
ಬೆಂಗಳೂರು, ಸೆಪ್ಟೆಂಬರ್ 15: ಬೆಂಗಳೂರಿನ 90ಕ್ಕೂ ಹೆಚ್ಚು ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳಿಗೆ ಶಂಕಿತ ನಕಲಿ ಹಾಗೂ ತಪ್ಪು ಲೇಬಲ್ ಹೊಂದಿರುವ ಔಷಧಗಳು ಪೂರೈಕೆಯಾಗಿರುವುದನ್ನು SIT ಪತ್ತೆಹಚ್ಚಿದೆ. ಈ ಜಾಲವು ನಕಲಿ ಮತ್ತು ತಪ್ಪು ಲೇಬಲ್ ಹೊಂದಿರುವ ಔಷಧಗಳನ್ನು ಪೂರೈಸುತ್ತಿತ್ತು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದಾರೆ. ಇದರಲ್ಲಿ ಹೆಚ್ಚಿನ ಬೇಡಿಕೆಯಿರುವ ಫೈಜರ್ ಉತ್ಪನ್ನಗಳ ನಕಲಿ ಆವೃತ್ತಿಗಳು, ಕ್ಯಾನ್ಸರ್ ಔಷಧಗಳು ಹಾಗೂ ಐಸಿಯು ಇಂಜೆಕ್ಷನ್‌ಗಳು ಸೇರಿವೆ ಎನ್ನಲಾಗಿದೆ.
ಈ ಔಷಧಗಳನ್ನು ಶೇ.50ರವರೆಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಕೆಲ ಕ್ಯಾನ್ಸರ್ ಔಷಧಗಳ ಬೆಲೆ ಹತ್ತಾರು ಸಾವಿರ ರೂಪಾಯಿ ಇರುವುದರಿಂದ ಇವು ಗ್ರಾಹಕರಿಗೆ ಆಕರ್ಷಕವಾಗಿದ್ದವು. 15ಕ್ಕೂ ಹೆಚ್ಚು ಮೆಡಿಕಲ್ ರೆಪ್ರಸೆಂಟೇಟಿವ್‌ಗಳನ್ನು ಒಳಗೊಂಡ ದೊಡ್ಡ ಜಾಲದ ಸುಳಿವು ಕೂಡ ತನಿಖೆಯಲ್ಲಿ ಸಿಕ್ಕಿದ್ದು, ಔಷಧಗಳ ಪೂರೈಕೆ ಮಹಾರಾಷ್ಟ್ರ ಮತ್ತು ಗುಜರಾತ್‌ಗೂ ತಲುಪಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ನಕಲಿ ಔಷಧ ಜಾಲ ಪತ್ತೆ ಕೇಸ್: ಇನ್ನೂ ಅಜರ್ ಬೈಜಾನ್ನಲ್ಲೇ ಇದ್ದಾನೆ ಕಿಂಗ್ಪಿನ್ ಪ್ರಶಾಂತ್!
ಇನ್ನು ಔಷಧಗಳು ಆಸ್ಪತ್ರೆಗಳು ಮತ್ತು ಕ್ಲಿನಿಕ್‌ಗಳನ್ನು ತಲುಪಿದ ಬಳಿಕ ಏನಾಯಿತು ಎಂಬುದು ಇನ್ನಷ್ಟು ಮಹತ್ವದ ಪ್ರಶ್ನೆಯಾಗಿದೆ. ಅವುಗಳನ್ನು ರೋಗಿಗಳಿಗೆ ನೀಡಲಾಗಿತ್ತೇ? ಎಷ್ಟು ವಯಲ್‌ಗಳು ಅಥವಾ ಬ್ಯಾಚ್‌ಗಳು ಒಳಗೊಂಡಿದ್ದವು? ಆಸ್ಪತ್ರೆಗಳು ಔಷಧಗಳು ಎಲ್ಲಿಂದ ಬಂದಿವೆ ಎಂಬುದನ್ನು ಪರಿಶೀಲಿಸಿದ್ದವೇ? ತಯಾರಕರ ದಾಖಲೆಗಳೊಂದಿಗೆ ಬ್ಯಾಚ್ ನಂಬರ್‌ಗಳನ್ನು ತಾಳೆ ಹಾಕಲಾಗಿತ್ತೇ? ಎಂಬುದು ಪ್ರಮುಖ ಪ್ರಶ್ನೆಯಾಗಿದೆ.
