Siddaramaiah: ಎರಡು ಬಾರಿ ಸಿಎಂ ಆದರೂ ಇರಿಯುತ್ತಿದೆ ಚಾಮುಂಡೇಶ್ವರಿ ಸೋಲಿನ ನೋವು! ಏನಿದರ ಒಳಸುಳಿ?

Siddaramaiah: ಎರಡು ಬಾರಿ ಸಿಎಂ ಆದರೂ ಇರಿಯುತ್ತಿದೆ ಚಾಮುಂಡೇಶ್ವರಿ ಸೋಲಿನ ನೋವು! ಏನಿದರ ಒಳಸುಳಿ?

ರಾಮ್​, ಮೈಸೂರು
| Updated By: ಸಾಧು ಶ್ರೀನಾಥ್​

Updated on:Aug 31, 2023 | 10:03 AM

Chamundeshwari Constituency: ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಭಾವನಾತ್ಮಕ ಭಾವನೆ ಹೊಂದಿದ್ದರು. ಅದನ್ನು ವಿಶೇಷ ಕ್ಷೇತ್ರವಾಗಿ ಪರಿಗಣಿಸಿದ್ರು. ಈ ಎಲ್ಲಾ ಕಾರಣಕ್ಕೆ ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಸೋಲು ಆಘಾತವನ್ನುಂಟು ಮಾಡಿತ್ತು. ಅದು ಈಗಲೂ ಮುಂದುವರಿದಿದೆ. ಹೀಗಾಗಲೇ ಸಿದ್ದು ಮುಂದೆ ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಣೆ ಮಾಡಿದ್ದಾರೆ. ರಾಜಕಾರಣದಲ್ಲಿ ಸಿದ್ದರಾಮಯ್ಯ ಮುಂದೆ ಎಷ್ಟೇ ಯಶಸ್ಸು ಗಳಿಸಿದರು, ಉನ್ನತ ಹುದ್ದೆ ಅಲಂಕರಿಸಿದರು. ಬಹುಶಃ ಎಂದಿಗೂ ಚಾಮುಂಡೇಶ್ವರಿ ಸೋಲನ್ನು ಮರೆಯಲಾರರು.

