ಬೆಂಗಳೂರಿನಲ್ಲಿ ಕಿಡ್ನಿ ಖರೀದಿ ಹೆಸರಲ್ಲಿ ಮಹಾಮೋಸ; ಕಿಡ್ನಿ ವಂಚನೆಯ ಮಾಸ್ಟರ್ ಮೈಂಡ್ ಬಂಧನಕ್ಕಾಗಿ ಮುಂದುವರೆದ ತನಿಖೆ
ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ದೆಹಲಿ ಕಮಿಷನರ್, ತಮಿಳುನಾಡು ಕಮಿಷನರ್ಗಳ ಫೋಟೋ ಬಳಿಸಿ ಕಿಡ್ನಿ ಆಪರೇಷನ್ಗೆ ಅನುಮತಿ ನೀಡಿದ್ದಾರೆಂದು ತೋರಿಸಿ ಅದರಿಂದಲೂ ಕಿಡಿಗೇಡಿಗಳು ಹಣ ಪೀಕುತಿದ್ದರು. ಇದಕ್ಕೂ ಮೀರಿ WHO ನಿಂದಲೂ ಕಿಡ್ನಿ ಡೆನೆಷನ್ ಗೆ ನಕಲಿ ಐಡಿ ಕ್ರಿಯೆಟ್ ಮಾಡಿದ್ದರು.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಿಡ್ನಿಜಾಲವೊಂದು ಪತ್ತೆಯಾಗಿದೆ. ನೀವು ಒಂದು ಕಿಡ್ನಿ ಮಾರಾಟ ಮಾಡಿದ್ರೆ, ಅವ್ರು ಬರೋಬ್ಬರಿ 4 ಕೋಟಿ ಹಣ ಕೊಡ್ತಾರೆ. ಅಷ್ಟಕ್ಕೂ ಪ್ರತಿಷ್ಠಿತ ಆಸ್ಪತ್ರೆಗಳ ವೆಬ್‌ಸೈಟ್‌ಗಳಲ್ಲೇ ಇಂಥಾದೊಂದು ಪ್ರಕಟಣೆ ಕಂಡಿತ್ತು. ಆ 4 ಕೋಟಿ ಹಣಕ್ಕಾಗಿ ಕಿಡ್ನಿ ಮಾರಾಟ ಮಾಡೋಕೆ ಹಲವರು ಮುಂದಾಗಿದ್ರು. ಆದ್ರೆ ಅವರ ಕೈಗೆ ಸಿಕ್ಕಿದ್ದು ಮಾತ್ರ ತೆಂಗಿನ ಚಿಪ್ಪು.
ಕಿಡ್ನಿ ಖರೀದಿ ಹೆಸರಲ್ಲೇ ಜನರಿಗೆ ಮಹಾಮೋಸ ಡ್ರಗ್ಸ್, ಗಾಂಜಾ ಅಂತಾ ಬೆಂಗಳೂರಲ್ಲಿ ದಂಧೆ ಮಾಡ್ತಿದ್ದ ಈ ವಿದೇಶ ಮಿಕಗಳು ಈಗ ಹಣಗಳಿಸೋಕೆ ಮತ್ತೊಂದು ದಾರಿ ಹಿಡಿದಿದ್ದಾರೆ. ಮಿಮಿ ಅಲಿಯಾಸ್ ಮಿರಾಕಲ್, ಮತ್ತೊಬ್ಬ ಕೋವಾ ಹಾಗೂ ಇನ್ನೊಬ್ಬ ಮ್ಯಾಥ್ಯೂ ಇನೊಸೆಂಟ್. ನೈಜೇರಿಯಾ ಮೂಲದ ಇವರು ವಿದ್ಯಾರ್ಥಿ ವೀಸಾದಡಿ ನಗರಕ್ಕೆ ಕಾಲಿಟ್ಟಿದ್ರು. ಕಾಲೇಜ್‌ಗೆ ಸೇರಿ ಓದೋದು ಬಿಟ್ಟು, ದುಡ್ಡು ಮಾಡೋಕೆ ಅಡ್ಡ ದಾರಿ ಹಿಡಿದಿದ್ರು. ಅದುವೇ ಕಿಡ್ನಿ ಖರೀದಿ ಜಾಲ. ನಗರದ ಸಾಗರ್, ಬ್ಯಾಪ್ಟಿಸ್ಟ್, ಕಾವೇರಿ ಸೇರಿದಂತೆ ಪ್ರತಿಷ್ಠಿತ ಆಸ್ಪತ್ರೆಗಳ ಹೆಸರಲ್ಲಿ ನಕಲಿ ವೆಬ್ ಸೈಟ್ ತೆರೆದಿದ್ರು. ಆಸ್ಪತ್ರೆ ವೈದ್ಯರ ಫೋಟೊ ಹಾಕಿ ಕೆಳಗೆ ತಮ್ಮದೇ ವಾಟ್ಸಾಪ್ ನಂಬರ್ ನಮೂದಿಸಿದ್ರು. ಅರ್ಜೆಂಟ್ ಆಗಿ ಕಿಡ್ನಿ ಬೇಕಾಗಿದ್ದು, ಕಿಡ್ನಿ ಮಾರಾಟ ಮಾಡಲು ಇಚ್ಚಿಸಿದವರಿಗೆ 4 ಕೋಟಿ ಹಣ ನೀಡಲಾಗುವುದು ಅಂತಾ ವೆಬ್‌ಸೈಟ್‌ನಲ್ಲಿ ಬರೆದು ಕೊಂಡಿದ್ರು.
