ಬೆಂಗಳೂರು: ನಗರದ ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಹೇರಿಕೆ ಕುರಿತು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಮಾಧ್ಯಮಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದರು. ಶಾಲೆಯ ವರ್ತನೆಯಿಂದ ಕರ್ನಾಟಕ ಶಿಕ್ಷಣ ಕಾಯ್ದೆಯ ಉಲ್ಲಂಘನೆಯಾಗಿದೆ. ಶಾಲೆಗಳಲ್ಲಿ ಧಾರ್ಮಿಕ ವಿಚಾರ ಬೋಧನೆ ಮಾಡುವಂತಿಲ್ಲ. ಹೀಗಾಗಿ ಶಾಲೆಯ ವಿರುದ್ಧ ನೊಟೀಸ್ ಜಾರಿ ಮಾಡಲು ಸೂಚನೆ ನೀಡಲಾಗಿದೆ ಎಂದು ಹೇಳಿದರು. ಪಿಯುಸಿ ಪರೀಕ್ಷೆ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದಲ್ಲಿ ಪಿಯುಸಿ ಪರೀಕ್ಷೆ ತುಂಬಾ ಚೆನ್ನಾಗಿ ನಡೆಯುತ್ತಿದೆ. ಎಸ್ಎಸ್ಎಲ್ಸಿ ಮೌಲ್ಯಮಾಪನವೂ ಆರಂಭವಾಗಿದೆ. ಇದೇ ರೀತಿ ಮೌಲ್ಯಮಾಪನ ನಡೆದರೆ ಮೇ ಎರಡನೇ ವಾರದಲ್ಲಿಯೇ ಫಲಿತಾಂಶ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಧರ್ಮದ ಆಧಾರದ ಮೇಲೆ ಬಿಜೆಪಿಯವರು ಸಮಾಜ ಒಡೆಯುತ್ತಾರೆ ಎಂದು ಹಲವರು ದೂರುತ್ತಿದ್ದಾರೆ. ಈಗ ಇವರೆಲ್ಲರೂ ಎಲ್ಲಿಗೆ ಹೋದರು? ಬುದ್ಧಿಜೀವಿಗಳೂ ಮೌನವಾಗಿದ್ದಾರೆ. ಭಗವದ್ಗೀತೆ, ಟಿಪ್ಪು ವಿಚಾರ ಬಂದಾಗ ಮಾತ್ರ ಇವರೆಲ್ಲರೂ ಮಾತನಾಡುತ್ತಾರೆ. ಈಗ ಏಕೆ ಈ ಕುರಿತು ಮಾತನಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಜೂನ್, ಜುಲೈನಲ್ಲಿ ಕೊರೊನಾ 4ನೇ ಅಲೆ ಬರಬಹುದು ಎಂದು ಹೇಳಲಾಗುತ್ತಿದೆ. ಕೊರೊನಾ ತಡೆಗೆ ರಚಿಸಿರುವ ಕಾರ್ಯಪಡೆ ಮತ್ತು ಆರೋಗ್ಯ ಇಲಾಖೆಯ ಸೂಚನೆಯನ್ನು ನಾವೂ ಅನುಸರಿಸುತ್ತೇವೆ. ಮೇ 16ರಿಂದ ಶೈಕ್ಷಣಿಕ ವರ್ಷ ಆರಂಭವಾಗುತ್ತದೆ. ಇದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಶಾಲೆಗೆ ಮಕ್ಕಳನ್ನು ದಾಖಲಿಸಿಕೊಳ್ಳುವ ವೇಳೆ ಬೈಬಲ್ ಕಲಿಕೆಗೆ ಒಪ್ಪಿಗೆ ಇದೆಯೇ ಎಂದು ಕೇಳುತ್ತಾರೆ. ಒಪ್ಪಿಗೆ ನೀಡದಿದ್ದರೆ ಪ್ರವೇಶವೇ ಸಿಗುವುದಿಲ್ಲ. ಇದು ತಪ್ಪು. ರಾಜ್ಯದ ಎಲ್ಲಾ ಕ್ರೈಸ್ತ ಶಿಕ್ಷಣ ಸಂಸ್ಥೆಗಳ ಪಠ್ಯ ಪರಿಶೀಲನೆಗೆ ಸೂಚನೆ ನೀಡಿದ್ದೇನೆ. ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವೇಳೆ ಡೋಂಗಿ ಸೆಕ್ಯೂಲರಿಸ್ಟ್ಗಳು ಕಿರುಚಾಡಿದ್ದರು. ಆದರೆ ಈಗ ಕಾಂಗ್ರೆಸ್, ಜೆಡಿಎಸ್ ಇದರ ಬಗ್ಗೆ ಮಾತನಾಡಿಲ್ಲ. ಭಗವದ್ಗೀತೆಗೆ ವಿರೋಧ ಮಾಡುವವರು ಬೈಬಲ್ ವಿಚಾರದಲ್ಲಿ ಸುಮ್ಮನಿದ್ದಾರೆ ಎಂದು ಆಕ್ಷೇಪಿಸಿದರು.
