
ಬೆಂಗಳೂರು, ಡಿಸೆಂಬರ್ 11: ಮಾಜಿ ಡಿಜಿಐಜಿಪಿ ಓಂ ಪ್ರಕಾಶ್ ಕೊಲೆ ಕೇಸ್ನ ಆರೋಪಿ ಪತ್ನಿ ಪಲ್ಲವಿ ಪರಪ್ಪನ ಅಗ್ರಹಾರ ಸೇರಿ ಬರೋಬ್ಬರಿ 9 ತಿಂಗಳು ಕಳೆದಿವೆ. ತನ್ನ ಗಂಡನನ್ನೇ ಭೀಕರವಾಗಿ ಮರ್ಡರ್ ಮಾಡಿದ್ದರೂ ಕಿಂಚಿತ್ತೂ ಪಶ್ಚತ್ತಾಪ ಪಡದ ಈಕೆ, ಗಂಡನ ಕೊಲೆ ಮಾಡಿ ಒಳ್ಳೆಯ ಕೆಲಸ ಮಾಡಿದೆ. ಈಗ ನಾನು ನನ್ನ ಮಗಳು ನೆಮ್ಮದಿಯಿಂದ ಇದ್ದೀವಿ ಎಂದು ಪ್ರತಿನಿತ್ಯ ಸಿಬ್ಬಂದಿಗೆ ಹೇಳುತ್ತಿದ್ದಾಳಂತೆ. ಅಲ್ಲದೆ, ತನ್ನನ್ನು ಹೊರಗಡೆ ಬಿಡಿ ಎಂದು ಆಗಾಗ ಕೂಗಾಡುತ್ತಿದ್ದು, ಆಕೆಯ ನಿಯಂತ್ರಣವೇ ಮಹಿಳಾ ಸಿಬ್ಬಂದಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ವಿಚಿತ್ರ ವರ್ತನೆ ಹಿನ್ನಲೆ ಬ್ಯಾರಕ್ ಬಳಿ ಹೆಚ್ಚಿನ ನಿಗಾ ಇಡಲಾಗಿದ್ದು, ಜೊತೆಗೆ ವೈದ್ಯರಿಂದ ಕೌನ್ಸಲಿಂಗ್ ಕೂಡ ನಡೆಸಲಾಗಿದೆ.
ತಂದೆಯ ಸಾವಿನ ಬಳಿಕ ತಾಯಿ ಮತ್ತು ತಂಗಿಯನ್ನ ದೂರ ಮಾಡಿರುವ ಓಂ ಪ್ರಕಾಶ್ ಅವರ ಮಗ, ಬೆಂಗಳೂರನ್ನೇ ಬಿಟ್ಟಿದ್ದಾರೆ. ಕೋರ್ಟ್ಗೆ ವಕೀಲರ ನೇಮಕಕ್ಕೆ ಫೋನ್ ಮೂಲಕ ಮೂರು ಬಾರಿ ಮಗನನ್ನು ಪಲ್ಲವಿ ಸಂಪರ್ಕಿಸಲು ಯತ್ನಿಸಿದ್ದರೂ ತಾಯಿಯ ಕರೆಗೆ ಮಗನಿಂದ ರೆಸ್ಪಾನ್ಸ್ ಸಿಕ್ಕಿಲ್ಲ ಎನ್ನಲಾಗಿದೆ. ಹೀಗಾಗಿ ಸರ್ಕಾರಿ ವಕೀಲರನ್ನೇ ತಮ್ಮ ಪರವಾಗಿ ಪಲ್ಲವಿ ನೇಮಿಸಿಕೊಂಡಿದ್ದಾರೆ. ಸದ್ಯ ಓರ್ವ ಐಪಿಎಸ್ ಅಧಿಕಾರಿ ಪತ್ನಿ ಜೊತೆ ಮಾತ್ರ ಪಲ್ಲವಿ ಸಂಪರ್ಕದಲ್ಲಿದ್ದು, ಅವರೊಬ್ಬರ ದೂರವಾಣಿ ನಂಬರ್ ಮಾತ್ರ ಇಟ್ಟುಕೊಂಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಓಂ ಪ್ರಕಾಶ್ ಕೊಲೆ; ಪತಿಯನ್ನು 8-10 ಬಾರಿ ಇರಿದು ಪತ್ನಿ ಹತ್ಯೆ ಮಾಡಲು ಕಾರಣವೇನು? ಇಲ್ಲಿದೆ ಅಸಲಿ ಸತ್ಯ
ನಿವೃತ್ತ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ (68) ಅವರನ್ನು ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ನಿವಾಸದಲ್ಲಿ ಹತ್ಯೆ ಮಾಡಲಾಗಿತ್ತು. 8 ರಿಂದ10 ಬಾರಿ ಚಾಕುವಿನಿಂದ ಇರಿದು ಓಂ ಪ್ರಕಾಶ್ ಅವರನ್ನು ಪತ್ನಿ ಪಲ್ಲವಿಯೇ ಹತ್ಯೆ ಮಾಡಿದ್ದರು. ಇನ್ನು, ಪತಿ ಮೃತಪಟ್ಟ ಬಳಿಕ, ಮತ್ತೋರ್ವ ನಿವೃತ್ತ ಡಿಜಿ ಮತ್ತು ಐಜಿಪಿಯ ಪತ್ನಿಗೆ ವಿಡಿಯೋ ಕರೆ ಮಾಡಿ, ‘I have Finished monster’ ಅಂತ ಪಲ್ಲವಿ ಹೇಳಿದ್ದರು. ಒಂದು ವಾರದಿಂದ ಮನೆಯಲ್ಲಿ ಜಗಳ ನಡೆಯುತ್ತಿತ್ತು. ಪದೇಪದೆ ಗನ್ ತಂದು ನನಗೆ, ನನ್ನ ಮಗಳಿಗೆ ಬೆದರಿಕೆ ಹಾಕುತ್ತಿದ್ದರು. ಶೂಟ್ ಮಾಡುವುದಾಗಿ ಹೆದರಿಸುತ್ತಿದ್ದರು. ಬೆಳಗ್ಗೆಯಿಂದ ಬೇರೆಬೇರೆ ವಿಚಾರಕ್ಕೆ ಮನೆಯಲ್ಲಿ ಜಗಳವಾಗಿತ್ತು. ಮಧ್ಯಾಹ್ನ ಜಗಳ ವಿಕೋಪಕ್ಕೆ ಹೋಗಿ ನಮ್ಮನ್ನೇ ಕೊಲೆ ಮಾಡಲು ಓಂಪ್ರಕಾಶ್ ಯತ್ನಿಸಿದ್ದರು. ಹೀಗಾಗಿ ಜೀವ ಉಳಿಸಿಕೊಳ್ಳಲು ಕೊಲೆ ಮಾಡಿರೋದಾಗಿ ಪೊಲೀಸರ ವಿಚಾರಣೆ ವೇಳೆ ಪಲ್ಲವಿ ತಿಳಿಸಿದ್ದರು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.