ಕ್ಯಾನ್ಸರ್ ಔಷಧಗಳು ದೊಡ್ಡ ಮಟ್ಟದ ತನಿಖೆಯ ಭಾಗವಾಗಿರುವ ಏಕೈಕ ನಗರ ಬೆಂಗಳೂರು ಅಲ್ಲ. ಆಗಸ್ಟ್‌ನಲ್ಲಿ ದೆಹಲಿ ಪೊಲೀಸರು ಕ್ಯಾನ್ಸರ್ ಔಷಧಗಳ ಅಕ್ರಮ ವ್ಯಾಪಾರಕ್ಕೆ ಸಂಬಂಧಿಸಿದ ಅಂತಾರಾಜ್ಯ ಜಾಲವನ್ನು ಭೇದಿಸಿ 17 ಮಂದಿಯನ್ನು ಬಂಧಿಸಿದ್ದರು. ಕದ್ದ ಹಾಗೂ ನಕಲಿ ಕ್ಯಾನ್ಸರ್ ಔಷಧಗಳ ವ್ಯಾಪಾರದಲ್ಲಿ ಈ ಜಾಲ ತೊಡಗಿಸಿಕೊಂಡಿತ್ತು ಎಂದು ತನಿಖಾಧಿಕಾರಿಗಳು ಆರೋಪಿಸಿದ್ದರು. ಕೆಲವು ಔಷಧಗಳನ್ನು ಸರ್ಕಾರಿ ಆಸ್ಪತ್ರೆಗಳ ಬದಲು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪವೂ ಕೇಳಿಬಂದಿತ್ತು.
ದೆಹಲಿಯ ತನಿಖೆಯ ಬೆನ್ನಲ್ಲೇ ರಾಜಸ್ಥಾನದಲ್ಲೂ ಪ್ರಶ್ನೆಗಳು ಎದ್ದಿವೆ. ಕ್ಯಾನ್ಸರ್ ಔಷಧಗಳ ವಯಲ್‌ಗಳು ಸರ್ಕಾರಿ ಪೂರೈಕೆ ವ್ಯವಸ್ಥೆ ಹಾಗೂ ಬಿಕಾನೇರ್‌ನ ಸರ್ಕಾರಿ ಆಸ್ಪತ್ರೆಯೊಂದಕ್ಕೆ ಸಂಬಂಧಿಸಿರುವುದು ವರದಿಯಾಗಿದೆ. ಆದರೆ ಇದರಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಆಸ್ಪತ್ರೆ ನಿರಾಕರಿಸಿದೆ. ರಾಜಸ್ಥಾನ ಮೆಡಿಕಲ್ ಸರ್ವಿಸಸ್ ಕಾರ್ಪೊರೇಷನ್ ಲಿಮಿಟೆಡ್ (RMSCL) ಮೂಲಕ ಉಚಿತವಾಗಿ ಪೂರೈಕೆಯಾಗುವ ಔಷಧಗಳ ಲೆಕ್ಕ ತಮ್ಮ ಬಳಿ ಇದೆ ಎಂದು ಆಸ್ಪತ್ರೆ ತಿಳಿಸಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಔಷಧ ಪೂರೈಕೆ ವ್ಯವಸ್ಥೆಯ ಪರಿಶೀಲನೆಗೆ ಆದೇಶಿಸಿದೆ.
ಬೆಂಗಳೂರು, ದೆಹಲಿ ಮತ್ತು ರಾಜಸ್ಥಾನದ ಪ್ರಕರಣಗಳನ್ನು ಒಟ್ಟಾಗಿ ನೋಡಿದರೆ, ಸಮಸ್ಯೆ ಕೇವಲ ಕಳಪೆ ಗುಣಮಟ್ಟದ ಔಷಧಗಳ ತಯಾರಿಕೆಗೆ ಸೀಮಿತವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಭಾರತದಲ್ಲಿ 10,000ಕ್ಕೂ ಹೆಚ್ಚು ಔಷಧ ತಯಾರಿಕಾ ಘಟಕಗಳು ಹಾಗೂ ಸುಮಾರು 10 ಲಕ್ಷ ಮೆಡಿಕಲ್ ಶಾಪ್‌ಗಳಿವೆ. ಹೀಗಾಗಿ ಸಂಪೂರ್ಣ ಪೂರೈಕೆ ಸರಪಳಿಯ ಮೇಲ್ವಿಚಾರಣೆ ದೊಡ್ಡ ಸವಾಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.