ಎಂಜಿನಿಯರಿಂಗ್ ಸೀಟುಗಳ ಬೇಡಿಕೆ ಇಳಿಕೆ: ಈ ವರ್ಷ 24,831 ಸೀಟುಗಳು ಖಾಲಿ, ಕಂಪ್ಯೂಟರ್ ಸೈನ್ಸ್‌ ವಿಭಾಗದಲ್ಲಿ ಅತೀ ಹೆಚ್ಚು!

ಕರ್ನಾಟಕದಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಬರೋಬ್ಬರಿ 24,831 ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿದಿದ್ದು, ಬೇಡಿಕೆಯಲ್ಲಿದ್ದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲೇ ಗರಿಷ್ಠ 6,687 ಸೀಟುಗಳು ಭರ್ತಿಯಾಗದೆ ಉಳಿದಿರುವುದು ಅಚ್ಚರಿಗೆ ಕಾರಣವಾಗಿದೆ. ಎಂಜಿನಿಯರಿಂಗ್ ಸೀಟುಗಳಿಗೆ ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾರಣಗಳನ್ನು ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಎಂಜಿನಿಯರಿಂಗ್ ಸೀಟುಗಳ ಬೇಡಿಕೆ ಇಳಿಕೆ: ಈ ವರ್ಷ 24,831 ಸೀಟುಗಳು ಖಾಲಿ, ಕಂಪ್ಯೂಟರ್ ಸೈನ್ಸ್‌ ವಿಭಾಗದಲ್ಲಿ ಅತೀ ಹೆಚ್ಚು!
ಎಂಜಿನಿಯರಿಂಗ್ ಸೀಟುಗಳ ಬೇಡಿಕೆ ಇಳಿಕೆ
Image Credit source: VTU

Updated on: Sep 10, 2026 | 2:39 PM

ಬೆಂಗಳೂರು, ಸೆಪ್ಟೆಂಬರ್​​ 10: ಪ್ರಸಕ್ತ ಶೈಕ್ಷಣಿಕ ಸಾಲಿನ ಎಂಜಿನಿಯರಿಂಗ್ ಕೋರ್ಸ್‌ಗಳ ಸೀಟು ಹಂಚಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವ್ಯಾಪ್ತಿಯಲ್ಲಿ ಖಾಲಿ ಉಳಿದಿರುವ ಸೀಟುಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಿದೆ. ಬೇಡಿಕೆಯಲ್ಲಿರುವ ಕಂಪ್ಯೂಟರ್ ಸೈನ್ಸ್‌ ಸೇರಿದಂತೆ ಹಲವು ವಿಭಾಗಗಳಲ್ಲಿ ಹೆಚ್ಚಿನ ಸೀಟುಗಳು ಭರ್ತಿಯಾಗದೆ ಉಳಿದಿವೆ. ಈ ವರ್ಷ ಬರೋಬ್ಬರಿ 24,831 ಎಂಜಿನಿಯರಿಂಗ್ ಸೀಟುಗಳು ಖಾಲಿ ಉಳಿದಿದ್ದು, ಕಳೆದವರ್ಷ ಇವುಗಳ ಸಂಖ್ಯೆ 15,403 ಆಗಿತ್ತು.

