ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ: ಸಿದ್ದರಾಮಯ್ಯ, ರಾಹುಲ್, ಖರ್ಗೆ, ಡಿಕೆ ಶಿವಕುಮಾರ್​ ಹೇಳಿದ್ದೇನು?

ಕಾಂಗ್ರೆಸ್​ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾದ ಮನೆ ಯಜಮಾನಿಗೆ 2 ಸಾವಿರ ರೂ. ನೀಡುವ ಗೃಹಲಕ್ಷ್ಮಿ ಯೋಜನೆಗೆ ಬುಧವಾರ ರಾಜ್ಯಾದ್ಯಂತ ಅದ್ದೂರಿ ಚಾಲನೆ ದೊರೆತಿದೆ. ಲಕ್ಷಾಂತರ ಮಹಿಳೆಯರು ತಮ್ಮೂರಿನಿಂದಲೇ ಮೈಸೂರಿ ಕಾರ್ಯಕ್ರಮವನ್ನು ಕಣ್ತುಂಬಿಕೊಂಡಿದ್ದು, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಯೋಜನೆಗೆ ಚಾಲನೆ ನೀಡಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಯೋಜನೆ ಬಗ್ಗೆ ಯಾರೆಲ್ಲಾ ಏನು ಹೇಳಿದ್ದಾರೆ ಇಲ್ಲಿದೆ.

ಗೃಹಲಕ್ಷ್ಮೀ ಯೋಜನೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಶಕ್ತಿ ಪ್ರದರ್ಶನ: ಸಿದ್ದರಾಮಯ್ಯ, ರಾಹುಲ್, ಖರ್ಗೆ, ಡಿಕೆ ಶಿವಕುಮಾರ್​ ಹೇಳಿದ್ದೇನು?
ಗೃಹಲಕ್ಷ್ಮೀ ಯೋಜನೆಯಲ್ಲಿ ಕಾಂಗ್ರೆಸ್​ ನಾಯಕರು
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Aug 30, 2023 | 3:29 PM

ಬೆಂಗಳೂರು, ಆಗಸ್ಟ್​ 30: ರಾಜ್ಯ ಸರ್ಕಾರದ 5 ಗ್ಯಾರಂಟಿಗಳಲ್ಲೆ ಅತಿ ಹೆಚ್ಚು ನಿರೀಕ್ಷೆ ಇದ್ದ ಗೃಹಲಕ್ಷ್ಮಿ ಯೋಜನೆಗೆ (Gruha Lakshmi) ಬುಧವಾರ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.  ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. 1.10 ಕೋಟಿ ಫಲಾನುಭವಿಗಳ ಖಾತೆ ತಲಾ 2,000 ರೂಪಾಯಿ ಜಮೆಯಾಗಲಿದ್ದು, ಸಾಂಕೇತಿಕವಾಗಿ 10 ಫಲಾನುಭವಿಗಳಿಗೆ ಡಿಜಿಟಲ್​ ಕಾರ್ಡ್​ ವಿತರಣೆ ಮಾಡಲಾಗಿದೆ. ಕಾರ್ಯಕ್ರಮದಲ್ಲಿ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್​, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರರು ಉಪಸ್ಥಿತರಿದ್ದರು. ಗೃಹಲಕ್ಷ್ಮಿ ಯೋಜನೆ ಬಗ್ಗೆ ಯಾರೆಲ್ಲಾ ಏನು ಹೇಳಿದರು ಇಲ್ಲಿದೆ.