4 ಕೋಟಿ ಆಫರ್…ಲಕ್ಷ ಲಕ್ಷ ದೋಚಿ ಮೋಸ ಕಿಡ್ನಿ ಮಾರಾಟ ಮಾಡೋರಿಗೆ ಬರೋಬ್ಬರಿ 4 ಕೋಟಿ ಆಫರ್ ಮಾಡಿದ್ದ ಕಿಲಾಡಿಗಳು, ಕಿಡ್ನಿ ಮಾರಾಟ ಮಾಡಲು ಮುಂದೆ ಬಂದವರ ಜತೆ ಫೋನ್‌ನಲ್ಲೇ ಚರ್ಚೆ ಮಾಡ್ತಿದ್ರು. ಬಳಿಕ ಪ್ರೊಗ್ರೆಸ್ ಫೀಸ್, ಆಡ್ಮಿಟ್ ಫೀಸ್, ಆಪರೇಷನ್ ಫೀಸ್ ಅಂತೆಲ್ಲಾ ಹೇಳಿ ಲಕ್ಷ ಲಕ್ಷ ಹಣವನ್ನ ತಮ್ಮ ಅಕೌಂಟ್‌ಗೆ ಹಾಕಿಸಿಕೊಳ್ತಿದ್ರು. ಆ ಬಳಿಕ ಫೋನ್ ಸ್ವಿಚ್ ಆಫ್ ಮಾಡಿ ಮೋಸ ಮಾಡ್ತಿದ್ರು. ಹೀಗೆ ಹಣ ಕಳೆದುಕೊಂಡ ಜನ ಸಾಗರ್ ಆಸ್ಪತ್ರೆಯನ್ನ ಸಂಪರ್ಕಿಸಿದ್ದಾರೆ. ಈ ವೇಳೆ ಗೊಂದಲಕ್ಕೊಳಗಾದ ಆಸ್ಪತ್ರೆ ಸಿಬ್ಬಂದಿ ಪರಿಶೀಲಿಸಿದಾಗ, ಈ ಅಕ್ರಮ ಗೊತ್ತಾಗಿದ್ದು, ಹೆಚ್‌ಎಸ್‌ಆರ್ ಲೇಔಟ್ ಸಿಇಎನ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ರು.
4 ಕೋಟಿ ಹಣಕ್ಕಾಗಿ ಕಿಡ್ನಿ ಮಾರಾಟ ಮಾಡೋಕೆ ಮುಂದಾದ ಹಲವರು ಇವರ ಕೈಗೆ ಲಕ್ಷ ಲಕ್ಷ ಹಣ ಇಟ್ಟಿದ್ದಾರೆ. ಆದ್ರೆ ಮರ್ಯಾದೆ ಹೋಗುತ್ತೆ, ಕೇಸ್ ದಾಖಲಾಗುತ್ತೆ ಅನ್ನೋ ಕಾರಣಕ್ಕೆ ಇದುವರೆಗೂ ಯಾರು ಕೂಡಾ ಕೇಸ್ ದಾಖಲಿಸಿಲ್ಲ. ಸದ್ಯ ಸಾಗರ್ ಆಸ್ಪತ್ರೆಯವರು ದೂರು ನೀಡ್ತಿದ್ದಂತೆ ಮೂವರು ಕಿರಾತಕರು ಬಲೆಗೆ ಬಿದ್ದಿದ್ದಾರೆ. ಎರಡು ವರ್ಷದಿಂದ ಈ ಕೃತ್ಯ ಎಸಗುತ್ತಿದ್ದ ಆರೋಪಿಗಳು, ಅಮೃತಹಳ್ಳಿಯ ಮನೆಯೊಂದರಲ್ಲೇ ಕುಳಿತು ವಾಟ್ಸಾಪ್ ಮೂಲಕ ಹಲವರಿಗೆ ವಂಚಿಸಿರೋದು ಬೆಳಕಿಗೆ ಬಂದಿದೆ. ಇನ್ನಾದ್ರೂ ಹಣ ಕಳೆದುಕೊಂಡವರು ಕಂಪ್ಲೇಂಟ್ ನೀಡ್ತಾರಾ ಅಂತಾ ಪೊಲೀಸರು ಕಾದು ಕೂತಿದ್ದಾರೆ.
