ಬೆಂಗಳೂರು: ಭಾರತದ ಸೇನೆ ಹೆಸರಲ್ಲಿ ಅಂಗಡಿ ಮಾಲೀಕನಿಗೆ 1.47 ಲಕ್ಷ ವಂಚನೆ

ವಂಚಕರು ಭಾರತದ ಸೇನೆ ಹೆಸರಲ್ಲೂ ವಂಚನೆ ಎಸಗುತ್ತಿದ್ದಾರೆ. ವಸ್ತು, ಬಟ್ಟೆ ಖರೀದಿ ನೆಪದಲ್ಲಿ ಅಂಗಡಿ ಮಾಲೀಕರಿಗೆ ಮೆಸೇಜ್, ದೂರವಾಣಿ ಕರೆ ಮಾಡಿ ಹಣ ಪಡೆದು ವಂಚಿಸುತ್ತಿದ್ದಾರೆ. ಸೇನೆ ಹಣ ಪಾವತಿ ವಿಧಾನ ಬೇರೆ ಎನ್ನುವ ವಂಚಕರು, ಹಣ ಮರು ಪಾವತಿಸುವ ಭರವಸೆ ನೀಡಿ ವಂಚಿಸುತ್ತಿದ್ದಾರೆ.

ಬೆಂಗಳೂರು: ಭಾರತದ ಸೇನೆ ಹೆಸರಲ್ಲಿ ಅಂಗಡಿ ಮಾಲೀಕನಿಗೆ 1.47 ಲಕ್ಷ ವಂಚನೆ
ಭಾರತದ ಸೇನೆ ಹೆಸರಲ್ಲಿ ಬೆಂಗಳೂರಿನ ಅಂಗಡಿ ಮಾಲೀಕರೊಬ್ಬರಿಗೆ 1.47 ಲಕ್ಷ ವಂಚನೆ (ಸಾಂದರ್ಭಿಕ ಚಿತ್ರ)
Image Credit source: Getty Images
Updated By: Rakesh Nayak Manchi

Updated on: Oct 07, 2023 | 8:10 AM

ಬೆಂಗಳೂರು, ಅ.7: ಭಾರತದ ಸೇನೆ (Indian Army) ಹೆಸರಲ್ಲೂ ವಂಚಿಸಲು ಆರಂಭಿಸಿದ್ದಾರೆ. ಅಂಗಡಿ ಮಾಲೀಕರಿಗೆ ಮೆಸೇಜ್, ದೂರವಾಣಿ ಕರೆ ಮಾಡುವ ವಂಚಕರು, ವಸ್ತು, ಬಟ್ಟೆ ಖರೀದಿ ಮಾಡುವುದಾಗಿ ನಂಬಿಸುತ್ತಾರೆ. ಬಳಿಕ ಸೇನೆಯಲ್ಲಿ ಹಣ ಪಾವತಿ ವಿಧಾನವೇ ಬೇರೆ ಎಂದು ನಂಬಿಸಿ ಹಣ ಮರು ಪಾವತಿಸುವ ಭರವಸೆ ನೀಡುತ್ತಾರೆ. ಹೀಗೆ ಹಣ ಪಡೆದ ನಂತರ ಮರು ಪಾವತಿಸದೇ ವಂಚನೆ ಮಾಡಿದ ಸೈಬರ್ ಅಪರಾಧಿಗಳ ವಿರುದ್ಧ ವ್ಯಾಪಾರಿಯೊಬ್ಬರು ಬೆಂಗಳೂರು (Bengaluru) ನಗರದ ಬಂಡೆಪಾಳ್ಯ ಪೊಲೀಸ್‌‌ ಠಾಣೆಗೆ ದೂರು ನೀಡಿದ್ದಾರೆ.

ವಸ್ತು ಖರೀದಿಸುವ ನೆಪದಲ್ಲಿ ಅಂಗಡಿ ಮಾಲೀಕರಿಗೆ ಮೆಸೇಜ್‌ ಕಳುಹಿಸಲಾಗುತ್ತದೆ. ಮೊದಲಿಗೆ ವಸ್ತುಗಳ ಬೆಲೆ ಬಗ್ಗೆ ವಿಚಾರಿಸುವ ವಂಚಕರು, ನಂತರ ಫೋನ್‌ ಮಾಡಿ ದೊಮ್ಮಲೂರು ಆರ್ಮಿ ಕ್ಯಾಂಪ್ ಹೆಸರು ಹೇಳಿ ನಂಬಿಕೆ ಬರುವಂತೆ ಮಾತನಾಡುತ್ತಾರೆ. ಬಳಿಕ ಸೇನೆಗಾಗಿ ಬಟ್ಟೆ ಖರೀದಿ ಮಾಡುವುದಾಗಿ ಎಂದು ನಂಬಿಸುತ್ತಾರೆ. ಹೀಗೆ ಅಂಗಡಿ ಮಾಲೋಕರೊಬ್ಬರನ್ನು ಮೋಸದ ಜಾಲಕ್ಕೆ ಬೀಳಿಸಿದ ವಂಚಕರು 1,47,000 ರೂ. ಪಡೆದು ವಂಚಿಸಿದ್ದಾರೆ.

