ಕಾಲ್ ಸೆಂಟರ್ ಹೆಸರಿನಲ್ಲಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ: ಆರೋಪಿಗಳ ಹೆಡೆಮುರಿ ಕಟ್ಟಿದ ಬೆಂಗಳೂರು ಪೊಲೀಸ್

| Updated By: ಗಂಗಾಧರ​ ಬ. ಸಾಬೋಜಿ

Updated on: Sep 15, 2022 | 5:44 PM

ಈ ಕ್ರಿಮಿನಲ್ ಗಳ ಕಳ್ಳಾಟದಿಂದ ಸರ್ಕಾರಕ್ಕೆ ಇದರಿಂದ ಕೋಟ್ಯಂತರ ರೂಪಾಯಿ ನಷ್ಟ ಆಗುತ್ತಿದೆ. ಉದಾಹರಣೆಗೆ ಇಂಟರ್ ನ್ಯಾಷನಲ್ ಕರೆಗಳಿಗೆ ನಿಮಿಷಕ್ಕೆ 10 ರೂಪಾಯಿ ಇದ್ದರೆ ಅದನ್ನು ಕೇವಲ 1 ರಿಂದ 2 ರೂಪಾಯಿಗೆ ಪರಿವರ್ತಿಸುತ್ತಿದ್ದರು.

ಕಾಲ್ ಸೆಂಟರ್ ಹೆಸರಿನಲ್ಲಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ: ಆರೋಪಿಗಳ ಹೆಡೆಮುರಿ ಕಟ್ಟಿದ ಬೆಂಗಳೂರು ಪೊಲೀಸ್
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಅಂತರಾಷ್ಟ್ರೀಯ ಕರೆಗಳನ್ನ ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ವಂಚನೆ ಜೊತೆಗೆ ದೇಶದ ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿದ್ದ ಆರೋಪಿಗಳನ್ನು ಕಳೆದ ಮೂರು ತಿಂಗಳಿನಲ್ಲೇ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಡೆನಿಸ್ ಪವಾರ್​, ವಿಪಿನ್ ಕೆಪಿ, ಸುಭಾಷ್, ಬಿಜನ್ ಜೋಸೆಫ್, ಶಮಾದ್ ಶಹಜಹಾನ್ಗ ಬಂಧಿತ ಆರೋಪಿಗಳು. ಬಂಧಿತರಿಂದ ಎಲೆಕ್ಟ್ರಾನಿಕ್ ಕನ್ವರ್ಟ್ ಎಕ್ಸ್ ಚೆಂಜ್ ಮಷಿನ್​ಗಳು, ಸರ್ವರ್​​ಗಳು, ಸಾವಿರಾರು ಸಿಮ್​ಗಳು ಹೀಗೆ ಎಲೆಕ್ಟ್ರಾನಿಕ್ ಉಪಕರಣಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿಯುಸಿ, ಪದವಿ ಫೇಲ್ ಆದ ಯುವ ಸಮೂಹವನ್ನು ಕೆಲಸದ ಆಮಿಷವೊಡ್ಡಿ ಕೆಲ ಕ್ರಿಮಿನಲ್​ಗಳು ಈ ಕೃತ್ಯದಲ್ಲಿ ಬಳಸಿಕೊಳ್ಳುತ್ತಿರೋದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದೆ. ಅಂತರಾಷ್ಟ್ರೀಯ ಕರೆಗಳನ್ನು ಈ ಎಕ್ಸ್ ಚೆಂಜ್​ಗಳಲ್ಲಿ ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ಕಾಲ್ ಕನೆಕ್ಟ್ ಮಾಡುವಂತಹ ವ್ಯವಸ್ಥೆಯಾಗಿದ್ದು, ಇದನ್ನು ಬಿಎಸ್ಎನ್ಎಲ್, ಏರ್ ಟೆಲ್, ಜಿಯೋ ಹೀಗೆ ಕೆಲ ದೂರ ಸಂಪರ್ಕ್ ಸಂಸ್ಥೆಗಳಿಗೆ ಸರ್ಕಾರ ಅಧಿಕೃತವಾಗಿ ಅನುಮತಿ ಕೊಟ್ಟಿದೆ.

