ಡಿಜಿಪಿ ರಾಮಚಂದ್ರ ರಾವ್​​ ರಾಸಲೀಲೆ ಕೇಸ್​​​​: ಸರ್ಕಾರದ ಮುಂದಿರುವ ಸವಾಲುಗಳೇನು?

ಕಚೇರಿಯಲ್ಲಿಯೇ ಮಹಿಳೆಯೋರ್ವರ ಜೊತೆಗೆ ರಾಸಲೀಲೆ ನಡೆಸಿರುವ ವಿಡಿಯೋ ವೈರಲ್ ಆದ ನಂತರ ಡಿಜಿಪಿ ರಾಮಚಂದ್ರ ರಾವ್​​ರನ್ನು ಅಮಾನತುಗೊಳಿಸಿ ರಾಜ್ಯ ಸರ್ಕಾರವೇನೋ ಆದೇಶಿಸಿದೆ. ಈ ಘಟನೆಯು ಕರ್ನಾಟಕ ಪೊಲೀಸ್ ಇಲಾಖೆಗೆ ಮುಜುಗರ ತಂದಿರುವ ನಡುವೆ, ತನಿಖೆ ಮತ್ತು ಭವಿಷ್ಯದ ಕ್ರಮಗಳ ಬಗ್ಗೆ ಹಲವು ಪ್ರಶ್ನೆಗಳು ಹುಟ್ಟಿಕೊಂಡಿವೆ.

ಡಿಜಿಪಿ ರಾಮಚಂದ್ರ ರಾವ್​​ ರಾಸಲೀಲೆ ಕೇಸ್​​​​: ಸರ್ಕಾರದ ಮುಂದಿರುವ ಸವಾಲುಗಳೇನು?
ಡಿಜಿಪಿ ರಾಮಚಂದ್ರ ರಾವ್

Updated on: Jan 20, 2026 | 5:46 PM

ಬೆಂಗಳೂರು, ಜನವರಿ 20: ತಮ್ಮ ಕಚೇರಿಯಲ್ಲಿಯೇ ಮಹಿಳೆ ಜೊತೆ ಡಿಜಿಪಿ ರಾಮಚಂದ್ರ ರಾವ್​​ ರಾಸಲೀಲೆ ನಡೆಸಿರುವ ವಿಡಿಯೋ ಮತ್ತು ಆಡಿಯೋ ರಾಜ್ಯಾದ್ಯಂತ ಹಲ್​​ಚಲ್​​ ಸೃಷ್ಟಿಸಿದೆ. ವಿಚಾರ ಭಾರೀ ಮುಜುಗರ ಉಂಟುಮಾಡಿದ ಕಾರಣ ರಾಮಚಂದ್ರರಾವ್ ಅವರನ್ನು ಸರ್ಕಾರ ಅಮಾನತುಗೊಳಿಸಿ ಆದೇಶಿಸಿದೆ. ಮತ್ತೊಂದೆಡೆ ವಿಡಿಯೋ ವೈರಲ್​​ ಬೆನ್ನಲ್ಲೇ ಗೃಹ ಸಚಿವರ ಭೇಟಿಯಾಗಿದ್ದ ಡಿಜಿಪಿ 10 ದಿನಗಳ ಕಾಲ ರಜೆ ಹಾಕಿ ಅಜ್ಞಾತ ಸ್ಥಳಕ್ಕೆ ತೆರಳಿದ್ದಾರೆ. ಅಧಿಕಾರಿ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಸರ್ಕಾರ ಹೇಳುತ್ತಿದ್ದರೂ ಒಂದಿಷ್ಟು ಪ್ರಶ್ನೆಗಳು ಈ ವಿಚಾರದಲ್ಲಿ ಉದ್ಭವಿಸಿವೆ.

ಪ್ರಶ್ನೆ 1: ಪ್ರಕರಣದ ತನಿಖೆ ಯಾರಿಂದ?

ಹೇಳಿಕೇಳಿ ರಾಮಚಂದ್ರ ರಾವ್​​ ಹಿರಿಯ ಐಪಿಎಸ್​​ ಅಧಿಕಾರಿ. ಡಿಜಿಪಿ ಹುದ್ದೆಯ ಅಧಿಕಾರಿ. ಹೀಗಾಗಿ ಅವರಿಗಿಂತ ಜೂನಿಯರ್​​ ಅಧಿಕಾರಿಯಿಂದ ತನಿಖೆ ಒಪ್ಪಲಾಗದ ಮಾತು. ಹೀಗಾಗಿ ಪ್ರಕರಣದ ತನಿಖೆ ಮತ್ತೋರ್ವ ಡಿಜಿಪಿಯಿಂದಲೇ ಆಗಬೇಕಾದ ಅನಿವಾರ್ಯತೆ ಇದೆ. ತನಿಖಾ ವರದಿ ಬಳಿಕ ಕ್ರಮ ಕೈಗೊಳ್ಳಲಾಗುವುದು. ಸರ್ಕಾರಕ್ಕೆ ಮುಜುಗರ ಆಗಿದ್ದಕ್ಕೆ ಸಸ್ಪೆಂಡ್ ಮಾಡಲಾಗಿದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್​​ ಹೇಳಿದ್ದರೂ ಸಹ ಪ್ರಕರಣದ ತನಿಖೆಗೆ ಯಾರನ್ನು ಇನ್ನೂ ನೇಮಕ ಮಾಡಿಲ್ಲ ಎಂಬುದನ್ನೂ ಸ್ಪಷ್ಟವಾಗಿ ಉಲ್ಲೇಖಿಸಿರೋದಿಲ್ಲಿ ಗಮನಾರ್ಹ.

