ಬೆಂಗಳೂರು: ಹಾನಗಲ್ ಉತ್ತರ ಕರ್ನಾಟಕದ ಹೆಬ್ಬಾಗಿಲು. ಉತ್ತರ ಕರ್ನಾಟಕದ ಹೆಬ್ಬಾಗಿಲಿನಲ್ಲಿ ಜೆಡಿಎಸ್ ಬಾಗಿಲು ತೆಗೆಯುವ ಕೆಲಸ ಮಾಡುತ್ತಿದೆ. ಪ್ರಾದೇಶಿಕ ಪಕ್ಷಕ್ಕೆ ಬಲ ತುಂಬಲು ಯಾರೇ ಬಂದರೂ ಜೆಡಿಎಸ್ ಸ್ವಾಗತ ಮಾಡುತ್ತದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಘೋಷಿಸಿದ್ದಾರೆ. ಬೆಂಗಳೂರಿನ ಜೆಪಿ ಭವನದಲ್ಲಿ ಹಾನಗಲ್ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ನಿಯಾಜ್ ಶೇಕ್ ನೇತೃತ್ವದಲ್ಲಿ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಂಡ 300ಕ್ಕೂ ಹೆಚ್ಚು ಕಾರ್ಯಕರ್ತರನ್ನು ಸ್ವಾಗತಿಸಿದ ಅವರು ಉತ್ತರ ಕರ್ನಾಟಕದಲ್ಲಿ ಪಕ್ಷ ಬೆಳೆಸುವ ಮಹತ್ವಾಕಾಂಕ್ಷಿ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾಂಗ್ರೆಸ್ ಕಾರಣ. ಇದನ್ನು ಮುಸ್ಲಿಂ ಬಂಧುಗಳು ತಿಳಿದುಕೊಳ್ಳಬೇಕು. ಬಿಜೆಪಿ ಅಧಿಕಾರಕ್ಕೆ ಬಂದಿರೋದು ಜೆಡಿಎಸ್ನಿಂದ ಅಲ್ಲ ಕಾಂಗ್ರೆಸ್ನಿಂದ. ಈ ರಾಜ್ಯವನ್ನು ಆ ದಿನದಲ್ಲಿ ಬಿಜೆಪಿ ಲೂಟಿ ಮಾಡಿದ್ದಾರೆ. ಇಂದು ಅಧಿಕಾರದಲ್ಲಿರುವ ಬಿಜೆಪಿ ಅಂದು ರೈತರ ಮೇಲೆ ಗೋಲಿಬಾರ್ ನಡೆಸಿತ್ತು ಎಂದು ಅವರು ಇದೇ ಸಂದರ್ಭದಲ್ಲಿ ಟೀಕಿಸಿದರು.
ಕಾಂಗ್ರೆಸ್‌ನಲ್ಲಿ ನಡೆಯುತ್ತಿರುವ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಪೈಪೋಟಿಯ ಕುರಿತೂ ಪ್ರತಿಕ್ರಿಯೆ ನೀಡಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಿಎಂ ಆಗಲು ಕಾಂಗ್ರೆಸ್‌ನಲ್ಲಿ ಎಲ್ಲರೂ ಸಿದ್ಧರಾಗಿ ಕುಳಿತಿದ್ದಾರೆ. ಗರಿ ಗರಿ ಬಟ್ಟೆ ಹೊಲಿಸಿ 8 ಜನ ತಯಾರಿ ಮಾಡಿಕೊಂಡಿದ್ದಾರೆ. ಚುನಾವಣೆ ನಡೆಯುವುದಕ್ಕೆ ಇನ್ನೂ ಎರಡು ವರ್ಷ ಇದೆ. ಈಗಾಗಲೇ ಮುಖ್ಯಮಂತ್ರಿಯಾಗಲು ತಯಾರಿ ನಡೆದಿದೆ ಎಂದು ವ್ಯಂಗ್ಯವಾಡಿದ್ದಾರೆ.
ನನ್ನನ್ನು ಅಧಿಕಾರದಿಂದ ಕೆಳಗಿಳಿಸಿದ್ದು ದೇವರು, 15 ಜನರಲ್ಲ. 15 ಜನರ ಮೇಲೆ ನನಗೆ ಯಾವುದೇ ಬೇಸರವಿಲ್ಲ. ನನ್ನ ಜೀವವನ್ನು ಉಳಿಸಿದ್ದು ಕೂಡ ಆ ದೇವರೇ. ನಾನು ಮುಖ್ಯಮಂತ್ರಿ ಆಗೋದು ಬೇಡ ಎಂದು ಆ ದೇವರೇ ನನ್ನನ್ನು ಕಾಪಾಡಿದ ಎಂದು ಅವರು ವ್ಯಾಖ್ಯಾನಿಸಿದ್ದಾರೆ.
ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಟೀಕೆ ನಡೆಸುತ್ತಲೇ ಇನ್ನೂ ಘೋಷಣೆಯಾಗದ, ಆದರೆ ಮುಂಬರಲಿರುವ ಸಿಎಂ ಉದಾಸಿ ಅವರ ನಿಧನದಿಂದ ತೆರವಾಗಿರುವ ಹಾನಗಲ್ ವಿಧಾನಸಭಾ ಕ್ಷೇತ್ರದ ಚುನಾವಣೆಯ ಮೂಲಕ ಉತ್ತರ ಕರ್ನಾಟಕದಲ್ಲಿ ಜನತಾದಳವನ್ನು ಬೆಳೆಸುವ ಕನಸನ್ನು ಜೆಡಿಎಸ್ ವರಿಷ್ಠ ಎಚ್.ಡಿ.ಕುಮಾರಸ್ವಾಮಿ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ: ರಾಜ್ಯದಲ್ಲಿ ದಲಿತರು ಸಿಎಂ ಆಗೋದನ್ನು ತಪ್ಪಿಸಿದ್ದು ನಾನಲ್ಲ: ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ
ಅರಸೀಕೆರೆ ರಾಜಕೀಯ: ನಿಗೂಢ ಸ್ಥಳದಿಂದ ವಿಡಿಯೊ ಬಿಡುಗಡೆ ಮಾಡಿದ ಮೂವರು ಜೆಡಿಎಸ್ ನಗರಸಭೆ ಸದಸ್ಯರು
(Former CM HD Kumaraswamy expresses his desire to develop JDS in in North Karnataka)