ಡಿಜಿಟಲ್ ಸೆಕ್ಯೂರಿಟಿ ಸೊಲ್ಯೂಷನ್ಸ್ ಅಂಗಡಿ ಮಾಲೀಕ‌ ದಾದಪೀರ್ ಅಜೀಜ್‌ ಅವರಿಗೆ ಕರೆ ಮಾಡಿದ ವಂಚಕ, ತಾನು ಸಾಹಿಲ್‌ ಕುಮಾರ್‌ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ 10 ಸೆಕ್ಯೂರಿಟಿ ವೀಡಿಯೋ ಡೋರ್ ಫೋನ್‌ಗಳು ಬೇಕೆಂದು ಹೇಳಿದ್ದಾನೆ. ಈತನ ಮಾತನ್ನು ನಂಬಿದ ದಾದಪೀರ್, ಆತನೊಂದಿಗೆ ವ್ಯವಹಾರ ನಡೆಸಲು ಮುಂದಾಗುತ್ತಾರೆ.

ಇದನ್ನೂ ಓದಿ: ಮೆಡಿಕಲ್ ಸೀಟ್ ಕೊಡಿಸುವ ಆಮಿಷವೊಡ್ಡಿ ಬೆಂಗಳೂರಿನಲ್ಲಿ ಮೈಸೂರು ವಿದ್ಯಾರ್ಥಿಗೆ ವಂಚನೆ

ಈ ವೇಳೆ ಸೇನೆ ಹಣ ಪಾವತಿ ವಿಧಾನ ಬೇರೆ ಎಂದು ಹೇಳಿಕೊಂಡ ವಂಚಕ, ಆರಂಭದಲ್ಲಿ ಹಣ ಪಾವತಿಸುವ ನೆಪದಲ್ಲಿ ಬ್ಯಾಂಕ್‌ ಖಾತೆ ಮಾಹಿತಿ ಕಲೆ ಹಾಕುತ್ತಾನೆ. ಬ್ಯಾಂಕ್‌ ಖಾತೆಯನ್ನು ಆರ್ಮಿ ಕ್ಯಾಂಪ್‌ಗೆ ಕಳುಹಿಸಬೇಕು. ನಂತರ ನಿಮ್ಮ ಪ್ರಾಡಕ್ಟ್‌ಗೆ ಹಣ ಪಾವತಿಸಲಾಗುವುದು. ಅಧಿಕೃತತೆಗಾಗಿ ನಮಗೆ 10 ರೂ. ಕಳುಹಿಸಿ ಎಂದು ಮೆಸೇಜ್‌ ಮಾಡುತ್ತಾನೆ. ಬಳಿಕ ಅದನ್ನು ದಾದಪೀರ್​ಗೆ ಮರು ಪಾವತಿಸುತ್ತಾನೆ.

ನಂತರ 49,000 ರೂ. ಹಣ ಕಳುಹಿಸಿ ಎಂದು ಬೇಡಿಕೆ ಇಟ್ಟಾಗ ಶಾಕ್‌ ಆದ ದಾದಪೀರ್‌, ನಮ್ಮ ಪ್ರಾಡಕ್ಟ್‌ಗೆ ನೀವು ಹಣ ಕೊಡಬೇಕು. ನಮ್ಮನ್ನೇ ಹಣ ಕೇಳುತ್ತಿದ್ದೀರ ಎಂದು ಕೇಳಿದ್ದಾರೆ. ಈ ವೇಳೆ ವಂಚಕ, ನಾವು ಪುನಃ ಕಳುಹಿಸುತ್ತೇವೆ. ಇದು ಸೇನೆಯಲ್ಲಿ ಹಣ ಪಾವತಿಸುವ ವಿಧಾನ ಎಂದು ಹೇಳುತ್ತಾನೆ. ವಂಚಕನ ಸುಳ್ಳಿನ ಮಾತನ್ನು ನಂಬಿದ ದಾದಪೀರ್ ಆತ ಹೇಳಿದ್ದಷ್ಟು ಹಣ ಕಳುಹಿಸುತ್ತಾರೆ.

ನಿಮ್ಮ ದುಡ್ಡು ಜಾಸ್ತಿ ಹೊತ್ತು ನಮ್ಮ ಬಳಿ ಇರುವಂತಿಲ್ಲ. ನಿಮ್ಮ ಪ್ರಾಡಕ್ಟ್‌ ಬೆಲೆಯಷ್ಟು ಹಣ ಬೇಗ ಕಳುಹಿಸಿ. ಅಷ್ಟೇ ಡಬಲ್‌ ಹಣವನ್ನ ನಿಮಗೆ ಕಳುಹಿಸುತ್ತೇವೆ. ನಂತರ ನಿಮ್ಮ ಪ್ರಾಡಕ್ಟ್‌ ಕಳುಹಿಸಿ. ಇದು ಸೇನೆ, ತಡಮಾಡಬಾರದು ಎಂದು ವಂಚಕ ಹೇಳುತ್ತಾನೆ. ವಿಧಿಯಿಲ್ಲದೆ ದಾದಪೀರ್ 1,47,000 ಕಳುಹಿಸಿದ್ದಾರೆ.

ಇಷ್ಟು ಮೊತ್ತದ ಹಣ ಪಾವತಿಯಾಗಿದ್ದೇ ತಡ ವಂಚಕರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಮೋಸದ ಅರಿವಾಗಿ ಸೈಬರ್‌ ಪೊಲೀಸರಿಗೆ ದಾದಪೀರ್‌ ದೂರು ನೀಡಿದ್ದಾರೆ. ಬಂಡೆಪಾಳ್ಯ ಪೊಲೀಸ್‌‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