ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ವಿಜಯನಗರದ ಹಂಪಿನಗರದ ಮನೆಯೊಂದರಲ್ಲಿ ಭಾರಿ ನಿಗೂಢ ಸ್ಫೋಟವಾಗಿದ್ದು ದಂಪತಿಗೆ ಗಾಯಗಳಾಗಿರುವ ಘಟನೆ ನಡೆದಿದೆ. ತಡರಾತ್ರಿ 12.45ರ ಸುಮಾರಿಗೆ 2 ಮಹಡಿ ಕಟ್ಟಡದ ಮೊದಲ ಮಹಡಿ ಮನೆಯಲ್ಲಿ ಸ್ಫೋಟ ಸಂಭವಿಸಿದೆ.
ಹಂಪಿನಗರದ ಎರಡು ಅಂತಸ್ತಿನ ಮನೆಯೊಂದರ ಮೊದಲ ಮಹಡಿಯಲ್ಲಿ ತಡರಾತ್ರಿ 12.45ರ ಸುಮಾರಿಗೆ ನಿಗೂಢ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಸೂರ್ಯನಾರಾಯಣ ಶೆಟ್ಟಿ, ಪತ್ನಿ ಪುಷ್ಪಾವತಮ್ಮಗೆ ಗಾಯಗಳಾಗಿದ್ದು ಗಾಯಾಳು ವೃದ್ಧ ದಂಪತಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಫೋಟದ ರಭಸಕ್ಕೆ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿವೆ. ಹಾಗೂ ಅಕ್ಕಪಕ್ಕದ ಮನೆ ಗಾಜುಗಳು ಪುಡಿ, ಪುಡಿಯಾಗಿದ್ದು ಗೋಡೆಗಳು ಬಿರುಕು ಬಿಟ್ಟಿವೆ.
ನಿಗೂಢ ಸ್ಫೋಟದಿಂದ 5ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾಗಿದೆ. ಮನೆಯ ಮುಂದೆ ಹಾದುಹೋಗಿದ್ದ ವಿದ್ಯುತ್ ತಂತಿ ಕಟ್ ಆಗಿದೆ. ಸುಮಾರು 1 ಕಿ.ಮೀ.ವರೆಗೂ ಸ್ಫೋಟದ ಸದ್ದು ಕೇಳಿಸಿದೆ. ಸದ್ಯ ಸ್ಥಳಕ್ಕೆ ವಿಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮನೆಯ ಡೋರ್, ಗ್ರಿಲ್ ಛಿದ್ರ ಛಿದ್ರವಾಗಿದೆ. ಈ ವೇಳೆ ವಿದ್ಯುತ್ ತಂತಿ ಕಟ್ ಆಗಿ ತಕ್ಷಣ ಏರಿಯಾದಲ್ಲಿ ಕರೆಂಟ್ ಕಟ್ ಆಗಿ ಕತ್ತಲೇ ಆವರಿಸಿದೆ.ಘಟನೆ ಸಂಭವಿಸಿದ ಮೊದ ಮೊದಲು ಸಿಲಿಂಡರ್ ಸ್ಫೋಟ ಎಂದು ಹೇಳಲಾಗಿತ್ತು. ಆದರೆ ಮನೆಯಲ್ಲಿದ್ದ 2 ಸಿಲಿಂಡರ್ಗಳು ಸೇಫ್ ಆಗಿವೆ. ಇತ್ತೀಚೆಗೆ ಸೂರ್ಯನಾರಾಯಣ ಶೆಟ್ಟಿ ದಂಪತಿ ಪುತ್ರ ದಿನೇಶ್ ಒಂದು ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದ. ಅದರ ಬ್ಯಾಟರಿ ಏನಾದ್ರು ಬ್ಲಾಸ್ಟ್ ಆಗಿದ್ಯಾ ಎಂಬ ಶಂಕೆ ಉಂಟಾಗಿ ಪರಿಶೀಲನೆ ನಡೆಸಿದ್ರು. ಆದರೆ ಬ್ಯಾಟರಿ ಕೂಡ ಸೇಫ್ ಆಗಿದೆ. ಮನೆಯಲ್ಲಿ ಯಾವ ವಸ್ತುವಿನಿಂದ ಸ್ಫೋಟವಾಗಿದೆ ಎಂಬುವುದೇ ತಿಳಿಯುತ್ತಿಲ್ಲ.
ಇದನ್ನೂ ಓದಿ:ಹೃದಯ ಸಂಬಂಧಿ ಚಿಕಿತ್ಸೆ ಕೊಡಿಸಲು ವಿದ್ಯಾರ್ಥಿಯನ್ನು ಬೆಂಗಳೂರಿಗೆ ಕರೆಸಿಕೊಂಡ ಗೋವಿಂದ ಕಾರಜೋಳ
Published On - 6:48 am, Mon, 16 August 21