
ಬೆಂಗಳೂರು, ಅಕ್ಟೋಬರ್ 04: ಶ್ವಾನವನ್ನು ಮುದ್ದಾಡೋದು ಅಂದರೆ ಹಲವರಿಗೆ ಎಲ್ಲಿಲ್ಲದ ಪ್ರೀತಿ. ಇಂತವರಿಗೆ ರೇಬಿಸ್ ವೈರಸ್ ಬಗ್ಗೆ ತಜ್ಞರು ಗಂಭೀರ ಎಚ್ಚರಿಕೆ ನೀಡಿದ್ದು, ಕೇವಲ ಒಂದು ದಿನದ ಮರಿಯಲ್ಲಿಯೂ ವೈರಸ್ ಇರಬಹುದಾಗಿದೆ. ಗಾಯಗೊಂಡ ಚರ್ಮದ ಮೇಲೆ ನಾಯಿ ನೆಕ್ಕುವುದು ಅಥವಾ ನಾಯಿಯ ಜೊಲ್ಲು ಕಣ್ಣಿಗೆ ಸಿಡಿಯುವುದನ್ನು ಗಂಭೀರ ಅಪಾಯದ, ಅಂದರೆ ವರ್ಗ-3 ಸಂಪರ್ಕ ಎಂದು ಪರಿಗಣಿಸಲಾಗುತ್ತದೆ ಎಂದು ನಿಮ್ಹಾನ್ಸ್‌ನ ನ್ಯೂರೋವೈರಾಲಜಿ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ. ರೀಟಾ ಮಣಿ ತಿಳಿಸಿದ್ದಾರೆ.
ರೇಬಿಸ್ ಸೋಂಕಿತ ನಾಯಿಯ ಜೊಲ್ಲಿನಲ್ಲಿ ರೇಬಿಸ್ ವೈರಸ್ ಇರುತ್ತದೆ. ಇದು ಬಾಯಿ, ಕಣ್ಣುಗಳಂತಹ ಲೋಳೆಪೊರೆಗಳ ಮೂಲಕ ಅಥವಾ ಗಾಯಗೊಂಡ ಚರ್ಮದ ಮೂಲಕ ದೇಹವನ್ನು ಪ್ರವೇಶಿಸಬಹುದು. ಆದರೆ ಆರೋಗ್ಯಕರ, ಯಾವುದೇ ಗಾಯವಿಲ್ಲದ ಚರ್ಮದ ಮೂಲಕ ವೈರಸ್ ದೇಹವನ್ನು ಪ್ರವೇಶಿಸಲು ಸಾಧ್ಯವಿಲ್ಲ. ಏತನ್ಮಧ್ಯೆ, ನಾಯಿ ಸಂಪರ್ಕಕ್ಕೆ ಬಂದ ಬಳಿಕ ನಿರ್ಲಕ್ಷ್ಯ ತೋರುವುದು ಮಾರಣಾಂತಿಕವಾಗಬಹುದು ಎಂದವರು ಎಚ್ಚರಿಸಿದ್ದಾರೆ.
ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಹವಾಮಾನ ವೈಪರೀತ್ಯ: ವೈರಲ್ ಜ್ವರಕ್ಕೆ ಬೆಚ್ಚಿಬಿದ್ದ ಬೆಂಗಳೂರಿಗರು, ಆಸ್ಪತ್ರೆಗಳಲ್ಲಿ ರೋಗಿಗಳ ದಂಡು!
ಇತ್ತೀಚೆಗೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ಮೂಲದ 46 ವರ್ಷದ ವ್ಯಕ್ತಿಯೊಬ್ಬರು ಬೀದಿ ನಾಯಿ ಮುಖವನ್ನು ನೆಕ್ಕಿದ ಬಳಿಕ ರೇಬಿಸ್‌ಗೆ ತುತ್ತಾಗಿ ಮೃತಪಟ್ಟಿದ್ದರು. ರಾತ್ರಿ ಹೊಲವೊಂದರಲ್ಲಿ ಮಲಗಿದ್ದಾಗ ಜೊಲ್ಲು ಸುರಿಸುತ್ತಿದ್ದ ಬೀದಿ ನಾಯಿಯೊಂದು ಅವರ ಎದೆಯ ಮೇಲೆ ಕುಳಿತಿತ್ತು. ಗಾಬರಿಗೊಂಡ ಅವರು ನಾಯಿಯನ್ನು ದೂರ ತಳ್ಳಲು ಪ್ರಯತ್ನಿಸಿ, ಬಳಿಕ ಕೋಲಿನಿಂದ ಓಡಿಸಲು ಯತ್ನಿಸಿದ್ದಾರೆ. ಈ ವೇಳೆ ಆಕಸ್ಮಿಕವಾಗಿ ಅವರ ಬೆರಳಿಗೆ ಗೀರು ಬಿದ್ದಿತ್ತು. ಆ ಬಳಿಕ ಸೆಪ್ಟೆಂಬರ್ 8ರಂದು ಅವರಲ್ಲಿ ರೇಬಿಸ್‌ನ ಲಕ್ಷಣಗಳು ಕಾಣಿಸಿಕೊಂಡಿದ್ದು, ಬಳಿಕ ಅವರನ್ನು ಚಿತ್ರದುರ್ಗ ವೈದ್ಯಕೀಯ ಸಂಸ್ಥೆಗೆ ದಾಖಲಿಸಲಾಗಿತ್ತು. ಬಳಿಕ ಅವರನ್ನು EDHಗೆ ಕರೆತರಲಾಗಿತ್ತಾದರೂ ಸೆಪ್ಟೆಂಬರ್ 12ರಂದು ಅವರು ಮೃತಪಟ್ಟರು ಎಂದು ಇಂದಿರಾನಗರದ ಎಪಿಡೆಮಿಕ್ ಡಿಸೀಸ್ ಕಂಟ್ರೋಲ್ ಆಸ್ಪತ್ರೆ (EDH)ಯ ಶಸ್ತ್ರಚಿಕಿತ್ಸಕ ಡಾ. ಅನಿಲ್ ಕುಮಾರ್ ಬನಗಾರ್ ತಿಳಿಸಿದ್ದಾರೆ. ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿಯೂ ರೇಬಿಸ್‌ಗೆ ಯಾವುದೇ ಚಿಕಿತ್ಸೆ ಇಲ್ಲ. ರೋಗದ ಲಕ್ಷಣಗಳು ಕಾಣಿಸಿಕೊಂಡ ಬಳಿಕ ಇದು ಬಹುತೇಕ ಸಂದರ್ಭಗಳಲ್ಲಿ ಮಾರಣಾಂತಿಕವಾಗುತ್ತದೆ ಎಂದು ಡಾ. ಬನಗಾರ್ ಎಚ್ಚರಿಸಿರೋದಾಗಿ ದಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.