
ಬೆಂಗಳೂರು, ಅಕ್ಟೋಬರ್ 04: ಬೆಂಗಳೂರಿನಲ್ಲಿ ಯಾವ ಫುಟ್‌ಪಾತ್, ಯಾವ ರಸ್ತೆ ಸರಿ ಇದೆ ಎಂದು ಎಲ್ಲರೂ ದಿನ ಮಾತನಾಡಿಕೊಳ್ಳುತ್ತಾರೆ. ಆದರೆ ಕೆನಡಾ ಮೂಲದ ವ್ಯಕ್ತಿಯೊಬ್ಬ ಇಂದಿರಾನಗರದ 12ನೇ ಮುಖ್ಯರಸ್ತೆಯ ಫುಟ್‌ಪಾತ್ ದುಸ್ಥಿತಿಯ ಬಗ್ಗೆ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ವಿಡಿಯೋ ಭಾರೀ ವೈರಲ್ ಬೆನ್ನಲ್ಲೇ ಕೂಡಲೇ ಎಚ್ಚೆತ್ತ ಜಿಬಿಎ ಅಧಿಕಾರಿಗಳು ಸಮರೋಪಾದಿಯಲ್ಲಿ ದುರಸ್ತಿ ಕಾರ್ಯ ಮಾಡಿ ಮುಗಿಸಿದ್ದಾರೆ.
ಎರಡು ದಿನಗಳ ಹಿಂದೆ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯ ಇಂದಿರಾನಗರ 12ನೇ ಮುಖ್ಯರಸ್ತೆಯ ಫುಟ್‌ಪಾತ್ ದುಸ್ಥಿತಿಯನ್ನು ಕೆನಡಾ ಮೂಲದ ವ್ಯಕ್ತಿ ವಿಡಿಯೋ ಮಾಡಿ ಎಕ್ಸ್ ಖಾತೆಯಲ್ಲಿ ಹರಿಬಿಟ್ಟಿದ್ದರು. ಈ ವಿಡಿಯೋ ಭಾರೀ ವೈರಲ್ ಕೂಡ ಆಗಿತ್ತು. ಜಿಬಿಎ ಹಾಗೂ ಕೇಂದ್ರ ನಗರ ಪಾಲಿಕೆ ವಿರುದ್ಧ ಸಾರ್ವಜನಿಕರು ಟೀಕಾಪ್ರಹಾರವೇ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ನಗರದ ಮೂಲಸೌಕರ್ಯ ಬಗ್ಗೆ ಟೀಕೆ ವ್ಯಕ್ತವಾಗಿತ್ತು.
ಇನ್ನು ಸಾರ್ವಜನಿಕರಿಂದ ಟೀಕೆ ಹೆಚ್ಚಾದ ಬೆನ್ನಲ್ಲೇ ಅಲರ್ಟ್ ಆದ ಕೇಂದ್ರ ನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬ್ಬಂದಿ 12ನೇ ಮುಖ್ಯರಸ್ತೆಯಲ್ಲಿ ಸಮರೋಪಾದಿಯಲ್ಲಿ ಫುಟ್‌ಪಾತ್ ದುರಸ್ತಿ ಕಾರ್ಯ ಕೈಗೊಂಡಿದ್ದಾರೆ. ಕುಸಿದು ಬಿದ್ದ ಫುಟ್‌ಪಾತ್, ಫುಟ್‌ಪಾತ್ ಸ್ಲ್ಯಾಬ್ಗಳನ್ನ ಪುನರ್ ನಿರ್ಮಾಣ ಮಾಡಿದ್ದಾರೆ.
ಆ ಬಳಿಕವೂ ಸಾರ್ವಜನಿಕರ ಅಸಮಾಧಾನ ಕಡಿಮೆಯಾಗಿಲ್ಲ. ನಾವು ಇಲ್ಲೇ ಹುಟ್ಟಿ ಬೆಳೆದು ಸಮಸ್ಯೆ ಹೇಳಿಕೊಂಡರೆ, ದೂರು ನೀಡಿದರೆ, ವರ್ಷಾನುಗಟ್ಟಲೇ ಆದರೂ ಪರಿಹಾರ ಸಿಗಲ್ಲ. ಯಾರೋ ವಿದೇಶಿ ಪ್ರಜೆ ವಿಡಿಯೋ ಮಾಡಿ ಜಿಬಿಎ ಮಾನ ಹರಾಜು ಹಾಕಿದಕ್ಕೆ ತ್ವರಿತವಾಗಿ ಕೆಲಸ ಆಗುತ್ತೆ ಅಂತ ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಫುಟ್‌ಪಾತ್ ತೆರವು ಕಾರ್ಯಾಚರಣೆ: ಬೀದಿ ಬದಿ ವ್ಯಾಪಾರಿಗಳಿಂದ ತೀವ್ರ ಆಕ್ರೋಶ
ಒಟ್ಟಿನಲ್ಲಿ ಇಂದಿರಾನಗರ 12ನೇ ಮುಖ್ಯರಸ್ತೆ ಮಾತ್ರವಲ್ಲ, ನಗರದ ಸಾವಿರಾರು ರಸ್ತೆಗಳು, ಫುಟ್ಪಾತ್ಗಳು ಹದಗೆಟ್ಟಿವೆ. ನಿತ್ಯ ಈ ಅವ್ಯವಸ್ಥೆಯಲ್ಲಿ ಜನ ನರಳಾಡುತ್ತಿದ್ದಾರೆ. ಯಾರೋ ವಿದೇಶಿ ಪ್ರಜೆಯ ಪೋಸ್ಟ್ಗೆ ಇಷ್ಟೊಂದು ಮಿಡಿಯುವ GBA ಅಧಿಕಾರಿಗಳು ಸ್ಥಳೀಯರ ನೋವಿಗೂ ಇದೇ ರೀತಿ ಸ್ಪಂದಿಸಲಿ ಎನ್ನುವುದೆ ಎಲ್ಲರ ಆಶಯ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.