ಬೆಂಗಳೂರು: ಸಾಲಗಾರರ ಕಾಟ ತಾಳಲಾರದೆ ಜಿಮ್ ಮಾಲೀಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ ಅಬ್ಬಿಗೆರೆ ಮುಖ್ಯ ರಸ್ತೆಯಲ್ಲಿ ನಡೆದಿದೆ. ಮನೆಯಲ್ಲಿ ನೇಣುಬಿಗಿದುಕೊಂಡು ಮನೋಹರ್(31) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಕಮ್ಮಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿ ಜಿಮ್ ನಡೆಸ್ತಿದ್ದ ಮನೋಹರ್, ಕೊವಿಡ್ ಸಂದರ್ಭದಲ್ಲಿ ಆರ್ಥಿಕ ನಷ್ಟಕ್ಕೊಳಗಾಗಿದ್ದರು. ಹರೀಶ್, ಮಂಜುನಾಥ್ ಪ್ರಸಾದ್, ರಾಜು ಎಂಬುವವರ ಬಳಿ ಸಾಲ ಪಡೆದಿದ್ದರು. ಹೀಗಾಗಿ ಬಡ್ಡಿ ಜೊತೆಗೆ ಅಸಲನ್ನು ಹಿಂತಿರುಗಿಸುವಂತೆ ಸಾಲಗಾರರು ಒತ್ತಡ ಹಾಕಿದ್ದಾರೆ. ಜಿಮ್ ಹಾಗೂ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಾರೆ. ಸಾಲಗಾರರ ಕಾಟ ತಾಳಲಾರದೆ ಮನೋಹರ್ ಡೆತ್ನೋಟ್ ಬರೆದಿಟ್ಟು ಬಳಿಕ ಸೆಲ್ಫಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ 306 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು ಗಂಗಮ್ಮನಗುಡಿ ಪೊಲೀಸರಿಂದ ತನಿಖೆ ಮುಂದುವರೆದಿದೆ.
ವಕೀಲರ ಮನೆಯಲ್ಲಿ ಕಳ್ಳತನ
ರಾಯಚೂರು: ಲಿಂಗಸುಗೂರು ತಾಲೂಕಿನ ಹಟ್ಟಿ ಪಟ್ಟಣದಲ್ಲಿ ಸಹಕಾರಿ ಬ್ಯಾಂಕ್ಗಳ ಕಾನೂನು ಸಲಹೆಗಾರ ಶಂಶುದ್ದೀನ್ ಮನೆಯಲ್ಲಿ ಕಳ್ಳತನವಾಗಿದೆ. ನಿನ್ನೆ ಮನೆಯಲ್ಲಿ ಯಾರೂ ಇಲ್ಲದ ವೇಳೆ 7 ಲಕ್ಷ ನಗದು, 200 ಗ್ರಾಂ ಚಿನ್ನ, 400 ಗ್ರಾಂ ಬೆಳ್ಳಿ, ಕೆಲ ದಾಖಲೆಗಳನ್ನೂ ಖದೀಮರು ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ರಮವಾಗಿ ಸಾಗಿಸುತ್ತಿದ್ದ 85 ಲಕ್ಷ ರೂಪಾಯಿ ನಗದು ಜಪ್ತಿ
ಹಾವೇರಿ ಜಿಲ್ಲೆ ಹಾನಗಲ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಸಿನಿಮಾ ಸ್ಟೈಲ್‌ನಲ್ಲಿ ಕಾರು ಚೇಸ್ ಮಾಡಿ ಕಾರಿನಲ್ಲಿ ಅಕ್ರಮವಾಗಿ ಹಣ ಸಾಗಿಸುತ್ತಿದ್ದ ಆರೋಪಿಗಳು ಮತ್ತು 85 ಲಕ್ಷ ನಗದು ಜಪ್ತಿ ಮಾಡಿದ್ದಾರೆ. ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದ್ದು ಆರೋಪಿಗಳು ಹುಬ್ಬಳ್ಳಿಯಿಂದ ಶಿವಮೊಗ್ಗ ಜಿಲ್ಲೆ ಸಾಗರದ ಕಡೆ ಹಣ ಸಾಗಿಸುತ್ತಿದ್ರು ಎಂದು ತಿಳಿದು ಬಂದಿದೆ.
ಫಯಾಜಖಾನ್ (31 ವರ್ಷ), ಇಮ್ರಾನ್ ಖಾನ್ (27 ವರ್ಷ) ಮತ್ತು ಶಿವಮೊಗ್ಗ ಜಿಲ್ಲೆ ಸಾಗರದ ಸದ್ಧಾಂಖಾನ್ (23 ವರ್ಷ) ಮತ್ತು ಸಯ್ಯದ ಅಮೀನ್ (29 ವರ್ಷ) ಬಂಧಿತರು. ಎಸ್ಪಿ ಹನುಮಂತರಾಯ ನೀಡಿದ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆದಿದೆ. ಹಾನಗಲ್ ಸಿಪಿಐ ಶಿವಶಂಕರ ಗಣಾಚಾರಿ ಹಾಗೂ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:39 am, Wed, 31 August 22