ಬೆಂಗಳೂರು: ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ನಿವಾಸಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೇಟಿ ನೀಡಿದ್ದಾರೆ. ಜಮೀರ್ ನಿವಾಸದ ಮೇಲೆ ಇಡಿ ದಾಳಿ ಬಳಿಕ ಸಿದ್ದರಾಮಯ್ಯ ನೀಡಿದ ಮೊದಲ ಭೇಟಿ ಇದಾಗಿದೆ. ಇಡಿ ದಾಳಿ ನಂತರ ಇಬ್ಬರೂ ದೂರವಾಗಿದ್ದಾರೆಂಬ ಆರೋಪ ರಾಜಕೀಯ ವಲಯದಲ್ಲಿ ಕೇಳಿಬಂದಿತ್ತು. ಆದರೆ, 2 ದಿನದ ಹಿಂದೆ ಜಮೀರ್ ಸಿದ್ದರಾಮಯ್ಯಗೆ ಕರೆ ಮಾಡಿದ್ದರು. ಬಳಿಕ, ನಿನ್ನೆ (ಆಗಸ್ಟ್ 14) ಸಂಜೆ ಸಿದ್ದರಾಮಯ್ಯ ನಿವಾಸಕ್ಕೆ ತೆರಳಿದ್ದರು. ಮನೆಗೆ ಬರುವಂತೆ ಆಹ್ವಾನ ನೀಡಿದ್ದರು. ಜಮೀರ್ ಆಹ್ವಾನದ ಬೆನ್ನಲ್ಲೇ ಇಂದು ಸಿದ್ದರಾಮಯ್ಯ ಭೇಟಿ ನಿಡಿದ್ದಾರೆ. ಜಮೀರ್ ನಿವಾಸದಲ್ಲಿ ಊಟ ಮಾಡಿದ್ದಾರೆ. ಇದೇ ವೇಳೆ ಜಮೀರ್ ನಿವಾಸಕ್ಕೆ ಬೆಂಗಳೂರಿನ ಹೆಬ್ಬಾಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಭೈರತಿ ಸುರೇಶ್ ಭೇಟಿ ಕೊಟ್ಟಿದ್ದಾರೆ.
ಶಾಸಕ ಜಮೀರ್ ಅಹ್ಮದ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ ವೇಳೆ, ಸಿದ್ದರಾಮಯ್ಯ, ಜಮೀರ್ ಅಹ್ಮದ್ ಹಾಗೂ ಭೈರತಿ ಸುರೇಶ್ ಪ್ರತ್ಯೇಕ ಚರ್ಚೆ ನಡೆಸಿದ್ದಾರೆ. ಜಮೀರ್ ನಿವಾಸದ ಪ್ರತ್ಯೇಕ ಕೊಠಡಿಯಲ್ಲಿ ಸಮಾಲೋಚನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ಜತೆ ಪ್ರತ್ಯೇಕ ಚರ್ಚೆ ನಡೆಸಿರುವ ಜಮೀರ್, ಸಿಬ್ಬಂದಿಯನ್ನು ಕೊಠಡಿಯಿಂದ ಹೊರ ಕಳಿಸಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ಮಾತನಾಡಿದ ಸಿದ್ದರಾಮಯ್ಯ, ಜಮೀರ್ ಅಹ್ಮದ್ ಜೊತೆ ಯಾವುದೇ ರಾಜಕೀಯ ಚರ್ಚೆ ನಡೆಸಿಲ್ಲ. ಜಮೀರ್ ಮನೆ ಮೇಲೆ ಇಡಿ ದಾಳಿ ರಾಜಕೀಯ ಪ್ರೇರಿತ. ಅದನ್ನು ಜಮೀರ್ ವಕೀಲರು, ಅವರ ಅಕೌಂಟೆಂಟ್ ನೋಡಿಕೊಳ್ತಾರೆ. ಪಕ್ಷದ ವಿಚಾರಗಳ ಬಗ್ಗೆ ಜಮೀರ್ ಜತೆ ಚರ್ಚೆ ಮಾಡಿದ್ದೇವೆ ಎಂದು ತಿಳಿಸಿದ್ದಾರೆ. ಜಮೀರ್, ಮನೆ ಗೃಹ ಪ್ರವೇಶಕ್ಕೆ ಕರೆದಿದ್ರು. ಆದ್ರೆ ಗೃಹ ಪ್ರವೇಶಕ್ಕೆ ಬರೋದ್ದಕ್ಕೆ ಆಗಲಿಲ್ಲ. ಆಮೇಲೆ, ಪದೇ ಪದೇ ಕರೆಯುತ್ತಿದ್ದ. ನಿನ್ನೆ ಕೂಡ ಕರೆದಿದ್ದ, ಅದಕ್ಕಾಗಿ ಇಂದು ಊಟಕ್ಕೆ ಬಂದಿದ್ದೆ ಅಷ್ಟೇ. ಯಾವುದೇ ರಾಜಕೀಯ ಚರ್ಚೆ ಆಗಿಲ್ಲ ಎಂದು ಸಿದ್ಧರಾಮಯ್ಯ ಹೇಳಿದ್ದಾರೆ.
