NCERT: ಎನ್​ಸಿಇಆರ್​ಟಿ 6ನೇ ತರಗತಿ ಕನ್ನಡ ಪಠ್ಯಪುಸ್ತಕದ ವಿರುದ್ಧ ಆಕ್ರೋಶ: ಕೇಸರೀಕರಣದ ಆರೋಪ!

ಎನ್‌ಸಿಇಆರ್‌ಟಿ ಹೊರತಂದಿರುವ 6ನೇ ತರಗತಿಯ ತೃತೀಯ ಭಾಷೆ ಕನ್ನಡ ಪಠ್ಯಪುಸ್ತಕದ ವಿರುದ್ಧ ಶಿಕ್ಷಣ ತಜ್ಞರು ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಈ ಪಠ್ಯದಲ್ಲಿ ಕರ್ನಾಟಕದ ಸಾಂಸ್ಕೃತಿಕ ಹಾಗೂ ಪ್ರಾದೇಶಿಕ ವೈವಿಧ್ಯತೆಯನ್ನು ಕಡೆಗಣಿಸಲಾಗಿದೆ ಎಂದು PAFRE ಒಕ್ಕೂಟ ಆರೋಪಿಸಿದೆ. ಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಟ್ಟಿರುವುದು ಮತ್ತು ಮಾಂಸಾಹಾರಿ ಆಹಾರ ಪದ್ಧತಿಯನ್ನು ಕೈಬಿಟ್ಟಿರುವುದು ಪಠ್ಯದ ಕೇಸರೀಕರಣದ ಪ್ರಯತ್ನ ಎಂದು ಆಕ್ಷೇಪಿಸಿರುವ ಒಕ್ಕೂಟವು, ತಕ್ಷಣವೇ ಪಠ್ಯಪುಸ್ತಕವನ್ನು ಹಿಂಪಡೆಯಲು ಆಗ್ರಹಿಸಿದೆ.

NCERT: ಎನ್​ಸಿಇಆರ್​ಟಿ 6ನೇ ತರಗತಿ ಕನ್ನಡ ಪಠ್ಯಪುಸ್ತಕದ ವಿರುದ್ಧ ಆಕ್ರೋಶ: ಕೇಸರೀಕರಣದ ಆರೋಪ!
ಎನ್​ಸಿಇಆರ್​ಟಿ 6ನೇ ತರಗತಿ ಕನ್ನಡ ಪಠ್ಯಪುಸ್ತಕದ ವಿರುದ್ಧ ಆಕ್ರೋಶ

Updated on: Jun 24, 2026 | 12:01 PM

ಬೆಂಗಳೂರು, ಜೂನ್ 23: ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (NCERT) 6ನೇ ತರಗತಿಯ ತೃತೀಯ ಭಾಷೆ ಕನ್ನಡ ಪಠ್ಯಪುಸ್ತಕದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಈ ಪಠ್ಯಪುಸ್ತಕವು ಕರ್ನಾಟಕದ ಸಾಂಸ್ಕೃತಿಕ ಮತ್ತು ಪ್ರಾದೇಶಿಕ ವೈವಿಧ್ಯತೆಯನ್ನು ಪ್ರತಿಬಿಂಬಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಶಿಕ್ಷಣದ ಮೂಲಭೂತ ಹಕ್ಕಿಗಾಗಿ ಸಾರ್ವಜನಿಕ ಒಕ್ಕೂಟ (PAFRE) ಮಂಗಳವಾರ ಬಿಡುಗಡೆ ಮಾಡಿದ ಜಂಟಿ ಹೇಳಿಕೆಯಲ್ಲಿ ತೀವ್ರವಾಗಿ ಟೀಕಿಸಿದೆ.

ಮುಖ್ಯಾಂಶಗಳು

  • ಎನ್‌ಸಿಇಆರ್‌ಟಿ 6ನೇ ತರಗತಿ ಕನ್ನಡ ಪಠ್ಯಪುಸ್ತಕದ ವಿರುದ್ಧ ಶಿಕ್ಷಣ ತಜ್ಞರ ಆಕ್ರೋಶ.
  • ಪಠ್ಯಪುಸ್ತಕದಲ್ಲಿ ಕರ್ನಾಟಕದ ಪ್ರಾದೇಶಿಕ ಸಾಂಸ್ಕೃತಿಕ ವೈವಿಧ್ಯತೆ ಕಡೆಗಣಿಸಲಾಗಿದೆ ಎಂದು ಆರೋಪ.
  • ಮಾಂಸಾಹಾರಿ ಆಹಾರ ಪದ್ಧತಿ ನಿರ್ಲಕ್ಷಿಸಿ ಪಠ್ಯ ಕೇಸರೀಕರಣಗೊಳಿಸಲು ಯತ್ನ ನಡೆದಿದೆ ಎಂದು ಆಕ್ಷೇಪ.

ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಕಡೆಗಣನೆ

ಒಕ್ಕೂಟದ ಮುಖ್ಯ ಸಂಚಾಲಕರಾದ ಪ್ರೊ. ನಿರಂಜನಾರಾಧ್ಯ ವಿ.ಪಿ. ಅವರು ಮಾತನಾಡಿ, ಈ ಪಠ್ಯಪುಸ್ತಕದಲ್ಲಿ ಕರ್ನಾಟಕದ ಸಾಮಾಜಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಬಿಂಬಿಸುವ ಯಾವುದೇ ಪಾಠಗಳಿಲ್ಲ. ಕರಾವಳಿ ಕರ್ನಾಟಕ, ಉತ್ತರ ಕರ್ನಾಟಕ, ಮಲೆನಾಡು ಮತ್ತು ಹಳೆಯ ಮೈಸೂರು ಭಾಗದ ಜಾನಪದ, ಸಾಹಿತ್ಯ ಹಾಗೂ ಜೀವನಶೈಲಿಯನ್ನು ಸಂಪೂರ್ಣವಾಗಿ ಕೈಬಿಡಲಾಗಿದೆ. ಇಡೀ ಪಠ್ಯಪುಸ್ತಕದ ನಿರೂಪಣೆಯು ಅತ್ಯಂತ ನೀರಸವಾಗಿದ್ದು, ಕೇವಲ ಬೋಧನಾತ್ಮಕ ಧಾಟಿಯಲ್ಲಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ಪಠ್ಯಪುಸ್ತಕಕ್ಕೆ ‘ಕೃಷ್ಣ’ ಎಂದು ಹೆಸರಿಟ್ಟಿರುವುದು ಎನ್‌ಸಿಇಆರ್‌ಟಿಯ ಕೇಸರೀಕರಣದ ಪ್ರಯತ್ನದ ಒಂದು ಭಾಗವಾಗಿದೆ ಎಂದು ಅವರು ಆರೋಪಿಸಿದ್ದಾರೆ. ಪಂಪ, ಕುವೆಂಪು, ಕಾರಂತ ಮತ್ತು ಬಸವಣ್ಣನವರ ಸೌಹಾರ್ದಯುತ ಸಿದ್ಧಾಂತ ಹಾಗೂ ಚಿಂತನೆಗಳಲ್ಲಿ ಕರ್ನಾಟಕದ ಅಸ್ಮಿತೆ ಅಡಗಿದೆ. ಆದರೆ ಎನ್‌ಸಿಇಆರ್‌ಟಿ ಧರ್ಮ ಆಧಾರಿತ ರಾಜಕಾರಣವನ್ನು ಮುನ್ನೆಲೆಗೆ ತರುತ್ತಿದ್ದು, ರಾಜ್ಯದ ಸಾಂಸ್ಕೃತಿಕ ಮತ್ತು ವೈಚಾರಿಕ ಪರಂಪರೆಯನ್ನು ನಿರ್ಲಕ್ಷಿಸಿ ಪುಸ್ತಕಕ್ಕೆ ಧಾರ್ಮಿಕ ಹೆಸರು ಇಟ್ಟಿರುವುದು ಖಂಡನೀಯ ಎಂದು ನಿರಂಜನಾರಾಧ್ಯ ಹೇಳಿದ್ದಾರೆ.

