ಆಪರೇಷನ್ ಕಮಲಕ್ಕೆ ಎಲ್ಲಿಂದ ಹಣ ಬರುತ್ತಿದೆ? ಬಿಎಲ್ ಸಂತೋಷ್ ಉತ್ತರಿಸಲಿ ಎಂದ ಪ್ರಿಯಾಂಕ್ ಖರ್ಗೆ

40-45 ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ಹೇಳಿಕೆ ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಆಪರೇಷನ್ ಕಮಲಕ್ಕೆ ಎಲ್ಲಿಂದ ಹಣ ಬರುತ್ತಿದೆ? ಇದಕ್ಕೆ ಬಿಎಲ್ ಸಂತೋಷ್ ಉತ್ತರ ನೀಡಲಿ ಎಂದರು.

ಆಪರೇಷನ್ ಕಮಲಕ್ಕೆ ಎಲ್ಲಿಂದ ಹಣ ಬರುತ್ತಿದೆ? ಬಿಎಲ್ ಸಂತೋಷ್ ಉತ್ತರಿಸಲಿ ಎಂದ ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ ಮತ್ತು ಬಿಎಲ್ ಸಂತೋಷ್
Follow us
Anil Kalkere
| Updated By: Rakesh Nayak Manchi

Updated on: Sep 02, 2023 | 12:33 PM

ಬೆಂಗಳೂರು, ಸೆ.2: ಆಪರೇಷನ್ ಕಮಲಕ್ಕೆ ಎಲ್ಲಿಂದ ಹಣ ಬರುತ್ತಿದೆ? ಇದಕ್ಕೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ (B.L.Santhosh) ಅವರೇ ಉತ್ತರ ನೀಡಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದ್ದಾರೆ. 40-45 ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಎಲ್ ಸಂತೋಷ್ ಹೇಳಿಕೆ ನೀಡಿದ್ದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಿಯಾಂಕ್ ಖರ್ಗೆ, ಮೊದಲು ಅವರ ಶಾಸಕರು, ಸಂಸದರನ್ನು ಸಂಪರ್ಕದಲ್ಲಿ ಇಟ್ಟುಕೊಳ್ಳಲಿ. ಬಳಿಕ ಕಾಂಗ್ರೆಸ್ ಶಾಸಕರ ಬಗ್ಗೆ ಮಾತನಾಡಲಿ ಎಂದರು. ಅಲ್ಲದೆ, ಒಂದು ದಿನ ಅಲ್ಲ ಒಂದು ತಿಂಗಳ ಸಮಯ ನೀಡುತ್ತೇನೆ. 45 ಶಾಸಕರಲ್ಲ, ನಾಲ್ಕು ಜನ ಶಾಸಕರನ್ನು ಕರೆದುಕೊಂಡು ಹೋಗಿ ನೋಡೋಣ ಎಂದು ಸವಾಲು ಹಾಕಿದರು.

ಆರ್​ಎಸ್​ಎಸ್​​ನವರು ಯಾವುದೇ ಪಕ್ಷದ ಜೊತೆ ಗುರುತಿಸಿಕೊಂಡಿಲ್ಲ ಎಂದು ಹೇಳುತ್ತಾರೆ. ಆದರೆ ಬಿಜೆಪಿ ಪಕ್ಷದಲ್ಲಿ ಹೋಗಿ ಪಾಠ ಹೇಳುತ್ತಾರೆ ಎಂದು ಹೇಳಿದ ಪ್ರಿಯಾಂಕ್ ಖರ್ಗೆ, ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಲಿಂಗಾಯತ ಸಮುದಾಯಕ್ಕೆ ಟಿಕೆಟ್ ನೀಡಲಿಲ್ಲ. ಸಂತೋಷ್ ಪಡೆ ಕಟ್ಟಲು ಲಿಂಗಾಯತರಿಗೆ ಟಿಕೆಟ್ ನೀಡಿಲ್ಲ. ಅದು ವಿಫಲವಾಯಿತು ಎಂದು ನಿಮ್ಮ ಮಾಜಿ ಶಾಸಕರು ಹೇಳುತ್ತಿದ್ದಾರೆ. ಅದಕ್ಕೆ ಮೊದಲು ಸಂತೋಷ್ ಉತ್ತರ ನೀಡಲಿ, ನಂತರ ಶಾಸಕರ ಬಗ್ಗೆ ಮಾತನಾಡಲಿ ಎಂದರು.

