ಬೆಂಗಳೂರು: ಇತ್ತೀಚೆಗಷ್ಟೇ ಚರ್ಚೆಗೆ ಕಾರಣವಾಗಿದ್ದ ಹಾಲಿನ ದರ (Milk Price) ಏರಿಕೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ದರ ಏರಿಕೆಗೆ ರೈತರು ಹಾಗೂ ಹಾಲು ಒಕ್ಕೂಟಗಳಿಂದ ಒತ್ತಡ ಹೆಚ್ಚಾಗಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಈ ಬಗ್ಗೆ ವಿಧಾನಸೌಧದಲ್ಲಿ ಟಿವಿ9ಗೆ ಮಾಹಿತಿ ನೀಡಿದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಜ್ಞಾನ ಸಚಿವ ಕೆ ವೆಂಕಟೇಶ್ (K Venkatesh), ಪ್ರಮುಖವಾಗಿ ರೈತರಿಗೆ ಅನುಕೂಲವಾಗಬೇಕು. ಆದ್ದರಿಂದ ಹಾಲಿನ ದರ ಏರಿಕೆ ಮಾಡುತ್ತೇವೆ ಎಂದರು.
ವಿಧಾನಸೌಧದ ಮುಂದೆ ಮಾತನಾಡಿದ ಸಚಿವ ವೆಂಕಟೇಶ್, ಹಾಲಿನ ದರ ಏರಿಸುವಂತೆ ರೈತರು ಮತ್ತು ಒಕ್ಕೂಟದಿಂದ ಸಾಕಷ್ಟು ಒತ್ತಾಯ ಬರುತ್ತಿದೆ. ಹಾಲಿನ ದರ 5 ರೂ.ಗೆ ಹೆಚ್ಚಿಸುವಂತೆ ರೈತರು ಬೇಡಿಕೆ ಮುಂದಿಟ್ಟಿದ್ದಾರೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ಜೊತೆ ಚರ್ಚೆ ಮಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.
ಇದನ್ನೂ ಓದಿ: ಕೋಲಾರ: ಏಷ್ಯಾದ ಎರಡನೇ ಅತಿದೊಡ್ಡ ಟೊಮ್ಯಾಟೊ ಮಾರುಕಟ್ಟೆಗೆ ಪೊಲೀಸ್ ಭದ್ರತೆ
ಹಾಲಿನ ದರದ ಏರಿಕೆ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳ ಜೊತೆ ಮಾತನಾಡಿದ್ದೇನೆ. ಶೀಘ್ರದಲ್ಲೇ ಹಾಲಿನ ದರ ಏರಿಕೆ ಮಾಡುತ್ತೇವೆ. ಪ್ರಮುಖವಾಗಿ ರೈತರಿಗೆ ಅನುಕೂಲವಾಗಬೇಕು. ಆದ್ದರಿಂದ ಹಾಲಿನ ದರ ಏರಿಕೆ ಮಾಡುತ್ತೇವೆ. 5 ರೂ. ಏರಿಕೆ ಮಾಡಿದರೆ ಒಳ್ಳೆಯದು ಅಂತ ಹೇಳುತ್ತಿದ್ದಾರೆ. ಮತ್ತೊಮ್ಮೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಅಂತಿಮ ನಿರ್ಧಾರ ಮಾಡುತ್ತೇವೆ ಎಂದರು.
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬರುತ್ತಿದ್ದಂತೆ ದಿಢೀರನೇ ವಿದ್ಯುತ್ ದರ ಏರಿಕೆ ಮಾಡಿ ಗ್ರಾಹಕರಿಗೆ ಶಾಕ್ ನೀಡಿತ್ತು. ಇದೀಗ ಗ್ರಾಹಕರಿಗೆ ಹಾಲಿದ ದರ ಏರಿಕೆಯ ಬಿಸಿ ತಟ್ಟಲಿದೆ. ನಷ್ಟದ ಕಾರಣ ಹಾಲು ಒಕ್ಕೂಟಗಳು ಎರಡು ತಿಂಗಳಿಂದ ರೈತರಿಗೆ ನೀಡುತ್ತಿದ್ದ ಸಹಾಯಧನವನ್ನು ಕಡಿತಗೊಳಿಸಲು ಮುಂದಾಗಿದ್ದವು. ಆದರೆ ಪ್ರೋತ್ಸಾಹ ಧನ ಕಡಿಮೆ ಮಾಡದಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದರು. ಇದೇ ಕಾರಣಕ್ಕೆ ಹಾಲಿನ ದರವನ್ನು ಐದು ರೂಪಾಯಿ ಏರಿಕೆಯ ಪ್ರಸ್ತಾವನೆವನ್ನು ಒಕ್ಕೂಟಗಳು ಸರ್ಕಾರದ ಮುಂದಿಟ್ಟಿವೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