ಬೆಂಗಳೂರು: ವಿಧಾನಸಭೆಯ ಅರ್ಜಿಗಳ ಸಮಿತಿಯ ಮುಂದೆ ಇಂದು ಹಾಜರಾಗಬೇಕಿದ್ದ ಬಿಡಿಎ ಮತ್ತು ಬಿಬಿಎಂಪಿ ಆಯುಕ್ತರು ಗೈರು ಹಾಜರಾದ ಹಿನ್ನೆಲೆಯಲ್ಲಿ ತೀವ್ರ ಅಸಮಾಧಾನಗೊಂಡಿರುವ ಸಮಿತಿ, ಈ ಕುರಿತು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆಯಲು ತೀರ್ಮಾನಸಿದೆ ಎಂದು ಮೂಲಗಳು ತಿಳಿಸಿವೆ.
ಎನ್.ಪಿ.ಕೆ.ಎಲ್. ಮತ್ತು ಬಂಡೇಮಠ ಕೆ.ಎಚ್.ಬಿ ಬಡಾವಣೆ ಮೂಲಸೌಕರ್ಯ ಕೊರತೆ ಕುರಿತ ಈ ಎರಡೂ ಪ್ರಕರಣಗಳ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 27 ಕ್ಕೆ ನಿಗದಿಪಡಿಸಲಾಗಿದೆ.
ಈ ಹಿಂದೆ ನಡೆದ ಅರ್ಜಿಗಳ ಸಮಿತಿ ಸಭೆಯಲ್ಲಿ ಬಿಡಿಎ ಒಪ್ಪಿಕೊಂಡಿರುವಂತೆ ಈ ವರ್ಷಾಂತ್ಯದೊಳಗೆ ಅಂದರೆ ಡಿಸೆಂಬರ್ 31ರೊಳಗೆ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಸಕಲ ಮೂಲಭೂತ ಸೌಕರ್ಯ ಕಲ್ಪಿಸಬೇಕಿದೆ. ಆದರೆ ಪ್ರಸ್ತುತ ಶೇಕಡ 50 ರಷ್ಟು ಕಾಮಗಾರಿಯೂ ಪೂರ್ಣವಾಗಿಲ್ಲ. ಈ ಹಿನ್ನೆಲೆಯಲ್ಲಿ ಅರ್ಜಿಗಳ ಸಮಿತಿ ಸದಸ್ಯರೂ ಹಾಗೂ ರಾಜಾಜಿನಗರ ಶಾಸಕರಾದ ಸುರೇಶ್ ಕುಮಾರ್ ಅವರಿಗೆ ಮುಂದಿನ ಸೋಮವಾರ (ಅ.17) ರಂದು ಸಮಿತಿಯ ಪರವಾಗಿ ನಾಡಪ್ರಭು ಕೆಂಪೇಗೌಡ ಬಡಾವಣೆಗೆ ಭೇಟಿ ನೀಡಿ, ಬಿಡಿಎ ಈವರೆಗೆ ಒದಗಿಸಿರುವ ಮೂಲಸೌಕರ್ಯದ ಖುದ್ದು ಪರಿಶೀಲನೆ ಮಾಡುವ ಹೊಣೆಯನ್ನು ವಹಿಸಲಾಗಿದ್ದು, ಬಿಡಿಎ ಅಧಿಕಾರಿಗಳು ಅಂದು ಸುರೇಶ್ ಕುಮಾರ್ ಅವರಿಗೆ ಕಾಮಗಾರಿಯ ಪ್ರಗತಿಯ ವಿವರಣೆ ನೀಡಬೇಕಾಗಿರುತ್ತದೆ.
4040 ಎಕರೆಯಲ್ಲಿ ನಿರ್ಮಾಣವಾಗಬೇಕಾಗಿದೆ ಕೆಂಪೇಗೌಡ ಬಡಾವಣೆಯ ಕೇವಲ 2652 ಎಕರೆಯಲ್ಲಿ ನಿರ್ಮಾಣವಾಗಿ 2016 ನೇ ಇಸವಿಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿದ್ದರು ಮನೆ ಕಟ್ಟಲು ವಿದ್ಯುತ್,ನೀರು,ಒಳಚರಂಡಿ ವ್ಯವಸ್ಥೆ ಮತ್ತು ರಸ್ತೆ ಕನಿಷ್ಠ ಮೂಲಸೌಕರ್ಯಗಳಿಂದ ವಂಚಿತವಾಗಿ ಅವ್ಯವಸ್ಥೆಯ ಆಗರವಾಗಿರುವ ನಾಡಪ್ರಭು ಕೆಂಪೇಗೌಡ ಬಡಾವಣೆ.
