ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ (BMTC) ಬಸ್ ಕಂಡಕ್ಟರ್ ಟಿಕೆಟ್ನ ಉಳಿದ ಮೊತ್ತ 1ರೂ. ಅನ್ನು ಪ್ರಯಾಣಿಕನಿಗೆ ನೀಡದ ಹಿನ್ನೆಲೆ, ಗ್ರಾಹಕ ನ್ಯಾಯಾಲಯ (Consumer court) ಬಿಎಂಟಿಸಿ ಇಲಾಖೆಗೆ ಪರಿಹಾರ ರೂಪದಲ್ಲಿ ಪ್ರಯಾಣಿಕನಿಗೆ 3000 ರೂ ನೀಡುವಂತೆ ಸೂಚನೆ ನೀಡಿದೆ. ಕಂಡಕ್ಟರ್ ಬಾಕಿ 1ರೂ. ನೀಡದ ಹಿನ್ನೆಲೆ ರಮೇಶ್ ನಾಯಕ್ ಎಂಬುವರು ಜಿಲ್ಲಾ ಗ್ರಾಹಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ನ್ಯಾಯಾಲಯ, ಪ್ರಯಾಣಿಕನಿಗೆ ಉಳಿದ 1 ರೂ. ಜೊತೆಗೆ ಪರಿಹಾರ 3000 ರೂ ಮತ್ತು ವ್ಯಾಜ್ಯದ ವೆಚ್ಚವಾಗಿ 1000 ರೂ. ಅನ್ನು 45 ದಿನಗಳ ಒಳಗಾಗಿ ನೀಡಬೇಕೆಂದು ಆದೇಶ ಹೊರಡಿಸಿದೆ.
2019 ರಲ್ಲಿ ರಮೇಶ್ ನಾಯಕ್ ಶಾಂತಿನಗರದಿಂದ ಮೆಜೆಸ್ಟಿಕ್ ಬಸ್ ಡಿಪೋಗೆ ಪ್ರಯಾಣಿಸುತ್ತಿದ್ದರು. ಟಿಕೆಟ್ ದರ 29 ರೂ. ಇದ್ದು, ನಾಯಕ್ ಕಂಡಕ್ಟರ್‌ಗೆ 30 ರೂ.ಗಳನ್ನು ನೀಡಿದ್ದರು. ಆದರೆ ಬಾಕಿ 1 ರೂ. ಅನ್ನು ಕಂಡಕ್ಟರ್ ಹಿಂತಿರುಗಿಸಿರಲಿಲ್ಲ. ಇದನ್ನು ಕೇಳಿದಾಗ ಬಿಎಂಟಿಸಿ ಸಿಬ್ಬಂದಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು ಎಂದು ಹೇಳಲಾಗುತ್ತದೆ.
ಇದರಿಂದ ನೊಂದ ರಮೇಶ್ ನಾಯಕ್ 2019 ರಲ್ಲಿ 15,000 ರೂಪಾಯಿ ಪರಿಹಾರವನ್ನು ಕೋರಿ ಗ್ರಾಹಕ ನ್ಯಾಯಾಲಯದಲ್ಲಿ ದಾವೆ ಹೂಡಿದರು. 3 ವರ್ಷಗಳ ನಂತರ, ನ್ಯಾಯಾಲಯವು ರಮೇಶ್ ನಾಯಕ್ ಪರವಾಗಿ ಆದೇಶ ನೀಡಿದೆ. ಅಲ್ಲದೇ ನಾಯಕ್ ಅವರನ್ನು ಶ್ಲಾಘಿಸಿದ ನ್ಯಾಯಾಲಯ, ಇದು ಗ್ರಾಹಕರ ಹಕ್ಕಿನ ವಿಷಯವಾಗಿ ಮೆಚ್ಚುಗೆ ಮತ್ತು ಮಾನ್ಯತೆ ಪಡೆಯಬೇಕು. ಅಂತಹ ಸಂದರ್ಭದಲ್ಲಿ ದೂರುದಾರರು ಪರಿಹಾರದ ಮರುಪಾವತಿಗೆ ಅರ್ಹರಾಗಿರುತ್ತಾರೆ ಎಂದು ಹೇಳಿದೆ.
ಆದೇಶವನ್ನು ಪಾಲಿಸದಿದ್ದರೆ, ಗ್ರಾಹಕ ಸಂರಕ್ಷಣಾ ಕಾಯ್ದೆಯ ಸೆಕ್ಷನ್ 72 ರ ಅಡಿಯಲ್ಲಿ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ದೂರುದಾರರಿಗೆ ಸ್ವಾತಂತ್ರ್ಯವಿದೆ ಎಂದು ನ್ಯಾಯಾಲಯ ಹೇಳಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