ಸೈಬರ್ ವಂಚನೆ ಕಡಿವಾಣಕ್ಕೆ ದಿಟ್ಟ ಹೆಜ್ಜೆಯಿಟ್ಟ ಸರ್ಕಾರ: ಸೈಬರ್ ಕಮಾಂಡ್ ಸೆಂಟರ್ ಆರಂಭ

ದೇಶಕ್ಕೆ ದೊಡ್ಡ ತಲೆನೋವು ತಂದೊಡ್ಡಿರುವ ಸಮಸ್ಯೆ‌ ಎಂದರೆ ಸೈಬರ್ ವಂಚಕರ ಜಾಲ. ದಿನಂಪ್ರತಿ ನೂರಾರು ಜನ ಸೈಬರ್ ವಂಚಕರ ಗಾಳಕ್ಕೆ ಬೀಳುತ್ತಿದ್ದಾರೆ‌. ಇದನ್ನ ತಪ್ಪಿಸಲು ದೇಶದಲ್ಲೇ ಮೊದಲ ಸೈಬರ್ ಕಮಾಂಡ್ ಸೆಂಟರ್ ಕರ್ನಾಟಕದಲ್ಲಿ ತಲೆಎತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಸೆಪ್ಟೆಂಬರ್​ 13: ಸೈಬರ್ ವಂಚಕರ ಹಾವಳಿಗೆ ಜನರು ಮತ್ತು ಪೊಲೀಸ್ ಇಲಾಖೆ ತತ್ತರಿಸಿ ಹೋಗಿದ್ದಾರೆ. ಒಂದಲ್ಲ ಒಂದು ಉಪಾಯದಲ್ಲಿ ದಿನಂಪ್ರತಿ ಕೋಟಿ ಕೋಟಿ ಮೊತ್ತದ ಸೈಬರ್ ವಂಚನೆ ಪ್ರಕರಣ ದಾಖಲಾಗುತ್ತಿವೆ. ಇದಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ (Government) ಹೊಸದಾಗಿ ಸೈಬರ್ ಕಮಾಂಡ್ ಸೆಂಟರ್ (Cyber Command Center) ಸ್ಥಾಪನೆ ಮಾಡಿದೆ. ಸೈಬರ್ ಕಮಾಂಡ್ ಸೆಂಟರ್‌ಗೆ ಡಿಜಿಪಿಯಾಗಿ ಪ್ರಣಬ್ ಮೊಹಂತಿ ನೇಮಕವಾಗಿದ್ದಾರೆ.

ಏಪ್ರಿಲ್ 25 ರಂದು ಸೈಬರ್ ಅಪರಾದ ತಡೆಗೆ ಕಮಾಂಡ್ ಸೆಂಟರ್ ರಚಿಸಲು ಹೈಕೋರ್ಟ್ ಕೂಡ ಸೂಚಿಸಿತ್ತು. ಮುಖರಹಿತವಾದ ಸೈಬರ್ ಅಪರಾಧಗಳನ್ನ ಕೇವಲ ಅಧಿಕಾರಿಗಳ ಭವನವಾಗದೇ ಬದಲಾವಣೆಯ ಸಂಕೇತವಾಗಬೇಕು. ಸೂಕ್ತವಾಗಿ ಜಾರಿಗೊಳಿಸಿದರೆ ಕರ್ನಾಟಕ, ಸೈಬರ್ ಕಮಾಂಡ್ ಸೆಂಟರ್‌ ರಚಿಸಿದ ಮೊದಲ ರಾಜ್ಯವಾಗತ್ತೆ ಎಂದು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಇದನ್ನೂ ಓದಿ: ಕರ್ನಾಟಕದಲ್ಲಿ ದೇಶದ ಮೊದಲ ಸೈಬರ್ ಕಮಾಂಡ್ ಸೆಂಟರ್ ಶುರು: ನಾಲ್ಕು ವಿಂಗ್​​ಗಳಲ್ಲಿ ಕಾರ್ಯಚರಣೆ

ಅಲ್ಲದೇ ಸೈಬರ್ ಅಪರಾಧಗಳ ತನಿಖಾ ವರದಿ ಸಲ್ಲಿಸಲು ಸೈಬರ್ ಕಮಾಂಡ್ ಸೆಂಟರ್‌ ಡಿಜಿಪಿಗೆ ಸೂಚನೆ ಕೂಡ ಕೊಟ್ಟಿತ್ತು. ಹೈಕೋರ್ಟ್ ಅಭಿಪ್ರಾಯ ಬೆನ್ನಲ್ಲೇ ಸೆಪ್ಟೆಂಬರ್ 8 ರಂದು ಸೈಬರ್ ಕಮಾಂಡ್ ಸೆಂಟರ್‌ ರಚನೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