ಸಿಎಂ ಸಿದ್ದರಾಮಯ್ಯ ರಾಜ್ಯ ಕಂಡ ಅದ್ಬುತ ರಾಜಕಾರಣಿ. ಒಂದಲ್ಲ ಎರಡು ಬಾರಿ ಸಿಎಂ ಆಗಿ ಮಿಂಚುಹರಿಸುತ್ತಿರುವ ಜನನಾಯಕ. ಸಿದ್ದರಾಮಯ್ಯ (Siddaramaiah) ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳು ಬೀಳುಗಳನ್ನು ಕಂಡಿದ್ದಾರೆ. ಸಾಕಷ್ಟು ಅವಮಾನ ಅಪಮಾನ ಸೋಲು ಗೆಲುವು ಕಷ್ಟಗಳ ಹಾದಿಯನ್ನು ಸವೆಸಿದ್ದಾರೆ. ಇನ್ನು ಸಿದ್ದರಾಮಯ್ಯ ಎಂದು ಗೆಲುವಿಗೆ ಬೀಗಿದವರಲ್ಲ ಸೋಲಿಗೆ ಕುಗ್ಗಿದವರಲ್ಲ. ಸಮಚಿತ್ತರಾಗಿ ಎಲ್ಲವನ್ನೂ ಸ್ವೀಕರಿಸಿ ಹೆದುರಿಸಿ ಮುಂದೆ ಹೆಜ್ಜೆ ಇಟ್ಟವರು. ಆದರೆ 2018ರಲ್ಲಿ ಹಿರಿಯ ನಾಯಕ, ಸಿದ್ದರಾಮಯ್ಯರ ಆಪ್ತ ಸ್ನೇಹಿತ ಜಿ ಟಿ ದೇವೇಗೌಡ ಅವರ ವಿರುದ್ದ ಚಾಮುಂಡೇಶ್ವರಿ ಕ್ಷೇತ್ರದಲ್ಲಿನ (Chamundeshwari Constituency) ಸೋಲು (Defeat) ಸಿದ್ದರಾಮಯ್ಯ ಅವರನ್ನು ಬಿಡದೆ ಕಾಡುತ್ತಿದೆ. ತಮ್ಮ ಚಾಮುಂಡೇಶ್ವರಿ ಸೋಲಿನ ನೋವನ್ನು ಸಿದ್ದರಾಮಯ್ಯ ಸಾಕಷ್ಟು ಬಾರಿ ಹೊರಹಾಕಿದ್ದಾರೆ. ಆದರೆ ಸಿದ್ದರಾಮಯ್ಯ ಎರಡನೇ ಬಾರಿ ಸಿದ್ದರಾಮಯ್ಯ ಸಿಎಂ ಆದ ನಂತರ ಅದನ್ನು ಮರೆಯುತ್ತಾರೆ ಅಂತಲೇ ಎಲ್ಲರೂ ಭಾವಿಸಿದ್ದರು. ಆದ್ರೆ ಎಲ್ಲರ ಊಹೆ ಸುಳ್ಳಾಗಿದೆ‌‌. ಸಿದ್ದರಾಮಯ್ಯ ಅವರು ಈಗಲೂ ಚಾಮುಂಡೇಶ್ವರಿ ಸೋಲಿನ ನೋವಿನಿಂದ ಹೊರಬಂದಿಲ್ಲ. ಬಹುಶಃ ಹೊರಬರುವುದು ಇಲ್ಲ. ಅವರ ರಾಜಕೀಯ ಜೀವನದಲ್ಲಿ ಚಾಮುಂಡೇಶ್ವರಿ ಸೋಲು ಮಾಗದ ಗಾಯವಾಗಿ ಉಳಿದು ಬಿಡಲಿದೆ.

ಸಿದ್ದರಾಮಯ್ಯ ಅವರಿಗೆ ಸೋಲು ಹೊಸದಲ್ಲ. ಅದರಲ್ಲೂ ಅವರ ಮೊದಲ ಸಾರ್ವತ್ರಿಕ ಚುನಾವಣಾ ಹೋರಾಟ ಆರಂಭವಾಗಿದ್ದು ಸೋಲಿನಿಂದಲೇ. ಮೊದಲ ಬಾರಿಗೆ ಲೋಕಸಭಾ ಕ್ಷೇತ್ರದ ಉಮೇದುವಾರರಾಗಿದ್ದ ಸಿದ್ದರಾಮಯ್ಯ ಹೀನಾಯವಾಗಿ ಸೋಲು ಕಂಡಿದ್ದರು. ಅಷ್ಟೇ ಅಲ್ಲ ರಾಜಕಾರಣದ ಸಹವಾಸವೇ ಬೇಡ ಅಂತಾ ರಾಜಕಾರಣಕ್ಕೆ ಗುಡ್ ಬೈ ಹೇಳುವ ನಿರ್ಧಾರವನ್ನು ಕೈಗೊಂಡಿದ್ದರು. ಈ ವೇಳೆ ಸಿದ್ದರಾಮಯ್ಯ ಅವರ ಕೈ ಹಿಡಿದಿದ್ದು ಇದೇ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ. 1983ರಲ್ಲಿ ವರುಣ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿದ್ದ ಚಾಮುಂಡೇಶ್ವರಿ ಕ್ಷೇತ್ರದಿಂದ ಸಿದ್ದು ಮೊದಲ ಬಾರಿಗೆ ವಿಧಾನಸಭೆಗೆ ಲೋಕದಳದಿಂದ ಸ್ಪರ್ಧೆ ಮಾಡಿ ಗೆಲುವು ಸಾಧಿಸಿದರು. ಅದಾದ ನಂತರ ಅವರು ಹಿಂದಿರುಗಿ ನೋಡಿರಲಿಲ್ಲ. ಸತತ ಗೆಲುವುಗಳ ಮೂಲಕ ನಾಗಾಲೋಟ ಮುಂದುವರಿಸಿದ್ದರು. ಇನ್ನು ಚಾಮುಂಡೇಶ್ವರಿ ಸಿದ್ದರಾಮಯ್ಯಗೆ ರಾಜಕೀಯ ಜನ್ಮ ನೀಡಿದ ಕ್ಷೇತ್ರ ಮಾತ್ರವಲ್ಲ ಸಿದ್ದುಗೆ ರಾಜಕೀಯ ಪುನರ್ಜನ್ಮ ನೀಡಿದ ಕ್ಷೇತ್ರವೂ ಹೌದು.

