ಬಿಎಲ್ ಸಂತೋಷ್ ಇದ್ದ ಸಭೆಗೆ ಎಸ್ಟಿ ಸೋಮಶೇಖರ್, ಹೆಬ್ಬಾರ್, ರೇಣುಕಾಚಾರ್ಯ ಗೈರು
ಲೋಕಸಭೆ ಚುನಾವಣೆ ಹಿನ್ನೆಲೆ ಮತದಾರರ ಜಾಗೃತಿ ಅಭಿಯಾನದ ಭಾಗವಾಗಿ ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸಂಸದರು, ಶಾಸಕರು, ಪರಾಜಿತ ಅಭ್ಯರ್ಥಿಗಳು, ಪದಾಧಿಕಾರಿಗಳ ಸಭೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ ನೇತೃತ್ವದಲ್ಲಿ ನಡೆಯಿತು. ಆದರೆ, ಸಭೆಗೆ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್, ಮಾಜಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ವಿ ಸೋಮಣ್ಣ ಗೈರಾಗಿದ್ದಾರೆ.
ಬೆಂಗಳೂರು, ಆಗಸ್ಟ್ 31: ಲೋಕಸಭೆ ಚುನಾವಣೆ ಹಿನ್ನೆಲೆ ಮತದಾರರ ಜಾಗೃತಿ ಅಭಿಯಾನದ ಭಾಗವಾಗಿ ಬೆಂಗಳೂರಿನ ಬಿಜೆಪಿ ರಾಜ್ಯ ಕಚೇರಿಯಲ್ಲಿ ಸಂಸದರು, ಶಾಸಕರು, ಪರಾಜಿತ ಅಭ್ಯರ್ಥಿಗಳು, ಪದಾಧಿಕಾರಿಗಳ ಸಭೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿಎಲ್ ಸಂತೋಷ್ (B.L.Santhosh) ನೇತೃತ್ವದಲ್ಲಿ ನಡೆಯಿತು. ಆದರೆ, ಸಭೆಗೆ ಶಾಸಕರಾದ ಎಸ್.ಟಿ. ಸೋಮಶೇಖರ್ (S.T.Somashekhar), ಶಿವರಾಮ ಹೆಬ್ಬಾರ್ (Shivaram Hebbar), ಮಾಜಿ ಸಚಿವರಾದ ಶಂಕರ ಪಾಟೀಲ್ ಮುನೇನಕೊಪ್ಪ, ವಿ ಸೋಮಣ್ಣ ಗೈರಾಗಿದ್ದಾರೆ.
ಆಪರೇಷನ್ ಹಸ್ತದಲ್ಲಿ ಬಿಜೆಪಿ ಶಾಸಕರಾದ ಸೋಮಶೇಖರ್, ಶಿವರಾಮ್ ಹೆಬ್ಬಾರ್ ಸಿಲುಕಿದ್ದಾರೆ ಎಂಬ ವದಂತಿ ಹಬ್ಬಿದ್ದವು. ಈಗಾಗಲೇ ಸೋಮಶೇಖರ್ ಅವರ ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಅಲ್ಲದೆ, ಈ ಇಬ್ಬರು ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದಾರೆ. ಸದ್ಯ ಈ ಇಬ್ಬರು ನಾಯಕರು ಬಿ.ಎಲ್.ಸಂತೋಷ್ ಭಾಗಿಯಾಗಿದ್ದ ಸಭೆಗೆ ಗೈರಾಗಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.
ಇವರಲ್ಲದೆ, ಶಿವಮೊಗ್ಗ ವಿಮಾನಯಾನ ಆರಂಭದ ಹಿನ್ನೆಲೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ, ಅರಗ ಜ್ಞಾನೇಂದ್ರ, ಶಾಸಕ ಬಿ.ವೈ. ವಿಜಯೇಂದ್ರ, ಮಾಜಿ ಶಾಸಕ ಹರತಾಳು ಹಾಲಪ್ಪ ಅವರು ಸಭೆಗೆ ಗೈರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆರೋಗ್ಯ ಸಮಸ್ಯೆ ಹಿನ್ನೆಲೆ ಸಭೆಗೆ ಆಗಮಿಸಿಲ್ಲ.