ಇದನ್ನೂ ಓದಿ: ಯಾರು ಈ ರಾಮಚಂದ್ರ ರಾವ್​​? ಕಚೇರಿಯಲ್ಲೇ ರಾಸಲೀಲೆ ಮಾಡಿ ಸಿಕ್ಕಿಬಿದ್ದ ಡಿಜಿಪಿ ಹಿನ್ನೆಲೆ ಏನು? ಇಲ್ಲಿದೆ ಮಾಹಿತಿ

ಪ್ರಶ್ನೆ 2: ಸಂತ್ರಸ್ತ ಮಹಿಳೆ ದೂರು ಕೊಡದಿದ್ದಲ್ಲಿ ಮುಂದೇನು?

ವೈರಲ್​​ ಆಗಿರುವ ವಿಡಿಯೋದಲ್ಲಿ ರಾಮಚಂದ್ರರಾವ್​​ ಜೊತೆಗಿರುವ ಸಂತ್ರಸ್ತ ಮಹಿಳೆ ಬೆಳಗಾವಿ ಮೂಲದ ಪ್ರಾಧ್ಯಾಪಕಿಯಾಗಿದ್ದರು ಎಂಬುದು ಗೊತ್ತಾಗಿದೆ. ಗಂಡ ಮತ್ತು ಹೆಂಡತಿ ನಡುವೆ ಗಲಾಟೆ ಹಿನ್ನೆಲೆ ಆಕೆ ಪೊಲೀಸ್​​ ಠಾಣೆ ಮೆಟ್ಟಿಲೇರಿದ್ದರು. ಅಲ್ಲಿ ಸರಿಯಾದ ರೀತಿಯಲ್ಲಿ ನ್ಯಾಯ ಸಿಗದ ಕಾರಣ 6 ವರ್ಷದ ಹಿಂದೆ ಬೆಳಗಾವಿಯ ಐಜಿಯಾಗಿದ್ದ ರಾಮಚಂದ್ರರಾವ್ ಅವರನ್ನು ಸಂಪರ್ಕಿಸಿದ್ದರು. ಬಳಿಕ ಆಕೆ ಮತ್ತು ರಾಮಚಂದ್ರರಾವ್​​ ನಡುವೆ ಸಲುಗೆ ಬೆಳೆದಿತ್ತು ಎನ್ನಲಾಗಿದೆ. ಆದರೆ ಅಧಿಕಾರಿಯಿಂದ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಆಗಿದೆ ಎಂದು ಸಂತ್ರಸ್ತೆ ಈವರೆಗೂ ದೂರು ಕೊಟ್ಟಿಲ್ಲ.

ಪ್ರಶ್ನೆ 3: ಅಧಿಕಾರಿ ಮೇಲೆ ಕ್ರಮಕ್ಕೆ ವಿಡಿಯೋ ಅಸಲೀಯತ್ತು ಸಾಕಲ್ಲವೇ?

ಒಂದೊಮ್ಮೆ ಸಂತ್ರಸ್ತೆ ದೂರು ನೀಡಲು ಹಿಂದೇಟು ಹಾಕಿದರೂ ವೈರಲ್​​ ಆಗಿರುವ ವಿಡಿಯೋ ಅಸಲೀಯತ್ತನ್ನು ಸರ್ಕಾರ ತಿಳಿದುಕೊಳ್ಳಬಹುದು. FSL ವರದಿ ಆಧರಿಸಿ ಘಟನೆ ಸತ್ಯ ಎಂಬುದು ಸಾಭೀತಾದರೂ ರಾಮಚಂದ್ರರಾವ್​​ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬಹುದು. ಸರ್ಕಾರಿ ಕಚೇರಿಯಲ್ಲಿ ಅದರಲ್ಲೂ ಸಮವಸ್ತ್ರದಲ್ಲೇ ಅಧಿಕಾರಿ ಚಕ್ಕಂದ ಆಡಿರುವುದು ಪೊಲೀಸ್​​ ಯೂನಿಫಾರಂಗೇ ಮಾಡಿರುವ ದೊಡ್ಡ ಅವಮಾನ.

ಪ್ರಶ್ನೆ 4: ಸೇವಾ ಅವಧಿ ಉಳಿದುರುವುದೇ ಕೆಲ ತಿಂಗಳು; ಕ್ರಮ ಯಾವಾಗ?

ನಾಗರಿಕ ಹಕ್ಕುಗಳ ಜಾರಿ ನಿರ್ದೇಶನಾಲಯದ ಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದ ರಾಮಚಂದ್ರ ರಾವ್​​ ಅವರ ಸೇವಾ ಅವಧಿ ಉಳಿದಿರುವುದೇ ಇನ್ನು ಕೆಲವು ತಿಂಗಳುಗಳು ಮಾತ್ರ. ಹೀಗಿರುವಾಗ ಘಟನೆಯ ತನಿಖೆಯ ಬಗ್ಗೆ ಇನ್ನೂ ತನಿಖಾಧಿಕಾರಿಯನ್ನೇ ನೇಮಿಸದ ಸರ್ಕಾರ ಪ್ರಕರಣದ ಸತ್ಯಾಸತ್ಯತೆ ತಿಳಿಯೋದು ಯಾವಾಗ? ತನಿಖೆ ಮುಗಿದು ಅದರ ವರದಿ ಅಧಾರದಲ್ಲಿ ಕ್ರಮ ಜರುಗಿಸೋದು ಯಾವಾಗ ಎನ್ನುವ ಪ್ರಶ್ನೆ ಸದ್ಯ ಸಾರ್ವಜನಿಕರನ್ನು ಕಾಡುತ್ತಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.