ರಾಜೀವ್ ಗೌಡ ವಿರುದ್ಧ ಮತ್ತೊಂದು ಆರೋಪ: ತಹಶೀಲ್ದಾರ್ಗೂ ನಿಂದಿಸಿದ್ದನಾ ‘ಕೈ’ ಮುಖಂಡ?
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಮತ್ತೊಂದು ಆರೋಪ ಕೇಳಿಬಂದಿದೆ. ತಹಶೀಲ್ದಾರ್ ಅವರಿಗೂ ನಿಂದಿಸಲಾಗಿದೆ ಎನ್ನಲಾಗಿದ್ದು, ಈ ಬಗ್ಗೆ ತಾನು ಆಡಿಯೋ ರೆಕಾರ್ಡ್ ಮಾಡಿಕೊಂಡಿಲ್ಲ ಎಂದು ಅಧಿಕಾರಿ ಜಿಲ್ಲಾ ಉಸ್ತುವಾರಿ ಸಚಿವರು ಸೇರಿ ಹಲವರ ಬಳಿ ಅಲವತ್ತುಕೊಂಡಿದ್ದಾರಂತೆ. ಇನ್ನು ರಾಜೀವ್ ಗೌಡ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, 3 ತಂಡಗಳು ಹುಡುಕಾಟ ನಡೆಸುತ್ತಿವೆ.

ಚಿಕ್ಕಬಳ್ಳಾಪುರ, ಜನವರಿ 15: ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಬೆದರಿಕೆ ಹಾಕಿರುವ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಕಾಂಗ್ರೆಸ್ ಮುಖಂಡ ರಾಜೀವ್ ಗೌಡ ವಿರುದ್ಧ ಇಂತಹುದ್ದೇ ಮತ್ತೊಂದು ಆರೋಪ ಕೇಳಿಬಂದಿದೆ. ಶಿಡ್ಲಘಟ್ಟ ತಹಶೀಲ್ದಾರ್ ಗಗನಸಿಂಧು ಅವರಿಗೂ ಏಕವಚನದಲ್ಲಿ ನಿಂದಿಸಿದ್ದ ಎನ್ನಲಾಗಿದ್ದು, ಆದರೆ ತಾನು ಆಡಿಯೋ ರೆಕಾರ್ಡ್ ಮಾಡಿಕೊಂಡಿಲ್ಲ ಎಂದವರು ತಿಳಿಸಿದ್ದಾರೆ. ಈ ಬಗ್ಗೆ ನಗರಸಭೆ ಆಯುಕ್ತೆ ಅಮೃತಾ, ಸ್ಥಳೀಯ ಶಾಸಕ ಬಿ.ಎನ್. ರವಿಕುಮಾರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ಬಳಿ ಅವರು ಅಳಲು ತೋಡಿಕೊಂಡಿದ್ದಾರೆ.
ಆರೋಪಿಗಾಗಿ 3 ತಂಡಗಳಿಂದ ಹುಡುಕಾಟ
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ನಿಂದನೆ ವಿಚಾರವಾಗಿ ತಲೆಮರೆಸಿಕೊಂಡಿರುವ ರಾಜೀವ್ಗೌಡಗೆ 3 ತಂಡಗಳಿಂದ ಹುಡುಕಾಟ ನಡೆಸಲಾಗುತ್ತಿದೆ. ಶಿಡ್ಲಘಟ್ಟ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಆನಂದಕುಮಾರ್, ಚಿಂತಾಮಣಿ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಶಿವರಾಜ್ ಮತ್ತು ಸೈಬರ್ ಪೊಲೀಸ್ ಠಾಣೆ ಪಿಐ ಸೂರ್ಯಪ್ರಕಾಶ್ ನೇತೃತ್ವದಲ್ಲಿ ಶೋಧ ನಡೆಯುತ್ತಿದೆ. ಬಂಧನ ಭೀತಿಯಿಂದ ನಿನ್ನೆ ರಾತ್ರಿ ರಾಜೀವ್ ಗೌಡ ಪರಾರಿಯಾಗಿದ್ದು, ಆತನ 2 ಮೊಬೈಲ್ಗಳು ಕೂಡ ಸ್ವಿಚ್ಆಫ್ ಆಗಿವೆ. ಹೀಗಾಗಿ ಬೆಂಗಳೂರಿನ ಇಂದಿರಾನಗರದಲ್ಲಿ 1 ತಂಡ, ಸಂಜಯ್ ನಗರದಲ್ಲಿ 1 ತಂಡ ಮತ್ತು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಒಂದು ತಂಡದಿಂದ ಆರೋಪಿಗೆ ಹುಡುಕಾಟ ನಡೆಯುತ್ತಿದೆ. ಮತ್ತೊಂದೆಡೆ ರಾಜೀವ್ ಗೌಡನನ್ನು ಬಂಧಿಸದಿದ್ರೆ ಶಿಡ್ಲಘಟ್ಟ ಬಂದ್ ಮಾಡುವುದಾಗಿ ಎನ್ಡಿಎ ಮುಖಂಡರು ಪೊಲೀಸರಿಗೆ ಎಚ್ಚರಿಕೆ ಕೂಡ ನೀಡಿರುವ ಕಾರಣ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದೆ.