ಇದು ಕಾಂಗ್ರೆಸ್ ಪಕ್ಷದ ಯೋಜನೆಯಲ್ಲ, ನಿಮ್ಮ ಯೋಜನೆ: ರಾಹುಲ್ ಗಾಂಧಿ

ಗೃಹಲಕ್ಷ್ಮೀ ಚಾಲನೆ ಬಳಿಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾತನಾಡಿ, ಕರ್ನಾಟಕದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿದೆ. ಗ್ಯಾರಂಟಿ ಜಾರಿ ಸಾಧ್ಯವಿಲ್ಲ ಎಂದು ವಿಪಕ್ಷಗಳ ನಾಯಕರು ಟೀಕಿಸಿದ್ದರು. ಪ್ರಧಾನಿ ಮೋದಿ ಸತ್ಯಕ್ಕೆ ದೂರವಾದ ಮಾತು ಹೇಳುತ್ತಿದ್ದಾರೆ. ಆದರೆ ಇಂದು ಮನೆ ಯಜಮಾನಿಗೆ 2 ಸಾವಿರ ರೂ. ಜಮೆ ಆಗುತ್ತಿದೆ. ಗೃಹಲಕ್ಷ್ಮೀ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗುತ್ತದೆ ಎಂದರು.

ಈ ಹಣದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಪುಸ್ತಕ ಕೊಂಡುಕೊಳ್ಳಬಹುದು. ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡುತ್ತಿದ್ದಾರೆ. ನಾವು ಯಾವತ್ತೂ ಸುಳ್ಳು ಭರವಸೆಗಳನ್ನು ನೀಡುವುದಿಲ್ಲ. ಇದು ಕಾಂಗ್ರೆಸ್ ಪಕ್ಷದ ಯೋಜನೆಯಲ್ಲ, ನಿಮ್ಮ ಯೋಜನೆ. ಯಾವುದೋ ಬಂಡವಾಳಶಾಹಿಗಳಿಗೆ ಮಾಡಿರುವ ಯೋಜನೆಯಲ್ಲ. ಕರ್ನಾಟಕದ ತಾಯಂದಿರಿಗಾಗಿ ಮಾಡಿರುವ ಯೋಜನೆ ಎಂದು ಹೇಳಿದರು.

ಶೀಘ್ರದಲ್ಲೇ ಐದನೇ ಗ್ಯಾರಂಟಿಯನ್ನೂ ಕೂಡ ಅನುಷ್ಠಾನ: ಮಲ್ಲಿಕಾರ್ಜುನ ಖರ್ಗೆ

ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು. ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೆವು. ಐದು ಗ್ಯಾರಂಟಿಗಳಲ್ಲಿ 4 ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ಮಾಡಿದ್ದೇವೆ. ಶೀಘ್ರದಲ್ಲೇ ಐದನೇ ಗ್ಯಾರಂಟಿಯನ್ನೂ ಕೂಡ ಅನುಷ್ಠಾನಕ್ಕೆ ತರುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ: ಗ್ರಹಲಕ್ಷ್ಮಿ ಅನುಷ್ಠಾನ ಕಾರ್ಯಕ್ರಮ; ವೇದಿಕೆಗೆ ಆಗಮಿಸುವ ರಾಹುಲ್ ಗಾಂಧಿಗೆ ಧೀರ್ಘ ಕರತಾಡನದೊಂದಿಗೆ ಸ್ವಾಗತ!

ನಮ್ಮ 5 ಗ್ಯಾರಂಟಿಗಳ ಬಗ್ಗೆ ಮೋದಿ, ಅಮಿತ್ ಶಾ ಟೀಕೆ ಮಾಡಿದ್ದರು. ದೇಶದ ಆರ್ಥಿಕ ಪರಿಸ್ಥಿತಿ ಹದಗೆಡುತ್ತದೆ ಎಂದು ಮೋದಿ ಹೇಳಿದ್ದರು. ಆದರೆ ಇದೀಗ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ. ನಮ್ಮ ಯೋಜನೆಗಳಿಗೆ ಬಿಜೆಪಿಯವರು ಸುಣ್ಣಬಣ್ಣ ಹಾಕುತ್ತಾರೆ ಅಷ್ಟೇ ಎಂದು ಕಿಡಿಕಾರಿದರು.