16000 ಕ್ಕೂ ಹೆಚ್ಚಿನ ಪ್ರಕರಣ ಬಾಕಿ 

ರಾಜ್ಯದಲ್ಲಿ ಸದ್ಯ 16000 ಕ್ಕೂ ಹೆಚ್ಚಿನ ಪ್ರಕರಣ ಇತ್ಯರ್ಥ ಆಗದೆ ಬಾಕಿ ಉಳಿದಿದೆ. ಅಲ್ಲದೇ ಇಷ್ಟು ದಿನ ಪೊಲೀಸರು ಕಾನೂನು ಸುವ್ಯವಸ್ಥೆ ಜೊತೆಗೆ ಸೈಬರ್ ಪ್ರಕರಣಗಳ ತನಿಖೆಯನ್ನೂ ಮಾಡಬೇಕಿತ್ತು. ಆಗ ಪೊಲೀಸರ ಮೇಲೆ ಕೆಲಸದ ಒತ್ತಡ ಜಾಸ್ತಿಯಾಗಿ, ಸರಿಯಾದ ರೀತಿಯಲ್ಲಿ ಪ್ರಕರಣ ಬಗೆಹರಿಸಲು ಸಾಧ್ಯವಾಗುತ್ತಿರಲಿಲ್ಲ.

ಇದೀಗ ಸೈಬರ್ ಕಮಾಂಡ್ ಸೆಂಟರ್‌ ರಚನೆ ಆದ ಮೇಲೆ ಕೇವಲ ಸೈಬರ್ ಪ್ರಕರಣಗಳಿಗೆ ಸಿಬ್ಬಂದಿ ನೇಮಕ ಮಾಡಲಾಗುತ್ತೆ. ಅಲ್ಲದೆ ಟೆಕ್ನಿಕಲ್ ಆಗಿ ಪರಿಣಿತಿ ಹೊಂದಿರುವ ಸಿಬ್ಬಂದಿಗಳನ್ನ ಇಲ್ಲಿ ನೇಮಕ ಮಾಡಿಕೊಳ್ಳಲಾಗುತ್ತೆ. ಜೊತೆಗೆ ಸಿಬ್ಬಂದಿಗಳಿಗೆ ಉತ್ತಮ ಟ್ರೈನಿಂಗ್ ಕೂಡ ನೀಡಲಾಗುತ್ತೆ. ದೇಶದ ಯಾವುದೇ ಭಾಗದಿಂದ ವಂಚನೆ ನಡೆದರೂ ಪತ್ತೆ ಮಾಡಿ ಕ್ರಮ ಜರುಗಿಸಲು ಸೈಬರ್ ಕಮಾಂಡ್ ಸೆಂಟರ್‌ ಮುಂದಾಗಿದೆ‌.

ಇದನ್ನೂ ಓದಿ: ಕರ್ನಾಟಕದ ಮಾಜಿ ಶಾಸಕರಿಗೆ ಡಿಜಿಟಲ್‌ ಅರೆಸ್ಟ್: 30 ಲಕ್ಷ ರೂ ಪಂಗನಾಮ!

ಸದ್ಯ ಬೆಂಗಳೂರಲ್ಲಿ 45 ಸೈಬರ್ ಪೊಲೀಸ್ ಠಾಣೆಗಳಿವೆ‌. ಜೊತೆಗೆ 1930 ದಲ್ಲಿ ಕೂಡ ಪ್ರಕರಣಗಳನ್ನ ದಾಖಲು ಮಾಡಿಕೊಳ್ಳಲಾಗುತ್ತಿದೆ. ಇನ್ಮುಂದೆ ಸೈಬರ್ ಠಾಣೆಗಳು‌ ಮತ್ತು 1930 ದಲ್ಲಿ ದಾಖಲಾದ ದೂರುಗಳನ್ನು ಸೈಬರ್ ಕಮಾಂಡ್ ಸೆಂಟರ್‌ ನಿರ್ವಹಣೆ ಮಾಡಲಿದೆ. ದೂರು ದಾಖಲಿಸುವುದರ ಜೊತೆಗೆ ತನಿಖಾ ವರದಿಯನ್ನ ಕೂಡ ಸಲ್ಲಿಕೆ ಮಾಡಲಿದೆ.

ವರದಿ: ಕಿರಣ್ ಕೆ.ವಿ. ಜೊತೆ ವಿಕಾಸ್, ಟಿವಿ9, ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