ಕೆಂಪೇಗೌಡ ಬಡಾವಣೆಯಲ್ಲಿ ಇಲ್ಲಿಯವರೆಗೆ 23 ಸಾವಿರ ನಿವೇಶನಗಳನ್ನು ನಿರ್ಮಾಣ ಮಾಡಲಾಗಿದ್ದು ಅದರಲ್ಲಿ 10000 ನಿವೇಶನವನ್ನು ಸಾರ್ವಜನಿಕರಿಗೆ ಹಂಚಲಾಗಿದೆ ಮತ್ತು 3000 ನಿವೇಶನಗಳನ್ನು ಅರ್ಕಾವತಿ ಬಡಾವಣೆಯ ನಿವೇಶನ ವಂಚಿತರಿಗೆ ಕೊಡಲಾಗಿರುತ್ತದೆ,9000 ನಿವೇಶನಗಳನ್ನು ಭೂಮಿಯನ್ನು ಕಳೆದುಕೊಂಡವರಿಗೆ ಹಂಚಲಾಗಿರುತ್ತದೆ.
ಮುಖ್ಯ ಮಂತ್ರಿಗಳು ನಾಡಪ್ರಭು ಕೆಂಪೇಗೌಡ ಬಡಾವಣೆಯ ಕಾಮಗಾರಿಗಳನ್ನು ಶೀಘ್ರದಲ್ಲೇ ಪೂರ್ಣಗೊಳಿಸಲಾಗುವುದು ಎಂದು ಸದನದಲ್ಲಿ ಲಿಖಿತ ಹೇಳಿಕೆಯನ್ನು ಕೊಟ್ಟಿರುತ್ತಾರೆ,ಮೂಲಸೌಲಭ್ಯ ಕೊರತೆಯಿಂದಾಗಿ ಈಗಾಗಲೇ ನಿವೇಶನದಾರರ ಮುಕ್ತ ವೇದಿಕೆಯೂ ರೇರಾ ಪ್ರಾಧಿಕಾರದಲ್ಲಿ ದೂರನ್ನು ಸಲ್ಲಿಸಲಾಗಿತ್ತು ದೂರಿನ ಪ್ರಕಾರ 2021 ಡಿಸೆಂಬರ್ ಒಳಗಾಗಿ ಮೂಲಭೂತ ಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾಗಿತ್ತು ಆದರೆ 2022 ಡಿಸೆಂಬರ್ ಬಂದರು ಇದುವರೆಗೂ ಕೂಡ 50 % ಕ್ಕಿಂತ ಹೆಚ್ಚಿನ ಕಾಮಗಾರಿಯು ಪೂರ್ಣಗೊಂಡಿರುವುದಿಲ್ಲ.
ನಿವೇಶನದಾರರ ಮುಕ್ತ ವೇದಿಕೆಯೂ ಅರ್ಜಿ ಸಮಿತಿಯಲ್ಲಿ ದೂರನ್ನು ದಾಖಲಿಸಿದ ನಂತರ ಅರ್ಜಿ ಸಮಿತಿಯ ವಿಚಾರಣೆ ಮತ್ತು ಬಡಾವಣೆ ವೀಕ್ಷಣೆಯ ನಂತರ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಡಿಸೆಂಬರ್ 2022ರ ಒಳಗೆ ಪೂರ್ಣಗೊಳಿಸಲಾಗುವುದು ಎಂದು ಹೇಳಿಕೆಯನ್ನು ಕೊಟ್ಟಿರುತ್ತಾರೆ ಮತ್ತು 250ಕೋಟಿ ಗುತ್ತಿಗೆದಾರರ ಬಾಕಿ ಪಾವತಿಯನ್ನು ಮಾಡಿ ಕೆಲವು ಅನುಮೋದನೆಗಳನ್ನು ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಎಂದು ಹೇಳಿಕೆಯನ್ನು ಕೊಟ್ಟಿದ್ದರು ಕಾಮಗಾರಿಗಳು ನಿಗದಿತ ಪ್ರಮಾಣದಲ್ಲಿ ಪ್ರಾರಂಭವಾಗಿರುವುದಿಲ್ಲ.