ಈ ವ್ಯವಸ್ಥೆಗೆ ಸೆಡ್ಡು ಹೊಡೆಯುವಂತೆ ಕೆಲ ಕ್ರಿಮಿನಲ್​ಗಳು ಬೆಂಗಳೂರು ನಗರದಲ್ಲಿ ಹುಟ್ಟಿಕೊಂಡಿದ್ದಾರೆ. ಸಿಲಿಕಾನ್ ಸಿಟಿಯನ್ನೇ ಈ ಕ್ರಿಮಿನಲ್​ಗಳು ಟಾರ್ಗೆಟ್ ಮಾಡಿಕೊಂಡಿದ್ದು, ಸರ್ಕಾರ ಅನುಮತಿ ಕೊಟ್ಟಿರೊ ಸಂಸ್ಥೆಗೆ ಬದಲಿ ವ್ಯವಸ್ಥೆ ಮಾಡಿಕೊಂಡು ವಂಚನೆಗೆ ಇಳಿದಿದ್ದಾರೆ. ಚೀನಾದಿಂದ ಕರೆ ಎಕ್ಸ್ ಚೆಂಜ್ ಮಾಡುವಂತಹ ಕೆಲ ಸಿಸ್ಟಂಗಳನ್ನು ತರಿಸಿಕೊಂಡಿದ್ದಾರೆ. ಅಲ್ಲದೇ ಬಾಡಿಗೆ ಮನೆಗಳನ್ನು ಪಡೆದು ವ್ಯವಸ್ಥಿತವಾಗಿ ಆಪರೇಟ್ ಮಾಡ್ತಿದ್ದಾರೆ. ಕಳೆದ ಮೂರು ತಿಂಗಳಲ್ಲಿ ಬೆಂಗಳೂರು ನಗರ ಪೊಲೀಸರು ವಿವಿಧ ಪ್ರಕರಣ ಸಂಬಂಧ ದಾಳಿ ಮಾಡಿ ಕಾಲ್ ಎಕ್ಸ್ ಚೆಂಜ್ ಮಾಡ್ತಿದ್ದ ಅಡ್ಡೆಗಳನ್ನ ರೇಡ್ ಮಾಡಿದ್ದಾರೆ. ಒಂದು ನಿಮಿಷಕ್ಕೆ ಸಾವಿರಾರು ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುವ ವ್ಯವಸ್ಥೆಯನ್ನು ಈ ಕ್ರಿಮಿನಲ್​ಗಳು ವ್ಯವಸ್ಥಿತವಾಗಿ ಮಾಡಿಕೊಂಡು ಬರ್ತಿದ್ದಾರೆ.

ಕೋಟ್ಯಂತರ ರೂಪಾಯಿ ನಷ್ಟ:

ಈ ಕ್ರಿಮಿನಲ್ ಗಳ ಕಳ್ಳಾಟದಿಂದ ಸರ್ಕಾರಕ್ಕೆ ಇದರಿಂದ ಕೋಟ್ಯಂತರ ರೂಪಾಯಿ ನಷ್ಟ ಆಗುತ್ತಿದೆ. ಉದಾಹರಣೆಗೆ ಇಂಟರ್ ನ್ಯಾಷನಲ್ ಕರೆಗಳಿಗೆ ನಿಮಿಷಕ್ಕೆ 10 ರೂಪಾಯಿ ಇದ್ದರೆ ಅದನ್ನು ಕೇವಲ 1 ರಿಂದ 2 ರೂಪಾಯಿಗೆ ಪರಿವರ್ತಿಸುತ್ತಿದ್ದರು. ಭಾರತೀಯ ಸೇನೆಯ ಮಿಲಿಟರಿ ಯೂನಿಟ್​ಗಳ ರಹಸ್ಯ ಮಾಹಿತಿಗಳನ್ನು ತಿಳಿದುಕೊಂಡು ಉಗ್ರಗಾಮಿ ಸಂಘಟನೆಗಳಿಗೆ ಗೌಪ್ಯ ಮಾಹಿತಿ ರವಾನೆ ಮಾಡಲಾಗುತ್ತಿತ್ತು. ಪಾಕಿಸ್ತಾನ ಸೇರಿದಂತೆ ಕೆಲ ವಿದೇಶಿ ಸಂಸ್ಥೆಗಳಿಗೆ ಗೌಪ್ಯ ಮಾಹಿತಿಯನ್ನು ರವಾನಿಸಿ ಸಾಕಷ್ಟು ಹಣ ಮಾಡುವುದು. ಕಾಲ್ ಸೆಂಟರ್​ಗಳಲ್ಲಿ ಕೆಲಸದ ಆಮಿಷವೊಡ್ಡಿ ಯುವಕ/ಯುವತಿಯರನ್ನು ಇಂತಹ ದೇಶದ್ರೋಹ ಕೆಲಸಕ್ಕೆ ಬಳಸಿಕೊಳ್ತಿದ್ರು.

