ಬಿಜೆಪಿ ನಾಯಕರಿಗೆ ಸೆಡ್ಡು ಹೊಡೆದು ಗೃಹಲಕ್ಷ್ಮೀ ಹಬ್ಬ ಆಚರಿಸಿದ ಎಸ್ಟಿ ಸೋಮಶೇಖರ್, ಕೈ ಹಿಡಿಯಲು ಮಾನಸಿಕವಾಗಿ ಸಿದ್ಧರಾದ್ರಾ??
ಅತ್ತ ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಗುತ್ತಿದ್ದಂತೆ ಯಶವಂತಪುರ ಕ್ಷೇತ್ರದಲ್ಲೂ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಯ್ತು. ಕಾರ್ಯಕ್ರಮಗಳ ವೀಕ್ಷಣೆಗೆ ಎಲ್‌ಇಡಿ ಪರದಗಳನ್ನ ಅಳವಡಿಸಲಾಗಿತ್ತು. ಈ ಮೂಲಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ, ಪಂಚ ಗ್ಯಾರಂಟಿಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯನ್ನ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಭರ್ಜರಿಯಾಗಿ ಜಾರಿಗೊಳಿಸಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ.
ಬೆಂಗಳೂರು, (ಆಗಸ್ಟ್ 30): ಅತ್ತ ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ()Gruha Lakshmi scheme) ಅದ್ಧೂರಿಯಾಗಿ ಚಾಲನೆ ಸಿಕ್ಕಿದ್ದು ಇತ್ತ ಬೆಂಗಳೂರಿನ 198 ವಾರ್ಡ್‌ಗಳಲ್ಲಿ ಗೃಹಲಕ್ಷ್ಮಿ ಯೋಜನೆಗೆ ಅದ್ದೂರಿ ಸ್ವಾಗತ ದೊರೆತಿದೆ. ಜೊತೆಗೆ ಮತ್ತೊಂದು ಇಂಟ್ರಸ್ಟಿಂಗ್ ಅಂದ್ರೆ, ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್(ST Somashekar) ತಮ್ಮ ಕ್ಷೇತ್ರದಲ್ಲಿ ಗೃಹಲಕ್ಷ್ಮೀ ಹಬ್ಬ ಆಚರಿಸಿದ್ದಾರೆ. ಹೌದು…ಬಿಜೆಪಿ ವಿರುದ್ಧ ಗುಡುಗುತ್ತಲೇ ಕಾಂಗ್ರೆಸ್ ಕಡೆ ಒಲವು ತೋರಿರುವ ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಇವತ್ತು ಗೃಹಲಕ್ಷ್ಮೀ ಯೋಜನೆಯನ್ನ ತಮ್ಮ ಕ್ಷೇತ್ರದಲ್ಲಿ ಅದ್ಧೂರಿಯಾಗಿ ಜಾರಿಗೊಳಿಸಿರುವುದು ಅಚ್ಚರಿ ಮೂಡಿಸಿದೆ. ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ವಿರೋಧಿಸುತ್ತಿದೆ. ಇದರ ಮಧ್ಯೆಯೇ ಸೋಮಶೇಖರ್ ಲವಲವಿಕೆಯಿಂದ ಗೃಹಲಕ್ಷ್ಮೀ ಯೋಜನೆ ಚಾಲನೆ ನೀಡಿರುವುದು ಬಿಜೆಪಿಗೆ ಇರುಸುಮುರುಸು ಉಂಟುಮಾಡಿದಂತಾಗಿದೆ. ಅಲ್ಲದೇ ಬಿಜೆಪಿ ಬಿಡಲ್ಲ ಎಂದು ಹೇಳುತ್ತಲೇ ಮಾನಸಿಕವಾಗಿ ಕಾಂಗ್ರೆಸ್ ಸೇರಿದ್ದಾರಾ ಎನ್ನು ಪ್ರಶ್ನೆಗಳು, ಚರ್ಚೆಗಳು ಶುರುವಾಗಿವೆ.
ಮೊನ್ನೆಯಷ್ಟೇ ಗೃಹಲಕ್ಷ್ಮೀ ಯೋಜನೆ ಸಂಬಂಧ ಪೂರ್ವಭಾವಿ ಸಭೆ ನಡೆಸಿದ್ದ ಸೋಮಶೇಖರ್, ಯಶಸ್ವಿಗಾಗಿ ಕ್ಷೇತ್ರದಲ್ಲಿ ತಯಾರಿ ನಡೆಸಿದ್ದರು. ಅದರಂತೆ ಇವತ್ತು ಅತ್ತ ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ಸಿಗುತ್ತಿದ್ದಂತೆ ಯಶವಂತಪುರ ಕ್ಷೇತ್ರದಲ್ಲೂ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಯ್ತು. ಕಾರ್ಯಕ್ರಮಗಳ ವೀಕ್ಷಣೆಗೆ ಎಲ್‌ಇಡಿ ಪರದಗಳನ್ನ ಅಳವಡಿಸಲಾಗಿತ್ತು. ಈ ಮೂಲಕ ಕಾಂಗ್ರೆಸ್ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ, ಪಂಚ ಗ್ಯಾರಂಟಿಯಲ್ಲಿ ಒಂದಾದ ಗೃಹಲಕ್ಷ್ಮೀ ಯೋಜನೆಯನ್ನ ಬಿಜೆಪಿ ಶಾಸಕ ಎಸ್.ಟಿ ಸೋಮಶೇಖರ್ ಭರ್ಜರಿಯಾಗಿ ಜಾರಿಗೊಳಿಸಿರುವುದು ವಿಶೇಷ.
