ಬೆಂಗಳೂರು, ಸೆ.2: ವಿವಿಧ ಬೇಡಿಕೆಗಳನ್ನು ಈಡೇರಿಸಲು ನೀಡಿದ್ದ ಗಡುವನ್ನು ಕ್ಯಾರೇ ಎನ್ನದ ಕರ್ನಾಟಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಖಾಸಗಿ ಸಾರಿಗೆ ಒಕ್ಕೂಟಗಳು ಬಂದ್ಗೆ ಕರೆ ನೀಡಿವೆ. ಈ ವಿಚಾರವಾಗಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ (D.K.Shivakumar), ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ಬಸ್ಗಳೇ ಇಲ್ಲ, ಖಾಸಗಿ ಬಸ್ಗಳೇ ಇವೆ. ಇಂತಹ ಕಡೆಗಳಲ್ಲಿ ಏನಾದರೂ ಉಪಾಯ ಮಾಡುತ್ತೇವೆ ಎಂದರು.
ಖಾಸಗಿ ಸಾರಿಗೆ ಒಕ್ಕೂಟಗಳು ಬಂದ್ಗೆ ಕರೆ ನೀಡಿದ ವಿಚಾರವಾಗಿ ನಗರದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಖಾಸಗಿ ಸಾರಿಗೆಯಲ್ಲಿ ಯಾರೂ ಹೋಗುತ್ತಿಲ್ಲ ಎಂದು ಗೊತ್ತಿದೆ. ಅದಕ್ಕೆ ಒಂದು ಉಪಾಯ ಕಂಡು ಹಿಡಿಯಬೇಕು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರ ಜೊತೆ ಮಾತನಾಡುತ್ತೇನೆ. ಕೆಲವು ಜಿಲ್ಲೆಗಳಲ್ಲಿ ಸರ್ಕಾರಿ ಬಸ್ಗಳೇ ಇಲ್ಲ, ಖಾಸಗಿ ಬಸ್ಗಳೇ ಇವೆ. ಅದಕ್ಕೆ ಏನಾದರೂ ಉಪಾಯ ಮಾಡುತ್ತೇವೆ ಎಂದರು.
ಇದನ್ನೂ ಓದಿ: Cauvery Dispute: ವಿಪಕ್ಷದವರು ಹೇಳಿದ ಪ್ರಕಾರ ನೀರು ನಿಲ್ಲಿಸಲು ಆಗುವುದಿಲ್ಲ: ಡಿಕೆ ಶಿವಕುಮಾರ್
ಸಚಿವರ ವಿರುದ್ಧ ಕಾಂಗ್ರೆಸ್ನ ಕೆಲ ಶಾಸಕರ ಅಸಮಾಧಾನ ಹೊರಹಾಕಿದ ವಿಚಾರವಾಗಿ ಮಾತನಾಡಿದ ಡಿಕೆ ಶಿವಕುಮಾರ್, ಯಾವ ಶಾಸಕನೂ ಅಸಮಾಧಾನ ಹೊರಹಾಕಿಲ್ಲ. ಎಲ್ಲ ನೀವೇ ಕ್ರಿಯೆಟ್ ಮಾಡುತ್ತಾ ಇದ್ದೀರಿ. ನಮ್ಮ ಪಕ್ಷದಲ್ಲಿ ಶಿಸ್ತು ಇದೆ. ಶಾಸಕರು ತಮ್ಮ ನೋವನ್ನು ತೋಡಿಕೊಳ್ಳಬಾರದಾ? ಅದರಲ್ಲಿ ತಪ್ಪೇನಿದೆ? ಯಾವ ತಪ್ಪೂ ಇಲ್ಲ ಎಂದರು.
ಇಂದು ಇಸ್ರೋದಿಂದ ಆದಿತ್ಯ ಎಲ್-1 ಉಡಾವಣೆ ಹಿನ್ನೆಲೆ ಇಸ್ರೋಗೆ ಡಿಸಿಎಂ ಡಿಕೆ ಶಿವಕುಮಾರ್ ಶುಭಹಾರೈಸಿದರು. ಕರ್ನಾಟಕದಿಂದ ಭಾರತಕ್ಕೆ ಗೌರವ ತರುವ ಕೆಲಸ ನಮ್ಮ ಇಸ್ರೋ ಮಾಡುತ್ತಿದೆ. ದೊಡ್ಡ ಪ್ರಯೋಗ, ಪ್ರಯತ್ನ, ಸಾಹಸ ಎಲ್ಲಾವೂ ಕೂಡ ಮಾಡುತ್ತಿದೆ. ಯಶಸ್ಸು ಸಿಗಲಿ ಎಂದು ನಾನು ಶುಭ ಹಾರೈಸುತ್ತೇನೆ ಎಂದರು.
ಇಡೀ ದೇಶದ ಜನ ಇಸ್ರೋ ಸಾಧನೆ ಯಶಸ್ವಿಗೆ ಪ್ರಾರ್ಥನೆ ಮಾಡುತ್ತಿದ್ದಾರೆ. ಇಡೀ ವಿಶ್ವದಲ್ಲೇ ನಮ್ಮ ಇಸ್ರೋ ಬಹಳ ಶ್ರಮದಿಂದ, ಸಂಪೂರ್ಣವಾದ ಜ್ಞಾನ ಭಂಡಾರದಿಂದ ಹಾಗೂ ಅನುಭವದಿಂದ ಒಳ್ಳೆ ಕೆಲಸ ಮಾಡುತ್ತಿದೆ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:52 am, Sat, 2 September 23