
ಬೆಂಗಳೂರು, ಮಾರ್ಚ್ 13: ಬೇರೆ ಬೇರೆ ಭಾಷೆಗಳಲ್ಲಿರುವ ಪುಸ್ತಕ ಓದುಗರಿಗೆ ಅವರದ್ದೇ ಆದ ಭಾಷೆಯಲ್ಲಿ ಸಿಕ್ಕಿದಾಗ ಅದು ಹೆಚ್ಚಿನ ಸಂತ್ರಪ್ತಿ ನೀಡಬಲ್ಲದು. ಜೊತೆಗೆ ಬಹು ಭಾಷೆಗಳ ಅರಿವಿಲ್ಲದವರಿಗೂ ಆ ವಿಷಯವನ್ನು ಸುಲಭವಾಗಿ ಮುಟ್ಟಿಸಬಹುದು ಎಂಬ ಕಾರಣಕ್ಕೆ ಅದೆಷ್ಟೋ ಪುಸ್ತಗಳು ಈ ವರೆಗೆ ಕನ್ನಡಕ್ಕೆ ಅನುವಾದಗೊಂಡಿವೆ. ಓದುಗರ ಮನಸ್ಸನ್ನೂ ಗೆದ್ದಿವೆ. ಆದರೆ ಈ ಅನುವಾದದ ಕೆಲಸ ಬಹಳ ಕಠಿಣವಾದದ್ದು. ಮೂಲ ಬರಹಗಾರರು ಹೇಳಿರುವ ವಿಷಯವನ್ನು ಅನರ್ಥಗೊಳಿಸದೆ ಮತ್ತೊಂದು ಭಾಷೆಗೆ ಭಟ್ಟಿ ಇಳಿಸಬೇಕಾಗುತ್ತದೆ. ಹೀಗಾಗಿ ಪುಸ್ತಕವೊಂದರ ಅನುವಾದಕ್ಕೆ ಬಹಳ ಸಮಯವೂ ಹಿಡಿಯುತ್ತದೆ. ಆದರೆ ಜಗತ್ತಿನ ಎಲ್ಲ ಕ್ಷೇತ್ರಗಳಿಗೂ ಲಗ್ಗೆ ಇಟ್ಟಿರುವ ಕೃತಕ ಬುದ್ಧಿಮತ್ತೆ (Artificial Intelligence – AI) ಈ ವಿಚಾರದಲ್ಲಿಯೂ ಈಗ ಸದ್ದು ಮಾಡಿದೆ.
ಹೌದು, ಎಐ (AI) ಬಳಸಿ ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದಿಸಲಾದ ‘My Name is Gauhar Jaan’ ಪುಸ್ತಕದ ಕನ್ನಡ ಆವೃತ್ತಿ ‘ನನ್ನ ಹೆಸರು ಗೌಹರ್ ಜಾನ್’ ಮಾ.15ರ ಭಾನುವಾರ ಬಿಡುಗಡೆಯಾಗಲಿದ್ದು, ಮೂಲ ಪುಸ್ತಕವನ್ನು ವಿಕ್ರಮ್ ಸಂಪತ್ ಬರೆದಿದ್ದಾರೆ. ಇದು ಭಾರತದ ಮೊದಲ ಸೆಲೆಬ್ರಿಟಿ ಗಾಯಕಿ ಗೌಹರ್ ಜಾನ್ ಅವರ ಜೀವನ ಕಥೆಯನ್ನು ಒಳಗೊಂಡಿದೆ. ಈ ಪುಸ್ತಕದ ಕನ್ನಡ ಅನುವಾದದ ಕೆಲಸಕ್ಕಾಗಿ ಬೆಂಗಳೂರು ಮೂಲದ ‘ನಾವ್ AI’ (Naav AI) ಕಂಪನಿಯು ಅಭಿವೃದ್ಧಿಪಡಿಸಿರುವ ಅನುವಾದ ಸಾಧನವನ್ನು ಬಳಸಲಾಗಿದೆ. ಸಾಮಾನ್ಯವಾಗಿ ಒಂದು ಪುಸ್ತಕವನ್ನು ಅನುವಾದಿಸಲು ಮೂರುರಿಂದ ನಾಲ್ಕು ತಿಂಗಳು ಬೇಕಾಗಬಹುದು. ಆದರೆ ಎಐನಿಂದಾಗಿ ಈ ಪುಸ್ತಕದ ಮೊದಲ ಕರಡು ಕೇವಲ 30 ನಿಮಿಷಗಳಲ್ಲಿ ಸಿದ್ಧವಾಗಿದೆ. ನಂತರ ಅವುಗಳ ಪರಿಶೀಲನೆ, ತಿದ್ದುಪಡಿ ಕೆಲಸಗಳಿಗೆ ಒಂದು ತಿಂಗಳ ಸಮಯ ಬೇಕಾಗಿದೆ ಎನ್ನಲಾಗಿದೆ.