ಅದು 2006ರ ಉಪಚುನಾವಣೆ ಜೆಡಿಎಸ್‌ನಿಂದ ಉಚ್ಚಾಟನೆಗೊಂಡು ಕಾಂಗ್ರೆಸ್ ಪಕ್ಷ ಸೇರಿದ್ದ ಸಿದ್ದರಾಮಯ್ಯ ಉಪ ಚುನಾವಣೆಯಲ್ಲಿ ಕೈ ಅಭ್ಯರ್ಥಿಯಾಗಿದ್ದರು. ಸಿದ್ದು ವಿರುದ್ದ ಅಂದಿನ ಸಮ್ಮಿಶ್ರ ಸರ್ಕಾರದ ಸಿಎಂ ಆಗಿದ್ದ ಹೆಚ್ ಡಿ ಕುಮಾರಸ್ವಾಮಿ ಡಿಸಿಎಂ ಆಗಿದ್ದ ಬಿ ಎಸ್ ಯಡಿಯೂರಪ್ಪ ಸೇರಿ ಸಚಿವ ಸಂಪುಟವೇ ಕಣಕ್ಕಿಳಿದಿತ್ತು. ಸಿದ್ದರಾಮಯ್ಯ ರಾಜಕೀಯ ಮುಗಿದೇ ಹೋಯಿತೇನೋ ಅನ್ನೋ ರೀತಿಯ ವಾತಾವರಣ ನಿರ್ಮಾಣವಾಗಿತ್ತು. ಆದ್ರೆ ಚಾಮುಂಡೇಶ್ವರಿ ಕ್ಷೇತ್ರದ ಜನ ಕೈ ಬಿಡಲಿಲ್ಲ‌. ಸಿದ್ದರಾಮಯ್ಯಗೆ ರಾಜಕೀಯ ಪುನರ್ಜನ್ಮ ನೀಡಿದರು‌ . ಸಿದ್ದರಾಮಯ್ಯ ಕೇವಲ 257 ಮತಗಳ ಅಂತರದಿಂದ ಗೆದ್ದು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಇದೇ ಕಾರಣಕ್ಕೆ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಭಾವನಾತ್ಮಕವಾದ ಒಲವಿದೆ. ಹೀಗಾಗಿ ಅವರಿಗೆ ಚಾಮುಂಡೇಶ್ವರಿ ಸೋಲು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