ನಗರ ಪೊಲೀಸ್ ಆಯುಕ್ತರ ಫೋಟೊ ಹಾಕಿ ಕಿಡಿಗೇಡಿ ಕೃತ್ಯ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ದೆಹಲಿ ಕಮಿಷನರ್, ತಮಿಳುನಾಡು ಕಮಿಷನರ್ಗಳ ಫೋಟೋ ಬಳಿಸಿ ಕಿಡ್ನಿ ಆಪರೇಷನ್ಗೆ ಅನುಮತಿ ನೀಡಿದ್ದಾರೆಂದು ತೋರಿಸಿ ಅದರಿಂದಲೂ ಕಿಡಿಗೇಡಿಗಳು ಹಣ ಪೀಕುತಿದ್ದರು. ಇದಕ್ಕೂ ಮೀರಿ WHO ನಿಂದಲೂ ಕಿಡ್ನಿ ಡೆನೆಷನ್ ಗೆ ನಕಲಿ ಐಡಿ ಕ್ರಿಯೆಟ್ ಮಾಡಿದ್ದರು. ಕಿಡ್ನಿ ಡೊನರ್ ಎಂದು ಉಲ್ಲೇಖಿಸಿ ವಂಚನೆ ಮಾಡಿದ್ದಾರೆ.
ಹಿಡಿಯಲು ಬಂದ ಪೊಲೀಸರನ್ನೇ ಪೊಲೀಸರಿಗೆ ಹಿಡಿದುಕೊಟ್ಟ ಆರೋಪಿಗಳು ಬಂಧನದ ವೇಳೆ ಆರೋಪಿಗಳ ಹೈಡ್ರಾಮಾ. ಖಚಿತ ಮಾಹಿತಿ ಆಧರಿಸಿ ಆರೋಪಿಗಳ ನಿವಾಸದ ಬಳಿ ತೆರಳಿದ್ದ ಪೊಲೀಸರು ಇಬ್ಬರನ್ನು ಬಂಧಿಸಿದ್ದರು. ಆದರೇ ಮೂರನೇ ವ್ಯಕ್ತಿ ಎಸ್ಕೇಪ್ ಆಗಲು ಮುಂದಾಗಿದ್ದ. ಆತನ ಹಿಂದೆ ತೆರಳಿದ ಸಿಬ್ಬಂದಿ ಸೆಕ್ಯೂರಿಟಿ ಗಾರ್ಡ್ ಗೆ ಹೇಳಿ ರೂಂನಲ್ಲಿ ಲಾಕ್ ಮಾಡಿದ್ದ. ಬಳಿಕ ಸ್ಥಳೀಯ ಪೊಲೀಸರಿಗೆ ನಕಲಿ ಪೊಲೀಸರು ಬಂದಿದ್ದಾಗಿ ದೂರು ನೀಡಿದ್ದ. ಆದರೆ ಪೊಲೀಸರು ಬಂದು ಪರಿಶೀಲನೆ ವೇಳೆ ಆರೋಪಿಗಳು ತಗಲಾಕಿಕೊಂಡಿದ್ದಾರೆ.
ಕಿಡ್ನಿ ವಂಚನೆಯ ಮಾಸ್ಟರ್ ಮೈಂಡ್ ಯಾರು? ದೆಹಲಿಯಲ್ಲಿ ಕುಳಿತ ಲೀಡರ್ ನಿಂದ ಬೆಂಗಳೂರಿನ ಕಂಟ್ರೋಲ್ ನಡೆಯುತ್ತಿತ್ತು. ಆತ ಹೇಳಿದಂತೆ ಬಂಧಿತ ಮೂವರು ಆರೋಪಿಗಳು ಕೆಲಸ ಮಾಡುತಿದ್ದರು. ಪೊಲೀಸರು ಈಗಿನ್ನು ಸಣ್ಣ ಸಣ್ಣ ಮೀನುಗಳನ್ನು ಮಾತ್ರ ಲಾಕ್ ಮಾಡಿದ್ದಾರೆ. ಅಸಲಿಗೆ ವಂಚನೆಯ ಹಿಂದಿರುವ ದೊಡ್ಡ ತಿಮಿಂಗಲಗಳ ಬಂಧನ ಯಾವಾಗ? ಎನ್ನುವ ಪ್ರಶ್ನೆ ಎದ್ದಿದ್ದು ಹೆಚ್ಎಸ್ಆರ್ ಲೇಔಟ್ ಸಿಇಎನ್ ಪೊಲೀಸರಿಂದ ತನಿಖೆ ಮುಂದುವರೆದಿದೆ.
ವರದಿ: ಜಗದೀಶ್, ಟಿವಿ9 ಬೆಂಗಳೂರು
ಇದನ್ನೂ ಓದಿ: Gold Price Today: ಬಹು ದಿನಗಳ ಬಳಿಕ 65,700 ರೂ.ಗೆ ಕುಸಿದ ಬೆಳ್ಳಿ ದರ; ಇಂದಿನ ಚಿನ್ನದ ಬೆಲೆ ಎಷ್ಟು?
Published On - 7:54 am, Tue, 26 April 22