ಇದನ್ನೂ ಓದಿ: ಬಿಜೆಪಿಯನ್ನು ಕಪಿಮುಷ್ಟಿಯಲ್ಲಿ ಇಟ್ಟುಕೊಂಡಿದ್ದಾರೆ: ಬಿಎಲ್ ಸಂತೋಷ್ ವಿರುದ್ಧ ರೇಣುಕಾಚಾರ್ಯ ಪರೋಕ್ಷ ವಾಗ್ದಾಳಿ
ಕೇಂದ್ರ ಸಚಿವ ನಾರಾಯಣಸ್ವಾಮಿ, ಸಂಸದರಾದ ಡಿ.ವಿ. ಸದಾನಂದ ಗೌಡ, ತೇಜಸ್ವಿ ಸೂರ್ಯ, ಈರಣ್ಣ ಕಡಾಡಿ, ಶಾಸಕರಾದ ರಮೇಶ್ ಜಾರಕಿಹೊಳಿ, ಶ್ರೀವತ್ಸ, ನಿಖಿಲ್ ಕತ್ತಿ, ಪರಾಜಿತ ಅಭ್ಯರ್ಥಿಗಳಾದ ಪ್ರತಾಪ್ ಗೌಡ ಪಾಟೀಲ್, ಮಹೇಶ್ ಕುಮಟಳ್ಳಿ, ಜಿ.ಹೆಚ್. ತಿಪ್ಪಾರೆಡ್ಡಿ, ರೂಪಾಲಿ ನಾಯಕ್, ಬಿ.ಸಿ. ಪಾಟೀಲ್, ಡಾ. ಕೆ. ಸುಧಾಕರ್, ಡಿ.ಎನ್. ಜೀವರಾಜ್, ಬಸವರಾಜ ದಡೇಸೂಗೂರು, ಬೆಳ್ಳಿ ಪ್ರಕಾಶ್, ಗೋವಿಂದ ಕಾರಜೋಳ, ಪಿ. ರಾಜೀವ್, ಸಂಜಯ್ ಪಾಟೀಲ್, ಬಿ.ಸಿ. ನಾಗೇಶ್, ಸಪ್ತಗಿರಿ ಗೌಡ, ಪ್ರೀತಮ್ ಗೌಡ, ಎನ್. ಮಹೇಶ್, ಸಿ.ಪಿ. ಯೋಗೇಶ್ವರ್ ಸೇರಿದಂತೆ ಹಲವರು ಭಾಗಿಯಾದರು.
ನನಗೆ ನೋಟಿಸ್ ಕೊಟ್ಟಿದ್ದಾರೆ: ರೇಣುಕಾಚಾರ್ಯ
ಸಭೆಗೆ ಗೈರಾದ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ, ನನಗೆ ನೋಟಿಸ್ ಕೊಟ್ಟಿದ್ದಾರೆ, ಆ ನೋಟಿಸ್ ವಾಪಸ್ಸು ಪಡೆಯಬೇಕು ಅದಕ್ಕೆ ಸಭೆಗೆ ಹಾಜರಾಗುತ್ತಿಲ್ಲ ಎಂದರು. ನಾನು ಏನು ಹೇಳಬೇಕೊ ಅದನ್ನ ಹೇಳಿದ್ದೇನೆ. ಇದರಿಂದ ನನಗೆ ವೈಕ್ತಿಕವಾಗಿ ಯಾವುದೇ ಲಾಭನು ಇಲ್ಲ, ನಷ್ಟನು ಇಲ್ಲ. ನಾನೊಬ್ಬ ಸಾಮಾನ್ಯ ಕಾರ್ಯಕರ್ತರ. ಅಪೇಕ್ಷೆಯಂತೆ ಇರುವುದನ್ನ ನೇರವಾಗಿ ಹೇಳಿದ್ದೇನೆ. ಯಡಿಯೂರಪ್ಪ ಅವರಂತ ನಾಯಕರನ್ನ ಕಡೆಗಣಿಸಿದ್ದಾರೆ. ಇದು ಬಿಜೆಪಿಗೆ ಶಾಪವಾಗಿದೆ. ವರ್ಚಸ್ಸು ಇರುವವರನ್ನ ಬೆಳೆಯಲು ಬಿಡುತ್ತಿಲ್ಲ. ವಿಜಯೇಂದ್ರ ಅಂತವರನ್ನ ಮೂಲೆಗುಂಪು ಮಾಡಿದ್ದಾರೆ. ನಾನು ನೇರವಾಗಿ ಮಾತನಾಡಿದ್ದೇನೆ. ಅದಕ್ಕೆ ಶಿಸ್ತು ಕ್ರಮ ತೆಗೆದುಕೊಂಡಿದ್ದಾರೆ ಎಂದರು.
ನಾನು ಪಕ್ಷ, ಮೋದಿ, ನಡ್ಡಾ ಅಮಿತ್ ಶಾ ವಿರುದ್ದ ಮಾತಾಡಿಲ್ಲ. ನಾನು ಮಾತಾಡಿರುವುದು ಕೆಲ ವ್ಯಕ್ತಿಗಳ ದೌರ್ಬಲ್ಯವನ್ನ. ಅದನ್ನ ನೇರವಾಗಿ ಖಂಡಿಸಿದ್ದೇನೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದೊಂದು ರಾಜಕೀಯ ಪಾರ್ಟಿ. ರಾಜ್ಯದ ಜನತೆಗೆ ತಪ್ಪು ಸಂದೇಶ ಹೋಗಿದೆ. ವಿಪಕ್ಷ ಹಾಗೂ ಅಧ್ಯಕ್ಷ ಸ್ಥಾನ ಆಯ್ಕೆಯಾಗಿಲ್ಲ. ಇದನ್ನ ನಾಲ್ಕು ಗೋಡೆಗಳ ಮಧ್ಯೆ ಚರ್ಚೆ ಮಾಡಬೇಕು. ಕೆಲವರು ದುರಹಂಕಾರ ಭ್ರಮೆ ಲೋಕದಲ್ಲಿವರಂತೆ ಆಡುತ್ತಾರೆ. ಅದಕ್ಕೆ ಈ ಪಕ್ಷಕ್ಕೆ ಹಿನ್ನಡೆಯಾಗಿದೆ. ಲೋಕಸಭೆಗೆ ಇದು ಆಗಬಾರದು ಅನ್ನೋದು ನಮ್ಮ ಉದ್ದೇಶ ಎಂದರು.
ಸಭೆಯಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ದೇಶಾದ್ಯಂತ ಮತದಾನರರ ಪಟ್ಟಿ ಪರಿಷ್ಕರಣೆ ಅಭಿಯಾನ ಶುರುವಾಗಿದೆ. ಚುನಾವಣಾ ಆಯೋಗದ ಜೊತೆ ಬಿಜೆಪಿ ಕೈ ಜೋಡಿಸಿದೆ. ರಾಜ್ಯ ಮಟ್ಟ ಹಾಗೂ ತಾಲ್ಲೂಕು ಮಟ್ಟದಲ್ಲಿ ಸಮಿತಿ ತಂಡ ಕೆಲಸ ಮಾಡುತ್ತದೆ ಎಂದರು.
ರಾಜ್ಯ ಸರ್ಕಾರದ ವೈಫಲ್ಯದಿಂದ ಜನರು ಬೇಸತ್ತಿದ್ದಾರೆ: ತೇಜಸ್ವಿ ಸೂರ್ಯ
ಕಾಂಗ್ರೆಸ್ ಪಡೆದಿರುವ ಮತಕ್ಕೂ ಬಿಜೆಪಿ ಒಡೆದ ಮತಕ್ಕೂ ಒಂಬತ್ತು ಲಕ್ಷ ಮತಗಳಷ್ಟೇ ಅಂತರವಿದೆ. 2019 ರಲ್ಲಿ ನರೇಂದ್ರ ಮೋದಿ ಹೇಗೆ ಗೆಲ್ಲಿಸಿದರೋ ಹಾಗೆ 2024 ರಲ್ಲೂ ಗೆಲ್ಲಿಸಲು ಜನ ಕಾಯುತ್ತಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯದಿಂದ ಜನರು ಬೇಸತ್ತಿದ್ದಾರೆ. ಬೆಂಗಳೂರಿನ ಜನರು ಕಾವೇರಿ ನೀರಿನ ಬಗ್ಗೆ ಸರ್ಕಾರದ ನಡವಳಿಕೆಯಿಂದ ಬೇಸರ ಗೊಂಡಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿದರು.
ಕಾವೇರಿ ನೀರಿನ ವಸ್ತು ಸ್ಥಿತಿ ಬಗ್ಗೆ ಸರ್ಕಾರ ಮನವರಿಕೆ ಮಾಡಿಕೊಟ್ಟಿಲ್ಲ. ಕಾವೇರಿ ಪ್ರಾಧಿಕಾರದಲ್ಲಿ ಎರಡು ಬಾರಿ ಸೋಲಾಗಿದೆ. ಪ್ರತಿ ದಿನ ತಮಿಳುನಾಡಿಗೆ ನೀರು ಬಿಡುತ್ತಿದ್ದಾರೆ. ಇದರಿಂದ ಜಲಾಶಯ ಕೂಡ ಬರಿದಾಗುತ್ತಿದೆ. ಬೆಂಗಳೂರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದು. ತಮಿಳುನಾಡಿನಲ್ಲಿ ಎರಡೆರಡು ಬೆಳೆ, ಬೆಳೆಯಲು ನೀರು ಸಿಗುತ್ತಿದೆ. ಆದರೆ ಕರ್ನಾಟಕದಲ್ಲಿ ಬೆಳೆಯಲು ನೀರೇ ಇಲ್ಲ. ಸುಪ್ರೀಂಕೋರ್ಟ್ಗೂ ಕಾವೇರಿ ನೀರಿನ ಕೊರತೆ ಬಗ್ಗೆ ವಾಸ್ತವ ಸ್ಥಿತಿ ತಿಳಿಸಿಲ್ಲ ಎಂದರು.
ಗ್ಯಾರಂಟಿಗಳ ಸುಳ್ಳು ಭರವಸೆ ನೀಡಿ, ಜನರನ್ನು ಮೂರ್ಖರಾಗಿ ಮಾಡಿದ್ದಾರೆ. ಮೋದಿ ಸರ್ಕಾರ ಎಲ್ಪಿಜಿ ದರ ಕಡಿಮೆ ಮಾಡಿದ್ದನ್ನು ಇವರು ಸಹಿಸುತ್ತಿಲ್ಲ. ಬಿಬಿಎಂಪಿ ಚುನಾವಣೆ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆ ಎದುರಿಸಬೇಕಾದರೆ ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನ ಪ್ರಮುಖ ಆಗಿದೆ ಎಂದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:52 pm, Thu, 31 August 23