ಶಾಸಕ ಜಮೀರ್ ಅಹ್ಮದ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ ವೇಳೆ ಶಾಸಕ ಜಮೀರ್, ಸಿದ್ದರಾಮಯ್ಯ ಮುಂದೆ ಅಲವತ್ತುಕೊಂಡಿದ್ದಾರೆ ಎಂದು ತಿಳಿದುಬಂದಿದೆ. ನಿಮ್ಮ ಬಗ್ಗೆ ಅಸಮಾಧಾನ ಮಾಡಿಕೊಂಡಿಲ್ಲ. ನಿಮ್ಮ ಬಗ್ಗೆ ತಪ್ಪು ಸಹ ತಿಳಿದುಕೊಂಡಿಲ್ಲ ಎಂದು ಶಾಸಕ ಜಮೀರ್ ಹೇಳಿದ್ದಾರೆ. ಈ ವೇಳೆ ಜಮೀರ್‌ರನ್ನು ಸಿದ್ದರಾಮಯ್ಯ ಸಮಾಧಾನಪಡಿಸಿದ್ದಾರೆ. ನೀನು ಟೆನ್ಷನ್‌ನಲ್ಲಿರುತ್ತೀಯಾ ಎಂದು ಫೋನ್ ಮಾಡಿರಲಿಲ್ಲ. ನಿಮ್ಮ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ನಮ್ಮ ನಡುವೆ ಭಿನ್ನಾಭಿಪ್ರಾಯವಿದೆ ಎಂದು ಮಾತಾಡುತ್ತಿದ್ದಾರೆ. ನಮ್ಮ ಪಕ್ಷದವರೇ ಭಿನ್ನಾಭಿಪ್ರಾಯ ಇದೆ ಎಂದು ಹೇಳ್ತಿದ್ದಾರೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲ್ಲ ಎಂದ ಸಿದ್ದರಾಮಯ್ಯ. ಅಕ್ರಮದ ಹಣದಿಂದ ಮನೆ ಕಟ್ಟಿದ್ದೀನೆಂದು ಅಪಪ್ರಚಾರ ಆಗುತ್ತಿದೆ. ಇದೆಲ್ಲಾ ಸುಳ್ಳು ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ತಿಳಿಸಿದ್ದಾರೆ. ಈ ವೇಳೆ ನನಗೆ ಎಲ್ಲಾ ಗೊತ್ತು ಬಿಡು ಎಂದ ಸಿದ್ದರಾಮಯ್ಯ, ಇಡಿ ಅಧಿಕಾರಿಗಳ ದಾಳಿ ಬಗ್ಗೆ ವಕೀಲರ ಜತೆ ಚರ್ಚೆ ಮಾಡು. ಹಿರಿಯ ವಕೀಲರನ್ನು ಸಂಪರ್ಕಿಸಿ ಸಮಸ್ಯೆ ಬಗೆಹರಿಸಿಕೊಳ್ಳಿ. ಇಡಿ ಬಳಸಿಕೊಂಡು ಬಿಜೆಪಿ ನಿನ್ನ ಮೇಲೆ ರೇಡ್ ಮಾಡಿಸಿದೆ. ತಡ ಮಾಡಬೇಡ, ಎಲ್ಲಾ ದಾಖಲೆಗಳನ್ನು ಸರಿ ಮಾಡಿಕೊಳ್ಳಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಶಾಸಕ ಜಮೀರ್ ಅಹ್ಮದ್ಗೆ ಮಾರ್ಗದರ್ಶನ ನೀಡಿದ್ದೇನೆ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್
ಸಿದ್ದರಾಮಯ್ಯ ಬಾಯಲ್ಲಿ ಉಲ್ಟಾ ಮಚ್ಚೆ ಇದೆ; ಹೇಳಿದ್ದು ಉಲ್ಟಾ ಆಗುತ್ತೆ: ಸಿ ಟಿ ರವಿ
(Congress Leader Siddaramaiah meet MLA Zameer Ahmed at his Residence with Bhairathi Suresh)
Published On - 4:07 pm, Sun, 15 August 21