ಈ ಬಾರಿ ಒಟ್ಟು 3,09,014 ಅಭ್ಯರ್ಥಿಗಳು KCET ಪರೀಕ್ಷೆ ಬರೆದಿದ್ದು, ಅವರಲ್ಲಿ 2,82,603 ಮಂದಿ ಎಂಜಿನಿಯರಿಂಗ್ ಪ್ರವೇಶಕ್ಕೆ ಅರ್ಹರಾಗಿದ್ದರು. ಮೊದಲ ಸುತ್ತಿನ ಸೀಟು ಹಂಚಿಕೆ ಬಳಿಕ ಕೇವಲ 900 ಎಂಜಿನಿಯರಿಂಗ್ ಸೀಟುಗಳು ಮಾತ್ರ ಖಾಲಿ ಉಳಿದಿದ್ದವು. ಆದರೆ ವಾಸ್ತವ ಏನಂದರೆ ಮೊದಲ ಸುತ್ತಿನಲ್ಲಿ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸೀಟುಗಳನ್ನು ಆಯ್ಕೆ ಮಾಡುತ್ತಾರೆ. ಆದರೆ ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ಇತರ ಕೋರ್ಸ್‌ಗಳ ಸೀಟು ಹಂಚಿಕೆ ಆರಂಭವಾದ ಬಳಿಕ ಅವರು ಎಂಜಿನಿಯರಿಂಗ್ ಸೀಟುಗಳನ್ನು ವಾಪಸ್ ಮಾಡುತ್ತಾರೆ ಎಂದು KEA ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ ಮುಂದೂಡಿಕೆ: ಪ್ರಮುಖ ಮಾಹಿತಿ ಇಲ್ಲಿದೆ!

ಕಂಪ್ಯೂಟರ್ ಸೈನ್ಸ್‌ನಲ್ಲಿ ಅತಿ ಹೆಚ್ಚು ಖಾಲಿ ಸೀಟು

ವಿಭಾಗವಾರು ಮಾಹಿತಿಯ ಪ್ರಕಾರ, ಕಂಪ್ಯೂಟರ್ ಸೈನ್ಸ್‌ ಮತ್ತು ಸಂಬಂಧಿತ ವಿಭಾಗಗಳಲ್ಲಿ 6,687 ಸೀಟುಗಳು ಖಾಲಿ ಉಳಿದಿದ್ದು, ಇದು ಅತಿ ಹೆಚ್ಚು ಖಾಲಿ ಸೀಟುಗಳಿರುವ ವಿಭಾಗವಾಗಿದೆ. 2024ರಲ್ಲಿ ಕಂಪ್ಯೂಟರ್ ಸೈನ್ಸ್‌ ಮತ್ತು ಸಂಬಂಧಿತ ವಿಭಾಗಗಳಲ್ಲಿ ಕೇವಲ 637 ಸೀಟುಗಳು ಖಾಲಿ ಉಳಿದಿದ್ದರೆ, 2025ರಲ್ಲಿ ಈ ಸಂಖ್ಯೆ 1,204ಕ್ಕೆ ಏರಿಕೆಯಾಗಿತ್ತು ಎಂಬುದಿಲ್ಲಿ ಗಮನಾರ್ಹ.

ಯಾವ ವಿಭಾಗದಲ್ಲಿ ಎಷ್ಟು ಸೀಟ್​​ ಖಾಲಿ?

  • ಕಂಪ್ಯೂಟರ್ ಸೈನ್ಸ್‌ ಮತ್ತು ಸಂಬಂಧಿತ ವಿಭಾಗಗಳು – 6,687
  • ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯುನಿಕೇಷನ್ – 3,570
  • ಮೆಕ್ಯಾನಿಕಲ್ – 2,700
  • ಸಿವಿಲ್ – 2,488
  • ಇನ್ಫರ್ಮೇಷನ್ ಸೈನ್ಸ್ – 2,044
  • ಎಲೆಕ್ಟ್ರಿಕಲ್ – 1,049
  • ಕೃತಕ ಬುದ್ಧಿಮತ್ತೆ (AI) ವಿಭಾಗ- 1,400

ಖಾಲಿ ಸೀಟ್​​ಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣ ತಿಳಿಯಲು ತಜ್ಞರ ಸಮಿತಿ