ಒಂದು ಸಬ್ಜೆಕ್ಟ್ ಅಗಿ ಬೈಬಲ್ ಕಲಿಕೆ ಇಲ್ಲ: ಫಾದರ್ ಮಾರ್ಟಿನ್ ಕುಮಾರ್
ಕ್ಲಾರೆನ್ಸ್ ಶಾಲೆಯಲ್ಲಿ ಬೈಬಲ್ ಕಡ್ಡಾಯಗೊಳಿಸಿರುವ ಕುರಿತು ಟಿವಿ9ಗೆ ಪ್ರತಿಕ್ರಿಯಿಸಿದ ಶಿವಾಜಿನಗರ ಚರ್ಚ್ನ ಫಾದರ್ ಮಾರ್ಟಿನ್ ಕುಮಾರ್ ಕ್ರಿಶ್ಚಿಯನ್ ಶಾಲೆಗಳಲ್ಲಿ ಒಂದು ಸಬ್ಜೆಕ್ಟ್ ಆಗಿ ಬೈಬಲ್ ಇರುವುದಿಲ್ಲ. ಸರ್ಕಾರವು ಯಾವುದೇ ನಿಯಮ ತಂದರೂ ನಮಗೆ ತೊಂದರೆಯಿಲ್ಲ. ಶಾಲೆಗಳಲ್ಲಿ ಬೈಬಲ್ ಬೋಧನೆ ಬೇಡ ಎಂದು ಸೂಚನೆ ನೀಡಿದರೆ ತ್ಯಜಿಸಲು ನಾವು ಸಿದ್ಧರಿದ್ದೇವೆ. ಮತಾಂತರಕ್ಕಾಗಿ ನಾವು ಬೈಬಲ್ ಕಡ್ಡಾಯ ಮಾಡುವುದಿಲ್ಲ. ಭಗವದ್ಗೀತೆ ಒಳ್ಳೆಯ ಪುಸ್ತಕ, ಒಳ್ಳೆಯ ಗುಣಗಳನ್ನು ಮಕ್ಕಳಿಗೆ ಹೇಳಿ ಕೊಡುತ್ತೆ. ಭಗವದ್ಗೀತೆ, ಕುರಾನ್, ಬೈಬಲ್ ಇವೆಲ್ಲವೂ ಮಹತ್ವದ ಗ್ರಂಥಗಳು. ಪ್ರತಿಯೊಂದು ಧರ್ಮಕ್ಕೂ ಅದರದೇ ಆದ ಪ್ರಾಶಸ್ತ್ಯ ಇರುತ್ತದೆ. ಬೈಬಲ್ನಲ್ಲಿ ಏನು ವಿಷಯಗಳಿವೆ? ಯಾವ ಥರದ ಘಟನೆಗಳಿವೆ? ಯಾವ ತರ ಮಾರ್ಗದರ್ಶನಗಳಿವೆ ಎಂಬುದು ಗೊತ್ತಾಗದೆ ಈ ರೀತಿ ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಶೇಕಡ 80ರಷ್ಟು ಕ್ರಿಶ್ಚಿಯನ್ನರು ಬೈಬಲ್ ಓದುತ್ತಿಲ್ಲ. ಬೈಬಲ್ ಕಡ್ಡಾಯಗೊಳಿಸುವ ಕುರಿತು ಕ್ರಿಶ್ಚಿಯನ್ ಶಾಲೆಗಳು ಸರ್ಕಾರಕ್ಕೆ ಮನವಿ ಮಾಡಬಹುದು. ನಾವು ರಸ್ತೆಗಳಲ್ಲಿ, ಶಾಲೆಗಳಲ್ಲಿ ನಿಂತುಕೊಂಡು ಬೈಬಲ್ ಬೋಧನೆ ಮಾಡುವುದಿಲ್ಲ. ಶಾಲೆಗಳಲ್ಲಿ ಅವಕಾಶ ನೀಡದಿದ್ದರೆ, ಬೋಧನೆ ಮಾಡಬೇಡಿ ಅಂದ್ರೆ ಚರ್ಚ್ಗಳಿಗೆ ಮಾತ್ರ ಸೀಮಿತವಾಗಿ ಬೈಬಲ್ ಇರಿಸಿಕೊಳ್ಳುತ್ತೇವೆ. ಮಕ್ಕಳಲ್ಲಿ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿಲ್ಲ ಎಂದು ಶಿವಾಜಿನಗರ ಚರ್ಚ್ನ ಧರ್ಮಗುರು ಮಾರ್ಟಿನ್ ಕುಮಾರ್ ಹೇಳಿದರು.
Published On - 11:29 am, Tue, 26 April 22