ಜಿಯೋ ಸಂಸ್ಥೆ SIP TRUNK CALL DEVICES ಗಳನ್ನು ಪಡೆದು BIZHUB SOLUTIONS PVT.LTD, ORTURE TECHNOLOGIES.PVT.LTD ಮತ್ತು TIME INFO TECHNOLOGY PVT.LTD. ಕಂಪನಿಗಳ ಹೆಸರಿನಲ್ಲಿ ದಾಖಲೆ ಸೃಷ್ಟಿಸಿ ಕರೆಗಳನ್ನು ಎಕ್ಸ್ ಚೇಂಜ್ ಮಾಡ್ತಿದ್ರು. ಈ ಗ್ಯಾಂಗ್ ಪಿಆರ್​ಐ ಲೈನ್​ನಲ್ಲಿ 1 ನಿಮಿಷಕ್ಕೆ ಲಕ್ಷಾಂತರ ಕಾಲ್​ಗಳನ್ನ ಇಂಟರ್ನ್ಯಾಷನಲ್ ಕಾಲ್​ಗಳನ್ನ ಲೋಕಲ್ ಕಾಲ್​ಗಳಾಗಿ ಪರಿವರ್ತಿಸ್ತಿತ್ತು. ಅಂತರಾಷ್ಟ್ರೀಯ ವಿಓಐಪಿ(ವಾಯ್ಸ್ ಓವರ್ ಇಂಟರ್ನೆಟ್ ಪ್ರೊಟೊಕಾಲ್) ಕಾಲ್​ಗಳನ್ನ ಸ್ಥಳೀಯ ಕರೆಗಳಾಗಿ ಗ್ಯಾಂಗ್ ಪರಿವರ್ತಿಸುತ್ತಿತ್ತು. ಗಲ್ಫ್ ಕಂಟ್ರಿಗಳಲ್ಲಿ ಡೇಟಾ ಕಾಲನ್ನ ಬೇರೆ ಸರ್ವರ್​ಗೆ ಕಳುಹಿಸಲಾಗುತ್ತಿತ್ತು. ಇದೇ ರೀತಿ ಇಂಟರ್ನೆಟ್ ಸಹಾಯದಿಂದ ಕಾಲ್​ಗಳನ್ನ ಕನ್ವರ್ಟ್ ಮಾಡಲಾಗುತ್ತಿತ್ತು.

ಟೂರಿಸಂ ಕಸ್ಟಮರ್ ಕೇರ್ ಮಾಡ್ತಿದ್ದೇವೆ ಎಂದು ನಂಬಿಸಿ ಆರೋಪಿಗಳು ಕಂಪೆನಿ ತೆರೆದಿದ್ದು, ಕಳೆದ 40 ದಿನಗಳಲ್ಲಿ ಒಟ್ಟು 68 ಲಕ್ಷ ನಿಮಿಷಗಳ ಅಕ್ರಮ ಕರೆಗಳನ್ನು ಎಕ್ಸ್ ಚೇಂಜ್ ಮಾಡಿ ಸರ್ಕಾರ ಖಜಾನೆಗೆ ನಷ್ಟ ಉಂಟು ಮಾಡಿದ್ದಾರೆ.
ಕಳೆದ ಜೂನ್ ನಲ್ಲಿ ಬೆಂಗಳೂರು ನಗರದಲ್ಲೇ 6 ಮನೆಗಳನ್ನು ಬಾಡಿಗೆ ಪಡೆದಿದ್ದ ಮತ್ತೊಂದು ತಂಡ ಭಾರತೀಯ ಸೇನೆಯ ರಹಸ್ಯ ಮಾಹಿತಿ ಕನ್ನ ಹಾಕುವುದೆ, ಸೇನೆ ಮಾಹಿತಿ ಕದ್ದು ಉಗ್ರಗಾಮಿ ಸಂಘಟನೆಗೆ ನೀಡಿರುವುದು, ಇದಕ್ಕಾಗಿ ನಮ್ಮ ಬೆಂಗಳೂರಲ್ಲೇ ಆ ಒಂದು ತಂಡ 6 ಮನೆಗಳಲ್ಲಿ ಟೆಲಿಫೋನ್ ಎಕ್ಸ್ ಚೆಂಜ್​ಗಳನ್ನು ಆರಂಭ ಮಾಡಿತ್ತು. ಬೆಂಗಳೂರಿನ ಬಿಟಿಎಂ ಬಡಾವಣೆಯ ಆರು ಮನೆಗಳಲ್ಲಿ ಆರಂಭವಾಗಿದ್ದ ಈ ಟೆಲಿಫೋನ್ ಎಕ್ಸ್ ಚೇಂಜ್​ಗಳಿಂದ ಪಶ್ಚಿಮ ಬಂಗಾಳದ ಭಾರತ ಸೇನೆಯ ಮಿಲಿಟರಿ ಯೂನಿಟ್​ಗೆ ಕರೆ ಮಾಡಲಾಗಿತ್ತು.