ರಾಹುಲ್​ ಗಾಂಧಿ ಯಾರಿಗೂ ಹೆದರುವುದಿಲ್ಲ. ನಮ್ಮ ದೇಶದಲ್ಲಿ ಸಂವಿಧಾನ ಮಾಯವಾದರೆ ನಾವೆಲ್ಲರೂ ಸತ್ತಂತೆ. ಸಂವಿಧಾನಕ್ಕಾಗಿ ನಾವು ಹೋರಾಟ ಮಾಡ್ತಿದ್ದೇವೆ, ನೀವು ಹೋರಾಡಿ. ಸಂವಿಧಾನ, ಪ್ರಜಾಪ್ರಭುತ್ವ ಉಳಿಸಲು ನಾವೆಲ್ಲರೂ ಹೋರಾಡಬೇಕು. ಎಲ್ಲರೂ ಒಗ್ಗಟ್ಟಾದರೆ ಈ ಕೋಮುವಾದಿ​ ಸರ್ಕಾರ ತೆಗೆಯಬಹುದು. ಸರ್ವಾಧಿಕಾರಿ ಸರ್ಕಾರವನ್ನು ತೆಗೆಯಲು ಎಲ್ಲರೂ ಒಗ್ಗಟ್ಟಾಗಬೇಕು ಎಂದರು.

ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಕೊಟ್ಟ ಭರವಸೆ ಈಡೇರಿಸಿದ್ದೇವೆ: ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ ಮಾತನಾಡಿ, ಅಧಿಕಾರಕ್ಕೆ ಬಂದ 100 ದಿನಗಳಲ್ಲಿ ಕೊಟ್ಟ ಭರವಸೆ ಈಡೇರಿಸಿದ್ದೇವೆ. 2013-2018ರವರೆಗೆ ಸರ್ಕಾರದ ಅವಧಿಯಲ್ಲಿ ಭರವಸೆ ಈಡೇರಿಸಿದ್ದೆವು. ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ ಗ್ಯಾರಂಟಿ ಈಗಾಗಲೇ ಜಾರಿಯಾಗಿದ್ದು, ಗೃಹಲಕ್ಷ್ಮೀ ಗ್ಯಾರಂಟಿ ಇಂದು ಜಾರಿ ಮಾಡಿದ್ದೇವೆ. ಆ ಮೂಲಕ ಮನೆ ಯಜಮಾನಿ ಖಾತೆಗೆ 2 ಸಾವಿರ ರೂಪಾಯಿ ಜಮೆ ಮಾಡಿದ್ದೇವೆ. 1.10 ಕೋಟಿ ಫಲಾನುಭವಿಗಳ ಖಾತೆ ತಲಾ 2,000 ರೂಪಾಯಿ ಜಮೆ ಆಗಲಿದೆ. ದೇಶದಲ್ಲಿ ಇಷ್ಟು ದೊಡ್ಡ ಪ್ರಮಾಣದ ಯೋಜನೆ ಇಲ್ಲವೆಂದು ಹೇಳುತ್ತೇವೆ ಎಂದರು.

ಇದನ್ನೂ ಓದಿ: ಕುಮಾರಸ್ವಾಮಿ ಆರೋಗ್ಯ ಈಗ ಹೇಗಿದೆ? ಅವರಿಗೆ ಏನಾಗಿದೆ? ಆಸ್ಪತ್ರೆ ಬಿಡುಗಡೆ ಮಾಡಿದ ಹೆಲ್ತ್​ ಬುಲೆಟಿನ್​ ಇಲ್ಲಿದೆ