ಸ್ವಪಕ್ಷದ ನಾಯಕರಿಗೆ ಟಾಂಗ್ ಕೊಟ್ಟ ಸೋಮಶೇಖರ್
ಗೃಹಲಕ್ಷ್ಮೀ ಯೋಜನೆ ಜಾರಿಗೆ ನನ್ನದು ಕೂಡಾ ಒಂದು ಅಳಿಲು ಸೇವೆ ಇದೆ. ನನ್ನ ಕ್ಷೇತ್ರದಲ್ಲೂ ಯೋಜನೆ ಬಗ್ಗೆ ಮಾಹಿತಿ ನೀಡುವ ಕೆಲಸ ಮಾಡಿದ್ದೇನೆ ಎಂದು ಯಶವಂತಪುರ ಕ್ಷೇತ್ರದಲ್ಲಿ ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮದಲ್ಲಿ ಎಸ್.ಟಿ.ಸೋಮಶೇಖರ್ ಹೇಳಿದರು.
ಇದು ಅರೆಬೆಂದ ಯೋಜನೆ ಎಂದು ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮಾಜಿ ಸಿಎಂ ಬೊಮ್ಮಾಯಿ ದೊಡ್ಡವರು. ಏನುಬೇಕಾದರೂ ಮಾತಾಡಲಿ. ಇದು ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಕಾರ್ಯಕ್ರಮ. ಇದು ಸರ್ಕಾರದ ಯೋಜನೆ, ಮಹಿಳೆಯರಿಗೆ 2 ಸಾವಿರ ರೂ. ಸಿಗುತ್ತದೆ. ಗೃಹಲಕ್ಷ್ಮೀ ಯೋಜನೆಯಲ್ಲಿ ಯಾವುದೇ ನ್ಯೂನತೆ ನನಗೆ ಕಾಣುತ್ತಿಲ್ಲ. ಸರ್ಕಾರದ ಯೋಜನೆ ಬಗ್ಗೆ ಜನರಿಗೆ ತಿಳಿಸುವ ಕೆಲಸ ಮಾಡಿದ್ದೇನೆ. ಯೋಜನೆ ಜನರಿಗೆ ತಲುಪಿಸಲು ಏನು ಬೇಕೋ ಅದನ್ನು ಮಾಡಿರುವೆ ಎಂದು ಸ್ವಪಕ್ಷದ ನಾಯಕರಿಗೆ ಟಾಂಗ್ ಕೊಟ್ಟರು.
ಸೋಮಶೇಖರ್ ಡಬಲ್ ಸ್ಟ್ಯಾಂಡರ್ಡ್
ನಾವ್ ಆಪರೇಷನ್ ಮಾಡಲ್ಲ ಅಂತಾನೇ, ಸೀಕ್ರೆಟ್ ಆಗೇ ಡಿಸಿಎಂ ಡಿಕೆ ಶಿವಕುಮಾರ್ ಎಲ್ಲ ಮಾಡಿ ಮುಗಿಸುತ್ತಿದ್ದಾರೆ. ಹೀಗಂತ ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ. ಈ ಚರ್ಚೆ ನಡೆಯುತ್ತಿವಾಗಲೇ ಡಿಕೆ ಶಿವಕುಮಾರ್ ಪದೇಪದೆ ಎಸ್.ಟಿ.ಸೋಮಶೇಖರ್ ಅವರ ಕ್ಷೇತ್ರಕ್ಕೆ ಭೇಟಿ ನೀಡುತ್ತಿದ್ದಾರೆ.. ಸೋಮಶೇಖರ್ ಬಿಜೆಪಿ ವಿರುದ್ಧ ಬಹಿಂರಗ ಅಸಮಾಧಾನ ಹಾಕಿರುವುದು. ಹಾಗೇ ಸಚಿವರೆಲ್ಲ ಆಪರೇಷನ್ ಪಕ್ಕಾ ಎನ್ನುತ್ತಿರುವುದು ಮತ್ತಷ್ಟು ಕುತೂಹಲ ಮೂಡಿದೆ. ಇದರ ಮಧ್ಯೆ ಎಸ್ಟಿ ಸೋಮಶೇಖರ್ , ಬಿಜೆಪಿ ಬಿಡಲ್ಲ ಎನ್ನುತ್ತಲ್ಲೇ ದಿನೇ ದಿನೇ ಕಾಂಗ್ರೆಸ್ಗೆ ಹತ್ತಿರುವಾಗುತ್ತಿದ್ದಾರೆ. ಇದೀಗ ಬಿಜೆಪಿ ನಾಯಕರು ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮದಿಂದ ದೂರು ಉಳಿದುಕೊಂಡಿದ್ದರೆ, ಇತ್ತ ಸೋಮಶೇಖರ್ ಮಾತ್ರ ಯಶವಂತಪುರ ಕ್ಷೇತ್ರದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ರು. ಇದರೊಂದಿಗೆ ಅವರು ಡಬಲ್ ಸ್ಟ್ಯಾಂಡರ್ಡ್ ಅನುಸರಿಸುತ್ತಿರುವುದು ಬಿಜೆಪಿ ನಾಯಕರಿಗೆ ದಿಕ್ಕುತೋಚದಂತಾಗಿದೆ.