ಕರೆ ಮಾಡಿ ಸೇನೆಯ ಗೌಪ್ಯ ಮಾಹಿತಿ ಕಲೆ ಹಾಕಲು ಮುಂದಾಗಿತ್ತು. ಈ ತಂಡವನ್ನು ನಗರ ಪೊಲೀಸರು ಪತ್ತೆಹಚ್ಚಿ ಈಗಾಗಲೇ ಇಬ್ಬರು ಆರೋಪಿಗಳಾದ ತಮಿಳುನಾಡಿನ ಗೌತಮ್ ಮತ್ತು ಇಬ್ರಾಹಿಂನನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಈ ರೀತಿಯಾದ ಕರೆ ಪರಿವರ್ತನೆಯಿಂದ ಪ್ರತಿ ತಿಂಗಳು ಸುಮಾರು 10 ರಿಂದ 15 ಲಕ್ಷ ಹಣ ಸಂಪಾದನೆ ಮಾಡ್ತಿದ್ರು. ಜೊತೆಗೆ ಹವಾಲ ಹಣ ಕೂಡ ಇವರ ಪಾಲಾಗುತ್ತಿತ್ತು. ಇನ್ನೂ ಕಳೆದ ಮೇ ನಲ್ಲಿ ಕೂಡ ರವಿಚಂದ್ರ, ಇಸ್ಮಾಯಿಲ್ ಅಬ್ದುಲ್, ಷರೀಫ್ ಮತ್ತು ಶಾಹಿಲ್ ಎಂಬ ಆರೋಪಿಗಳನ್ನು ಟೆಲಿಫೋನ್ ಎಕ್ಸ್ ಚೇಂಜ್ ಪ್ರಕರಣದಲ್ಲಿ ಬಂಧಿಸಲಾಗಿತ್ತು. ಆ ಸಂದರ್ಭದಲ್ಲು ಕೂಡ 17 ಸಿಮ್ ಬಾಕ್ಸ್ ಡಿವೈಸ್​ಗಳು ಸೇರಿದಂತೆ ಟೆಲಿಫೋನ್ ಎಕ್ಸ್ ಚೇಂಜ್​ಗೆ ಬಳಸುತ್ತಿದ್ದ ಉಪಕರಣಗಳನ್ನು ವಶಕ್ಕೆ ಪಡೆಯಲಾಗಿತ್ತು. ಸದ್ಯಕ್ಕೆ ಮೂರು ಬಾರಿ ಪ್ರತ್ಯೇಕ ಪ್ರಕರಣವನ್ನು ಬೇಧಿಸಿ ಕ್ರಿಮಿನಲ್​ಗಳನ್ನ ಬಂಧಿಸಿದ್ದಾರೆ. ಆದರೆ ಈ ಅಕ್ರಮ ದಂಧೆ ಇಲ್ಲಿಗೆ ಮುಗಿತಾ ಖಂಡಿತಾ ಇಲ್ಲ. ಇಂತಹ ಸಮಾಜ ಘಾತುಕ ಕಂಪನಿಗಳು ನಾಯಿಕೊಡೆಯಂತೆ ತಲೆ ಎತ್ತಿವೆ.

ವರದಿ: ಕಿರಣ ಹೆಚ್​ವಿ

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.