
ಬೆಂಗಳೂರು, ಮೇ 30: ಅಕ್ರಮ ಅದಿರು ಸಾಗಾಟ ಪ್ರಕರಣಕ್ಕೆ (Illegal Mining Case) ಸಂಬಂಧಿಸಿದಂತೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿಗೆ (Gali Janardhan Reddy) ದೊಡ್ಡ ರಿಲೀಫ್ ಸಿಕ್ಕಿದೆ. ಲೋಕಾಯುಕ್ತ ಎಸ್ಐಟಿ ದಾಖಲಿಸಿದ್ದ ಎರಡು ಪ್ರಮುಖ ಪ್ರಕರಣಗಳಲ್ಲಿ ಜನಾರ್ದನ ರೆಡ್ಡಿ ಸೇರಿದಂತೆ ಹಲವರನ್ನು ಕೈಬಿಟ್ಟು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಇಂದು ಆದೇಶ ಹೊರಡಿಸಿದೆ.
ಮಾಜಿ ಸಚಿವ, ಗಂಗಾವತಿ ಕ್ಷೇತ್ರದ ಶಾಸಕ ಗಾಲಿ ಜನಾರ್ದನ ರೆಡ್ಡಿ ವಿರುದ್ಧದ ಅಕ್ರಮ ಅದಿರು ಸಾಗಾಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಲೋಕಾಯುಕ್ತ ವಿಶೇಷ ತನಿಖಾ ದಳ ದಾಖಲಿಸಿದ್ದ ಎರಡು ಪ್ರಮುಖ ಕೇಸ್‌ಗಳಲ್ಲಿ ಜನಾರ್ದನ ರೆಡ್ಡಿಗೆ ರಿಲೀಫ್ ಸಿಕ್ಕಿದೆ. ಪ್ರಕರಣದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ, ಜನಾರ್ದನ ರೆಡ್ಡಿ ಸೇರಿದಂತೆ ಇತರ ಆರೋಪಿಗಳನ್ನು ಪ್ರಕರಣದಿಂದ ಕೈಬಿಟ್ಟು ಮಹತ್ವದ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಅಂಗಲಾಚಿದರೂ ಕೇಳದ ಕೋರ್ಟ್: ಜನಾರ್ದನ ರೆಡ್ಡಿಗೆ ಮತ್ತೆ ಜೈಲು ಫಿಕ್ಸ್, ಶಾಸಕ ಸ್ಥಾನಕ್ಕೂ ಕುತ್ತು!
ಜನಾರ್ದನ ರೆಡ್ಡಿ ಅವರೊಂದಿಗೆ ಮೆಹಫೂಜ್ ಅಲಿ ಖಾನ್, ಉದ್ಯಮಿಗಳಾದ ಹೊತ್ತೂರ್ ಅಬ್ದುಲ್ ವಹಾಬ್, ಹೊತ್ತೂರ್ ನೂರ್ ಅಹಮದ್, ಹೊತ್ತೂರ್ ಮೊಹಮ್ಮದ್ ಇಕ್ಬಾಲ್ ಹಾಗೂ ಟ್ರೈಡೆಂಟ್ ಮೈನಿಂಗ್ ಕಂಪನಿ ವಿರುದ್ಧ ದಾಖಲಾಗಿದ್ದ ಪ್ರಕರಣಗಳನ್ನೂ ಸಹ ಕೋರ್ಟ್ ವಜಾಗೊಳಿಸಿದೆ.
ಇದನ್ನೂ ಓದಿ: ಒಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜನಾರ್ದನ ರೆಡ್ಡಿ ಅಪರಾಧಿ: ಸಿಬಿಐ ಕೋರ್ಟ್ ತೀರ್ಪು
ಈ ಹಿಂದೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಅವಧಿಯಲ್ಲಿ ಜನಾರ್ದನ ರೆಡ್ಡಿ ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಾಟಕ್ಕೆ ಪಿತೂರಿ ನಡೆಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಸಿಆರ್‌ಪಿಸಿ ಸೆಕ್ಷನ್ 227 ಅಡಿಯಲ್ಲಿ ಪ್ರಕರಣದಿಂದ ಕೈಬಿಡುವಂತೆ ಆರೋಪಿಗಳ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದ್ದರು. ವಾದ-ಪ್ರತಿವಾದ ಆಲಿಸಿದ ವಿಶೇಷ ನ್ಯಾಯಾಲಯವು ಇದೀಗ ಇವರೆಲ್ಲರಿಗೂ ಕ್ಲೀನ್ ಚೀಟ್ ನೀಡಿದೆ.
ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಯಾವುದೇ ರೀತಿಯ ಮುನ್ಸೂಚನೆ ಅಥವಾ ಅಗತ್ಯ ಅನುಮತಿಗಳನ್ನು ಪಡೆಯದೇ, ಸರ್ಕಾರಕ್ಕೆ ಪಾವತಿಸಬೇಕಿದ್ದ ರಾಜಧನ (ರಾಯಲ್ಟಿ) ಹಾಗೂ ಇತರೆ ಶಾಸನಬದ್ಧ ಶುಲ್ಕಗಳಿಗೆ ವಂಚಿಸಿ ಆರೋಪಿಗಳು ಭಾರಿ ಪ್ರಮಾಣದ ಅಕ್ರಮ ಎಸಗಿರುವುದು ತನಿಖೆಯಲ್ಲಿ ಬಹಿರಂಗವಾಗಿತ್ತು. ಆರೋಪಿಗಳು ಒಟ್ಟು 1,25,419 ಮೆಟ್ರಿಕ್ ಟನ್ ಕಬ್ಬಿಣದ ಅದಿರನ್ನು ಕಾನೂನುಬಾಹಿರವಾಗಿ ‘ಎನ್ ಶೇಕ್‌ಸಾಬ್ ಮೈನ್ಸ್’ ಮತ್ತು ‘ತಿರುಮಲ ಕನ್ವೇಯರ್ ಸಿಸ್ಟಮ್ಸ್’ ಕಂಪನಿಗಳಿಗೆ ಮಾರಾಟ ಮಾಡಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:55 pm, Sat, 30 May 26