ಇದನ್ನೂ ಓದಿ: ಶಿಡ್ಲಘಟ್ಟ ಕಮಿಷನರ್ಗೆ ಅಶ್ಲೀಲವಾಗಿ ನಿಂದಿಸಿ ಬೆದರಿಕೆ; ಕಾಂಗ್ರೆಸ್ ಮುಖಂಡನಿಗೆ ಶುರುವಾಯ್ತು ಬಂಧನದ ಭೀತಿ
ಮತ್ತೊಂದೆಡೆ ಪ್ರಾಣ ಬೆದರಿಕೆ ಆಡಿಯೋ ವೈರಲ್ ಆಗುತ್ತಿದ್ದಂತೆ, ಸಂಬಂಧಿಕರು ಹಾಗೂ ಪ್ರಭಾವಿ ಗುತ್ತಿಗೆದಾರನ ಮೂಲಕ ಪೌರಾಯುಕ್ತೆ ಅಮೃತಾರನ್ನು ರಾಜೀವ್ ಗೌಡ ಪರೋಕ್ಷವಾಗಿ ಸಂಪರ್ಕಿಸಿದ್ದ. ರಾಜಕಾರಣಿಗಳ ವಿರೋಧ ಕಟ್ಟಿಕೊಂಡರೆ ಮುಂದೆ ಪೋಸ್ಟಿಂಗ್ ಸಿಗಲ್ಲ. ಇದೆಲ್ಲ ಯಾಕೆ ಬೇಕು ಬಿಟ್ಟು ಬಿಡು ಎಂದು ರಾಜೀವ್ ಗೌಡ ಅಣಿತಿಯಂತೆ ಗುತ್ತಿಗೆದಾರರೊಬ್ಬರು ನಗರಸಭೆ ಪೌರಾಯುಕ್ತೆಗೆ ತಿಳಿಸಿದ್ದರು. ಆದರೆ ಹುದ್ದೆಗಿಂತ ಆತ್ಮಗೌರವ ಮುಖ್ಯ, ಬೇಕಾದರೆ ಮತ್ತೆ ಸ್ವಾಫ್ಟ್ವೇರ್ ಕೆಲಸಕ್ಕೆ ಸೇರುತ್ತೇನೆ ಎಂದು ಅಮೃತಾ ಅವರು ಈ ವೇಳೆ ಹೇಳಿದ್ದಾರೆ. ಸರ್ಕಾರಿ ಕೆಲಸಕ್ಕೆ ಸೇರುವ ಮುನ್ನ ಮಾಸಿಕ 3 ಲಕ್ಷ ರೂಪಾಯಿ ಸಂಬಳ ಪಡೆಯುತ್ತಿದ್ದೆ. ರಾಜೀವ್ ಗೌಡ ಮಾತಿನಿಂದ ಮನೆಯವರು ಬೇಸರಗೊಂಡಿದ್ದಾರೆ ಎಂದು ಅಮೃತಾ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
