
ಬೆಂಗಳೂರು: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್(Tushar Girinath) ಇಂಥ ನೀಚ ಕೆಲಸಕ್ಕೆ ಕೈ ಹಾಕಿದ್ದು ಇಡೀ ಐಎಎಸ್ಗೆ(IAS) ಅವಮಾನ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್(DK Shivakumar) ಗಂಭೀರ ಆರೋಪ ಮಾಡಿದ್ದಾರೆ. ಮತದಾರರ ಪಟ್ಟಿ ನವೀಕರಣಕ್ಕೆ ನೀಡಿದ್ದ ಅನುಮತಿ ದುರ್ಬಳಕೆ ವಿಚಾರಕ್ಕೆ ಸಂಬಂಧಿಸಿ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಬಿಬಿಎಂಪಿ ಹಾಗೂ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಿಬಿಎಂಪಿ ಬಿಜೆಪಿ ಕಾರ್ಯಕರ್ತರ ಕೈಯ್ಯಲ್ಲಿ ಕೆಲಸ ಮಾಡಿಸುತ್ತಿದೆ. ನಿನ್ನೆ ಇದ್ದಕ್ಕಿದ್ದಂತೆ ಚಿಲುಮೆ ಸಂಸ್ಥೆಗೆ ನೀಡಿದ್ದ ಅನುಮತಿ ಆದೇಶವನ್ನು ಬಿಬಿಎಂಪಿ ಹಿಂಪಡೆದಿದೆ. ಚಿಲುಮೆ ಟ್ರಸ್ಟ್ ನಿಯಮ ಉಲ್ಲಂಘಿಸಿದೆ ಎನ್ನೋದು ಸ್ಪಷ್ಟವಾಗಿದೆ. ಈಗಾಗಲೇ ದಾಖಲೆಗಳನ್ನು ಅಪ್ಲೋಡ್ ಮಾಡಲಾಗಿದ್ದಕ್ಕೆ ಯಾರು ಜವಾಬ್ದಾರಿ? ಎಲ್ಲಿ ಎಫ್ಐಆರ್ ದಾಖಲು ಮಾಡಿದ್ದೀರ? ಯಾರನ್ನಾದ್ರೂ ಅರೆಸ್ಟ್ ಮಾಡಿದ್ದೀರಾ? ಎಲ್ಲದರಲ್ಲೂ ಲಂಚಾವತಾರ ನಡೆಯುತ್ತಿದೆ. ನೈಜ ಓಟರ್ ಐಡಿ ಕಿತ್ತುಹಾಕಲು ಇದೆಲ್ಲ ಮಾಡಲಾಗಿದೆ. ಎಸ್ಸಿ, ಎಸ್‌ಟಿ ಓಟರ್ ಗಳ ದಾಖಲೆ ಕಿತ್ತುಹಾಕಲು ಹೀಗೆ ಮಾಡಲಾಗಿದೆ. ಒಂದೇ ರಸ್ತೆಯಲ್ಲಿ ಹೊಂಬಾಳೆ ಟ್ರಸ್ಟ್, ಹೊಂಬಾಳೆ ಕಂಪನಿ ಮಾಡಿಕೊಂಡಿದ್ದಾರೆ. ಅಲ್ಲಿಯೇ ಅವರದೇ ಮಾಲೀಕತ್ವದ ಚಿಲುಮೆ ಸಂಸ್ಥೆ ಮಾಡಲಾಗಿದೆ. ಇವರಿಗೆ ಒಂದೇ ಒಂದು ಚುನಾವಣೆ ಗೆಲ್ಲುವುದಕ್ಕೆ ಸಾಧ್ಯವಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಡಿಕೆ ಶಿವಕುಮಾರ್ ಗರಂ ಆಗಿದ್ದಾರೆ.
ಇದನ್ನೂ ಓದಿ: ನಂಬಿಕೆ ದ್ರೋಹ: ಮತದಾರರ ಪಟ್ಟಿ ನವೀಕರಣ ನೆಪದಲ್ಲಿ ಬೆಂಗಳೂರಿನ ಸಾವಿರಾರು ಮಂದಿಯ ಸೂಕ್ಷ್ಮ ಮಾಹಿತಿ ಸಂಗ್ರಹಿಸಿದ ಎನ್ಜಿಒ
ಇದು ದೇಶದಲ್ಲೇ ಚರ್ಚೆ ಆಗಬೇಕಿರುವ ವಿಚಾರ. ಕೂಡಲೇ ಚುನಾವಣಾ ಆಯೋಗ ಸಮಗ್ರ ತನಿಖೆ ಮಾಡಬೇಕು. ಅಕ್ರಮದಲ್ಲಿ ಭಾಗಿಯಾದವರ ಮೇಲೆ ಎಫ್ಐಆರ್ ದಾಖಲಿಸಬೇಕು. ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧವೂ FIR ದಾಖಲಿಸಬೇಕು ಎಂದು ಡಿಕೆ ಶಿವಕುಮಾರ್ ಆಗ್ರಹಿಸಿದ್ದಾರೆ. ವೋಟರ್ ಐಡಿ ಅಕ್ರಮದ ಪಿತಾಮಹ ಡಾ.ಅಶ್ವತ್ಥ್ ನಾರಾಯಣ. ಇವರ ಸಹಕಾರ ಇಲ್ಲದೇ ಈ ರೀತಿ ನಡೆಯುತ್ತಾ? ಎಂದು ಡಿಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ಮಾಹಿತಿ ಸಂಗ್ರಹಿಸಿದ ಕಂಪನಿ ಮಾಲೀಕರ ವಿರುದ್ಧ ದೂರು ನೀಡ್ತೇವೆ. ಕ್ರಮಕ್ಕೆ ಆಗ್ರಹಿಸಿ ಚುನಾವಣಾ ಆಯೋಗಕ್ಕೂ ದೂರು ನೀಡುತ್ತೇವೆ ಎಂದು ಡಿಕೆ ಶಿವಕುಮಾರ್ ತಿಳಿಸಿದ್ದಾರೆ.