ಆಹಾರ ಪದ್ಧತಿಯಲ್ಲಿ ತಾರತಮ್ಯದ ಆರೋಪ

ಪಠ್ಯಪುಸ್ತಕದಲ್ಲಿರುವ ಆರೋಗ್ಯವೇ ಭಾಗ್ಯ ಎಂಬ ಪಾಠದ ವಿರುದ್ಧವೂ ಒಕ್ಕೂಟವು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಪಾಠದಲ್ಲಿ ತೋರಿಸಲಾಗಿರುವ ಆಹಾರದ ತಟ್ಟೆಯಲ್ಲಿ ಕೇವಲ ರೊಟ್ಟಿ, ಅನ್ನ, ತರಕಾರಿ, ಹಾಲು ಮತ್ತು ಹಣ್ಣುಗಳನ್ನು ಮಾತ್ರ ಚಿತ್ರಿಸಲಾಗಿದೆ. ಆದರೆ ಮಾಂಸಾಹಾರಿ ಆಹಾರಗಳಾದ ಮೊಟ್ಟೆ, ಮೀನು ಮತ್ತು ಮಾಂಸವನ್ನು ಸಂಪೂರ್ಣವಾಗಿ ಹೊರಗಿಡಲಾಗಿದೆ.

ಕರ್ನಾಟಕ ಎಂದರೆ ಕೇವಲ ರಾಗಿ ಮುದ್ದೆ ಮತ್ತು ಬಸ್ಸಾರು ಮಾತ್ರವೇ? ಇಲ್ಲಿ ಕೋಟ್ಯಂತರ ಜನ ಪಾಂಡಿ ಕರಿ, ಮೀನಿನ ಸಾರು ಹಾಗೂ ಖೀಮಾ ಉಂಡೆಗಳನ್ನು ಸೇವಿಸುತ್ತಾರೆ. ಕರಾವಳಿಯ ಮಗು ತಿನ್ನುವ ಮೀನು ಅಥವಾ ಉತ್ತರ ಕರ್ನಾಟಕದ ಮಗು ತಿನ್ನುವ ಜೋಳದ ರೊಟ್ಟಿ, ಎಣ್ಣೆ ಬದನೆಕಾಯಿ ಎಲ್ಲಿ ಹೋಗಿದೆ? ಇದು ಉದ್ದೇಶಪೂರ್ವಕವಾಗಿ ಮಾಂಸಾಹಾರದ ಆಹಾರ ಪದ್ಧತಿಯನ್ನು ನಿರ್ಲಕ್ಷಿಸುವ ಮತ್ತು ಒಂದು ನಿರ್ದಿಷ್ಟ ಸೌರಭವನ್ನು ಹೇರುವ ಪ್ರಯತ್ನವಾಗಿದೆ ಎಂದು ಪ್ರೊ. ನಿರಂಜನಾರಾಧ್ಯ ಆರೋಪಿಸಿದ್ದಾರೆ.

ಇದನ್ನೂ ಓದಿ ನ್ಯಾಯಾಂಗಕ್ಕೆ ಅಗೌರವ ತೋರುವ ಉದ್ದೇಶವಿಲ್ಲ; NCERT ಪಠ್ಯಪುಸ್ತಕ ವಿವಾದದ ತನಿಖೆಗೆ ಕೇಂದ್ರ ಸರ್ಕಾರ ಆದೇಶ

ಪಠ್ಯ ಹಿಂಪಡೆಯಲು ಆಗ್ರಹ

ಶಾಲಾ ಪಠ್ಯಪುಸ್ತಕಗಳಲ್ಲಿ ರಾಜಕೀಯ ಪ್ರೇರಿತ ಮತ್ತು ಏಕಪಕ್ಷೀಯ ವಿಷಯಗಳನ್ನು ಸೇರಿಸಿರುವುದನ್ನು PAFRE ತೀವ್ರವಾಗಿ ಖಂಡಿಸಿದೆ. ತಕ್ಷಣವೇ ಈ ವಿವಾದಾತ್ಮಕ ಕನ್ನಡ ಪಠ್ಯಪುಸ್ತಕವನ್ನು ಎನ್‌ಸಿಇಆರ್‌ಟಿ ಹಿಂಪಡೆಯಬೇಕು ಮತ್ತು ಈ ನಡೆಯ ಕುರಿತು ಸಾರ್ವಜನಿಕರಿಗೆ ಸೂಕ್ತ ವಿವರಣೆ ನೀಡಬೇಕು ಎಂದು ಒಕ್ಕೂಟವು ಕಟ್ಟುನಿಟ್ಟಾಗಿ ಆಗ್ರಹಿಸಿದೆ. ಈ ವಿವಾದವು ಮುಂಬರುವ ದಿನಗಳಲ್ಲಿ ಶಿಕ್ಷಣ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗುವ ಸಾಧ್ಯತೆಯಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us