Bengaluru: ಜಿಬಿಎ ಅಧಿಕಾರಿ ಮೇಲೆ ಗುತ್ತಗೆದಾರನಿಂದ ದರ್ಪ, ಅವಾಚ್ಯ ಪದಗಳಿಂದ ನಿಂದನೆ
ಬೆಂಗಳೂರಿನಲ್ಲಿ ಜಿಬಿಎ ಮಹಿಳಾ ಅಧಿಕಾರಿಗೆ ಗುತ್ತಿಗೆದಾರನೋರ್ವ ಬೆದರಿಕೆ ಹಾಕಿ, ನಿಂದಿಸಿರುವ ಘಟನೆ ನಡೆದಿದೆ. ಟೆಂಡರ್ ಫೈಲ್ ವಿಚಾರವಾಗಿ ಧಮ್ಕಿ ಹಾಕಿ, ದಾಖಲೆಗಳನ್ನು ಹರಿದುಹಾಕಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಾಗಿದೆ. ಶಿಡ್ಲಘಟ್ಟ ಘಟನೆ ಬೆನ್ನಲ್ಲೇ ಈ ಪ್ರಕರಣ ವರದಿಯಾಗಿದ್ದು, ಮಹಿಳಾ ಅಧಿಕಾರಿಗಳ ಸುರಕ್ಷತೆ ಮತ್ತು ಗೌರವದ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

ನೆಲಮಂಗಲ, ಜನವರಿ 20: ಶಿಡ್ಲಘಟ್ಟ ನಗರಸಭೆಯ ಪೌರಾಯುಕ್ತೆ ಅಮೃತಾ ಜಿ. ಅವರಿಗೆ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ಬೆದರಿಕೆ ಹಾಕಿದ ವಿಚಾರ ರಾಜ್ಯದಲ್ಲಿನ್ನೂ ಚರ್ಚೆಯಲ್ಲಿದೆ. ಆರೋಪಿ ಬಂಧನವಾಗದಿರುವ ಬಗ್ಗೆ ಆಕ್ರೋಶ ಭುಗಿಲೆದ್ದಿದೆ. ಈ ನಡುವೆ ಮಹಿಳಾ ಅಧಿಕಾರಿಯನ್ನು ಗುತ್ತಿಗೆದಾರನೋರ್ವ ನಿಂದಿಸಿ, ಆವಾಜ್ ಹಾಕಿರುವ ಘಟನೆ ಬೆಂಗಳೂರಲ್ಲಿ ನಡೆದಿದೆ. ಕಚೇರಿಗೆ ನುಗ್ಗಿರುವ ಗುತ್ತಿಗೆದಾರ ಪುಂಡಾಟ ಮೆರೆದ ಆರೋಪ ಕೇಳಿಬಂದಿದ್ದು, ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅವಾಚ್ಯ ಪದಗಳಿಂದ ನಿಂದನೆ ಆರೋಪ
ದಾಸರಹಳ್ಳಿ ಭಾಗದಲ್ಲಿ ಕಾಮಗಾರಿ ಕೆಲಸ ನಮಗೆ ಬರಬೇಕು. ನಮ್ಮ ಫೈಲ್ ಮೂವ್ ಮಾಡಬೇಕೆಂದು ಆವಾಜ್ ಹಾಕಿರುವ ಕಂಟ್ರಾಕ್ಟರ್ ನಂದೀಶ್, ಬಾಗಲಗುಂಟೆ ಜಿಬಿಎ ಕಚೇರಿಗೆ ನುಗ್ಗಿ ಜಿಬಿಎ ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಎಇಇ) ಸಂಗೀತಾಗೆ ನಿಂದಿಸಿದ್ದಾರೆ. ದಾಖಲಾತಿಗಳನ್ನು ಹರಿದು ಹಾಕಿದ್ದಲ್ಲದೆ, ಅವಾಚ್ಯ ಪದಗಳ ಬಳಕೆ ಮಾಡಿದ್ದಾರೆ. ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯ ಟೆಂಡರ್ ಸಂಬಂಧ ಫೈಲ್ ಮೂವ್ ಮಾಡುವಂತೆ ಧಮ್ಕಿ ಹಾಕಿರೋದಾಗಿ ಆರೋಪಿಸಲಾಗಿದೆ.
ಇದನ್ನೂ ಓದಿ: ರಾಜೀವ್ ಗೌಡ ವಿರುದ್ಧ ಮತ್ತೊಂದು ಆರೋಪ; ತಹಶೀಲ್ದಾರ್ಗೂ ನಿಂದಿಸಿದ್ದನಾ ‘ಕೈ’ ಮುಖಂಡ?
ಗುತ್ತಿಗೆದಾರನ ದಬ್ಬಾಳಿಕೆಯಿಂದ ಮನನೊಂದ ಸಂಗೀತಾ ಅವರು ಬಾಗಲಗುಂಟೆ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಈ ಘಟನೆ ಮಹಿಳಾ ಅಧಿಕಾರಿಗಳಿಗೆ ಇರುವ ಗೌರವ ಮತ್ತು ಕೆಲಸ ಮಾಡುವ ವಾತಾವರಣದ ಬಗ್ಗೆ ಮತ್ತೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಮಹಿಳಾ ಅಧಿಕಾರಿಗಳಿಗೆ ಗೌರವ ಇಲ್ವಾ? ಬೆಲೆ ಇಲ್ವಾ? ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಶಿಡ್ಲಘಟ್ಟದಲ್ಲಿ ಪೌರಾಯುಕ್ತರಿಗೆ ಕೈ ಮುಖಂಡನಿಂದ ಆವಾಜ್, ಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ಮಹಿಳಾ ಅಧಿಕಾರಿಗೆ ಬೆದರಿಕೆ ಹಾಕಿದಂತಹ ಘಟನೆಗಳ ಸಾಲಿಗೆ ಮತ್ತೊಂದು ಸೇರ್ಪಡೆ ಈ ಮೂಲಕ ಆದಂತಾಗಿದೆ.
ವರದಿ: ಮಂಜುನಾಥ್, ಟಿವಿ9 ನೆಲಮಂಗಲ
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
