ಬೆಂಗಳೂರು: ರಾಜ್ಯ ಸರ್ಕಾರದ (Karnataka Government) ಮಹತ್ವದ ಐದು ಗ್ಯಾರೆಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ ನಾಳೆ (ಆ.30) ರಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಮತ್ತು ಸಂಸದ ರಾಹುಲ್ ಗಾಂಧಿ (Rahul Gandhi) ಅವರು ಚಾಲನೆ ನೀಡಲಿದ್ದಾರೆ. ಬುಧವಾರ ಮೈಸೂರಿನ ಮಹಾರಾಜ ಮೈದಾನದಲ್ಲಿ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಕಾರ್ಯಮದ ಸಿದ್ದತೆಗಳು ಆರಂಭವಾಗಿವೆ. ಈ ಯೋಜನೆ ಮೂಲಕ ಕುಟುಂಬದ ಒಡತಿ ಖಾತೆಗೆ 2000 ರೂ. ನೀಡಲಾಗುತ್ತದೆ. ಯೋಜನೆ ಜಾರಿಯಾದ ನಂತರ 1.9 ಕೋಟಿ ಮಹಿಳೆಯರ ಖಾತೆಗಳಿಗೆ ಹಣ ಹಾಕಲಾಗುತ್ತದೆ ಎಂದು ಸರ್ಕಾರ ಘೋಷಿಸಿದೆ.
ಕಾರ್ಯಕ್ರಮ ತಯಾರಿ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೈಸೂರಿನಲ್ಲೇ ವಾಸ್ತವ್ಯ ಹೋಡಿದ್ದಾರೆ. ಡಿಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಈಗಾಗಲೇ ಕಾರ್ಯಕ್ರಮದ ಪೂರ್ವ ತಯಾರಿಯಲ್ಲಿ ನಿರತರಾಗಿದ್ದಾರೆ. ಇನ್ನು ರಾಜ್ಯಾದ್ಯಂತ 10,400 ಕೇಂದ್ರಗಳಲ್ಲಿ ಏಕಕಾಲದಲ್ಲಿ ಯೋಜನೆಯನ್ನು ಪ್ರಾರಂಭಿಸಲಾಗುತ್ತದೆ.
ವಿಧಾನಸಭೆ ಚುನಾವಣೆಯ ಸಂದರ್ಭದಲ್ಲಿ ಕರ್ನಾಟಕ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದ ಐದು ಜನಪರ ಯೋಜನೆಗಳಲ್ಲಿ ಇದು ಒಂದು. ಈ ಯೋಜನೆಯು ಪ್ರತಿ ಕುಟುಂಬದ ಒಡತಿಗೆ ತಿಂಗಳಿಗೆ 2,000 ರೂಪಾಯಿಗಳನ್ನು ವರ್ಗಾಯಿಸುವ ಗುರಿಯನ್ನು ಹೊಂದಿದೆ.
ಕುಟಂಬದ ಒಡತಿ ಕಡ್ಡಾಯವಾಗಿ ಬಿಪಿಎಲ್ ಅಥವಾ ಎಪಿಎಲ್ ಕಾರ್ಡ್ ಅಥವಾ ಅಂತ್ಯೋದಯ ಕಾರ್ಡ್ ಹೊಂದಿರಬೇಕು. ಅಲ್ಲದೇ ಕುಟುಂಬದ ಒಡತಿ ಅಥವಾ ಆಕೆಯ ಪತಿ ಆದಾಯ ತೆರಿಗೆ ಪಾವತಿಸುತ್ತಿದ್ದರೇ ಅಥವಾ ಸರಕು ಮತ್ತು ಸೇವಾ ತೆರಿಗೆ ರಿಟರ್ನ್ಸ್ ಕ್ಲೈಮ್ ಮಾಡಿದ್ದರೇ ಅವರು ಯೋಜನೆಗೆ ಅರ್ಹರಲ್ಲ ಎಂದು ಸರ್ಕಾರ ಘೋಷಿಸಿತ್ತು.