ಕೆಂಗೇರಿ ಬಂಡೇಮಠ ಕೆ.ಎಚ್.ಬಿ. ಬಡಾವಣೆಯ ನಾಗರಿಕರಿಂದ ಬಂದಿರುವ ದೂರುಗಳಿಗೆ ಸಂಬಂಧಿಸಿದಂತೆ ಇಂದು ಅರ್ಜಿಗಳ ಸಮಿತಿಯ ಮುಂದೆ ವಿಚಾರಣೆ ನಿಗದಿಯಾಗಿತ್ತು. ಆದರೆ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮತ್ತು ಬಿಡಿಎ ಆಯುಕ್ತ ಜಿ.ಕುಮಾರ್ ನಾಯಕ್ ಹಾಗೂ ಇತರ ಅಧಿಕಾರಿಗಳ ಅನುಪಸ್ಥಿತಿಯ ಬಗ್ಗೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಅಪಚ್ಚು ರಂಜನ್ ಮತ್ತು ಸದಸ್ಯರಾದ ಎಸ್. ಸುರೇಶ್ ಕುಮಾರ್, ನೆರಹೂ ಓಲೇಕಾರ್, ಉಮಾನಾಥ ಕೋಟ್ಯಾನ್, ವೀರಭದ್ರಯ್ಯ ಮತ್ತು ರಮೇಶ್ ಭೂಸನೂರುಮಠ ತೀವ್ರ ಅಸಮಾಧಾನ ಹೊರಹಾಕಿದರು ಎಂದು ಮೂಲಗಳು ತಿಳಿಸಿವೆ.
ರಸ್ತೆಗೆ ಡಾಂಬರು ಹಾಕಲಾಗಿಲ್ಲ, ಬೀದ ದೀಪ, ಕುಡಿಯುವ ನೀರು, ವಿದ್ಯುತ್ ಸಂಪರ್ಕವೂ ಇಲ್ಲ ಮಿಗಿಲಾಗಿ ನಿರ್ವಹಣೆ ಇಲ್ಲದೆ ಎಲ್ಲ ನಿವೇಶನಗಳು ಮತ್ತು ರಸ್ತೆ, ಉದ್ಯಾನದ ಜಾಗದಲ್ಲಿ ಕಾಡುಗಿಡ ಬೆಳೆದು ಕಿರು ಅರಣ್ಯದಂತಾಗಿದ್ದು ಹಾವು ಚೇಳುಗಳ ಆವಾಸಸ್ಥಾನವಾಗಿದೆ. ಹೀಗಾಗಿ ಇಲ್ಲಿ ಮನೆ ಕಟ್ಟಿಕೊಂಡು ವಾಸಿಸುವುದು ಅಸಾಧ್ಯವಾಗಿದೆ ಈ ಹಿನ್ನೆಲೆಯಲ್ಲಿ ಸಮಿತಿ ಸಭೆಯ ಮುಂದೆ ಹಾಜರಾಗಿ ಬಿಡಿಎ ಅಧಿಕಾರಿಗಳು ದಾಖಲೆ ಸಹಿತ ವಿವರಣೆ ನೀಡಬೇಕಾಗಿತ್ತು.