ಇದನ್ನೂ ಓದಿ: ಬಿಎಲ್ ಸಂತೋಷ್​ಗೆ ಎರಡು ಪ್ರಮುಖ ಸವಾಲು ಹಾಕಿದ ಸಚಿವ ಪ್ರಿಯಾಂಕ್ ಖರ್ಗೆ

ಶಾಸಕರ ಅಸಮಾಧಾನದ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯವರು ಅಹವಾಲು ಸ್ವೀಕಾರ ಮಾಡಿದ್ದಾರೆ. ಹಂತ ಹಂತವಾಗಿ ಈಡೇರಿಸುತ್ತಾರೆ ಎಂಬ ವಿಶ್ವಾಸ ನೀಡಿದ್ದಾರೆ. ಎಲ್ಲರ ಸಹಕಾರ, ಸಹನೆ ಬೇಕಾಗುತ್ತದೆ. ಗ್ಯಾರಂಟಿಗಳು ಯೋಜನೆಗಲು ಎಲ್ಲರಿಗೂ ತಲುಪುತ್ತಿದೆ. ಈ ಬಾರಿ ಸ್ವಲ್ಪ ಕಷ್ಟ ಆಗಬಹುದು ಎಂದು ಸಿಎಂ ಹೇಳಿದ್ದಾರೆ. ಹಿಂದಿನ ಸರ್ಕಾರ ಸಾಲ ಮಾಡಿ ತುಪ್ಪ ತಿನ್ನುವ ಅಭ್ಯಾಸ ಮಾಡಿಕೊಂಡಿದ್ದರು. ಈಗ ಆರ್ಥಿಕವಾಗಿ ರಾಜ್ಯ ದಿವಾಳಿಯಾಗಿಲ್ಲ. ಪ್ರಗತಿಪರ ಹೆಜ್ಜೆ ಹಾಕುತ್ತಿದೆ ಎಂದರು.

ಸಚಿವರ ಕಚೇರಿಯಲ್ಲಿ ಆಪ್ತ ಸಹಾಯಕರ ದರ್ಬಾರ್ ವಿಚಾರವಾಗಿ ಮಾತನಾಡಿದ ಪ್ರಿಯಾಂಕ್ ಖರ್ಗೆ, ನನಗೆ ಅದರ ಬಗ್ಗೆ ‌ಮಾಹಿತಿ ಇಲ್ಲ. ಶಾಸಕರು ನನಗೆ ಹೇಳಬೇಕು ಎಂದರು.

ಶ್ರೀಕಿಯಿಂದ ಅಕ್ರಮವಾಗಿ ಬಿಟ್ ಕಾಯಿನ್ ವರ್ಗಾವಣೆ ವಿಚಾರವಾಗಿ ಮಾತನಾಡಿದ ಸಚಿವ ಖರ್ಗೆ, ತನಿಖೆ ಮಾಡಿದರೆ ನಮ್ಮ ಹೆಸರು ಹೊರಗೆ ಬರುತ್ತೆಂದು ಬಿಜೆಪಿಯವರು ತನಿಖೆ ಮಾಡಿಸಿಲ್ಲ. ನಾವು ಬಂದ ನಂತರ SIT ರಚನೆ ಮಾಡಿ ತನಿಖೆ ಮಾಡಿಸುತ್ತಿದ್ದೇವೆ. ಸರಿಯಾದ ತನಿಖೆ ಆದರೆ ಎಲ್ಲರ ಹೆಸರು ಹೊರ ಬರುತ್ತದೆ. ತಾಂತ್ರಿಕವಾಗಿ, ಆಳವಾಗಿ ಹೋಗಬೇಕಾಗುತ್ತದೆ. ಡಾರ್ಕ್ ವೆಬ್, ಸೈಬರ್ ಕೇಸ್​ಗಳ ಬಗ್ಗೆ ತಿಳಿದುಕೊಂಡವರ ಸಹಬಾಗಿತ್ವದಲ್ಲಿ ತನಿಖೆ ನಡೆಸಿದರೆ ಇನ್ನೂ ಹೆಚ್ಚಿನ ಮಾಹಿತಿ ಸಿಗಲಿದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