ಇದನ್ನೂ ಓದಿ: Gruhalakshmi Scheme: ಗೃಹಲಕ್ಷ್ಮಿ ಯೋಜನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ; ಅರ್ಜಿ ಸಲ್ಲಿಕೆ ಆರಂಭ
ಜುಲೈ 19 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹಲಕ್ಷ್ಮಿ ನೋಂದಣಿ ಪ್ರಕ್ರಿಯೆಗೆ ಚಾಲನೆ ನೀಡಿದರು. ಜುಲೈ 20ರಿಂದ ಈವರೆಗು 1.10 ಕೋಟಿಗೂ ಹೆಚ್ಚು ಮಹಿಳೆಯರು ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ನೋಂದಾಯಿಸಿಕೊಂಡ ನಂತರ ಖಾತರಿಗಾಗಿ ನೋಂದಣಿ ದಿನಾಂಕ, ಸಮಯ ಮತ್ತು ಸ್ಥಳದ ಬಗ್ಗೆ ಅರ್ಹ ಮಹಿಳೆಗೆ ಸಂದೇಶ ಬರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ನೋಂದಣಿಗಾಗಿ ತಮ್ಮ ನಿಗದಿತ ದಿನಾಂಕ ಮತ್ತು ಸಮಯವನ್ನು ತಿಳಿಯಲು ಇಚ್ಛಿಸುವವರು 12 ಅಂಕಿಯ ಪಡಿತರ ಚೀಟಿ ಸಂಖ್ಯೆಯನ್ನು 8147500500/ 8277000555 ಸಂಖ್ಯೆಗೆ ಸಂದೇಶ ಕಳುಹಿಸಬೇಕು. ನಂತರ ಅರ್ಹ ಮಹಿಳೆಯರು ನೋಂದಣಿಯ ಸ್ಥಳ, ದಿನಾಂಕ ಮತ್ತು ಸಮಯದ ವಿವರಗಳನ್ನು ಪಡೆಯುತ್ತಾರೆ.
ಕರ್ನಾಟಕದಾದ್ಯಂತ 11,000 ಕೇಂದ್ರಗಳಲ್ಲಿ ನೋಂದಣಿ ಮಾಡಲಾಗುತ್ತದೆ ಎಂದು ಸಚಿವ ಹೆಬ್ಬಾಳ್ಕರ್ ಹೇಳಿದ್ದರು. ಫಲಾನುಭವಿಗಳು ಕರ್ನಾಟಕ ಒನ್, ಬೆಂಗಳೂರು ಒನ್, ಗ್ರಾಮ ಒನ್ ಮತ್ತು ಬಾಪೂಜಿ ಸೇವಾ ಕೇಂದ್ರದಲ್ಲಿ ನೋಂದಾಯಿಸಿಕೊಳ್ಳಬಹುದು. ಯೋಜನೆಗೆ ಯಾವುದೇ ಕೊನೆಯ ದಿನಾಂಕವಿಲ್ಲ. ಫಲಾನುಭವಿಗಳು ಯೋಜನೆಯನ್ನು ಪಡೆಯಲು ಯಾವುದೇ ಸಮಯದಲ್ಲಿ ನೋಂದಾಯಿಸಿಕೊಳ್ಳಬಹುದು.
ಸರ್ಕಾರ ಗೃಹಲಕ್ಷ್ಮಿ ಯೋಜನೆಗೆ ಈ ವರ್ಷ 17,500 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ. ಗೃಹಲಕ್ಷ್ಮಿ ಕಾರ್ಯಕ್ರಮಕ್ಕೆ ವಾರ್ಷಿಕ 32,000 ಕೋಟಿ ರೂ. ಅಗತ್ಯವಿದೆ. ಈ ವರ್ಷ ಒಟ್ಟು 1.28 ಕೋಟಿ ಮಹಿಳೆಯರು ಈ ಯೋಜನೆಯ ಲಾಭ ಪಡೆಯುವ ನಿರೀಕ್ಷೆಯಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:29 pm, Tue, 29 August 23