ಇದನ್ನೂ ಓದಿ: NCERT ಪುಸ್ತಕ ವಿವಾದ; ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯ ಬರೆದ ಲೇಖಕರಿಗೆ ಸುಪ್ರೀಂ ಕೋರ್ಟ್ ನಿಷೇಧ
ಇನ್ನು ಎಐ ಅನುವಾದ ಸಂದರ್ಭ, ಶೈಲಿ ಮತ್ತು ಸಾಂಸ್ಕೃತಿಕ ಸೂಕ್ಷ್ಮತೆಗಳಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳೂ ಕಂಡುಬಂದಿವೆ. ಕನ್ನಡದಲ್ಲಿ ಒಂದು ಪದಕ್ಕೆ ಸಂದರ್ಭದ ಮೇಲೆ ಅವಲಂಬಿಸಿ ಹಲವು ಅರ್ಥಗಳು ಇರಬಹುದು. ಹೀಗಿದ್ದರೂ ಎಐ ಆಯ್ಕೆ ಮಾಡಿದ ಅರ್ಥವು ಕೆಲವೊಮ್ಮೆ ಪರಿಸ್ಥಿತಿಗೆ ಸರಿಹೊಂದಿದೆ. ಪುಸ್ತಕ ಸಂಗೀತ ಸಂಬಂಧ ವಿಚಾರಗಳನ್ನು ಹೊಂದಿರುವ ಕಾರಣ ಕೆಲ ಸವಾಲುಗಳು ಉದ್ಭವಿಸಿದ್ದವು. ರಾಗಗಳ ಉಲ್ಲೇಖಗಳು, ಅವುಗಳ ಹೆಸರು ಮತ್ತು ಅಕ್ಷರ ವಿನ್ಯಾಸಗಳನ್ನು ತಿದ್ದುಪಡಿ ಮಾಡಲಾಗಿದೆ. ಒಟ್ಟಾರೆಯಾಗಿ ಎಐ ಮಾನವ ಅನುವಾದಕರನ್ನು ಬದಲಿಸುವುದಕ್ಕಿಂತ ಸಹಾಯ ಮಾಡುವ ಸಾಧನವಾಗಬಹುದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಇನ್ನುಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಹಿತಿ ವಸುಧೇಂದ್ರ, ಭಾಷೆಯ ಗಡಿಯನ್ನು ದಾಟುವುದು ಇಂದಿನ ಅವಶ್ಯಕತೆಗಳಲ್ಲಿ ಒಂದು. ಇದು ಕನ್ನಡದ ಓದುಗರಿಗೆ ವರದಾನವಾಗಿಯೇ ಪರಿಣಮಿಸುತ್ತದೆ. ಹೇಗೆ ಜಗತ್ತಿನ ಎಲ್ಲಾ ಭಾಷೆಯ ಸಿನಿಮಾಗಳನ್ನೂ ನಮ್ಮ ಜನ ಕನ್ನಡದಲ್ಲಿಯೇ ನೋಡಲು ಶುರು ಮಾಡಿದ್ದಾರೋ, ಅದೇ ರೀತಿ ಜಗತ್ತಿನ ಸಾಹಿತ್ಯವೆಲ್ಲವೂ ನಮಗೆ ದಕ್ಕುವ ದಿನಗಳು ದೂರವಿಲ್ಲವೆನ್ನಿಸುತ್ತದೆ. ಓಟಿಟಿಯಲ್ಲಿ ಸಿನಿಮಾ ಆಯ್ಕೆ ಮಾಡಿಕೊಳ್ಳುವಾಗ ಭಾಷೆಯನ್ನು ನಿರ್ಧರಿಸುವ ಬಟನ್ ಒತ್ತುತ್ತೇವಲ್ಲವೆ, ಹಾಗೆಯೇ ಅಮೆಜಾನ್‌ನಲ್ಲಿ ಪುಸ್ತಕ ಆರ್ಡರ್ ಮಾಡುವಾಗ ‘ಭಾಷೆ’ಯ ಆಯ್ಕೆಯನ್ನು ಮಾಡಿಕೊಳ್ಳುವ ದಿನಗಳು ದೂರವಿಲ್ಲ ಎಂದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:31 pm, Fri, 13 March 26