತೆ ಸಂದೇಶ ರವಾನಿಸಲು ಮುಂದಾಗಿದ್ದು, ಮತ್ತೊಂದು ಸುತ್ತು ರಾಜ್ಯ ಪ್ರವಾಸ ಮಾಡಲಿದ್ದಾರೆ. ಹಿಂದುಳಿದ ವರ್ಗಗಳ ಹಲವು ಸ್ವಾಮೀಜಿಗಳು ಜನವರಿಯಲ್ಲಿ ಬೃಹತ್ ಸಮಾವೇಶ ನಡೆಸಲು ಹರಿಪ್ರಸಾದ್ ಬೆನ್ನಿಗೆ ನಿಂತಿದ್ದಾರೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