ಪ್ರತಿ ವರ್ಷ ಎಂಜಿನಿಯರಿಂಗ್ ಸೀಟುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿರುವುದೇ ಖಾಲಿ ಸೀಟುಗಳ ಏರಿಕೆಗೆ ಪ್ರಮುಖ ಕಾರಣ. ಕಳೆದ ಕೆಲವು ವರ್ಷಗಳ ಪ್ರವೃತ್ತಿಯನ್ನು ಗಮನಿಸಿದರೆ, ಸೀಟುಗಳ ಪ್ರವೇಶ ಸಾಮರ್ಥ್ಯ ಮತ್ತು ಖಾಲಿ ಸೀಟುಗಳೆರಡೂ ಹೆಚ್ಚಾಗುತ್ತಿವೆ ಎಂದು KEA ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಮತ್ತೊಂದೆಡೆ ಎಂಜಿನಿಯರಿಂಗ್ ಸೀಟುಗಳಿಗೆ ಬೇಡಿಕೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಕಾರಣಗಳನ್ನು ಅಧ್ಯಯನ ಮಾಡಲು ತಜ್ಞರ ಸಮಿತಿ ರಚಿಸಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ.

ವೆಟರ್ನರಿ, ಕೃಷಿ ಕೋರ್ಸ್‌ಗಳಿಗೆ ಭಾರಿ ಬೇಡಿಕೆ

ಕುತೂಹಲಕಾರಿ ಸಂಗತಿಯೆಂದರೆ, ವೆಟರ್ನರಿ ಸೈನ್ಸ್‌ ಹಾಗೂ ಅಗ್ರಿಕಲ್ಚರ್‌ ಮತ್ತು ಇತರೆ ಫಾರ್ಮ್ ಸೈನ್ಸ್‌ ಕೋರ್ಸ್‌ಗಳಲ್ಲಿ ಸತತ ಎರಡು ವರ್ಷಗಳಿಂದ ಶೇ.100ರಷ್ಟು ಪ್ರವೇಶ ದಾಖಲಾಗಿದೆ. 2025 ಮತ್ತು 2026ರಲ್ಲಿ ವೆಟರ್ನರಿ ಸೈನ್ಸ್‌ನಲ್ಲಿ ಯಾವುದೇ ಸೀಟು ಖಾಲಿ ಉಳಿದಿಲ್ಲ. ಅಗ್ರಿಕಲ್ಚರ್‌ ಮತ್ತು ಇತರೆ ಫಾರ್ಮ್ ಸೈನ್ಸ್‌ ಕೋರ್ಸ್‌ಗಳಲ್ಲೂ ಬೇಡಿಕೆ ಗಣನೀಯವಾಗಿ ಹೆಚ್ಚಾಗಿದೆ. 2025ರಲ್ಲಿ 243 ಸೀಟುಗಳು ಖಾಲಿ ಉಳಿದಿದ್ದರೆ, 2026ರಲ್ಲಿ ಕೇವಲ 20 ಸೀಟುಗಳು ಮಾತ್ರ ಖಾಲಿ ಉಳಿದಿವೆ. ಇದೇ ವೇಳೆ ಒಟ್ಟು ಪ್ರವೇಶ ಸಾಮರ್ಥ್ಯ 800ಕ್ಕೂ ಹೆಚ್ಚು ಸೀಟುಗಳಷ್ಟು ಹೆಚ್ಚಾಗಿದೆ. ಫಿಸಿಯೋಥೆರಪಿ (BPT) ಕೋರ್ಸ್‌ಗೂ ಈ ವರ್ಷ ಉತ್ತಮ ಬೇಡಿಕೆ ಕಂಡುಬಂದಿದೆ. 2025ರಲ್ಲಿ ಶೇ.7.17ರಷ್ಟಿದ್ದ ಖಾಲಿ ಸೀಟುಗಳ ಪ್ರಮಾಣ 2026ರಲ್ಲಿ ಶೇ.1.08ಕ್ಕೆ ಇಳಿದಿದ್ದು, ಕೇವಲ 22 ಸೀಟುಗಳು ಖಾಲಿ ಉಳಿದಿವೆ ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

 

Published On - 2:37 pm, Thu, 10 September 26

ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More
Loading...
Unable to load recommendations.
Follow Us