ಯಡಿಯೂರಪ್ಪ ಅನುಪಸ್ಥಿತಿಯಲ್ಲೇ ಬಿಎಲ್ ಸಂತೋಷ್ ಸಭೆ, ಬಿಜೆಪಿಯಲ್ಲಿ ಭುಗಿಲೆದ್ದ ಆಕ್ರೋಶ
ಇತ್ತೀಚೆಗಷ್ಟೇ ಬಿಜೆಪಿ ನಾಯಕರ ವಿರುದ್ಧ ಅಸಮಾಧಾನ ಹೊರಹಾಕಿದ್ದ ಹೊನ್ನಾಳಿ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ, ಇದೀಗ ಮತ್ತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಮತ್ತೆ ಕೆಂಡಕಾರಿದ್ದಾರೆ. ಇದರೊಂದಿಗೆ ರಾಜ್ಯ ಬಿಜೆಪಿಯಲ್ಲಿ ಅಂತರ್ ಯುದ್ಧ ಮುಂದುವರೆದಿದ್ದು, ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.
ಬೆಂಗಳೂರು, (ಸೆಪ್ಟೆಂಬರ್ 01): ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ(BS Yediyurappa) ಅನುಪಸ್ಥಿತಿಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್(BL Santosh) ಅವರು ಲೋಕಸಭಾ ಚುನಾವಣೆ ಪೂರ್ವಸಿದ್ಧತಾ ಸಭೆ ಮಾಡಿರುವುದಕ್ಕೆ ಬಿಜೆಪಿ ಅಸಮಾಧಾನ ಸ್ಫೊಟಗೊಂಡಿದೆ. ಯಡಿಯೂರಪ್ಪ ಶಿವಮೊಗ್ಗ ಪ್ರವಾಸ ನಿಗದಿ ಬಳಿಕವೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಹೀಗಾಗಿ ಬಿಎಸ್ ಯಡಿಯೂರಪ್ಪ ಅವರನ್ನ ಸಭೆಯಿಂದ ದೂರವಿಡುವ ಪ್ರಯತ್ನವೇನಾದರೂ ನಡೆಯಿತಾ ಎನ್ನುವ ಸಣ್ಣ ಅನುಮಾನ ಅವರ ಬೆಂಬಲಿಗರ ತಲೆಗೆ ಹೊಕ್ಕಿದೆ. ಈ ಬಗ್ಗೆ ಎಂಪಿ ರೇಣುಕಾಚಾರ್ಯ (MP Renukacharya) ಸಿಡಿದೆದ್ದಿದ್ದು, ಬಿಎಲ್ ಸಂತೋಷ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ರಾಜ್ಯದಲ್ಲಿ ಬಿಜೆಪಿ ಸೋಲಿಗೆ ಯಡಿಯೂರಪ್ಪ ಶಾಪ ಕಾರಣ. ನಿನ್ನೆ ಸಭೆ ಮಾಡಿದವರು ಬಿಜೆಪಿ ಕಟ್ಟಿ ಬೆಳೆಸಿದವರಲ್ಲ. ಅವರು 2006-07 ರಲ್ಲಿ ಸಂಘ ಪರಿವಾರದಿಂದ ಬಂದವರು. ಅವರಿಗೆ ತಾನು ಮುಖ್ಯಮಂತ್ರಿ ಆಗಬೇಕು ಅಂತಾ ಇದೆ. ಅವರು ಇಡೀ ಪಕ್ಷವನ್ನು ಕಂಟ್ರೋಲ್ ಮಾಡುತ್ತಿದ್ದಾರೆ. ಅವರ ಪರವಾಗಿ ಒಂದು ಗ್ಯಾಂಗ್ ಇದೆ. ಅವರು ಯಾರೂ ಜನರಿಂದ ಆಯ್ಕೆಯಾದವರಲ್ಲ, ಪಕ್ಷ ಕಟ್ಟಿದವರಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ: ಬಿಎಲ್ ಸಂತೋಷ್ ಇದ್ದ ಸಭೆಗೆ ಎಸ್ಟಿ ಸೋಮಶೇಖರ್, ಹೆಬ್ಬಾರ್, ರೇಣುಕಾಚಾರ್ಯ ಗೈರು
ಇಡೀ ಪಕ್ಷ ಅವರ ಶಿಷ್ಯರ ಕೈಯಲ್ಲಿ ಇರಬೇಕು ಅಂತಾ ಯಡಿಯೂರಪ್ಪನವರನ್ನು ಸೈಡ್ ಲೈನ್ ಮಾಡಿದರು. ಬಿಜೆಪಿಯಲ್ಲಿರುವ ಲಿಂಗಾಯತ ನಾಯಕರನ್ನೆಲ್ಲಾ ಮುಗಿಸಿದರು. ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಈಶ್ವರಪ್ಪ, ಲಕ್ಷ್ಮಣ ಸವದಿಗೆ ಟಿಕೆಟ್ ಕೊಡದೇ ಕಡೆಗಣಿಸಿದರು. ಏಳೆಂಟು ಜನರ ಗುಂಪು ಕಟ್ಟಿಕೊಂಡಿದ್ದಾರೆ. ಜೀ ಅಂದರೆ ಮಾತ್ರ ಅಲ್ಲಿ ಬೆಲೆ. ಸಂಘಟನೆ ನಿಮ್ಮಿಂದ ಹಾಳಾಗಿದೆ. ಸಂಘಟನೆ ಅಂದರೆ ಬೂತ್ ಮಟ್ಟದಲ್ಲಿ ಆಗಬೇಕು, ಹೈಟೆಕ್ ಸಂಘಟನೆ ಅಲ್ಲ. ನಿನ್ನೆ ಯಡಿಯೂರಪ್ಪನವರ ಸಮಯ ತೆಗೆದುಕೊಂಡು ಸಭೆ ಮಾಡಬೇಕಾಗಿತ್ತು. ಯಡಿಯೂರಪ್ಪನವರನ್ನು ಹೊರಗಿಟ್ಟು ಸಭೆ ಮಾಡಬೇಕೆಂದುಕೊಂಡಿದ್ದೀರಾ? ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಬಿಜೆಪಿ ಹೀನಾಯ ಸೋಲಿಗೆ ನಮ್ಮವರೇ ಕಾರಣ. ಯಡಿಯೂರಪ್ಪ ಪರ ಮಾತಾಡಿದರೆ ಅವರ ಗುಂಪು ಅಂತಾರೆ, ಮನೆಗೆ ಹೋದರೆ ಶಿಷ್ಯರು ಅಂತಾರೆ ಎಂದು ಬಿಎಲ್ ಸಂತೋಷ್ ವಿರುದ್ಧ ಬಹಿರಂಗವಾಗಿ ಕೆಂಡಕಾರಿದರು.