ಸರಿಯಾದ ಸಮಯಕ್ಕೆ ಕಾಯುತ್ತಿದ್ದಾರಾ ಸೋಮಶೇಖರ್?
ಬಾಂಬೆ ಶಾಸಕರ ಪೈಕಿ ಕೆಲವರ ಮತ್ತೆ ತವರು ಮನೆಯಾದ ಕಾಂಗ್ರೆಸ್ ಕದವನ್ನು ತಟ್ಟುತ್ತಿರುವ ಸುದ್ದಿ ಹಳೆಯದೇನೂ ಅಲ್ಲ, ಅದು ಗುಟ್ಟಾಗಿಯೂ ಉಳಿದಿಲ್ಲ. ಅದರಲ್ಲೂ ಪ್ರಮುಖವಾಗಿ ಎಸ್ಟಿ ಸೋಮಶೇಖರ್ ಅವರ ಮಾನಸಿಕ ಸ್ಥಿತಿ ನೋಡಿದರೆ ಅವರು ಕಾಂಗ್ರೆಸ್ನತ್ತ ಮುಖ ಮಾಡುವುದು ಪಕ್ಕಾ ಎನ್ನುವಂತಿದೆ. ಹೌದು…ಈಗಾಗಲೇ ಬಿಜೆಪಿಯಿಂದ ಒಂದು ಕಾಲು ಆಚೆ ಇಟ್ಟಿರುವ ಎಸ್ಟಿ ಸೋಮಶೇಖರ್ ದಿನ ಕಳೆದಂತೆ ಕಾಂಗ್ರೆಸ್ಗೆ ಹತ್ತಿರವಾಗುತ್ತಿದ್ದಾರೆ. ಡಿಕೆ ಶಿವಕುಮಾರ್ ಹಾಗೂ ಕಾಂಗ್ರೆಸ್ ನಾಯಕರ ಜೊತೆ ನಿರಂತರ ಸಂಪರ್ಕ ಹಾಗೂ ಸೋಮಶೇಖರ್ ಅವರ ಬೆಂಬಲಿಗರು ಈಗಾಗಲೇ ಕಾಂಗ್ರೆಸ್ ಸೇರಿಯಾಗಿದೆ. ಇದರೊಂದಿಗೆ ಸದ್ಯಕ್ಕೆ ನೀವು ಹೋಗಿರಿ ನಂತರ ನಾ ಬರುವೆ ಎನ್ನುವ ಅರ್ಥ ನೀಡಿದಂತಿದೆ. ಅಲ್ಲದೇ ಕ್ಷೇತ್ರದಲ್ಲಿ ಪ್ರಮುಖ ನಾಯಕರ ಜೊತೆ ಚರ್ಚೆ, ಡಿಕೆ ಶಿವಕುಮಾರ್ ಅವರನ್ನು ಕರೆಯಿಸಿ ಸ್ಥಳೀಯ ಬಡಲಾವಣೆ ನಿವಾಸಿಗಳ ಜೊತೆ ಸಭೆ. ಹೀಗೆ ಸೋಮಶೇಖರ್ ಚಟುವಟಿಕೆಗಳನ್ನು ನಡೆಸಿದ್ದು, ಇದು ಮುಂದಿನ ಉಪಚುನಾವಣೆಯ ತಯಾರಿ ಎನ್ನಲಾಗುತ್ತಿದೆ. ಎಲ್ಲಾ ತಯಾರಿ ಮಾಡಿಕೊಂಡೇ ಬಿಜೆಪಿಗೆ ಗುಡ್ ಬೈ ಹೇಳಿ ಕಾಂಗ್ರೆಸ್ ಸೇರ್ಪಡೆಗೆ ಸೂಕ್ತ ಸಮಯಕ್ಕೆ ಕಾಯುತ್ತಿದ್ದಾರೆ ಎನ್ನುವ ಚರ್ಚೆಗಳು ರಾಜ್ಯ ಕಾರಣದಲ್ಲಿ ನಡೆಯುತ್ತಿವೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