Chamundeshwari Constituency: ಚಾಮುಂಡೇಶ್ವರಿ ಸೋಲಿಗೆ ಕಾರಣ

2006ರಲ್ಲಿ ರಾಷ್ಟ್ರದ ಗಮನ ಸೆಳೆದ ಚಾಮುಂಡೇಶ್ವರಿ ಉಪ ಚುನಾವಣೆಯಲ್ಲಿ ಗೆದ್ದು ಬೀಗಿದ್ದ ಸಿದ್ದರಾಮಯ್ಯಗೆ 2008ರಲ್ಲಿ ಮತ್ತೊಂದು ಧರ್ಮಸಂಕಟ ಎದುರಾಗಿತ್ತು. ಚಾಮುಂಡೇಶ್ವರಿ ಕ್ಷೇತ್ರ ಇಬ್ಭಾಗವಾಗಿ ಹೊಸದಾಗಿ ವರುಣ ಕ್ಷೇತ್ರ ರಚನೆಯಾಗಿತ್ತು. ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ವರುಣ ಕ್ಷೇತ್ರ ಎಲ್ಲಿ ಸ್ಪರ್ಧೆ ಮಾಡಬೇಕು ಅನ್ನೋ ಗೊಂದಲ ನಿರ್ಮಾಣವಾಗಿತ್ತು. ಇನ್ನು ಸಿದ್ದು ಧರ್ಮಸಂಕಟಕ್ಕೆ ಕಾರಣವಾಗಿದ್ದು ಚಾಮುಂಡೇಶ್ವರಿ ಸಿದ್ದುಗೆ ರಾಜಕೀಯ ಜನ್ಮ ಪುನರ್ಜನ್ಮ ನೀಡಿದ್ದರೆ ಸಿದ್ದುವಿಗೆ ಜನ್ಮ ನೀಡಿದ ಸಿದ್ದರಾಮನ ಹುಂಡಿ ವರುಣ ಕ್ಷೇತ್ರದ ವ್ಯಾಪ್ತಿಗೆ ಸೇರಿತ್ತು. ಇದೇ ಕಾರಣಕ್ಕೆ ಸಿದ್ದರಾಮಯ್ಯ ಸಾಕಷ್ಟು ಗೊಂದಲಕ್ಕೆ ಬಿದ್ದಿದ್ದರು. ಅಷ್ಟೇ ಅಲ್ಲ ಜೀವನದಲ್ಲಿ ಮೊದಲ ಬಾರಿಗೆ ಕಣ್ಣೀರು ಹಾಕಿದ್ದರು. 2008ರ ಚುನಾವಣೆಗೂ ಮುನ್ನ ಮೈಸೂರಿನ ಕುವೆಂಪು ನಗರದ ಜಯಮ್ಮ ಗೋವಿಂದೇಗೌಡ ಕಲ್ಯಾಣಮಂಟಪದಲ್ಲಿ ನಡೆದ ಕ್ಷೇತ್ರದ ಅಭಿಮಾನಿಗಳ ಸಭೆಯಲ್ಲಿ ಸಿದ್ದರಾಮಯ್ಯ ಮಗುವಿನಂತೆ ಅತ್ತಿದ್ದರು.