ಬಿಡಿಎ ಪರವಾಗಿ ಎಂಜಿನಿಯರಿಂಗ್ ವಿಭಾಗದ ಸದಸ್ಯ ಎಚ್.ಎಸ್.ಶಾಂತರಾಜಣ್ಣ ಮಾತ್ರ ಹಾಜರಾಗಿದ್ದರು. ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ತಾವು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದ ವಿಚಾರಣೆಗೆ ಹಾಜರಾಗಬೇಕಿರುವ ಹಿನ್ನೆಲೆಯಲ್ಲಿ ಸಮಿತಿಯ ಮುಂದೆ ಹಾಜರಾಗಲು ಆಗುತ್ತಿಲ್ಲ ಎಂದು ಪತ್ರಮುಖೇನ ನಿವೇದಿಸಿಕೊಂಡಿದ್ದರು. ಆದರೆ ಬಿಡಿಎ ಆಯುಕ್ತ ಜಿ.ಕುಮಾರ್ ನಾಯಕ್ ತಾವು ಸಭೆಗೆ ಏಕೆ ಹಾಜರಾಗಲಾಗುತ್ತಿಲ್ಲ ಎಂಬ ಬಗ್ಗೆ ಮಾಹಿತಿ ನೀಡದೆ ಸಭೆಗೆ ಗೈರು ಹಾಜರಾಗಿದ್ದರು.
ಇನ್ನು ಬಂಡೇಮಠ ಕೆ.ಎಚ್.ಬಿ. ಬಡಾವಣೆ ನಿರ್ಮಾಣವಾಗಿ 20 ವರ್ಷವಾಗಿದ್ದರೂ ಇಲ್ಲಿ ಈವರೆಗೆ ಒಂದೇ ಒಂದು ಉದ್ಯಾನವನವೂ ಅಭಿವೃದ್ಧಿ ಆಗಿಲ್ಲ. 2018ರಲ್ಲಿ ನೀರಿನ ಕೊಳವೆ ಮತ್ತು ಒಳಚರಂಡಿ ಪೈಪ್ ಅಳವಡಿಸಲು ರಸ್ತೆ ಅಗೆದ ತರುವಾಯ ದಕ್ಷಿಣ ಬ್ಲಾಕ್ ನಲ್ಲಿ 6 ವರ್ಷವಾದರೂ ಡಾಂಬರು ಹಾಕಿಲ್ಲ. 4 ದಿನಗಳಿಗೆ ಒಮ್ಮೆ ಮಾತ್ರ ನೀರು ಪೂರೈಕೆ ಆಗುತ್ತಿದೆ, ರಾಜಕಾಲುವೆಯಲ್ಲಿ ತ್ಯಾಜ್ಯ ನೀರು ಧಾರಾಕಾರವಾಗಿ ಹರಿಯುತ್ತದೆ, ಡಾಂಬರು ಹಾಕಿರುವ ಭಾಗದಲ್ಲಿ ಕಳಪೆ ಕಾಮಗಾರಿಯಿಂದ ಕಿತ್ತು ನೂರಾರು ಗುಂಡಿಗಳು ಬಿದ್ದಿವೆ, ಬೀದಿ ದೀಪಗಳ ನಿರ್ವಹಣೆಯೂ ಇಲ್ಲದೆ ಕಗ್ಗತ್ತಲ ಖಂಡದಂತೆ ಗೋಚರಿಸುತ್ತದೆ. ಕಸ ವಿಲೇವಾರಿಯೂ ಸಮರ್ಪಕವಾಗಿಲ್ಲ. ಈ ಮಧ್ಯೆ ಕೆ.ಎಚ್.ಬಿ. ಬಿಬಿಎಂಪಿಗೆ ಬಡಾವಣೆ ಹಸ್ತಾಂತರ ಆಗಿದೆ ಎಂದು ಹೇಳುತ್ತಿದ್ದರೆ, ಬಿಬಿಎಂಪಿ ತಾವು ಇನ್ನೂ ಹಸ್ತಾಂತರ ಮಾಡಿಕೊಂಡಿಲ್ಲ ಎಂದು ಹೇಳುತ್ತದೆ. ಈ ಇಬ್ಬರ ಜಗಳದಲ್ಲಿ ನಿವಾಸಿಗಳು ನಿತ್ಯ ನರಕ ಅನುಭವಿಸುತ್ತಿದ್ದಾರೆ.
