
ಬೆಂಗಳೂರು, ಅ.22: ಬೆಂಗಳೂರು ರಸ್ತೆಗಳ (Bengaluru road) ಬಗ್ಗೆ ದಿನಕ್ಕೊಂದು ಪೋಸ್ಟ್, ಟ್ರೋಲ್, ಮೀಮ್ಸ್, ಅದರಲ್ಲೂ ಸರ್ಕಾರದ ವಿರುದ್ಧ ಸಾರ್ವಜನಿಕರು ಮಾಡುತ್ತಿದ್ದ ಆರೋಪ, ಇದರ ಜತೆಗೆ ವಿದೇಶಿಗರು, ಉದ್ಯಮಿಗಳು ಮಾಡಿದ ಪೋಸ್ಟ್ ನೋಡಿ ಇದೀಗ ಮುಖ್ಯಮಂತ್ರಿ ಸಿದ್ಧರಾಮಯ್ಯ (CM Siddaramaiah) ಅವರು, ಮಹತ್ವ ಸೂಚನೆಯನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತರಿಗೆ ನೀಡಿದ್ದಾರೆ. ಒಂದು ವಾರದೊಳಗೆ ಎಲ್ಲಾ ಗುಂಡಿಗಳನ್ನು ಮುಚ್ಚುವಂತೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಮುಖ್ಯ ಆಯುಕ್ತ ಎಂ. ಮಹೇಶ್ವರ್ ರಾವ್ ಅವರಿಗೆ ಸೂಚನೆ ನೀಡಿದ್ದಾರೆ. ರಸ್ತೆಗಳ ಸ್ಥಿತಿಯನ್ನು ಸುಧಾರಿಸಲು ಹೊಸ ಟಾರ್ ಹಾಕುವಂತೆಯೂ ಅವರು ನಿರ್ದೇಶನ ನೀಡಿದ್ದಾರೆ.
ಮಂಗಳವಾರ ನಡೆದ ಗುಸ್ಲಿ ಪೂಜೆಯ ಶಿಲಾನ್ಯಾಸ ಸಮಾರಂಭದಲ್ಲಿ ಭಾಗವಹಿಸಿ ಮುಖ್ಯಮಂತ್ರಿ ಈ ಆದೇಶಗಳನ್ನು ನೀಡಿದರು. ಡೆಕ್ಕನ್ ಹೆರಾಲ್ಡ್ ವರದಿಯ ಪ್ರಕಾರ, ನಗರದ ಅತ್ಯಂತ ಹಳೆಯ ಪ್ರದೇಶಗಳಲ್ಲಿ ಒಂದಾದ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ರಸ್ತೆ ಆಧುನೀಕರಣ ಮತ್ತು ವೈಟ್-ಟಾಪಿಂಗ್ ಕಾಮಗಾರಿಗಳ ಆರಂಭವಾಗಲಿದೆ ಎಂದು ಹೇಳಿದೆ. ಈ ಕಾರ್ಯಕ್ರಮದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಉಪಸ್ಥಿತರಿದ್ದರು. ಈ ವೇಳೆ ಮಾತನಾಡಿದ ಸಿಎಂ ಸಿದ್ಧರಾಮಯ್ಯ ಕೆಂಪೇಗೌಡರ ಕಾಲದಲ್ಲಿ ಅನೇಕ ಬೀದಿಗಳು ಮಾರುಕಟ್ಟೆ ರಸ್ತೆಗಳಾಗಿದ್ದವು, ಅವುಗಳಿಗೆ ಅಷ್ಟೇ ಮೌಲ್ಯಗಳಿತ್ತು ಎಂದು ಹೇಳಿದ್ದಾರೆ.
ಬೆಂಗಳೂರಿನ ಅಭಿವೃದ್ಧಿಗಾಗಿ ಸರ್ಕಾರ ಇಂದಿಗೂ ಹೊಡಿಕೆ ಮಾಡುತ್ತಿದೆ. ಮುಂದೆಯೂ ಮಾಡುತ್ತದೆ. ವಿಶೇಷವಾಗಿ ಬೆಂಗಳೂರಿನ ಜನಸಂಖ್ಯೆಯು ವೇಗವಾಗಿ ಬೆಳೆಯುತ್ತಿರುವುದರಿಂದ ಉತ್ತಮ ಮೂಲಸೌಕರ್ಯಗಳ ಅಗತ್ಯ ಇದೆ ಎಂದು ಹೇಳಿದ್ದಾರೆ. ಈ ವೇಳೆ ಕೇಂದ್ರ ಸರ್ಕಾರ ತೆರಿಗೆ ಮತ್ತು ಹಣಕಾಸು ನಿರ್ವಹಣೆ ಬಗ್ಗೆಯೂ ಟೀಕಿಸಿದ್ದಾರೆ. ಬೆಂಗಳೂರು ಮೆಟ್ರೋಗೆ ಶೇ. 87 ರಷ್ಟು ಹಣ ರಾಜ್ಯದ ತೆರಿಗೆದಾರರಿಂದ ಬಂದಿದೆ. ಜಿಎಸ್‌ಟಿ ನೀತಿಯಲ್ಲಿನ ಬದಲಾವಣೆಗಳಿಂದಾಗಿ ಕರ್ನಾಟಕ ₹ 15,000 ಕೋಟಿ ನಷ್ಟ ಅನುಭವಿಸಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ನಾನು ಗುಜರಾತಿ ಅಲ್ಲ, ಹೆಮ್ಮೆಯ ಕನ್ನಡತಿ, ಟೀಕಿಸಿದವರಿಗೆ ಖಡಕ್ ಉತ್ತರ ಕೊಟ್ಟ ಬಯೋಕಾನ್ ಅಧ್ಯಕ್ಷೆ
ಗಾಂಧಿನಗರ ಕ್ಷೇತ್ರದಲ್ಲಿ 5.57 ಕಿಲೋಮೀಟರ್ ರಸ್ತೆಗಳನ್ನು ವೈಟ್-ಟಾಪಿಂಗ್ ಯೋಜನೆಯು ಒಳಗೊಂಡಿದ್ದು, ₹ 58.44 ಕೋಟಿ ವೆಚ್ಚವಾಗಲಿದೆ. ಇದನ್ನು ಈ ಕಾಮಗಾರಿಯನ್ನು 11 ತಿಂಗಳಲ್ಲಿ ಪೂರ್ಣಗೊಳಿಸಲು ನಿರ್ಧರಿಸಲಾಗಿದೆ.
ನವೀಕರಣಗೊಳ್ಳುತ್ತಿರುವ ರಸ್ತೆಗಳು:
ಬಿವಿಕೆ ಅಯ್ಯಂಗಾರ್ ರಸ್ತೆ (ಬಿಟಿ ಬೀದಿ)
ರಂಗಸ್ವಾಮಿ ದೇವಸ್ಥಾನ ಬೀದಿ
ಸುಲ್ತಾನ್ಪೇಟೆ ಮುಖ್ಯ ರಸ್ತೆ
ಕಿಲಾರಿ ರಸ್ತೆ
ಆಸ್ಪತ್ರೆ ರಸ್ತೆ
ಬಿಎಂಟಿಸಿ ರಸ್ತೆ (ಧನವಂತ್ರಿ ರಸ್ತೆಯಿಂದ ಗುಬ್ಬಿ ತೋಟದಪ್ಪ ರಸ್ತೆ)
ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ನೋಡಿ