ನ್ಯಾನೋ ಬನಾನಾ ಬಳಸಿ ನಕಲಿ ಪ್ಯಾನ್, ಆಧಾರ್ ಸೃಷ್ಟಿಸಿದ ಟೆಕ್ಕಿ; ಎಕ್ಸ್ ಪೋಸ್ಟ್ ವೈರಲ್

ಬೆಂಗಳೂರಿನ ಟೆಕ್ಕಿಯೊಬ್ಬರು ಗೂಗಲ್‌ನ ಜೆಮಿನಿ AI ನ ನ್ಯಾನೋ ಬನಾನಾ ತಂತ್ರಜ್ಞಾನ ಬಳಸಿ ನಕಲಿ PAN ಮತ್ತು ಆಧಾರ್ ಕಾರ್ಡ್‌ಗಳನ್ನು ಸೃಷ್ಟಿಸಿದ್ದಾರೆ. AI ನೀಡಿದ ಚಿತ್ರಗಳನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಚಿತ್ರಗಳ ನೈಜತೆ ಕಂಡು ನೆಟ್ಟಿಗರು ಹುಬ್ಬೇರಿಸುವಂತೆ ಮಾಡಿದ್ದಾರೆ. ವಾಸ್ತವಿಕವಾಗಿ ಕಾಣುತ್ತವಾದರೂ ಹತ್ತಿರದಿಂದ ಗಮನಿಸಿದಾಗ ನಕಲಿ ಎಂದು ಸ್ಪಷ್ಟವಾಗುತ್ತದೆ.

ನ್ಯಾನೋ ಬನಾನಾ ಬಳಸಿ ನಕಲಿ ಪ್ಯಾನ್, ಆಧಾರ್ ಸೃಷ್ಟಿಸಿದ ಟೆಕ್ಕಿ; ಎಕ್ಸ್ ಪೋಸ್ಟ್ ವೈರಲ್
ಗೂಗಲ್​ನ ನ್ಯಾನೋ ಬನಾನಾ ಬಳಸಿ ನಕಲಿ ಪ್ಯಾನ್, ಆಧಾರ್ ಸೃಷ್ಟಿಸಿದ ಟೆಕ್ಕಿ; ಎಕ್ಸ್ ಪೋಸ್ಟ್ ವೈರಲ್

Updated on: Nov 25, 2025 | 11:54 AM

ಬೆಂಗಳೂರು, ನವೆಂಬರ್ 25: ಬೆಂಗಳೂರಿನ ಟೆಕ್ಕಿಯೊಬ್ಬರು ಗೂಗಲ್‌ನ ನ್ಯಾನೋ ಬನಾನಾ ತಂತ್ರಜ್ಞಾನ (Nano Banana Technology) ಬಳಸಿಕೊಂಡು ಅಸಲಿಯಂತೆ ಕಾಣುವ ಪ್ಯಾನ್ ಮತ್ತು ಆಧಾರ್ ಕಾರ್ಡ್‌ಗಳನ್ನು ರಚಿಸಿದ್ದಾರೆ. AI ನೀಡಿದ ಚಿತ್ರಗಳನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಚಿತ್ರಗಳ ನೈಜತೆ ಕಂಡು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಅಸಲಿಯಂತೆ ಕಾಣುವ ಗುರುತಿನ ಚೀಟಿ ಸೃಷ್ಟಿಸಿದ ಜೆಮಿನಿ AI

ಗೂಗಲ್ ಜೆಮಿನಿ AI ನ್ಯಾನೋ ಬನಾನಾಕ್ಕೆ ವಿವಿಧ ಪ್ರಾಂಪ್ಟ್​ಗಳನ್ನು ನೀಡುವ ಮೂಲಕ ನಾನಾ ರೀತಿಯ ಚಿತ್ರಗಳನ್ನು ಸೃಷ್ಟಿಸುವುದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದೆ. ಆದರೆ ಬೆಂಗಳೂರಿನ ಟೆಕ್ಕಿಯೊಬ್ಬರು ಈ  ಟ್ರೆಂಡ್​ನಲ್ಲಿ ಒಂದು ಹೆಜ್ಜೆ ಮುಂದಕ್ಕಿಟ್ಟಿದ್ದು,  ಟ್ವಿಟರ್​ಪ್ರೀತ್ ಎಂಬ ಕಾಲ್ಪನಿಕ ಹೆಸರು ಕೊಟ್ಟು ನ್ಯಾನೋ ಬನಾನಾದಿಂದ ಅಸಲಿಯಂತೆ ಕಾಣುವ ಪ್ಯಾನ್ ಕಾರ್ಡ್​ ಮತ್ತು ಆಧಾರ್ ಕಾರ್ಡ್​ಗಳನ್ನು ಸೃಷ್ಟಿಸಿದ್ದಾರೆ.

ಜೆಮಿನಿ AI ನೀಡಿರುವ ಚಿತ್ರಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿರುವ ಅವರು, ನ್ಯಾನೊ ಬನಾನಾ ಒಳ್ಳೆಯದು ಆದರೆ ಇದರಲ್ಲಿ ಒಂದು ಸಮಸ್ಯೆ ಕೂಡ ಇದೆ. ಇದು ಅತ್ಯಂತ ಹೆಚ್ಚಿನ ನಿಖರತೆಯೊಂದಿಗೆ ನಕಲಿ ಗುರುತಿನ ಚೀಟಿಗಳನ್ನು ರಚಿಸಬಹುದು.ಇದರ ಮುಂದೆ ಚಿತ್ರ ಪರಿಶೀಲನಾ ವ್ಯವಸ್ಥೆಗಳು ವಿಫಲಗೊಳ್ಳುವುದು ಖಚಿತ. ಉದಾಹರಣೆಯಾಗಿ ಕಾಲ್ಪನಿಕ ವ್ಯಕ್ತಿಯ ಪ್ಯಾನ್ ಮತ್ತು ಆಧಾರ್ ಕಾರ್ಡ್‌ ಚಿತ್ರ ಹಂಚಿಕೊಂಡಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಟೆಕ್ಕಿ ಹಂಚಿಕೊಂಡ ಎಕ್ಸ್ ಪೋಸ್ಟ್ ಇಲ್ಲಿದೆ

ಅವರು ಹಂಚಿಕೊಂಡ ಎರಡು ಚಿತ್ರಗಳಲ್ಲಿನ ಕಾರ್ಡ್‌ಗಳು ಒಮ್ಮೆಲೇ ನೋಡಿದಾಗ ವಾಸ್ತವಿಕವಾಗಿ ಕಾಣುತ್ತವಾದರೂ ಹತ್ತಿರದಿಂದ ಗಮನಿಸಿದಾಗ ಅವೆರಡೂ ಜೆಮಿನಿ AI ವಾಟರ್‌ಮಾರ್ಕ್ ಅನ್ನು ಹೊಂದಿರುವುದರಿಂದ ಕಾರ್ಡ್‌ಗಳು ನಕಲಿ ಎಂದು ಸ್ಪಷ್ಟವಾಗುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 11:52 am, Tue, 25 November 25