72 ಹೊಸ ಮುಖಗಳಿಗೆ ಯಾಕೆ ಟಿಕೆಟ್ ಕೊಟ್ಟಿರಿ? ಬೊಮ್ಮಾಯಿಯವರನ್ನು ಸಿಎಂ ಮಾಡಿದರೂ ಕೈ ಕಟ್ಟಿ ಹಾಕಿದರು. ಅವರದ್ದು ಸರ್ವಾಧಿಕಾರಿ ಧೋರಣೆ ಇದೆ. ಯಾರು ಯಡಿಯೂರಪ್ಪ ವಿರುದ್ಧವಾಗಿ ಮಾತಾಡುತ್ತಾರೋ ಅಂತವರಿಗೆ ವರಿಷ್ಠರ ಭೇಟಿಗೆ ಸಮಯ ಕೊಡಿಸುತ್ತಾರೆ. ನನ್ನ ಬಳಿ ನಾನು ಬರೆದ ಪತ್ರಗಳಿವೆ. ನಾನು ರೆಡಿಮೇಡ್ ಫುಡ್ ಅಲ್ಲ. ಹೋರಾಟದ ಫಲವಾಗಿ ಜನ ನನ್ನ ಶಾಸಕ ಮಾಡಿದ್ದಾರೆ. ನನ್ನ ರಾಜಕೀಯದ ಗಾಢ್ ಫಾದರ್ ಯಡಿಯೂರಪ್ಪ. ಇವರು ಯಡಿಯೂರಪ್ಪನವರನ್ನು ಇಳಿಸಿದ್ದಲ್ಲದೇ ಅವರ ಮನೆಗೆ ಯಾರ್ಯಾರು ಹೋಗುತ್ತಾರೆ ಎಂದು ವಾಚ್ ಮಾಡುತ್ತಾರೆ. ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ಮಾಡುವವರು ಬಿಜೆಪಿ ಕಚೇರಿಯಲ್ಲಿದ್ದಾರೆ ಎಂದು ಬಿಎಲ್ ಸಂತೋಷ್ ವಿರುದ್ಧ ಸಾಲು ಸಾಲು ಆರೋಪಗಳನ್ನು ಮಾಡಿದರು.
ಯಡಿಯೂರಪ್ಪರನ್ನ ಸಭೆಯಿಂದ ದೂರವಿಡುವ ಪ್ರಯತ್ನ?
ಯಡಿಯೂರಪ್ಪ ಶಿವಮೊಗ್ಗ ಪ್ರವಾಸ ನಿಗದಿ ಬಳಿಕವೇ ಬೆಂಗಳೂರಿನಲ್ಲಿ ಸಭೆ ನಡೆಸಲಾಗಿದೆ. ಹೀಗಾಗಿ ಬಿಎಸ್ ಯಡಿಯೂರಪ್ಪ ಅವರನ್ನ ಸಭೆಯಿಂದ ದೂರವಿಡುವ ಪ್ರಯತ್ನವೇನಾದರೂ ನಡೆಯಿತಾ ಎನ್ನುವ ಚರ್ಚೆಗಳು ಬಿಜೆಪಿಯಲ್ಲಿ ಗರಿಗೆದರಿವೆ. ಕೆಲವು ದಿನಗಳ ಹಿಂದೆ ಬಿಎಸ್ವೈ ನಿವಾಸದಲ್ಲಿ ಸಭೆ ಸೇರಿದ್ದ ವೇಳೆ ನಾಯಕತ್ವ ವಹಿಸಿಕೊಳ್ಳುವಂತೆ ಶಾಸಕರು ಒತ್ತಾಯಿಸಿದ್ದಕ್ಕೂ ಇಂದು ಬಿ.ಎಲ್. ಸಂತೋಷ್ ಸಭೆ ನಡೆಸಿದ್ದಕ್ಕೂ ಸಂಬಂಧವಿಲ್ಲ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಆಂತರಿಕವಾಗಿ ಯಡಿಯೂರಪ್ಪ ಬೆಂಬಲಿಗರಿಗಂತೂ ಅನುಮಾನ ಇದ್ದೇ ಇದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