ಶಕ್ತಿ ಯೋಜನೆಯಡಿ ಜೂನ್ 11ರಿಂದ 48.50 ಕೋಟಿ ಮಹಿಳೆಯರು ಉಚಿತ ಪ್ರಯಾಣ ಮಾಡಿದ್ದಾರೆ. ಜುಲೈ 10ರಂದು ಅನ್ನಭಾಗ್ಯ ಯೋಜನೆಗೆ ಅಧಿಕೃತ ಚಾಲನೆ ನೀಡಿದ್ದೆವು. ಅನ್ನಭಾಗ್ಯ ಯೋಜನೆಗೆ ಹೆಚ್ಚುವರಿ ಅಕ್ಕಿ ನೀಡಲು ಕೇಂದ್ರ ನಿರಾಕರಿಸಿತ್ತು. ಹಾಗಾಗಿ ಹೆಚ್ಚುವರಿ 5 ಕೆಜಿ ಅಕ್ಕಿ ಬದಲು ಬಿಪಿಎಲ್​ ಕಾರ್ಡ್​ದಾರರಿಗೆ₹170 ಜಮೆ ಮಾಡಿದ್ದೆವು. ಗೃಹಜ್ಯೋತಿ ಯೋಜನೆ ಅಡಿ 1.56 ಕೋಟಿ ಬಳಕೆದಾರರಿಗೆ ಶೂನ್ಯ ಬಿಲ್ ಬರುತ್ತಿದೆ.​

​​ಡಿಸೆಂಬರ್ ಅಥವಾ 2024ರ ಜನವರಿ ತಿಂಗಳಲ್ಲಿ ಯುವನಿಧಿ ಜಾರಿಯಾಗಲಿದೆ. 5 ಗ್ಯಾರಂಟಿ ಜಾರಿಗೆ ವಾರ್ಷಿನ 56,000 ಕೋಟಿ ರೂಪಾಯಿ ವೆಚ್ಚವಾಗಲಿದೆ. 5 ಗ್ಯಾರಂಟಿ ಜಾರಿ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೆ ಹಣ ಮೀಸಲಿಟ್ಟಿದ್ದೇವೆ. 5 ಗ್ಯಾರಂಟಿಗಳು ನಿಮ್ಮ ಮುಂದಿದೆ, ನಾವು ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.

ಇಂದಿರಾ ಗಾಂಧಿಯವರ ಕಾಲ ಮತ್ತೆ ಮರುಕಳಿಸುತ್ತಿದೆ: ಡಿ.ಕೆ.ಶಿವಕುಮಾರ್​

ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಮಾತನಾಡಿದ್ದು, ನೂರು ದಿನದಲ್ಲಿ 4 ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಗೃಹಲಕ್ಷ್ಮೀ ಯೋಜನೆಗೆ 1.10 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ. ಇಂದಿರಾ ಗಾಂಧಿಯವರ ಕಾಲ ಮತ್ತೆ ಮರುಕಳಿಸುತ್ತಿದೆ ಎಂದು ಹೇಳಿದರು.

ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ನಡೆಸಿದ್ದರು. ಚಾಮರಾಜನಗರದಿಂದ ಬೀದರ್​​​ವರೆಗೆ ಪಾದಯಾತ್ರೆ ನಡೆಸಿದ್ರು. ಯಾತ್ರೆ ವೇಳೆ ಜನರ ಸಮಸ್ಯೆಗಳನ್ನು ರಾಹುಲ್ ಗಾಂಧಿ ಆಲಿಸಿದರು. ಯಾತ್ರೆ ವೇಳೆ ನನಗೆ, ಸಿದ್ದರಾಮಯ್ಯಗೆ ರಾಹುಲ್ ಹಲವು ಸಲಹೆ ನೀಡಿದರು. ಚುನಾವಣೆ ವೇಳೆ ನಾವು 5 ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದೆವು. ಚಾಮುಂಡೇಶ್ವರಿ ತಾಯಿ ದರ್ಶನ ಪಡೆದು ಶಪಥ ಮಾಡಿದ್ದೆವು. ಯೋಜನೆಗಳನ್ನು ಜಾರಿ ಮಾಡಿ ನಾವು ನುಡಿದಂತೆ ನಡೆದಿದ್ದೇವೆ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:26 pm, Wed, 30 August 23