ಬೆಂಗಳೂರು: ಕನ್ನಡ ರಾಜ್ಯೋತ್ಸವ ಹಿನ್ನೆಲೆ ರಾಜ್ಯದ ವಿವಿಧೆಡೆ ಬರಪೂರ ತಯಾರಿ ನಡೆದಿದೆ. ಹಾಗೇ ಕನ್ನಡ ರಾಜ್ಯೋತ್ಸವ (Kannada Rajyotsava) ಅಂಗವಾಗಿ ನಮ್ಮ ಮೆಟ್ರೋ (Namma Metro) ಪ್ರಯಾಣಿಕರಿಗೆ ಗುಡ್ ನ್ಯೂಸ್ ನೀಡಿದೆ. ಇನ್ನು ಮುಂದೆ ಪ್ರಯಾಣಿಕರು ಮೊಬೈಲ್ನಲ್ಲೇ ಮೆಟ್ರೋ ಪ್ರಯಾಣದ ಟಿಕೆಟ್ ಖರೀದಿಸಲು ಅವಕಾಶ ನೀಡಲಾಗಿದೆ. ಸಮಯ ಉಳಿತಾಯ, ಚಿಲ್ಲರೆ ಸಮಸ್ಯೆ ಬಗೆಹರಿಸಲು ನಾಳೆ (ನ.1) ರಿಂದ ಕ್ಯೂಆರ್ ಕೋಡ್ ಬಳಸಿ ಪ್ರವೇಶ, ನಿರ್ಗಮನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಕನ್ನಡ ರಾಜ್ಯೋತ್ಸವದಲ್ಲಿ 50 ಸಾವಿರ ಜನರಿಗೆ ಹೋಳಿಗೆ ಊಟ
ಬೆಳಗಾವಿ: ಪ್ರತಿವರ್ಷ ಕನ್ನಡ ರಾಜ್ಯೋತ್ಸವವನ್ನು ಗಡಿನಾಡು, ಕುಂದಾನಗರಿ ಬೆಳಗಾವಿಯಲ್ಲಿ ಅದ್ಧೂರಿಯಾಗಿ ಆಚರಿಸುತ್ತಾರೆ. ಚೆನ್ನಮ್ಮನ ನಾಡಿನಲ್ಲಿ ನಡೆಯುವ ಕನ್ನಡ ರಾಜ್ಯೋತ್ಸವವನ್ನು ಕಣ್ತುಂಬಿಕೊಳ್ಳಲು ರಾಜ್ಯದ ನಾನಾ ಭಾಗದಿಂದ ಜನರು ಆಗಮಿಸುತ್ತಾರೆ. ಆದರೆ ಕೊರೊನಾ ಕಾರಣದಿಂದ ಕಳೆದ 2-3 ವರ್ಷದಿಂದ ಬೆಳಗಾವಿಯಲ್ಲಿ ರಾಜ್ಯೋತ್ಸವ ಕಳೆಗುಂದಿತ್ತು. ಆದರೆ ಈ ವರ್ಷ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಿದ್ದು, ರಾಜ್ಯೋತ್ಸವದಲ್ಲಿ ಭಾಗಿಯಾಗುವ 50 ಸಾವಿರ ಜನರಿಗೆ ಹೋಳಿಗೆ ಊಟ ಏರ್ಪಡಿಸಲಾಗಿದೆ.
ನಗರದ ಹುಕ್ಕೇರಿ ಹಿರೇಮಠ ವತಿಯಿಂದ 50 ಸಾವಿರ ಜನರಿಗೆ, ಒಬ್ಬರಿಗೆ ತಲಾ ಎರಡು ಹೋಳಿಗೆಯಂತೆ 1 ಲಕ್ಷ ಹೋಳಿಗೆಯನ್ನು ಸಿದ್ಧಪಡಿಸಲಾಗುತ್ತಿದೆ. ಜೊತೆಗೆ ಊಟದಲ್ಲಿ ಬದನೆಕಾಯಿ ಪಲ್ಯ, ಅನ್ನ-ಸಾಂಬಾರು ಇರಲಿದೆ ಎಂದು ಬೆಳಗಾವಿಯ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಯಮಕನಮರಡಿಯ 200 ಬಾಣಸಿಗರು ಊಟ ಸಿದ್ಧಪಡಿಸುತ್ತಿದ್ದಾರೆ. 150 ಜನ ಹೆಣ್ಣಮಕ್ಕಳಿಂದ ಹೋಳಿಗೆ, 50 ಪುರುಷರಿಂದ ಅನ್ನ-ಸಾಂಬರು, ಪಲ್ಯ ತಯಾರು ಮಾಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಸೇರಿ ಜಿಲ್ಲೆಯ ಎಲ್ಲ ಅಧಿಕಾರಿಗಳು ಹುಕ್ಕೇರಿ ಹಿರೇಮಠಕ್ಕೆ ಸಹಕಾರ ನೀಡುತ್ತಿದ್ದಾರೆ. ಬೆಳಗಾವಿಯ ಸರ್ದಾರ್ ಮೈದಾನದಲ್ಲಿ ಮಧ್ಯಾಹ್ನ 1 ಗಂಟೆಯಿಂದಲೇ ಹೋಳಿಗೆ ದಾಸೋಹ ಪ್ರಾರಂಭ ಆಗಲಿದೆ. ಈ ಬೃಹತ್ ಅನ್ನ ದಾಸೋಹಕ್ಕೆ ಹಿರಿಯ ನಟ ಸಾಯಿಕುಮಾರ್, ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಚಾಲನೆ ನೀಡಲಿದ್ದಾರೆ.
ಅತೀ ಉದ್ದದ ಕನ್ನಡ ಭಾವುಟ ಪ್ರದರ್ಶನ
ಕನ್ನಡ ಮನಸುಗಳು ಎಂಬ ಕನ್ನಡ ಸಂಘಟನೆಯಿಂದ ಬೆಳಗಾವಿಯ ಚೆನ್ನಮ್ಮ ಸರ್ಕಲ್ನಿಂದ ಸುಮಾರು 3200 ಮೀಟರ್ ಉದ್ದದ ಕನ್ನಡ ಬಾವುಟ ಪ್ರದರ್ಶನ ನಡೆಯಲಿದೆ. ಈ ಮೂಲಕ ಲಂಡನ್ ಬುಕ್ ಆಫ್ ರೆಕಾರ್ಡ್ ಸೇರಲಿದೆ. ಇದೇ ಸಂಘಟನೆ ಈ ಹಿಂದೆ ಬೆಂಗಳೂರಿನಲ್ಲಿ 2040 ಮೀಟರ್ ಉದ್ದದ ಕನ್ನಡ ಬಾವುಟ ಪ್ರದರ್ಶನ ಮಾಡಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 4:42 pm, Mon, 31 October 22