
ಬೆಂಗಳೂರು, ಮೇ 29: ಪ್ರಾಣಿ ಪ್ರಿಯರಿಗೆ ಅರಣ್ಯ ಇಲಾಖೆ ಗುಡ್ನ್ಯೂಸ್ ನೀಡಿದ್ದು, ಕಳೆದ ತಿಂಗಳು ಬೆಂಗಳೂರಿಗೆ (Bengaluru) ತರಲಾಗಿದ್ದ ದಕ್ಷಿಣ ಆಫ್ರಿಕಾದ ನಾಲ್ಕು ಚೀತಾಗಳು ಜೂನ್ 4ರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿವೆ. ಚೀತಾಗಳು ಕಡ್ಡಾಯ ಕ್ವಾರಂಟೈನ್ ಅವಧಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಅವುಗಳನ್ನು ವೀಕ್ಷಿಸಲು ಅನುವು ಮಾಡಿಕೊಡಲಾಗಿದೆ. ಚೀತಾಗಳ ಸಹಜ ಚುರುಕು ಚಲನವಲನಗಳಿಗೆ ಅನುಗುಣವಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ ಹೊಸ ಎನ್‌ಕ್ಲೋಸರ್‌ನಲ್ಲಿ ಅವುಗಳನ್ನು ಬಿಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಕ್ಷಿಣ ಆಫ್ರಿಕಾದ ಇಂಡುನಾ ಪ್ರೈಮೇಟ್ ಮತ್ತು ಪ್ಯಾರಟ್ ಪಾರ್ಕ್‌ನಿಂದ ಬೆಂಗಳೂರಿಗೆ ಏಪ್ರಿಲ್ 18ರಂದು ಎರಡು ಗಂಡು ಹಾಗೂ ಎರಡು ಹೆಣ್ಣು ಸೇರಿ ನಾಲ್ಕು ಚೀತಾಗಳನ್ನು ಕರೆತರಲಾಗಿತ್ತು. ಪ್ರಾಣಿ ವಿನಿಮಯ ಕಾರ್ಯಕ್ರಮದಡಿ ಅವುಗಳನ್ನು ಸ್ಥಳಾಂತರಿಸಲಾಗಿತ್ತು. ಇವುಗಳನ್ನು ಭಾರತಕ್ಕೆ ಕರೆತರುವ ಮೊದಲು ದಕ್ಷಿಣ ಆಫ್ರಿಕಾದಲ್ಲೇ ಆರೋಗ್ಯ ತಪಾಸಣೆ ಹಾಗೂ ಕ್ವಾರಂಟೈನ್ ಮಾಡಲಾಗಿತ್ತು. ಬಳಿಕ ಬೆಂಗಳೂರಿಗೆ ಬಂದ ನಂತರವೂ 30 ದಿನಗಳಿಗಿಂತ ಹೆಚ್ಚು ಕಾಲ ಕಟ್ಟುನಿಟ್ಟಿನ ಕ್ವಾರಂಟೈನ್‌ನಲ್ಲಿ ಇವನ್ನು ಇಡಲಾಗಿದ್ದು, ಪಶುವೈದ್ಯರ ವಿಶೇಷ ತಂಡವು ಅವುಗಳ ಆರೋಗ್ಯ ಮತ್ತು ಪರಿಸರ ಹೊಂದಾಣಿಕೆಯನ್ನು 24 ಗಂಟೆಗಳ ಕಾಲ ಮೇಲ್ವಿಚಾರಣೆ ಮಾಡಿತ್ತು.
ಇದನ್ನೂ ಓದಿ: ಬನ್ನೇರುಘಟ್ಟಕ್ಕೆ ನಾಲ್ಕು ಆಫ್ರಿಕನ್ ಚೀತಾಗಳ ಎಂಟ್ರಿ! ವಿದೇಶಿ ಅತಿಥಿಗಳಿಗೆ ಸಚಿವ ಖಂಡ್ರೆ ಅದ್ದೂರಿ ಸ್ವಾಗತ!
ಕರ್ನಾಟಕದಲ್ಲಿ ‘ಶಿವಂಗಿ’ ಎಂದು ಕರೆಯಲ್ಪಡುತ್ತಿದ್ದ ಏಷ್ಯಾಟಿಕ್ ಚೀತಾಗಳು ಡೆಕ್ಕನ್ ಸಮತಟ್ಟು ಪ್ರದೇಶಗಳಲ್ಲಿ ಕಂಡುಬರುತ್ತಿದ್ದವು. ಆದರೆ ಅತಿಯಾದ ಬೇಟೆ ಮತ್ತು ವಾಸಸ್ಥಳ ನಾಶದಿಂದಾಗಿ ಅವು ನಾಮಾಶೇಷಾಗಿವೆ. ಭಾರತದಲ್ಲಿ ಏಷ್ಯಾಟಿಕ್ ಚೀತಾ ಸಂಪೂರ್ಣವಾಗಿ ಅಳಿದುಹೋಗಿದ್ದರೂ, ಇದೀಗ ಆಫ್ರಿಕನ್ ಚೀತಾಗಳನ್ನು ರಾಜ್ಯದ ಪ್ರಮುಖ ಜೈವಿಕ ಉದ್ಯಾನವನಲ್ಲಿ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡಿರೋದು ಪ್ರಾಣಿ ಪ್ರಿಯರ ಸಂತಸ ಹೆಚ್ಚಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:54 pm, Fri, 29 May 26