ಆ ನೋವಿನೊಂದಿಗೆ ಚಾಮುಂಡೇಶ್ವರಿ ವರುಣ ನನ್ನ ಎರಡು ಕಣ್ಣುಗಳಿದ್ದಂತೆ ಅಂತಾ ಘೋಷಿಸಿದ್ರು. ಕೊನೆಗೂ ಅಳೆದು ತೂಗಿ ವರುಣದಿಂದ ಸ್ಪರ್ಧೆ ‌ಮಾಡಿ ಗೆದ್ದರು. ಅತ್ತ ಚಾಮುಂಡೇಶ್ವರಿ ಕ್ಷೇತ್ರವನ್ನು ತಮ್ಮ ಆಪ್ತ ಸತ್ಯನಾರಾಯಣ್‌ಗೆ ಬಿಟ್ಟುಕೊಟ್ಟರು ಅಷ್ಟೇ ಅಲ್ಲ ತಾವೇ ಮುಂದೆ ನಿಂತು ಗೆಲ್ಲಿಸಿದರು. ಆದರೆ ಸತ್ಯನಾರಾಯಣ ಅವರು ಅಷ್ಟಾಗಿ ಛಾಪು ಮೂಡಿಸಲಿಲ್ಲ. ಇದೇ ಕಾರಣಕ್ಕೆ 2013ರಲ್ಲಿ ಚಾಮುಂಡೇಶ್ವರಿ ಕೈ ತಪ್ಪಿತು. ಜೆಡಿಎಸ್‌ನ ಜಿ ಟಿ ದೇವೇಗೌಡ ಗೆಲುವಿನ ನಗೆ ಬೀರಿದ್ದರು. ಇತ್ತ 2013ರಲ್ಲೂ ಸಿದ್ದರಾಮಯ್ಯ ವರುಣದಿಂದ ಸ್ಪರ್ಧಿಸಿ ಗೆದ್ದು ರಾಜ್ಯದ ಸಿಎಂ ಸಹಾ ಆದರೂ. ಬದಲಾರ ರಾಜಕೀಯ ಪರಿಸ್ಥಿತಿಯಲ್ಲಿ 2018ರಲ್ಲಿ ವರುಣವನ್ನು ಮಗ ಡಾ ಯತೀಂದ್ರಗೆ ಬಿಟ್ಟು ಕೊಟ್ಟು ಚಾಮುಂಡೇಶ್ವರಿಯಿಂದ ಸಿದ್ದರಾಮಯ್ಯ ಸ್ಪರ್ಧೆ ಮಾಡಿದ್ದರು. ಬರೋಬ್ಬರಿ 10 ವರ್ಷಗಳ ಗ್ಯಾಪ್ ಹಾಗೂ ಜಿ ಟಿ ದೇವೇಗೌಡ ಅವರ ವರ್ಚಸ್ಸು ಸಿದ್ದರಾಮಯ್ಯ ಅವರು ಸೋಲುವಂತೆ ಮಾಡಿತು. ಇದರ ಜೊತೆಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಹಿಡಿತ ಸಾಧಿಸಿದ್ದ ಸಿದ್ದರಾಮಯ್ಯ ಹಿರಿಯ ಪುತ್ರ ರಾಕೇಶ್ ಅಕಾಲಿಕ ಸಾವು ಸಹಾ ಸಿದ್ದರಾಮಯ್ಯ ಚಾಮುಂಡೇಶ್ವರಿ ಸೋಲಿಗೆ ಕಾರಣವಾಗಿತ್ತು. ರಾಕೇಶ್ ಬದುಕಿದ್ದರೆ ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಸೋಲುತ್ತಿರಲಿಲ್ಲ ಅನ್ನೋದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿತ್ತು‌. ಯಾಕಂದ್ರೆ ರಾಕೇಶ್ ಅಷ್ಟರಮಟ್ಟಿಗೆ ಚಾಮುಂಡೇಶ್ವರಿ ಕ್ಷೇತ್ರದದಲ್ಲಿ ಸಂಪರ್ಕ ಹೊಂದಿದ್ದರು‌.

Chamundeshwari Constituency: ಚಾಮುಂಡೇಶ್ವರಿ – ಸಿದ್ದು ನೋವು

ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಭಾವನಾತ್ಮಕ ಭಾವನೆ ಹೊಂದಿದ್ದರು. ಅದನ್ನು ವಿಶೇಷ ಕ್ಷೇತ್ರವಾಗಿ ಪರಿಗಣಿಸಿದ್ರು. ಈ ಎಲ್ಲಾ ಕಾರಣಕ್ಕೆ ಸಿದ್ದರಾಮಯ್ಯಗೆ ಚಾಮುಂಡೇಶ್ವರಿ ಸೋಲು ಆಘಾತವನ್ನುಂಟು ಮಾಡಿತ್ತು. ಅದು ಈಗಲೂ ಮುಂದುವರಿದಿದೆ. ಹೀಗಾಗಲೇ ಸಿದ್ದು ಮುಂದೆ ಚುನಾವಣಾ ರಾಜಕೀಯದಿಂದ ದೂರ ಉಳಿಯುವುದಾಗಿ ಘೋಷಣೆ ಮಾಡಿದ್ದಾರೆ. ರಾಜಕಾರಣದಲ್ಲಿ ಸಿದ್ದರಾಮಯ್ಯ ಮುಂದೆ ಎಷ್ಟೇ ಯಶಸ್ಸು ಗಳಿಸಿದರು, ಉನ್ನತ ಹುದ್ದೆ ಅಲಂಕರಿಸಿದರು. ಬಹುಶಃ ಎಂದಿಗೂ ಚಾಮುಂಡೇಶ್ವರಿ ಸೋಲನ್ನು ಮರೆಯಲಾರರು.

Published on: Aug 31, 2023 10:01 AM