ಇಂದು ಸಮಿತಿಯ ಮುಂದೆ ಹಾಜರಾಗಬೇಕಿದ್ದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಯಾವುದೇ ಬಿಬಿಎಂಪಿ ಅಧಿಕಾರಿಗಳು ಬಂದಿರಲಿಲ್ಲ. ಕನಿಷ್ಠ ಏಕೆ ತಮಗೆ ಸಭೆಗೆ ಬರಲಾಗುತ್ತಿಲ್ಲ ಎಂಬ ಬಗ್ಗೆ ಪತ್ರವನ್ನು ಕಳುಹಿಸುವ ಸೌಜನ್ಯವನ್ನೂ ತೋರಿದೆ, ಶಾಸಕಾಂಗ ಸಮಿತಿಗೆ ಅವಮಾನ ಮಾಡಿರುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಸಭೆ, ಅಧಿಕಾರಿಗಳ ಅನುಪಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರ ಬರೆಯಲು ನಿರ್ಧರಿಸಿತು ಎಂದು ಮೂಲಗಳು ತಿಳಿಸಿವೆ.
ಜನರು ನಿತ್ಯ ಎದುರಿಸುತ್ತಿರುವ ಮೂಲಭೂತ ಸೌಕರ್ಯಗಳ ಸಮಸ್ಯೆ ಪರಿಹರಿಸಲು ಅಸಮರ್ಥವಾಗಿರುವ ಬಿಡಿಎ, ಬಿಬಿಎಂಪಿ,ಅಧಿಕಾರಿಗಳು ಶಾಸಕಾಂಗ ಸಮಿತಿಯ ಸಭೆಯ ಮುಂದೆ ಹಾಜರಾಗುವಂತೆ ನೋಟಿಸ್ ನೀಡದರೂ ನಿರ್ಲಕ್ಷಿಸಿರುವುದು ಅವರ ಉದ್ಧಟತನಕ್ಕೆ ಸಾಕ್ಷಿಯಾಗಿದೆ ಎಂದು ಸಮಿತಿ ಅಭಿಪ್ರಾಯಪಟ್ಟಿದ್ದು, ಈ ಗೈರು ಹಾಜರಿಯನ್ನು ಗಂಭೀರವಾಗಿ ಪರಿಗಣಿಸಿದೆ ಎನ್ನಲಾಗಿದೆ.
2652 ಎಕರೆಯಲ್ಲಿ ನಾಡಪ್ರಭು ಕೆಂಪೇಗೌಡ ಲೇಔಟ್ ಮೂಲಸೌಕರ್ಯ ಕಾಮಗಾರಿ ಪೂರ್ಣಗೊಳಿಸಲು ಅಡಚಣೆಗಳು
ಅನುಮೋದನೆಗಳು:
1. ವೇರಿಯೇಷನ್ ಕ್ವಾಂಟಿಟಿ ಅಂತಿಮ ಅನುಮೋದನೆ.
2. ಒಟ್ಟಾರೆ 5km ರಾಜಕಾಲುವೆ, 36 ಕಿರು ಸೇತುವೆಗಳ ನಿರ್ಮಾಣ ಅನುಮೋದನೆ
3. 60 ಅಡಿಗಿಂತ ಕೆಳಗಿನ ವಿಸ್ತೀರ್ಣದ ರಸ್ತೆಗಳಿಗೆ ಮೆಟಾಲಿಂಗ್ ಮತ್ತು ಡಾಂಬರೀಕರಣ ಅನುಮೋದನೆ,ಟೆಂಡರ್
4. CDP ರಸ್ತೆ ರಚನೆಯ ಅನುಮೋದನೆಗಳು
ಭೂ ಸ್ವಾಧೀನ:
1. ಮೇಜರ್ ಆರ್ಟೀರಿಯಲ್ ರಸ್ತೆಯನ್ನು ರೂಪಿಸಲು 68 ಎಕರೆ ಭೂಸ್ವಾಧೀನ ಬಾಕಿ
2. 4040 ಎಕರೆಗಳಲ್ಲಿ ಒಟ್ಟು 1300 ಎಕರೆಗಿಂತ ಹೆಚ್ಚಿನ ಭೂಸ್ವಾಧೀನ ಬಾಕಿ
3. ಮೂಲಸೌಕರ್ಯ ನಿರಂತರತೆಗಾಗಿ 28 ಎಕರೆ ಹೊಸ ಭೂಸ್ವಾಧೀನ
Published On - 9:53 pm, Thu, 13 October 22